AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಷೇರುಬಜಾರಿಗೆ ಗುರುವಾರದ ಸುಗ್ಗಿ; ಸಖತ್ ಮಿಂಚಿರುವ ಸೆನ್ಸೆಕ್ಸ್, ನಿಫ್ಟಿ; ಮಾರುಕಟ್ಟೆ ಓಟಕ್ಕೆ ಕಾರಣಗಳಿವು

ಬಿಎಸ್​ಇ ಸೆನ್ಸೆಕ್ಸ್ ಸೂಚ್ಯಂಕ ಗುರುವಾರದ ಟ್ರೇಡಿಂಗ್​ನ ಒಂದು ಹಂತದಲ್ಲಿ 79,000 ಅಂಕಗಳನ್ನು ದಾಟಿ ಹೋಗಿತ್ತು. ನಿಫ್ಟಿ ಕೂಡ ಶೇ. 2ರಷ್ಟು ಜಂಪ್ ಮಾಡಿದೆ. ಭಾರತದ ಷೇರು ಮಾರುಕಟ್ಟೆ ಈ ಪರಿ ಓಡಲು ಕೆಲ ಪ್ರಮುಖ ಕಾರಣಗಳಿವೆ. ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷ ಸೋಲನುಭವಿಸಿದ್ದು ಮಾರುಕಟ್ಟೆಗೆ ಹೊಸ ಉತ್ಸಾಹ ಕೊಟ್ಟಿದೆ.

ಭಾರತದ ಷೇರುಬಜಾರಿಗೆ ಗುರುವಾರದ ಸುಗ್ಗಿ; ಸಖತ್ ಮಿಂಚಿರುವ ಸೆನ್ಸೆಕ್ಸ್, ನಿಫ್ಟಿ; ಮಾರುಕಟ್ಟೆ ಓಟಕ್ಕೆ ಕಾರಣಗಳಿವು
ಷೇರು ಮಾರುಕಟ್ಟೆImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 05, 2026 | 1:09 PM

Share

ನವದೆಹಲಿ, ನವೆಂಬರ್ 5: ಭಾರತದ ಷೇರು ಮಾರುಕಟ್ಟೆ ಸತತ ಎಂಟನೇ ಟ್ರೇಡಿಂಗ್ ಸೆಷನ್ ಪಾಸಿಟಿವ್​ನಲ್ಲಿದೆ. ಈ ವರ್ಷ ಮಾರುಕಟ್ಟೆ ಇಷ್ಟು ದೀರ್ಘಾವಧಿ ಹಸಿರುಬಣ್ಣದಲ್ಲಿದ್ದದ್ದು ಇದೇ ಮೊದಲು. ಸೆನ್ಸೆಕ್ಸ್, ನಿಫ್ಟಿ ಇತ್ಯಾದಿ ಪ್ರಮುಖ ಸೂಚ್ಯಂಕಗಳು ಶೇ. 2ರಷ್ಟು ಹೆಚ್ಚಳ ಕಂಡಿವೆ. ಸೆನ್ಸೆಕ್ಸ್ ಇವತ್ತಿನ ಸೆಷನ್​ನ ಒಂದು ಹಂತದಲ್ಲಿ 79,000 ಅಂಕಗಳ ಗಡಿ ದಾಟಿತು. ನಿಫ್ಟಿ ಕೂಡ ಒಂದು ಹಂತದಲ್ಲಿ 24,450 ಅಂಕಗಳವರೆಗೂ ಏರಿತ್ತು.

ಸೆನ್ಸೆಕ್ಸ್, ನಿಫ್ಟಿ ಮಾತ್ರವಲ್ಲ, ಬಿಎಸ್​ಇ ಮತ್ತು ಎನ್​ಎಸ್​ಇಯ ಹೆಚ್ಚಿನ ಸೂಚ್ಯಂಕಗಳು ಉತ್ತಮವಾಗಿ ಸ್ಪಂದಿಸಿವೆ. ಆಟೊಮೊಬೈಲ್, ಐಟಿ, ಬ್ಯಾಂಕಿಂಗ್, ರಿಯಲ್ ಎಸ್ಟೇಟ್ ಇತ್ಯಾದಿ ಕೆಲ ಸೆಕ್ಟರ್​ಗಳ ಸೂಚ್ಯಂಕಗಳು ಗರಿಷ್ಠ ಏರಿಕೆ ಪಡೆದಿವೆ.

ಅಮೆರಿಕದಲ್ಲಿ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷಕ್ಕೆ ಸೋಲುಂಟಾಗಿದ್ದೇ ಮಾರುಕಟ್ಟೆ ಗರಿಗೆದರಿತಾ?

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಆ ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷಕ್ಕೆ ಮುಖಭಂಗವಾಗಿದೆ. ಭಾರತದ ರಾಜ್ಯಸಭೆ ಮತ್ತು ಲೋಕಸಭೆ ಇರವಂತೆ ಅಮೆರಿಕದ ಸೆನೇಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ನಲ್ಲಿ ಡೆಮಾಕ್ರಾಟ್ ಪಕ್ಷದವರೇ ಬಹುಸಂಖ್ಯಾತರಾಗಿದ್ದಾರೆ. ಟ್ರಂಪ್ ಅವರು ಸದನಗಳಲ್ಲಿ ಸಂಖ್ಯಾಬಲ ಇಲ್ಲದ ಅಧ್ಯಕ್ಷರಾಗಿದ್ದಾರೆ. ನಿರ್ಣಾಯಕ ಸಂದರ್ಭಗಳಲ್ಲಿ ಅವರಿಗೆ ತಮ್ಮ ಕ್ರಮ ಜಾರಿಗೊಳಿಸಲು ಬೇಕಾದ ಸಂಖ್ಯಾಬಲ ಇರುವುದಿಲ್ಲ. ಅವರ ಕೈಕಟ್ಟಿದಂತಾಗುತ್ತದೆ. ಹೀಗಾಗಿ, ಅಮೆರಿಕ ಚುನಾವಣಾ ಫಲಿತಾಂಶವು ಜಾಗತಿಕವಾಗಿ ಪರಿಣಾಮ ಬೀರುತ್ತಿದೆ.

ಇದನ್ನೂ ಓದಿ: ಐದು ದೇಶಗಳ ಗೂಗಲ್ ಉದ್ಯೋಗಿಗಳಿಗೆ ಕೆಲಸಕ್ಕೆ ಸಂಚಕಾರ; ವಾಲಂಟರಿ ಎಕ್ಸಿಟ್ ಆಫರ್​ನ ಸಂಕಟ

ಕಚ್ಚಾ ತೈಲ ಬೆಲೆ ಇಳಿಕೆ

ಟ್ರಂಪ್ ಅವರು ಇರಾನ್​ನಲ್ಲಿ ಯುದ್ಧ ಮುಂದುವರಿಸುವ ಸಾಹಸಕ್ಕೆ ಕೈಹಾಕುವ ಸಾಧ್ಯತೆ ಕಡಿಮೆ ಇದೆ. ಪಶ್ಚಿಮ ಏಷ್ಯಾದಲ್ಲಿ ಪರಿಸ್ಥಿತಿ ತಿಳಿಗೊಳ್ಳುವ ಆಶಯ ಇದೆ. ಹೀಗಾಗಿ, ಕಚ್ಚಾ ತೈಲ ಬೆಲೆ ಗಣನೀಯವಾಗಿ ಇಳಿದಿದೆ. ಇದು ಷೇರು ಮಾರುಕಟ್ಟೆಗೆ ಒಟ್ಟಾರೆ ಸಕಾರಾತ್ಮಕ ಪರಿಣಾಮ ಬೀರಿದೆ.

ಎಫ್​ಐಐಗಳಿಂದ ಹರಿದುಬರುತ್ತಿರುವ ಹೂಡಿಕೆ

ವಿದೇಶೀ ಸಾಂಸ್ಥಿಕ ಹೂಡಿಕೆದಾರರು ಭಾರತದಲ್ಲಿ ಸತತವಾಗಿ ಹೂಡಿಕೆ ಮಾಡುವುದು ಮುಂದುವರಿದಿದೆ. ಡೆಮಾಕ್ರಾಟ್ ಗೆಲುವು ಅಮೆರಿಕದಲ್ಲಿ ಎಐ ಮೇಲೆ ಹೆಚ್ಚಿನ ಕಡಿವಾಣ ಬೀಳುವ ಸಾಧ್ಯತೆ ಹೆಚ್ಚಿಸಿದೆ. ಹೀಗಾಗಿ, ವಿದೇಶೀ ಹೂಡಿಕೆದಾರರು ಭಾರತದ ಷೇರುಗಳ ಮೇಲೆ ಹೂಡಿಕೆ ಮಾಡಲು ಮತ್ತಷ್ಟು ಮುಂದಾಗಬಹುದು.

ಜಾಗತಿಕ ಮಾರುಕಟ್ಟೆಗಳ ಪ್ರಭಾವ ಭಾರತದ ಮೇಲೆ

ವಿಶ್ವದ ವಿವಿಧ ಷೇರು ಮಾರುಕಟ್ಟೆಗಳು ಪಾಸಿಟಿವ್ ಆಗಿವೆ. ಅಮೆರಿಕ ಡೋವ್ ಜೋನ್ಸ್ ಇಂಡಸ್ಟ್ರಿಯಲ್ ಆವರೇಜ್ ಶೇ. 3.03ರಷ್ಟು ಹೆಚ್ಚಿದೆ. ನಾಸ್ಡಾಕ್ ಕಾಂಪೊಸಿಟ್, ಎಸ್ ಅಂಡ್ ಪಿ 500 ಸೂಚ್ಯಂಕಗಳು ಶೇ 1ಕ್ಕಿಂತಲೂ ಹೆಚ್ಚಾಗಿವೆ.

ಜಪಾನ್​, ಸೌತ್ ಕೊರಿಯಾ, ಜರ್ಮನಿ, ಬ್ರಿಟನ್ ಇತ್ಯಾದಿಯ ಮಾರುಕಟ್ಟೆಗಳೂ ಕೂಡ ಕಲರವ ಪಡೆಯುತ್ತಿವೆ.

ಇದನ್ನೂ ಓದಿ: ನೂರು ಕೋಟಿ ರೂ ಸ್ಟಾಕಲ್ ಹಗರಣ; ಹೂಡಿಕೆದಾರರಿಗೆ ಗೊತ್ತಿಲ್ಲದೇ ಆಪಲ್, ಎನ್​ವಿಡಿಯೋ ಷೇರು ಮಾರಿ ನಷ್ಟ ತಂದಿತ್ತ ಆರೋಪ

ಈ ಏರಿಕೆಯ ಟ್ರೆಂಡ್ ಮುಂದುವರಿಯುತ್ತಾ?

ನಿಫ್ಟಿ ಸೂಚ್ಯಂಕವು 24,400 ಅಂಕಗಳ ಮಟ್ಟದಲ್ಲಿ ಪ್ರಮುಖ ರೆಸಿಸ್ಟೆನ್ಸ್ ಹೊಂದಿರುತ್ತದೆ. ಸದ್ಯ ಅದು ಆ ಶ್ರೇಣಿಯಲ್ಲಿದೆ. ಇವತ್ತು ಇದೇ ಮಟ್ಟದಲ್ಲಿ ದಿನಾಂತ್ಯಗೊಂಡರೆ, ನಿಫ್ಟಿ 24,600 ಅಂಕಗಳವರೆಗೆ ತಡೆ ಇಲ್ಲದೆ ಏರಬಹುದು ಎಂದು ಟೆಕ್ನಿಕಲ್ ಅನಾಲಿಸಿಸ್ ಬಲ್ಲವರು ಹೇಳುತ್ತಾರೆ. ಹೀಗಾಗಿ, ಮಾರುಕಟ್ಟೆಯ ಓಟ ಮುಂದಿನ ವಾರವೂ ಮುಂದುವರಿದರೆ ಅಚ್ಚರಿ ಇಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More