ಸಿಮ್ ಸ್ವಾಪಿಂಗ್ ಹುಷಾರ್..! ದಿಢೀರನೇ ಸಿಮ್ ಡೀಆ್ಯಕ್ಟಿವೇಟ್ ಆಯ್ತು, ನೋಡನೋಡುತ್ತಿದ್ದಂತೆ ಬ್ಯಾಂಕ್ ಖಾತೆಯಿಂದ ಹಣ ಮಾಯ ಆಯ್ತು

Bengaluru SIM Swap Cyber Fraud: ಬೆಂಗಳೂರಿನಲ್ಲಿ 'ಸಿಮ್ ಸ್ವಾಪ್' ಸೈಬರ್ ವಂಚನೆಯಿಂದ ಸಂತ್ರಸ್ತ ವ್ಯಕ್ತಿಯೊಬ್ಬರು 7.2 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ವಂಚಕರು ಸಂತ್ರಸ್ತರ ಸಿಮ್ ಅನ್ನು ಅವರ ಅರಿವಿಲ್ಲದೆ ಬೇರೆ ನೆಟ್‌ವರ್ಕ್‌ಗೆ ಪೋರ್ಟ್ ಮಾಡಿ, ಬ್ಯಾಂಕ್ ಖಾತೆಯ OTPಗಳನ್ನು ಕದ್ದು ಹಣ ವರ್ಗಾಯಿಸಿದ್ದಾರೆ. ಇಂತಹ ವಂಚನೆಗಳಿಂದ ರಕ್ಷಿಸಿಕೊಳ್ಳಲು ನಿಮ್ಮ ಮೊಬೈಲ್ ಸಿಗ್ನಲ್ ಕಳೆದುಕೊಂಡಾಗ ನಿರ್ಲಕ್ಷಿಸಬೇಡಿ, ತಕ್ಷಣವೇ ಟೆಲಿಕಾಂ ಮತ್ತು ಬ್ಯಾಂಕ್ ಅನ್ನು ಸಂಪರ್ಕಿಸಿ.

ಸಿಮ್ ಸ್ವಾಪಿಂಗ್ ಹುಷಾರ್..! ದಿಢೀರನೇ ಸಿಮ್ ಡೀಆ್ಯಕ್ಟಿವೇಟ್ ಆಯ್ತು, ನೋಡನೋಡುತ್ತಿದ್ದಂತೆ ಬ್ಯಾಂಕ್ ಖಾತೆಯಿಂದ ಹಣ ಮಾಯ ಆಯ್ತು
ಸೈಬರ್ ಕ್ರೈಮ್
Image Credit source: Shutterstock

Updated on: Jun 05, 2026 | 5:36 PM

ಬೆಂಗಳೂರು, ಜೂನ್ 5: ಉದ್ಯಾನನಗರಿಯಲ್ಲಿ ಅತ್ಯಂತ ಶಾಕಿಂಗ್ ಆದ ‘ಸಿಮ್ ಸ್ವ್ಯಾಪ್’ (SIM Swap) ಅಥವಾ ಸಿಮ್ ಪೋರ್ಟಿಂಗ್ ಸೈಬರ್ ವಂಚನೆ ನಡೆದಿದೆ. ಸಂತ್ರಸ್ತ ವ್ಯಕ್ತಿಯ ಮೊಬೈಲ್ ಸಿಮ್ ಅನ್ನು ಆತನ ಅರಿವಿಲ್ಲದೆಯೇ ಬೇರೆ ನೆಟ್ವರ್ಕ್​ಗೆ ಪೋರ್ಟ್ ಮಾಡಲಾಗಿದೆ. ಅದಾಗಿ ಕೆಲವೇ ದಿನಗಳಲ್ಲಿ ಆತನ ಬ್ಯಾಂಕ್ ಅಕೌಂಟ್​ನಿಂದ 7.2 ಲಕ್ಷ ರೂ ಮಂಗಮಾಯವಾಗಿದೆ.

ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿಯಾದ ಬಿಹಾರ ಮೂಲದ ಕಮಲೇಶ್ ಕುಮಾರ್ ಎಂಬಾತ ಸಂತ್ರಸ್ತ ವ್ಯಕ್ತಿ. ಇವರು ನೀಡಿರುವ ದೂರಿನ ಪ್ರಕಾರ ಮೇ 25ರಂದು ಯಾವುದೇ ಮುನ್ಸೂಚನೆ ಇಲ್ಲದೆಯೇ ಅವರ ಏರ್​ಟೆಲ್ ಸಿಮ್ ಕಾರ್ಡ್ ಕೆಲಸ ಮಾಡುವುದನ್ನು ದಿಢೀರನೆ ನಿಲ್ಲಿಸಿತ್ತು. ಮರುದಿನ ಇವರು ಏರ್​ಟೆಲ್ ಔಟ್​ಲೆಟ್​ಗೆ ಹೋಗಿ ವಿಚಾರಿಸಿದಾಗ ಇವರ ಸಿಮ್ ಅನ್ನು ಜಿಯೋ ನೆಟ್ವರ್ಕ್​ಗೆ ಪೋರ್ಟ್ (SIM Ported) ಮಾಡಲಾಗಿತ್ತು. ಆದರೆ, ಇದ್ಯಾವುದೂ ಕೂಡ ಕಮಲೇಶ್​ಗೆ ಗೊತ್ತಾಗಿರಲಿಲ್ಲ.

ಜಿಯೋ ಸ್ಟೋರ್​ನಲ್ಲಿ ವಿಚಾರಿಸಿದಾಗ, ಸಿಮ್ ಕಾರ್ಡ್ ಅನ್ನು ಶಹಬಾಜ್ ಅನ್ಸಾರಿ ಎನ್ನುವ ಹೆಸರಿನಲ್ಲಿ ಪಡೆಯಲಾಗಿತ್ತು. ಆ ವ್ಯಕ್ತಿ ತನಗೆ ಗೊತ್ತೇ ಇಲ್ಲ ಎನ್ನುತ್ತಾರೆ ಕಮಲೇಶ್. ಮೇ 27ರಂದು ಅವರು ಮೈಕೋ ಲೇ ಔಟ್ ಪೊಲೀಸ್ ಠಾಣೆಯಲ್ಲಿ ದೂರು ಕೊಡುತ್ತಾರೆ.

ಬ್ಯಾಂಕ್ ಖಾತೆಗೆ ಕನ್ನ: ಒಮ್ಮೆ ಸಿಮ್ ವಂಚಕರ ಕೈ ಸೇರಿದಾಗ, ಸಂತ್ರಸ್ತ ವ್ಯಕ್ತಿಯ ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದ ಫೋನ್ ಸಂಖ್ಯೆಗೆ ಬರುವ ಎಲ್ಲಾ ಒಟಿಪಿಗಳು (OTP – One Time Password) ವಂಚಕರ ಮೊಬೈಲ್‌ಗೆ ಹೋಗಲು ಶುರುವಾಗಿದೆ. ಇದನ್ನು ಬಳಸಿಕೊಂಡು ವಂಚಕರು ಮೇ 27ರಿಂದ 29ರವವರೆಗಿನ ಅವಧಿಯಲ್ಲಿ ಅವರ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 7.2 ಲಕ್ಷ ರೂ ಅನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ.

ಇದನ್ನೂ ಓದಿ: ಆರ್ಥಿಕತೆಯಲ್ಲಿ ಭರ್ಜರಿ ಕ್ಯಾಷ್ ಇದ್ದರೂ ಎಟಿಎಂಗಳಲ್ಲಿ ಇಲ್ಲ ಹೆಚ್ಚು ನೋಟು; ಕರ್ನಾಟಕದಲ್ಲೇ ಅತಿಹೆಚ್ಚು ಕೊರತೆ; ಯಾಕೆ ಈ ಕಥೆ?

ತಮ್ಮ ಫೋನ್ ನೆಟ್‌ವರ್ಕ್ ಇಲ್ಲದಿರುವುದನ್ನು ಗಮನಿಸಿ, ಟೆಲಿಕಾಂ ಆಫೀಸ್‌ಗೆ ಹೋಗಿ ಹೊಸ ಸಿಮ್ ಪಡೆದು ಆಕ್ಟಿವೇಟ್ ಮಾಡಿದಾಗ ಸಂತ್ರಸ್ತರಿಗೆ ತಮ್ಮ ಬ್ಯಾಂಕ್ ಖಾತೆಯಿಂದ ಹಣ ಲೂಟಿಯಾಗಿರುವುದು ಗೊತ್ತಾಗಿದೆ. ತಕ್ಷಣ ಅವರು ಬೆಂಗಳೂರಿನ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘ಸಿಮ್ ಸ್ವ್ಯಾಪ್’ ವಂಚನೆ ಹೇಗೆ ನಡೆಯುತ್ತದೆ?

ಸಿಮ್ ಸ್ವಾಪಿಂಗ್ ಎಂಬುದು ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಿಗಳು ಬಳಸುತ್ತಿರುವ ಅತ್ಯಂತ ಅಪಾಯಕಾರಿ ತಂತ್ರವಾಗಿದೆ. ಮೊದಲಿಗೆ ವಂಚಕರು ಫಿಶಿಂಗ್ ಇಮೇಲ್, ನಕಲಿ ಲಿಂಕ್‌ಗಳು ಅಥವಾ ಸೋಶಿಯಲ್ ಇಂಜಿನಿಯರಿಂಗ್ ಮೂಲಕ ನಿಮ್ಮ ಬ್ಯಾಂಕ್ ಖಾತೆ ವಿವರ, ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಮಾಹಿತಿಯನ್ನು ಕದಿಯುತ್ತಾರೆ.

ಈ ದಾಖಲೆಗಳನ್ನು ಬಳಸಿ ನಿಮ್ಮ ಹೆಸರಿನಲ್ಲಿ ಟೆಲಿಕಾಂ ಆಪರೇಟರ್‌ಗೆ ಕರೆ ಮಾಡಿ “ನನ್ನ ಸಿಮ್ ಕಳೆದುಹೋಗಿದೆ” ಎಂದು ಹೊಸ ಸಿಮ್ ಕೇಳುತ್ತಾರೆ ಅಥವಾ ಬೇರೆ ನೆಟ್‌ವರ್ಕ್‌ಗೆ ಪೋರ್ಟ್ ಮಾಡಲು ವಿನಂತಿಸುತ್ತಾರೆ.

ಟೆಲಿಕಾಂ ಕಂಪನಿಯು ಹೊಸ ಸಿಮ್ ಆಕ್ಟಿವೇಟ್ ಮಾಡಿದ ತಕ್ಷಣ, ನಿಮ್ಮ ಫೋನ್‌ನಲ್ಲಿರುವ ಅಸಲಿ ಸಿಮ್ ಸಿಗ್ನಲ್ ಕಳೆದುಕೊಳ್ಳುತ್ತದೆ (No Service ಬರುತ್ತದೆ).

ಇದನ್ನೂ ಓದಿ: ಬಂಡವಾಳ ಆಕರ್ಷಿಸಲು ಬ್ಯಾಂಕುಗಳಿಗೆ ಹೆಡ್ಡಿಂಗ್ ಸಪೋರ್ಟ್​ನಿಂದ ಹಿಡಿದು ಎನ್​ಆರ್​ಐ ಹೂಡಿಕೆ ಮಿತಿ ಹೆಚ್ಚಳದವರೆಗೆ ಆರ್​ಬಿಐನಿಂದ 5 ಕ್ರಮಗಳು

ನಿಮ್ಮ ಫೋನ್ ಬಂದ್ ಆಗಿರುವ ಸಮಯದಲ್ಲಿ, ವಂಚಕರು ನಿಮ್ಮ ಬ್ಯಾಂಕ್ ಖಾತೆಯ ಇಂಟರ್ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್ ರಿಸೆಟ್ ಮಾಡಿ, ಅವರ ಬಳಿ ಇರುವ ಸಿಮ್‌ಗೆ ಬರುವ ಒಟಿಪಿ ಬಳಸಿ ಹಣ ಲೂಟಿ ಮಾಡುತ್ತಾರೆ.

ಸೈಬರ್ ಸುರಕ್ಷತಾ ಮುನ್ನೆಚ್ಚರಿಕೆ: ನಿಮ್ಮ ಮೊಬೈಲ್‌ನಲ್ಲಿ ಯಾವುದೇ ಕಾರಣವಿಲ್ಲದೆ ದಿಢೀರನೆ ಸಿಗ್ನಲ್ ಸಂಪೂರ್ಣವಾಗಿ ಕಟ್ ಆಗಿ “No Service” ಅಥವಾ “Invalid SIM” ಎಂದು ಬಂದರೆ ನಿರ್ಲಕ್ಷಿಸಬೇಡಿ. ತಕ್ಷಣವೇ ನಿಮ್ಮ ಟೆಲಿಕಾಂ ಕಂಪನಿಯನ್ನು ಸಂಪರ್ಕಿಸಿ ವಿಚಾರಿಸಿ ಮತ್ತು ನಿಮ್ಮ ಬ್ಯಾಂಕ್ ಖಾತೆಗಳನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಿ. ಇಂತಹ ವಂಚನೆಗೆ ಒಳಗಾದರೆ ತಕ್ಷಣ 1930 ಸೈಬರ್ ಹೆಲ್ಪ್‌ಲೈನ್‌ಗೆ ಕರೆ ಮಾಡಿ ದೂರು ನೀಡಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us