Stock Market Holiday: ಬಿಎಸ್ಇ, ಎನ್ಎಸ್ಇ ಸೇರಿದಂತೆ ಇತರ ಮಾರುಕಟ್ಟೆಗಳಿಗೆ ಇನ್ನು 4 ದಿನ ರಜಾ
ಏಪ್ರಿಲ್ 14ರಿಂದ ಆರಂಭಗೊಂಡಂತೆ 4 ದಿನಗಳ ಕಾಲ ಷೇರು ಮಾರುಕಟ್ಟೆಯ ವಿನಿಮಯ ಕೇಂದ್ರಗಳಾದ ಬಿಎಸ್ಇ ಮತ್ತು ಎನ್ಎಸ್ಇ ಮತ್ತಿತರವು ಕಾರ್ಯ ನಿರ್ವಹಿಸುವುದಿಲ್ಲ. ಇಲ್ಲಿದೆ ಆ ಬಗ್ಗೆ ವಿವರ.
ರಾಷ್ಟ್ರೀಯ ವಿನಿಮಯ ಕೇಂದ್ರ (NSE) ಮತ್ತು ಬಿಎಸ್ಇ ಅಂಬೇಡ್ಕರ್ ಜಯಂತಿ ಪ್ರಯುಕ್ತ ಏಪ್ರಿಲ್ 14ರಂದು ಹಾಗೂ ಗುಡ್ಫ್ರೈಡೇ ಆದ ಏಪ್ರಿಲ್ 15ರಂದು ಕಾರ್ಯ ನಿರ್ವಹಿಸುವುದಿಲ್ಲ. ಇದರ ಜತೆಗೆ ಏಪ್ರಿಲ್ 16ಕ್ಕೆ ಶನಿವಾರ ಮತ್ತು 17ಕ್ಕೆ ಭಾನುವಾರ ಸಹ ರಜಾ ಇರುತ್ತದೆ. ಸಗಟು ಕಮಾಡಿಟಿ ಮಾರುಕಟ್ಟೆಗಳು, ಅದರಲ್ಲಿ ಲೋಹ ಮತ್ತು ಚಿನಿವಾರ ಮಾರುಕಟ್ಟೆ ಸಹ ಮುಚ್ಚಿರುತ್ತದೆ. ಅಷ್ಟೇ ಅಲ್ಲ, ವಿದೇಶೀ ವಿನಿಮಯ ಹಾಗೂ ಕಮಾಡಿಟಿ ಫ್ಯೂಚರ್ಸ್ ಮಾರುಕಟ್ಟೆಯಲ್ಲೂ ಯಾವುದೇ ವಹಿವಾಟು ನಡೆಯುವುದಿಲ್ಲ. ಏಪ್ರಿಲ್ 13ನೇ ತಾರೀಕಿನ ಬುಧವಾರದಂದು ಸೆನ್ಸೆಕ್ಸ್ 237.44 ಪಾಯಿಂಟ್ಸ್ ಅಥವಾ ಶೇ 0.41ರಷ್ಟು ಇಳಿಕೆ ಕಂಡು, 58,338.93 ಪಾಯಿಂಟ್ಸ್ನಲ್ಲಿ ವ್ಯವಹಾರ ಮುಗಿಸಿತ್ತು. ಇನ್ನು ನಿಫ್ಟಿ 54.60 ಪಾಯಿಂಟ್ಸ್ ಅಥವಾ ಶೇ 0.31ರಷ್ಟು ಕುಸಿದು, 17,475.70 ಪಾಯಿಂಟ್ಸ್ನಲ್ಲಿ ದಿನಾಂತ್ಯ ಕಂಡಿತ್ತು. ಕೇವಲ ಮೂರು ದಿನದ ವಾರದಲ್ಲಿ ಸೆನ್ಸೆಕ್ಸ್ 1108.25 ಪಾಯಿಂಟ್ಸ್ ಅಥವಾ ಶೇ 1.8ರಷ್ಟು ಮತ್ತು ನಿಫ್ಟಿ 308.65 ಪಾಯಿಂಟ್ಸ್ ಅಥವಾ ಶೇ 1.7ರಷ್ಟು ಕುಸಿತ ಕಂಡಿದೆ.
ಮಾರುತಿ ಸುಜುಕಿ, ಎಚ್ಡಿಎಫ್ಸಿ, ಎಚ್ಡಿಎಫ್ಸಿ ಬ್ಯಾಂಕ್, ಟಾಟಾ ಮೋಟಾರ್ಸ್ ಮತ್ತು ಡಾ ರೆಡ್ಡೀಸ್ ಲ್ಯಾಬ್ಸ್ ಷೇರುಗಳು ನಿಫ್ಟಿಯಲ್ಲಿ ಭಾರೀ ನಷ್ಟವನ್ನು ಅನುಭವಿಸಿದರೆ, ಒಎನ್ಜಿಸಿ, ಅಪೋಲೋ ಹಾಸ್ಪಿಟಲ್ಸ್, ಐಟಿಸಿ, ಸನ್ ಫಾರ್ಮಾ ಮತ್ತು ಯುಪಿಎಲ್ ಗಳಿಕೆ ಕಂಡವು. ವಲಯವಾರು ಗಮನಿಸುವುದಾದರೆ, ನಿಫ್ಟಿ ವಾಹನ ಮತ್ತು ಬ್ಯಾಂಕ್ ತಲಾ ಶೇ 0.5ರಷ್ಟು ನಷ್ಟ ಅನುಭವಿಸಿವೆ. ಎಫ್ಎಂಸಿಜಿ, ಲೋಹ, ಎನರ್ಜಿ ಹಾಗೂ ಫಾರ್ಮಾದಲ್ಲಿ ಖರೀದಿ ಬಂತು. ಬಿಎಸ್ಇ ಮಿಡ್ಕ್ಯಾಪ್ ಶೇ 0.21ರಷ್ಟು ಇಳಿಕೆಯಾದರೆ, ಸ್ಮಾಲ್ಕ್ಯಾಪ್ ಸೂಚ್ಯಂಕ ಶೇ 0.27ರಷ್ಟು ಇಳಿದಿದೆ.
“ಸ್ಥಳೀಯವಾಗಿ ಹೆಚ್ಚಿನ ಹಣದುಬ್ಬರ ಮತ್ತು ಆರ್ಥಿಕತೆ ಮೇಲೆ ಅದರ ಪ್ರಭಾವವನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆದಾರರು ಜಾಗರೂಕರಾಗಿರುವುದರಿಂದ ಕಡಿಮೆ ದಿನಗಳಳ ವಹಿವಾಟಿನ ವಾರದಲ್ಲಿ ದೇಶೀಯ ಮಾರುಕಟ್ಟೆಗಳು ಕೆಲವು ಮಾರಾಟದ ಒತ್ತಡಕ್ಕೆ ಸಾಕ್ಷಿಯಾಗಿದೆ,” ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್‌ನ ರೀಟೇಲ್ ಸಂಶೋಧನೆಯ ಮುಖ್ಯಸ್ಥ ಸಿದ್ಧಾರ್ಥ ಖೇಮ್ಕಾ ಹೇಳಿದ್ದಾರೆ.
“ಇನ್ನು ಮುಂದಕ್ಕೆ ಹಣದುಬ್ಬರದ ಒತ್ತಡವು ಮುಂದುವರಿಯುವವರೆಗೆ ಮಾರುಕಟ್ಟೆಯು ಅಸ್ಥಿರವಾಗಿ ಉಳಿಯುವ ಸಾಧ್ಯತೆಯಿದ್ದು, ಜಾಗತಿಕವಾಗಿ ಕೇಂದ್ರೀಯ ಬ್ಯಾಂಕ್‌ಗಳಿಂದ ಆಕ್ರಮಣಕಾರಿ ದರ ಏರಿಕೆಗೆ ಅವಕಾಶವನ್ನು ಹೆಚ್ಚಿಸುತ್ತದೆ,” ಎಂದಿದ್ದಾರೆ.
ಇದನ್ನೂ ಓದಿ: How To Invest In US Stocks: ಅಮೆರಿಕದ ಸ್ಟಾಕ್ಗಳಲ್ಲಿ ಎನ್ಎಸ್ಇ ಐಎಫ್ಎಸ್ಸಿ ಮೂಲಕ ಹೂಡಿಕೆ ಮಾಡುವುದು ಹೇಗೆ?