ನವದೆಹಲಿ: ದಿನೇದಿನೇ ಪಾತಾಳಕ್ಕೆ ಕುಸಿಯುತ್ತಿರುವ ರೂಪಾಯಿ ಮೌಲ್ಯ (Rupee Value) ಗುರುವಾರದ ಆರಂಭಿಕ ವಹಿವಾಟಿನಲ್ಲಿ ಮತ್ತೆ ಸಾರ್ವಕಾಲಿಕ ಪತನ ಕಂಡಿದೆ. ಬೆಳಗ್ಗೆ 10 ಗಂಟೆ ವೇಳೆಗೆ ಅಮೆರಿಕನ್ ಡಾಲರ್ (US Dollar) ವಿರುದ್ಧ ರೂಪಾಯಿ ಮೌಲ್ಯ 83.06ಕ್ಕೆ ತಲುಪಿದೆ. ಇದು ಈವರೆಗಿನ ಗರಿಷ್ಠ ಕುಸಿತವಾಗಿದೆ. ಬುಧವಾರದ ವಹಿವಾಟಿನ ಕೊನೆಯಲ್ಲಿಯೇ ರೂಪಾಯಿ ಮೌಲ್ಯ 83ಕ್ಕೆ ಬಂದು ನಿಂತಿತ್ತು. ಇಂದು ಮತ್ತೆ 6 ಪೈಸೆ ಇಳಿಕೆಯಾಗಿದೆ.
ದೇಶೀಯ ಷೇರುಗಳಲ್ಲಿನ ಮಾರಾಟ ಮತ್ತು ಸ್ಥಳೀಯ ಮಾರುಕಟ್ಟೆಯಲ್ಲಿನ ಆತಂಕದ ಪರಿಸ್ಥಿತಿ ಕೂಡ ಮೌಲ್ಯ ಕುಸಿಯಲು ಕಾರಣ ಎಂದು ಫಾರೆಕ್ಸ್ ಟ್ರೇಡರ್ಸ್ ತಿಳಿಸಿದ್ದಾರೆ.
ಇದನ್ನೂ ಓದಿ: ರೂಪಾಯಿ ಕುಸಿತವಲ್ಲ, ಡಾಲರ್ ಬಲಗೊಳ್ಳುತ್ತಿದೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಬೆಳಿಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆ 83.05 ಇದ್ದ ರೂಪಾಯಿ ಕೆಲವೇ ನಿಮಿಷಗಳಲ್ಲಿ ಮತ್ತೆ ಕುಸಿತ ಕಂಡಿದೆ. ಒಂದು ಹಂತದಲ್ಲಿ 83.07ಕ್ಕೆ ಕುಸಿದಿತ್ತು. ಬಳಿಕ 83.06ಕ್ಕೆ ಬಂದಿದೆ. ಈ ಮಧ್ಯೆ, ಡಾಲರ್ ಮೌಲ್ಯ ಇತರ ಆರು ಕರೆನ್ಸಿಗಳ ವಿರುದ್ಧ ವೃದ್ಧಿಯಾಗಿದೆ. ಶೇಕಡಾ 0.07ರಷ್ಟು ವೃದ್ಧಿಯಾಗಿ 113.06 ಆಗಿದೆ.
ಕಚ್ಚಾ ತೈಲ ಬೆಲೆ ಇಳಿಕೆ:
ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇಕಡಾ 0.17 ಇಳಿಕೆಯಾಗಿ ಬ್ಯಾರಲ್ಗೆ 92.25 ಡಾಲರ್ ಆಗಿದೆ. ಬೇಡಿಕೆ ಕುಸಿತದ ಕಾರಣ ಕಚ್ಚಾ ತೈಲದ (Crude oil futures) ಬೆಲೆ ಬುಧವಾರ ಶೇಕಡಾ 0.25ರಷ್ಟು ಇಳಿಕೆಯಾಗಿ, ಬ್ಯಾರೆಲ್ಗೆ 6,846 ರೂ. ಆಗಿತ್ತು.
ಇದನ್ನೂ ಓದಿ: Crude oil Price: ಬೇಡಿಕೆ ಕುಸಿತ, ಕಚ್ಚಾ ತೈಲ ಬೆಲೆ ಇಳಿಕೆ
ಈ ಮಧ್ಯೆ, ದೇಶೀಯ ಮಾರುಕಟ್ಟೆಯಲ್ಲಿ ಸತತ ನಾಲ್ಕು ದಿನಗಳ ಗಳಿಕೆಯ ಬಳಿಕ ಇಂದು ವಹಿವಾಟು ಕುಸಿದಿದೆ. ಬೆಳಗ್ಗೆ 10 ಗಂಟೆಯ ಲೆಕ್ಕಾಚಾರದ ಪ್ರಕಾರ, ಬಿಎಸ್ಇ ಸೆನ್ಸೆಕ್ಸ್ 140.09 ಅಥವಾ ಶೇಕಡಾ 0.24 ಕುಸಿತ ಕಂಡು 58,967.10 ರಲ್ಲಿ ವಹಿವಾಟು ನಡೆಸುತ್ತಿದೆ. ಅದೇ ರೀತಿ ನಿಫ್ಟಿ ಕೂಡ ಶೇಕಡಾ 0.25ರಷ್ಟು ಇಳಿಕೆಯಾಗಿದ್ದು, 17,468.30 ರಲ್ಲಿ ಟ್ರೇಡಿಂಗ್ ನಡೆಯುತ್ತಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FIIs) ಷೇರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡುತ್ತಿರುವುದು ಮಾರುಕಟ್ಟೆಯಲ್ಲಿನ ಕುಸಿತಕ್ಕೆ ಕಾರಣವಾಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು 453.91 ಕೋಟಿ ಮೌಲ್ಯದ ಷೇರುಗಳನ್ನು ಬುಧವಾರ ಮಾರಾಟ ಮಾಡಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ