SEBI Board Meeting: ಸೆಬಿ ಮಂಡಳಿ ಸಭೆಯಲ್ಲಿ ಹಲವು ಪ್ರಮುಖ ತೀರ್ಮಾನಗಳು; ಇಲ್ಲಿವೆ ವಿವರ
ಸೆಬಿ ಮಂಡಳಿಯ ಇಂದಿನ ಸಭೆಯಲ್ಲಿ ಹಲವು ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಅವುಗಳ ಬಗ್ಗೆ ಪ್ರಮುಖಾಂಶಗಳನ್ನು ಇಲ್ಲಿ ನೀಡಲಾಗಿದೆ.
ಮಾರುಕಟ್ಟೆ ನಿಯಂತ್ರಕವಾದ ಸೆಕ್ಯೂರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ)ದ ಮಂಡಳಿಯಿಂದ ಇಂದು (ಸೆ. 28, 2021) ಹಲವು ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಸ್ಪಾಟ್ ಚಿನ್ನದ ವಹಿವಾಟಿಗೆ ಚೌಕಟ್ಟಿನ (Framework) ವಿವರಣೆ, ಸಂಬಂಧಿತ ಪಕ್ಷದ ವಹಿವಾಟುಗಳಿಗೆ ಬಿಗಿಗೊಳಿಸುವ ನಿಯಮಗಳು, ಟೆಕ್ ಕಂಪನಿಗಳಲ್ಲಿ ಉನ್ನತ ಮತದಾನದ ಹಕ್ಕುಗಳೊಂದಿಗೆ ಷೇರುಗಳನ್ನು ವಿತರಿಸುವ ನಿಯಮಗಳನ್ನು ಮತ್ತು ಡಿಲಿಸ್ಟಿಂಗ್ ನಿಯಮಗಳನ್ನು ಸರಳಗೊಳಿಸುವುದು ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿತು.
ಪ್ರಮುಖ ಮುಖ್ಯಾಂಶಗಳು ಇಲ್ಲಿವೆ: ಚಿನ್ನದ ವಿನಿಮಯ ಭಾರತದಲ್ಲಿ ಚಿನ್ನದ ಸ್ಪಾಟ್ ಟ್ರೇಡಿಂಗ್ ಚೌಕಟ್ಟನ್ನು ಸೆಬಿ ಅನುಮೋದಿಸಿದೆ. ಚೌಕಟ್ಟಿನ ಅಡಿಯಲ್ಲಿ ವಾಲ್ಟ್ ವ್ಯವಸ್ಥಾಪಕರು ಎಂದು ಕರೆಸಿಕೊಳ್ಳುವವರು ಚಿನ್ನದ ಠೇವಣಿಗಳನ್ನು ಸ್ವೀಕರಿಸಬಹುದು ಮತ್ತು ಎಲೆಕ್ಟ್ರಾನಿಕ್ ಚಿನ್ನದ ರಸೀದಿಗಳು (ಇಜಿಆರ್) ಎಂದು ಕರೆಯುವ ಭದ್ರತೆಗಳನ್ನು ನೀಡಬಹುದು. ಈ EGRಗಳನ್ನು ಬೇರೆ ಬೇರೆ ಸೆಕ್ಯೂರಿಟಿಗಳಂತೆ (ಸ್ಟಾಕ್ ಆಪ್ಷನ್ ಅಥವಾ ಸ್ಟಾಕ್ ಫ್ಯೂಚರ್ಸ್ನಂತಹ) ವಿನಿಮಯ ಕೇಂದ್ರಗಳಲ್ಲಿ ಪ್ರತ್ಯೇಕ ವಿಭಾಗವಾಗಿ ವ್ಯಾಪಾರ ಮಾಡಬಹುದು. ವಿನಿಮಯಗಳು EGRಗಳ ಮುಖಬೆಲೆಗಳನ್ನು (ಉದಾ. 1gm, 2gms ಇತ್ಯಾದಿ) ನಿರ್ಧರಿಸಬಹುದು. ಹೂಡಿಕೆದಾರರು ಇಜಿಆರ್‌ಗಳನ್ನು ಅವರು ಬಯಸಿದಷ್ಟು ಕಾಲ ಇಟ್ಟುಕೊಳ್ಳಬಹುದು ಅಥವಾ ಯಾವುದೇ ವಾಲ್ಟ್ ಮ್ಯಾನೇಜರ್‌ಗೆ ಇನ್ಸ್ಟ್ರುಮೆಂಟ್ ಒಪ್ಪಿಸುವ ಮೂಲಕ ಅದನ್ನು ಆಧಾರವಾಗಿರುವ ಚಿನ್ನಕ್ಕೆ ಪರಿವರ್ತಿಸಬಹುದು.
ಉನ್ನತ ಮತದಾನದ ಹಕ್ಕುಗಳು ಸೆಬಿ ಮಂಡಳಿಯಿಂದ ಸುಪೀರಿಯರ್ ವೋಟಿಂಗ್ ರೈಟ್ಸ್ (ಎಸ್‌ಆರ್) ಷೇರುಗಳ ಚೌಕಟ್ಟಿಗೆ ಸಂಬಂಧಿಸಿದ ಅರ್ಹತಾ ಅವಶ್ಯಕತೆಗಳನ್ನು ಸಡಿಲಗೊಳಿಸಲು ನಿರ್ಧರಿಸಲಾಯಿತು. 1,000 ಕೋಟಿ ರೂಪಾಯಿವರೆಗಿನ ನಿವ್ವಳ ಮೌಲ್ಯ ಹೊಂದಿರುವ ಪ್ರವರ್ತಕ ಗುಂಪಿಗೆ ಸೇರಿದ ಘಟಕಗಳಿಗೆ ಎಸ್‌ಆರ್ ಷೇರುಗಳನ್ನು ನೀಡಬಹುದು ಎಂದು ಸೆಬಿ ತಿಳಿಸಿದೆ. ಇದು ಸದ್ಯಕ್ಕೆ ಇರುವ 500 ಕೋಟಿ ರೂಪಾಯಿಯ ಮಿತಿಯಿಂದ ಹೆಚ್ಚಳವಾಗಿದೆ. ಎರಡನೆಯದಾಗಿ, ಎಸ್‌ಆರ್ ಷೇರುಗಳನ್ನು ವಿತರಿಸಿದ ಮೂರು ತಿಂಗಳ ನಂತರ ಕಂಪೆನಿಗಳು ಆರಂಭಿಕ ಸಾರ್ವಜನಿಕ ಕೊಡುಗೆಯನ್ನು (ಐಪಿಒ) ಸಲ್ಲಿಸಬಹುದು.
ಡಿಲಿಸ್ಟಿಂಗ್ ಮತ್ತು M&A ಸ್ವಾಧೀನಪಡಿಸಿಕೊಂಡ ನಂತರ, ಸ್ವಾಧೀನಪಡಿಸಿಕೊಂಡವರಿಗೆ ಉದ್ದೇಶಿತ ಕಂಪೆನಿಗಳನ್ನು ಡಿಲಿಸ್ಟ್ ಮಾಡಲು ಸುಲಭವಾಗಿಸಿದೆ. ಸದ್ಯಕ್ಕೆ, ಸ್ವಾಧೀನಪಡಿಸಿಕೊಂಡವರು ಷೇರುದಾರರಿಗೆ ಮುಕ್ತ ಕೊಡುಗೆಯನ್ನು ನೀಡಬೇಕಾಗಿ ಬಂದ ನಂತರ, ಅದು ಶೇ 90ರಷ್ಟು ಷೇರುಗಳನ್ನು ಪಡೆದರೂ ಅದನ್ನು ಡಿಲಿಸ್ಟ್ ಮಾಡಲು ಸಾಧ್ಯವಿಲ್ಲ. ಏಕೆಂದರೆ ಈಗಿನ ನಿಯಮಗಳು ಸ್ವಾಧೀನಪಡಿಸಿಕೊಳ್ಳುವವರನ್ನು ಡಿಲಿಸ್ಟಿಂಗ್ ಪ್ರಕ್ರಿಯೆ ಪ್ರಾರಂಭಿಸುವ ಮೊದಲಿಗೆ ಶೇ 75ಕ್ಕೆ ಇಳಿಸುವುದನ್ನು ಕಡ್ಡಾಯಗೊಳಿಸುತ್ತದೆ. ಪ್ರಸ್ತುತ ಚೌಕಟ್ಟಿನ ಅಡಿಯಲ್ಲಿ ಸ್ವಾಧೀನಪಡಿಸಿಕೊಳ್ಳುವವರು ಮುಕ್ತ ಕೊಡುಗೆ ಬೆಲೆಯ ಮೇಲೆ ಸೂಕ್ತವಾದ ಪ್ರೀಮಿಯಂನೊಂದಿಗೆ ಡಿಲಿಸ್ಟ್ ಮಾಡಲು ಹೆಚ್ಚಿನ ಬೆಲೆಯನ್ನು ಪ್ರಸ್ತಾಪಿಸಬಹುದು.
“ಮುಕ್ತ ಕೊಡುಗೆಗೆ (ಓಪನ್ ಆಫರ್) ಪ್ರತಿಕ್ರಿಯೆಯು ಡಿಲಿಸ್ಟಿಂಗ್ ಮಿತಿಯನ್ನು ಶೇ 90ಕ್ಕೆ ಮುಟ್ಟಿದರೆ ತಮ್ಮ ಷೇರುಗಳನ್ನು ಟೆಂಡರ್ ಮಾಡುವ ಎಲ್ಲ ಷೇರುದಾರರಿಗೆ ಒಂದೇ ರೀತಿಯ ಡಿಲಿಸ್ಟಿಂಗ್ ಬೆಲೆಯನ್ನು ಪಾವತಿಸಲಾಗುತ್ತದೆ ಹಾಗೂ ಆಫರ್ಗೆ ಪ್ರತಿಕ್ರಿಯೆಯು ಶೇ 90ರಷ್ಟು ಡಿಲಿಸ್ಟಿಂಗ್ ಮಿತಿಯನ್ನು ಪೂರೈಸದಿದ್ದರೆ ತಮ್ಮ ಷೇರುಗಳನ್ನು ಟೆಂಡರ್ ಮಾಡುವ ಎಲ್ಲ ಷೇರುದಾರರಿಗೆ ಒಂದೇ ಸ್ವಾಧೀನ ಬೆಲೆಯನ್ನು ಪಾವತಿಸಲಾಗುತ್ತದೆ,” ಎಂದು ಸೆಬಿ ಹೇಳಿದೆ. ಸ್ವಾಧೀನಪಡಿಸಿಕೊಂಡವರು ಶೇಕಡಾ 75ರ ಗಡಿ ದಾಟಿದಲ್ಲಿ ಆದರೆ ಶೇ 90ರಷ್ಟು ಮಿತಿಗಿಂತ ಕಡಿಮೆ ಇದ್ದರೂ ಡಿಲಿಸ್ಟಿಂಗ್ ಪೂರ್ಣಗೊಳಿಸಲು 12 ತಿಂಗಳ ಕಾಲಾವಕಾಶವನ್ನು ಪಡೆಯುತ್ತಾರೆ.
ಸಂಬಂಧಿತ ಪಕ್ಷದ ವಹಿವಾಟುಗಳು ಕಾರ್ಪೊರೇಟ್ ಆಡಳಿತದ ಪ್ರಮುಖ ಸಮಸ್ಯೆಯಾದ ಸಂಬಂಧಿತ ಪಕ್ಷದ ವಹಿವಾಟುಗಳು ಅಥವಾ RPTಗಳಿಗೆ ಸಂಬಂಧಿಸಿದ ನಿಯಮಾವಳಿಗಳನ್ನು ಸೆಬಿ ಬಿಗಿಗೊಳಿಸಿದೆ. ಸಂಬಂಧಿತ ಪಕ್ಷದ ವಹಿವಾಟು ಅಂದರೆ, ಆ ವಹಿವಾಟಿಗೆ ಮುಂಚಿತವಾಗಿ ಅಸ್ತಿತ್ವದಲ್ಲಿರುವ ಸಂಪರ್ಕವನ್ನು ಹೊಂದಿರುವ ಎರಡು ಪಕ್ಷಗಳ ನಡುವೆ ನಡೆಯುವ ವಹಿವಾಟಾಗಿದೆ. ಸೆಬಿ ಮಂಡಳಿಯು ಸಂಬಂಧಿತ ಪಕ್ಷದ ವ್ಯಾಖ್ಯಾನವನ್ನು ಪ್ರವರ್ತಕ ಗುಂಪಿನ ಭಾಗವಾಗಿರುವ ಎಲ್ಲ ಘಟಕಗಳಿಗೆ ವಿಸ್ತರಿಸಿದೆ. ಅಲ್ಲದೆ, ಹಿಂದಿನ ಹಣಕಾಸು ವರ್ಷದಲ್ಲಿ ಕನಿಷ್ಠ ಶೇ 20ರಷ್ಟು ಷೇರುಗಳನ್ನು ಹೊಂದಿರುವ ಯಾವುದೇ ಷೇರುದಾರರನ್ನು ಸಹ ಸಂಬಂಧಿತ ಪಕ್ಷ ಎಂದು ವರ್ಗೀಕರಿಸಲಾಗಿದೆ. ಈ ಶೇ 20ರ ಮಿತಿಯನ್ನು 2023ರ ಏಪ್ರಿಲ್ನಿಂದ ಶೇ 10ಕ್ಕೆ ಇಳಿಸಿ, ಮತ್ತಷ್ಟು ಬಿಗಿಗೊಳಿಸಲಾಗುವುದು.
SEBI ಮಂಡಳಿಯು ಹೆಚ್ಚಿನ ಲೆಕ್ಕಪರಿಶೋಧನಾ ಸಮಿತಿಯ ಪರಿಶೀಲನೆ ಮತ್ತು ಒಂದು ನಿರ್ದಿಷ್ಟ ಮಿತಿಗಿಂತ ಹೆಚ್ಚಿನ RPTಗಳಿಗೆ ಷೇರುದಾರರ ಅನುಮೋದನೆಗೆ ಕರೆ ನೀಡಿದೆ – ರೂ. 1000 ಕೋಟಿ ರುಪಾಯಿ ಅಥವಾ ಲಿಸ್ಟೆಡ್ ಮಾಡಲಾದ ಕಂಪೆನಿಯ ಕನ್ಸಾಲಿಡೇಟಿಡ್ ವಾರ್ಷಿಕ ವಹಿವಾಟಿನ ಶೇ 10ರಷ್ಟು ಇವೆರಡರಲ್ಲಿ ಯಾವುದು ಕಡಿಮೆಯೋ ಅದಕ್ಕೆ ಅನುಮತಿ ಅಗತ್ಯ.
ದೃಢ ಮತ್ತು ಸರಿಯಾದ ಮಾನದಂಡ ಸೆಬಿ ಮಂಡಳಿಯು ‘ದೃಢ ಮತ್ತು ಸೂಕ್ತ ವ್ಯಕ್ತಿ’ ಅನ್ನು ನಿರ್ಧರಿಸುವ ಮಾನದಂಡಗಳನ್ನು ಕೂಡ ಮಾರ್ಪಡಿಸಿದೆ. ಈ ಮಾನದಂಡಗಳು ತತ್ವ-ಆಧಾರಿತ ಮತ್ತು/ಅಥವಾ ನಿಯಮ-ಆಧಾರಿತವಾಗಿರುತ್ತವೆ ಎಂದು ಅದು ಹೇಳಿದೆ. ತತ್ವ ಆಧಾರಿತ ಮಾನದಂಡಗಳು ಸಮಗ್ರತೆ, ಪ್ರಾಮಾಣಿಕತೆ, ನೈತಿಕ ನಡವಳಿಕೆ, ಖ್ಯಾತಿ, ನ್ಯಾಯ ಮತ್ತು ನಡವಳಿಕೆಯನ್ನು ಒಳಗೊಂಡಿರಬೇಕು ಎಂದು ಅದು ಹೇಳಿದೆ.
ಇದನ್ನೂ ಓದಿ: Videocon Industries: ಕೈಗಾರಿಕೋದ್ಯಮಿ ವೇಣುಗೋಪಾಲ್ ಧೂತ್, ಎರಡು ಸಂಸ್ಥೆ ಮೇಲೆ 75 ಲಕ್ಷ ರೂ. ದಂಡ ಹಾಕಿದ ಸೆಬಿ
(SEBI Board Have Taken Major Decisions In Today Meeting Here Is The Details)