
ನವದೆಹಲಿ, ಏಪ್ರಿಲ್ 22: ನೇರಾನೇರ ಮಾತುಗಳಿಗೆ ಹೆಸರಾದ ಉದ್ಯಮಿ ಸಬೀರ್ ಭಾಟಿಯಾ (Sabeer Bhatia) ಭಾರತದ ಶಿಕ್ಷಣ ವ್ಯವಸ್ಥೆ ಮತ್ತು ಸರ್ಕಾರಿ ಆಡಳಿತದ ವ್ಯವಸ್ಥೆ ಬಗ್ಗೆ ಕೆಂಡಕಾರಿದ್ದಾರೆ. ಅವರ ಪ್ರಕಾರ, ಈ ಎರಡೂ ವ್ಯವಸ್ಥೆಯು ಜನರ ಸೃಜನಶೀಲತೆಯನ್ನೇ ನಾಶ ಮಾಡುತ್ತದೆ. ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ ಬೆಳೆಯಲೇ ಅವಕಾಶ ಸಿಗೋದಿಲ್ಲ. ಕೆಲಸ ಸೃಷ್ಟಿಸುವ ಮನೋಭಾವ ಬೆಳೆಯುವುದೇ ಇಲ್ಲ ಎಂದು ಹಾಟ್ಮೇಲ್ ಸಹ-ಸಂಸ್ಥಾಪಕರಾದ ಅವರು ಹೇಳಿದ್ದಾರೆ.
ಪೋಡ್ಕ್ಯಾಸ್ಟ್ವೊಂದರಲ್ಲಿ ಮಾತನಾಡುತ್ತಿದ್ದ ಸಬೀರ್ ಭಾಟಿಯಾ ಭಾರತದ ಶಿಕ್ಷಣ ವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರತೀಯ ಶಿಕ್ಷಣದಲ್ಲಿ ಕ್ರಿಟಿಕಲ್ ಥಿಂಕಿಂಗ್ ಅಥವಾ ವಿಮರ್ಶಾತ್ಮಕ ಚಿಂತನೆಗೆ ಒತ್ತು ಕೊಡುವುದಿಲ್ಲ. ಎಲ್ಲವೂ ಕೂಡ ಅಂಕ ಗಳಿಕೆಗಾಗಿ ಕಂಠಪಾಠ ಮಾಡುವ ಪ್ರವೃತ್ತಿಗೆ ಉತ್ತೇಜಿಸಲಾಗುತ್ತದೆ. ಇಂಥ ವ್ಯವಸ್ಥೆಯಲ್ಲಿ ಓದಿದ ಮಕ್ಕಳಲ್ಲಿ ಹೊಸ ಆಲೋಚನೆ (innovation), ಉದ್ಯಮಶೀಲತೆಯ ಸ್ವಭಾವ (entrepreneur mindset) ಬೆಳೆಯಲು ಕಷ್ಟವಾಗುತ್ತದೆ ಎಂದು ಸಬೀರ್ ಭಾಟಿಯಾ ಹೇಳಿದ್ಧಾರೆ.
ಐಐಟಿಯಲ್ಲಿ ಓದಿದ ಅತಿ ಬುದ್ಧಿವಂತ ವಿದ್ಯಾರ್ಥಿಗಳೂ ಕೂಡ ಬ್ಯುಸಿನೆಸ್ ನಡೆಸುವ ಬದಲು ಕಾರ್ಪೊರೇಟ್ ಕೆಲಸ ಗಿಟ್ಟಿಸಲು ಆದ್ಯತೆ ಕೊಡುತ್ತಾರೆ. ಜೆಪಿ ಮಾರ್ಗನ್ನಂತಹ ಕಾರ್ಪೊರೇಟ್ ಸಂಸ್ಥೆಗಳಲ್ಲಿ ದೊಡ್ಡ ಸಂಬಳದ ಕೆಲಸಕ್ಕೆ ಸೇರಲು ಮುಂದಾಗುತ್ತಾರೆ ಎಂದು ಅವರು ವಿಷಾದಿಸಿದ್ದಾರೆ.
ಇದನ್ನೂ ಓದಿ: ಚಿನ್ನದ ಬೆಲೆ ಎಷ್ಟು ದಿನ ಹೀಗೆ ಏರುತ್ತೆ? ಬೆಲೆ ಕಡಿಮೆ ಆಗೋ ಸಾಧ್ಯತೆ ಎಷ್ಟು? ಇಲ್ಲಿದೆ ಡೀಟೇಲ್ಸ್
ಸಬೀರ್ ಭಾಟಿಯಾ ಅವರು ಭಾರತೀಯ ಶಿಕ್ಷಣ ವ್ಯವಸ್ಥೆ ಬಗ್ಗೆ ಮಾತನಾಡುತ್ತಾ, ಕೋಟಾದಲ್ಲಿ ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಕೋಚಿಂಗ್ ಸೆಂಟರ್ಗಳ ಉದಾಹರಣೆ ನೀಡಿದ್ದಾರೆ.
ರಾಜಸ್ಥಾನದಲ್ಲಿರುವ ಕೋಟಾ ನಗರದಲ್ಲಿ ನೂರಾರು ಕೋಚಿಂಗ್ ಸೆಂಟರ್ಗಳಿವೆ. ಜೆಇಇ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇಲ್ಲಿ ತರಬೇತಿ ನೀಡಲಾಗುತ್ತದೆ. ದೇಶದ ವಿವಿಧೆಡೆಯಿಂದ ವರ್ಷಕ್ಕೆ 65,000 ವಿದ್ಯಾರ್ಥಿಗಳು ಕೋಟಾಗೆ ಬಂದು ಜೆಇಇ ಪರೀಕ್ಷೆಗೆ ಟ್ಯೂಶನ್ ಪಡೆಯುತ್ತಾರೆ. ಇವರ್ಯಾರಿಗೂ ಕೂಡ ವಿಮರ್ಶಾತ್ಮಕ ಚಿಂತನೆ ಬೇಕಾಗಿಲ್ಲ ಎಂದು ಸಬೀರ್ ಭಾಟಿಯಾ ಭಾರತೀಯ ವ್ಯವಸ್ಥೆಗೆ ಕನ್ನಡಿ ಹಿಡಿದಿದ್ದಾರೆ.
ಭಾರತದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗುವ ಸ್ವಭಾವಕ್ಕೆ ಉತ್ತೇಜನ ಸಿಕ್ಕೋದಿಲ್ಲ. ಹೊಸ ಪ್ರಯೋಗ ಮಾಡುತ್ತೀನೆಂದು ಹೇಳಿದರೆ ಅದನ್ನು ಅಲ್ಲೇ ಮುರುಟಿಬಿಡುವಂತಹ ವ್ಯವಸ್ಥೆ ಇದೆ ಎಂದು ಹೇಳಿದ ಸಬೀರ್ ಭಾಟಿಯಾ, ಭಾರತದಲ್ಲಿ ವಾಟ್ಸಾಪ್ಗಿಂತಲೂ ದೊಡ್ಡ ಪ್ರಾಡಕ್ಟ್ ಬೆಳೆಯುವುದನ್ನು ಈ ವ್ಯವಸ್ಥೆ ಹೇಗೆ ನಿಲ್ಲಿಸಿತು ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ವಿಯೆಟ್ನಾಂನಿಂದ ಭಾರತಕ್ಕೆ ವರ್ಗವಾಗುತ್ತಿರುವ ಗೂಗಲ್ ಪಿಕ್ಸೆಲ್ ತಯಾರಿಕೆ; ಆ್ಯಪಲ್ ಹಾದಿ ಹಿಡಿದ ಆಲ್ಫಬೆಟ್
ತಾನು ಇಂಟರ್ನೆಟ್ ಆಧಾರಿತವಾಗಿ ಮೆಸೇಜ್ ಕಳುಹಿಸುವ ಒಂದು ಐಡಿಯಾದೊಂದಿಗೆ ಬ್ಯುಸಿನೆಸ್ ಆರಂಭಿಸಿದೆ. ಅದು ಜನಪ್ರಿಯ ಕೂಡ ಆಗುತ್ತಿತ್ತು. ಆದರೆ, ಯಾರೋ ಸರ್ಕಾರಿ ಬಾಬುಗೆ ಇದು ಅರ್ಥವಾಗಲಿಲ್ಲ. ಆ ಕಾರಣಕ್ಕೆ ಟ್ರಾಯ್ ಆ ಪ್ರಾಜೆಕ್ಟ್ಗೆ ಇತಿಶ್ರೀ ಹಾಡಿತು ಎಂದು ಸಬೀರ್ ಭಾಟಿಯಾ ಹೇಳಿದ್ಧಾರೆ.
‘ಹೊಸ ಬ್ಯುಸಿನೆಸ್ ಮಾಡಲ್ಗಳು ಬೇಕೆಂದರೆ ಹೊಸ ಆಲೋಚನೆ ಬೇಕು. ಆದರೆ, ಭಾರತದಲ್ಲಿ ಆ ಹೊಸ ಆಲೋಚನೆಯನ್ನೇ ನಿಲ್ಲಿಸಿಬಿಡುತ್ತಾರೆ. ಇದು ಕೆಲಸ ಮಾಡಿದರೆ ಹೇಗಿರುತ್ತೆ ಎಂದು ಯಾರೂ ಕೇಳುವುದಿಲ್ಲ. ಇದು ಕೆಲಸ ಮಾಡೋದಿಲ್ಲ ಎಂದು ಹೇಳಿ ಕಡ್ಡಿ ಎರಡು ತುಂಡು ಮಾಡಿ ಹೋಗಿಬಿಡುತ್ತಾರೆ’ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:10 pm, Tue, 22 April 25