ಯುಗಾದಿ ಹಬ್ಬದ ದಿನದಂದು ಷೇರುಪೇಟೆ ಧಮಾಕ; ದಾಖಲೆ ಮಟ್ಟ ಮುಟ್ಟಿದ ಸೆನ್ಸೆಕ್ಸ್, ನಿಫ್ಟಿ
Indian stock market: ಭಾರತದ ಷೇರು ಮಾರುಕಟ್ಟೆ ಯುಗಾದಿ ಹಬ್ಬದ ದಿನವಾದ ಮಂಗಳವಾರದಂದು ಹೊಸ ದಾಖಲೆಯ ಮಟ್ಟಕ್ಕೆ ಏರಿ ಕೆಳಗಿಳಿದಿದೆ. ಬೆಳಗಿನ ವಹಿವಾಟಿನಲ್ಲಿ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ ಎರಡೂ ಕೂಡ ಹೊಸ ದಾಖಲೆ ಮಾಡಿವೆ. ಸೆನ್ಸೆಕ್ಸ್ ಮೊದಲ ಬಾರಿಗೆ 75,000 ಅಂಕಗಳ ಮಟ್ಟ ಮುಟ್ಟಿದೆ. ನಿಫ್ಟಿ 22,765 ಅಂಕಗಳಿಗೆ ಏರಿದೆ. ಮಧ್ಯಾಹ್ನದ ವೇಳೆಗೆ ಬಹುತೇಕ ಎಲ್ಲಾ ಸೂಚ್ಯಂಕಗಳು ಕುಸಿತ ಕಂಡಿರುವುದು ಕುತೂಹಲ ಮೂಡಿಸಿದೆ. ಬ್ಯಾಂಕ್ ಸೂಚ್ಯಂಕಗಳು ಮಾತ್ರ ಹಸಿರು ಬಣ್ಣದಲ್ಲಿವೆ.
ನವದೆಹಲಿ, ಏಪ್ರಿಲ್ 9: ಅಮೆರಿಕದ ಷೇರು ಮಾರುಕಟ್ಟೆ (stock market) ಕಳೆಗುಂದಿದರೂ ಅದರ ಪರಿಣಾಮ ಉಂಟಾಗಿಲ್ಲ ಎನ್ನುವ ರೀತಿಯಲ್ಲಿ ಯುಗಾದಿ ಹಬ್ಬದ ದಿನದಂದು ಭಾರತದ ಷೇರು ಮಾರುಕಟ್ಟೆಯ ಭರ್ಜರಿ ಓಟ ನಡೆದಿತ್ತು. ಬಿಎಸ್ಇ ಮತ್ತು ಎನ್ಎಸ್ಇಯ ಪ್ರಮುಖ ಸೂಚ್ಯಂಕಗಳು ಗಣನೀಯವಾಗಿ ಹೆಚ್ಚಿದವು. ಅದರಲ್ಲೂ ಸೆನ್ಸೆಕ್ಸ್ 30, ನಿಫ್ಟಿ50 ಇಂಡೆಕ್ಸ್ ಹೊಸ ದಾಖಲೆಯ ಮಟ್ಟ ಮುಟ್ಟಿದ್ದವು. ಐಟಿ ಮತ್ತು ವಾಹನ ಸಂಸ್ಥೆಗಳ ಷೇರುಗಳು ಇಂದು ಮಂಗಳವಾರ ಹೆಚ್ಚಿನ ಬೆಲೆಗೆ ಬಿಕರಿಯಾದವು. ಇದು ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕಗಳು ಹಿಗ್ಗಲು ಕಾರಣವಾಯಿತು. ಆದರೆ, ಅಚ್ಚರಿ ಎಂಬಂತೆ ಬೆಳಗಿನ ವಹಿವಾಟಿನಲ್ಲಿ ಏರಿಕೆ ಕಂಡಿದ್ದ ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕಗಳು ಮಧ್ಯಾಹ್ನದ ವೇಳೆಗೆ ಕುಸಿತ ಕಂಡಿವೆ.
ಬಿಎಸ್ಇ ಸೆನ್ಸೆಕ್ಸ್ ಮೊದಲ ಬಾರಿಗೆ 75,000 ಅಂಕಗಳ ಮಟ್ಟ ಮುಟ್ಟಿತು. ಮಂಗಳವಾರದ ಒಂದು ಸಂದರ್ಭದಲ್ಲಿ 75,124 ಅಂಕಗಳ ಗರಿಷ್ಠ ಮಟ್ಟಕ್ಕೆ ಏರಿತ್ತು. ಇನ್ನು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ನಿಫ್ಟಿ ಸೂಚ್ಯಂಕ 22,765 ಅಂಕಗಳ ಮಟ್ಟ ಮುಟ್ಟಿತ್ತು. ಇದು ನಿಫ್ಟಿ50ಯ ಗರಿಷ್ಠ ಮಟ್ಟ ಎನಿಸಿದೆ. ಬಿಎಸ್ಇನ ಮಿಡ್ಕ್ಯಾಪ್ ಇಂಡೆಕ್ಸ್ ಬೆಳಗಿನ ವಹಿವಾಟಿನಲ್ಲಿ 41,172.56 ಅಂಕಗಳ ಗರಿಷ್ಠ ಮಟ್ಟ ಮುಟ್ಟಿತ್ತು. ಇದಾದ ಬಳಿಕ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಕೂಡ ಇಳಿಕೆ ಕಂಡಿವೆ.
ನಿಫ್ಟಿ ಬ್ಯಾಂಕ್, ನಿಫ್ಟಿ ಸ್ಮಾಲ್ಕ್ಯಾಪ್ 100, ನಿಫ್ಟಿ ಸ್ಮಾಲ್ಕ್ಯಾಪ್50 ಹೊರತುಪಡಿಸಿ ಉಳಿದ ಎನ್ಎಸ್ಇ ಸೂಚ್ಯಂಕಗಳು ಹಿಂದಿನ ದಿನದಕ್ಕಿಂತ ಕುಸಿತ ಕಂಡಿವೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಅಥವಾ ಬಿಎಸ್ಇನಲ್ಲೂ ಬ್ಯಾಂಕ್ ಇಂಡೆಕ್ಸ್ ಹೊರತಪಡಿಸಿ ಉಳಿದ ಸೂಚ್ಯಂಕಗಳು ಕುಸಿತ ಕಂಡಿವೆ.
ಇದನ್ನೂ ಓದಿ: ಭಾರತದಲ್ಲಿ ಕಂಪನಿ ಮುಖ್ಯಸ್ಥರ ಸಂಭಾವನೆ ಶೇ. 40ರಷ್ಟು ಹೆಚ್ಚಳ; ಸಿಇಒಗಳ ಸರಾಸರಿ ಸಂಬಳ ಎಷ್ಟಿದೆ ಗೊತ್ತಾ?
ಸೆನ್ಸೆಕ್ಸ್ ಗಮನಾರ್ಹ ಸಾಧನೆ
ಸೆನ್ಸೆಕ್ಸ್ ಕಳೆದ ಒಂದು ವರ್ಷದಲ್ಲಿ ಶೇ. 25ರಷ್ಟು ಹೆಚ್ಚಳಗೊಂಡು ಅಚ್ಚರಿ ಮೂಡಿಸಿದೆ. ಕಳೆದ ವರ್ಷದ ಏಪ್ರಿಲ್ 21ರಂದು ಸೆನ್ಸೆಕ್ಸ್ 59,412 ಅಂಕಗಳಲ್ಲಿ ಇತ್ತು. ಈಗ 12 ತಿಂಗಳ ಅಂತರದಲ್ಲಿ 75,000 ಅಂಕಗಳ ಮಟ್ಟಕ್ಕೆ ಹೋಗಿರುವುದು ಅಚ್ಚರಿಯೇ ಸರಿ. ಸೆನ್ಸೆಕ್ಸ್ನಲ್ಲಿ 30 ಪ್ರಮುಖ ಕಂಪನಿಗಳ ಷೇರುಗಳಿವೆ. ಅತಿಹೆಚ್ಚು ಷೇರುಸಂಪತ್ತಿರುವ ಕಂಪನಿಗಳ ಷೇರುಗಳನ್ನು ಈ ಸೂಚ್ಯಂಕ ಒಳಗೊಂಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ