Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರೆನ್ಸಿ ಇತಿಹಾಸದಲ್ಲೇ ಅತಿ ಪಾತಾಳಕ್ಕೆ ರುಪಾಯಿ; ಡಾಲರ್ ಎದುರು ಈಗ 84 ರೂ; ಈ ಕುಸಿತಕ್ಕೆ ಏನು ಕಾರಣ?

Rupee depreciates further: ಡಾಲರ್ ಎದುರು ರುಪಾಯಿ ಕರೆನ್ಸಿ ಮೌಲ್ಯ ಇಂದು (ಅ. 11) ಶುಕ್ರವಾರ 84 ತಲುಪಿದೆ. ಈ ಮಟ್ಟವನ್ನು ರುಪಾಯಿ ತಲುಪಿದ್ದು ಇದೇ ಮೊದಲು. ಶುಕ್ರವಾರದ ವಹಿವಾಟಿನಲ್ಲಿ ಒಂದು ಡಾಲರ್​ಗೆ 84.0975 ರುಪಾಯಿ ಇತ್ತು. ಎಫ್​ಪಿಐಗಳ ನಿರ್ಗಮನ ಮತ್ತು ತೈಲ ಬೆಲೆ ಹೆಚ್ಚಳವು ರುಪಾಯಿ ಕರೆನ್ಸಿ ದುರ್ಬಲಗೊಳ್ಳಲು ಕಾರಣ ಎನ್ನಲಾಗಿದೆ.

ಕರೆನ್ಸಿ ಇತಿಹಾಸದಲ್ಲೇ ಅತಿ ಪಾತಾಳಕ್ಕೆ ರುಪಾಯಿ; ಡಾಲರ್ ಎದುರು ಈಗ 84 ರೂ; ಈ ಕುಸಿತಕ್ಕೆ ಏನು ಕಾರಣ?
ಡಾಲರ್ ಎದುರು ರುಪಾಯಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 11, 2024 | 5:04 PM

ನವದೆಹಲಿ, ಅಕ್ಟೋಬರ್ 11: ಎರಡು ವರ್ಷಗಳಿಂದ ನಿಧಾನವಾಗಿ ಕುಸಿಯುತ್ತಿರುವ ರುಪಾಯಿ ಕರೆನ್ಸಿ ಮೌಲ್ಯ ಹೊಸ ಮಟ್ಟಕ್ಕೆ ಇಳಿದಿದೆ. ಯುಎಸ್ ಡಾಲರ್ ಎದುರು ರುಪಾಯಿ ಮೊದಲ ಬಾರಿಗೆ 84 ಸಂಖ್ಯೆ ತಲುಪಿದೆ. ಇಂದು ಶುಕ್ರವಾರ (ಅ. 11) ಪ್ರತೀ ಡಾಲರ್​ಗೆ 84.0975 ರುಪಾಯಿ ಇದೆ. ರುಪಾಯಿ ಮೌಲ್ಯ ಈ ಮಟ್ಟಕ್ಕೆ ಇಳಿದಿರುವುದು ಇದೇ ಮೊದಲು. ನಿನ್ನೆಗಿಂತ 12 ಪೈಸೆ ಮೌಲ್ಯ ಕುಸಿತವಾಗಿದೆ. ಕರೆನ್ಸಿ ಇತಿಹಾಸದಲ್ಲಿ ರುಪಾಯಿಯ ಅತ್ಯಂತ ಕಡಿಮೆ ಮೌಲ್ಯ ಇದು.

ವಿದೇಶೀ ಫಂಡ್​ಗಳ ಹೊರಹರಿವು, ತೈಲ ಬೆಲೆ ಹೆಚ್ಚಳ ಪ್ರಮುಖ ಕಾರಣ

ರುಪಾಯಿ ಕರೆನ್ಸಿಗೆ ಹಿನ್ನಡೆಯಾಗಲು ಎರಡು ಪ್ರಮುಖ ಕಾರಣಗಳನ್ನು ಗುರುತಿಸಲಾಗಿದೆ. ಭಾರತದ ಈಕ್ವಿಟಿ ಮಾರುಕಟ್ಟೆಯಿಂದ ಎಫ್​ಪಿಐಗಳು ಸಾಕಷ್ಟು ಹೊರಬಿದ್ದಿವೆ. ಚೀನಾದ ಈಕ್ವಿಟಿಯತ್ತ ಇವು ಹರಿದುಹೋಗಿವೆ ಎನ್ನಲಾಗುತ್ತಿದೆ. ರುಪಾಯಿ ಮೌಲ್ಯ ಕುಸಿಯಲು ಇದು ಒಂದು ಕಾರಣ.

ಇದನ್ನೂ ಓದಿ: ರತನ್ ಟಾಟಾ ನಿಧನಕ್ಕೆ ಸಂತಾಪ ಸೂಚಿಸಲು ಹೋಗಿ ಪೇಟಿಎಂ ಸಿಇಒ ಯಡವಟ್ಟು; ಡಿಲೀಟ್ ಆದ ಪೋಸ್ಟ್​ನಲ್ಲಿ ಶರ್ಮಾ ಬರೆದದ್ದೇನು?

ಹಾಗೆಯೇ, ಪಶ್ಚಿಮ ಏಷ್ಯಾ ಯುದ್ಧ ಭೀತಿ ಹಿನ್ನೆಲೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚುತ್ತಿರುವುದು ರುಪಾಯಿಯನ್ನು ದುರ್ಬಲಗೊಳಿಸಿದೆ. ಬ್ರೆಂಟ್ ಕ್ರ್ಯೂಡ್ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 30ರಂದು ಒಂದು ಬ್ಯಾರಲ್ ತೈಲದ ಬೆಲೆ 69 ಡಾಲರ್ ಇತ್ತು. ಈಗ ಅದು 78.92 ಡಾಲರ್ ತಲುಪಿದೆ. ಇರಾನ್ ಮತ್ತು ಲೆಬನಾನ್ ಜೊತೆ ಇಸ್ರೇಲ್ ಸಂಘರ್ಷ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲವಾದ್ದರಿಂದ ತೈಲ ಬೆಲೆ ತಹಬದಿಗೆ ಬರುವ ಸಾಧ್ಯತೆ ತೀರಾ ಕಡಿಮೆ. ಇದರ ಪರಿಣಾಮವಾಗಿ ಮುಂದಿನ ಕೆಲ ದಿನಗಳಲ್ಲಿ ಡಾಲರ್ ಎದುರು ರುಪಾಯಿ ಮೌಲ್ಯ 84.25ಕ್ಕೆ ಇಳಿಯಬಹುದು ಎಂಬ ಅಂದಾಜಿದೆ.

ಎಫ್​ಪಿಐ ನಿರ್ಗಮನದಿಂದ ರುಪಾಯಿಗೇನು ತೊಂದರೆ?

ಫಾರೀನ್ ಪೋರ್ಟ್​ಫೋಲಿಯೋ ಇನ್ವೆಸ್ಟರ್​ಗಳು (ಎಫ್​ಪಿಐ) ಭಾರತದ ಈಕ್ವಿಟಿ ಮಾರುಕಟ್ಟೆಯಲ್ಲಿ ಮಾಡಿದ್ದ ಹೂಡಿಕೆಯಲ್ಲಿ ಕಳೆದ 9-10 ದಿನಗಳಿಂದ 55,000 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಿವೆ. ಎಫ್​ಪಿಐಗಳು ಈಕ್ವಿಟಿಯಲ್ಲಿ ಹೂಡಿಕೆ ಮಾಡುವಾಗ ಡಾಲರ್​ನಲ್ಲಿ ಮಾಡುತ್ತವೆ. ಇದರಿಂದ ರುಪಾಯಿ ಕರೆನ್ಸಿಗೆ ಬಲ ಸಿಗುತ್ತದೆ. ಹೊರ ಹೋಗುವಾಗ ಡಾಲರ್ ಅನ್ನು ಪಡೆದು ಹೋಗುತ್ತವೆ. ಆಗ ರುಪಾಯಿ ದುರ್ಬಲಗೊಳ್ಳುತ್ತವೆ.

ಇದನ್ನೂ ಓದಿ: ನಾವೂ ಕೂಡ ಭಾರತಕ್ಕೆ ಅತಿಯಾಗಿ ತೆರಿಗೆ ಹಾಕಬೇಕಾಗುತ್ತೆ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ರುಪಾಯಿ ಕರೆನ್ಸಿ ಮೌಲ್ಯ 2014ರಲ್ಲಿ 61 ರ ಆಸುಪಾಸಿನಲ್ಲಿತ್ತು. ಹತ್ತು ವರ್ಷದಲ್ಲಿ 23 ರೂನಷ್ಟು ಮೌಲ್ಯ ನಶಿಸಿದೆ. ಆದರೆ, ಕಳೆದ ಎರಡು ವರ್ಷದಲ್ಲಿ ಡಾಲರ್ ಎದರು ರುಪಾಯಿ ಮೌಲ್ಯದಲ್ಲಿ ಅಷ್ಟೇನೂ ವ್ಯತ್ಯಯವಾಗಿಲ್ಲ. 2022ರ ಅಕ್ಟೋಬರ್ 10ರಂದು ಒಂದು ಡಾಲರ್​ಗೆ 83.0115 ರೂ ಇತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ