ಎಸ್ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ)ದಿಂದ ಎಟಿಎಂಗಳು ಮತ್ತು ಬ್ಯಾಂಕ್ ಶಾಖೆಯಿಂದ ನಗದು ವಿಥ್ಡ್ರಾಗೆ ಸಂಬಂಧಿಸಿದಂತೆ ನಿಯಮಾವಳಿಗಳು ಹಾಗೂ ಶುಲ್ಕದಲ್ಲಿ ಬದಲಾವಣೆಗಳು ಮಾಡುವುದಕ್ಕೆ ಎಲ್ಲ ಸಿದ್ಧತೆ ನಡೆದಿದೆ. ಈ ಹೊಸ ನಿಯಮಾವಳಿಗಳು ಹೊಸ ಶುಲ್ಕಗಳು ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡೆಪಾಸಿಟ್ (BSBD) ಖಾತೆದಾರರಿಗೆ ಅನ್ವಯ ಆಗುತ್ತದೆ. ಎಟಿಎಂನಲ್ಲಿ ನಗದು ವಿಥ್ಡ್ರಾ ಶುಲ್ಕದಿಂದ ಚೆಕ್ಬುಕ್ ಮತ್ತು ಹಣಕಾಸೇತರ ವಹಿವಾಟುಗಳ ತನಕ ಬರಲಿರುವ ಹೊಸ ನಿಯಮಾವಳಿಗಳ ಮಾಹಿತಿ ಇಲ್ಲಿದೆ.
ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡೆಪಾಸಿಟ್ ಅಕೌಂಟ್ ಅಂದರೇನು?
ಎಸ್ಬಿಐ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡೆಪಾಸಿಟ್ ಖಾತೆಯು ಇರುವುದು ಬಡವರಿಗಾಗಿ. ಯಾವುದೇ ಶುಲ್ಕ ಅಥವಾ ದರವನ್ನು ವಿಧಿಸದೆ ಉಳಿತಾಯ ಆರಂಭಿಸುವುದನ್ನು ಉತ್ತೇಜಿಸುವುದಕ್ಕೆ ಈ ಖಾತೆ ಇದೆ. ಇದನ್ನು ಶೂನ್ಯ ಬ್ಯಾಲೆನ್ಸ್ ಖಾತೆ ಎನ್ನಲಾಗುತ್ತದೆ. ಬಿಎಸ್ಬಿಡಿ ಖಾತೆದಾರರಿಗೆ ಕನಿಷ್ಠ ಬ್ಯಾಲೆನ್ಸ್ ಅಥವಾ ಗರಿಷ್ಠ ಬ್ಯಾಲೆನ್ಸ್ ಅಂತಿಲ್ಲ. ಎಸ್ಬಿಐನಿಂದ ಬೇಸಿಕ್ ರುಪೇ ಎಟಿಎಂ-ಕಮ್-ಡೆಬಿಟ್ ಕಾರ್ಡ್ ಅನ್ನು ಬಿಎಸ್ಬಿಡಿ ಖಾತೆದಾರರಿಗೆ ನೀಡಲಾಗುತ್ತದೆ. ವೈಯಕ್ತಿಕವಾಗಿ ಯಾರ ಬಳಿ ಕೆವೈಸಿ ದಾಖಲಾತಿಗಳು ಇರುತ್ತವೆಯೋ ಅವರು ಬಿಎಸ್ಬಿಡಿ ಖಾತೆಯನ್ನು ಎಸ್ಬಿಐನಲ್ಲಿ ತೆರೆಯಬಹುದು.
ಎಸ್ಬಿಐ ಎಟಿಎಂನಿಂದ ನಗದು ವಿಥ್ಡ್ರಾ ನಿಯಮಾವಳಿಗಳು
ಬಿಎಸ್ಬಿಡಿ ಖಾತೆದಾರರಿಗೆ ನಾಲ್ಕು ಉಚಿತ ನಗದು ವಿಥ್ಡ್ರಾ ಲಭ್ಯ ಇವೆ- ಇದರಲ್ಲಿ ಎಟಿಎಂಗಳು ಮತ್ತು ಬ್ಯಾಂಕ್ ಶಾಖೆಗಳು ಎರಡೂ ಸೇರಿ ಒಂದು ತಿಂಗಳಲ್ಲಿ ಇಷ್ಟು ಅವಕಾಶ ಇದೆ. ಆ ಉಚಿತ ಮಿತಿಯ ನಂತರದಲ್ಲಿ ಬ್ಯಾಂಕ್ನಿಂದ ಪ್ರತಿ ವಹಿವಾಟಿಗೆ ರೂ. 15 ಹಾಗೂ ಜಿಎಸ್ಟಿ ಅನ್ವಯಿಸುತ್ತದೆ. ಶುಲ್ಕವು ಖಾತೆ ಹೊಂದಿರುವ ಹೋಮ್ ಬ್ರ್ಯಾಂಚ್ ಮತ್ತು ಎಟಿಎಂಗಳು ಮತ್ತು ಎಸ್ಬಿಐ ಎಟಿಂಗಳಿಗೆ ಹೊರತಾದ ಕಡೆಗೆ ಅನ್ವಯ ಆಗುತ್ತದೆ.
ಚೆಕ್ ಬುಕ್ ಶುಲ್ಕಗಳು:
ಬಿಎಸ್ಬಿಡಿ ಖಾತೆದಾರರಿಗೆ ಬ್ಯಾಂಕ್ನಿಂದ 10 ಚೆಕ್ ಲೀವ್ಸ್ ಅನ್ನು ಒಂದು ಹಣಕಾಸಿನ ವರ್ಷದಲ್ಲಿ ನೀಡಲಾಗುತ್ತದೆ. ಅದಾದ ನಂತರ ಚೆಕ್ಗಳಿಗೆ ದರ ವಿಧಿಸಲಾಗುತ್ತದೆ.
1) 10 ಚೆಕ್ ಲೀವ್ಸ್ಗೆ ರೂ. 40 ಶುಲ್ಕ ಹಾಗೂ ಜತೆಗೆ ಜಿಎಸ್ಟಿ
2) 25 ಚೆಕ್ ಲೀವ್ಸ್ಗೆ ರೂ. 75 ಶುಲ್ಕ ಹಾಗೂ ಜಿಎಸ್ಟಿ
3) ತುರ್ತು ಚೆಕ್ ಬುಕ್ಗೆ ರೂ. 50 ಶುಲ್ಕ ಪ್ಲಸ್ ಜಿಎಸ್ಟಿ ಆಗುತ್ತದೆ. ಅದಕ್ಕೆ 10 ಲೀವ್ಸ್ ಬರುತ್ತದೆ.
ಆದರೆ, ಹಿರಿಯ ನಾಗರಿಕರಿಗೆ ಚೆಕ್ ಬುಕ್ಗಳ ಮೇಲಿನ ಈ ಹೊಸ ಸೇವೆಗೆ ಯಾವುದೇ ಶುಲ್ಕ ಇಲ್ಲ. ಹೋಮ್ ಬ್ರ್ಯಾಂಚ್ (ಖಾತೆ ಇರುವ) ಅಥವಾ ಅಲ್ಲಿಂದ ಹೊರಗಿನ ಶಾಖೆಯಲ್ಲಿ ಬಿಎಸ್ಬಿಡಿ ಖಾತೆಯ ಯಾವುದೇ ಹಣಕಾಸೇತರ ವ್ಯವಹಾರಗಳಿಗೆ ಬ್ಯಾಂಕ್ನಿಂದ ಶುಲ್ಕ ಇರುವುದಿಲ್ಲ. ವರ್ಗಾವಣೆ ಕೂಡ ಶಾಖೆ ಮತ್ತು ಪರ್ಯಾಯ ಚಾನೆಲ್ಗಳಲ್ಲಿ ಬಿಎಸ್ಬಿಡಿ ಖಾತೆದಾರರಿಗೆ ಉಚಿತವಾಗಿರುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಗ್ರಾಹಕರು ಹೋಮ್ ಬ್ರ್ಯಾಂಚ್ ಅಲ್ಲದ ಕಡೆ ಹಣ ವಿಥ್ಡ್ರಾ ಮಾಡುವ ಮಿತಿಯನ್ನು ಸಹ ಹೆಚ್ಚಿಸಲಾಗಿದೆ. ಕೊರೊನಾ ಸಂದರ್ಭದಲ್ಲಿ ಗ್ರಾಹಕರನ್ನು ಬೆಂಬಲಿಸುವ ಉದ್ದೇಶದಿಂದ ಹೋಮ್ ಬ್ರ್ಯಾಂಚ್ ಅಲ್ಲದ ಕಡೆಯೂ ಚೆಕ್ ಅಥವಾ ವಿಥ್ಡ್ರಾ ಫಾರ್ಮ್ ಮೂಲಕ ನಗದು ವಿಥ್ಡ್ರಾ ಮಾಡುವ ಮಿತಿಯನ್ನು ಏರಿಕೆ ಮಾಡಲಾಗಿದೆ. ಈ ಬಗ್ಗೆ ಬ್ಯಾಂಕ್ನಿಂದಲೂ ಟ್ವೀಟ್ ಮಾಡಲಾಗಿದೆ. ಇನ್ನು ಒಂದು ದಿನಕ್ಕೆ ಚೆಕ್ ಬಳಸಿ ನಗದು ವಿಥ್ಡ್ರಾ ಮಾಡುವ ಮಿತಿಯನ್ನು ರೂ. 50,000ದಿಂದ 1 ಲಕ್ಷಕ್ಕೆ ಹೆಚ್ಚಿಸಲಾಗಿದೆ. ವಿಥ್ಡ್ರಾ ಫಾರ್ಮ್ ಹಾಗೂ ಪಾಸ್ಬುಕ್ ಜತೆಗೆ ಒಂದು ದಿನಕ್ಕೆ ನಗದು ವಿಥ್ ಡ್ರಾ ಮಾಡುವ ಮಿತಿ ರೂ. 25,000ಕ್ಕೆ ಹೆಚ್ಚಿಸಲಾಗಿದೆ. ಥರ್ಡ್ ಪಾರ್ಟಿ ನಗದು ವಿಥ್ ಡ್ರಾ ಅನ್ನು ಒಂದು ತಿಂಗಳಿಗೆ (ಚೆಕ್ ಮಾತ್ರ ಬಳಸಿ) ರೂ. 50,000ಕ್ಕೆ ನಿಗದಿ ಮಾಡಲಾಗಿದೆ. ವಿಥ್ಡ್ರಾ ಫಾರ್ಮ್ ಮೂಲಕ ನಗದು ಡ್ರಾ ಮಾಡುವುದಕ್ಕೆ ಅವಕಾಶ ಇಲ್ಲ ಎಂದು ಬ್ಯಾಂಕ್ ತಿಳಿಸಿದೆ. ಪರಿಷ್ಕೃತ ಮಿತಿ ಸೆಪ್ಟೆಂಬರ್ 30ರ ತನಕ ಇದೆ.
ಇದನ್ನೂ ಓದಿ: Aarogyam healthcare business loan: ಎಸ್ಬಿಐನಿಂದ ಹೆಲ್ತ್ಕೇರ್ಗಳಿಗೆ 100 ಕೋಟಿ ರೂ. ತನಕ ಆರೋಗ್ಯಮ್ ಉದ್ಯಮ ಸಾಲ
(SBI ATM cash withdrawal and Cheque book charges will change from July. Here is the details)
Published On - 5:12 pm, Sat, 26 June 21