ಭಾರತದ ಷೇರುಬಜಾರು ಕಳೆದ 30 ವರ್ಷದಲ್ಲಿ ಎಷ್ಟು ಬಾರಿ ಬಿದ್ದಿದೆ? ಒಟ್ಟಾರೆ ತಂದಿರುವ ಲಾಭವೆಷ್ಟು? ಇಲ್ಲಿದೆ ಡೀಟೇಲ್ಸ್

Stock Market of India great for long term investment: ಷೇರು ಮಾರುಕಟ್ಟೆ ಈ ವರ್ಷ ಮೈನಸ್ ಲಾಭ ಕೊಟ್ಟಿದೆ. 2025ರ ದ್ವಿತೀಯಾರ್ಧದಿಂದ ಇದು ಕುಸಿತ ಕಂಡಿದೆ. ಆದರೆ, ದೀರ್ಘಾವಧಿಯಲ್ಲಿ ಮಾರುಕಟ್ಟೆ ಬಹಳ ಹೆಚ್ಚು ಲಾಭ ಕೊಟ್ಟಿದೆ. ಕಳೆದ 30 ವರ್ಷದಲ್ಲಿ ಮಾರುಕಟ್ಟೆ ಏಳೆಂಟು ಬಾರಿ ನೆಗಟಿವ್ ರಿಟರ್ನ್ ಕೊಟ್ಟಿದೆ. ಒಟ್ಟಾರೆಯಾಗಿ ಶೇ. 12-14ರಷ್ಟು ಬೆಳವಣಿಗೆ ಕಂಡಿದೆ.

ಭಾರತದ ಷೇರುಬಜಾರು ಕಳೆದ 30 ವರ್ಷದಲ್ಲಿ ಎಷ್ಟು ಬಾರಿ ಬಿದ್ದಿದೆ? ಒಟ್ಟಾರೆ ತಂದಿರುವ ಲಾಭವೆಷ್ಟು? ಇಲ್ಲಿದೆ ಡೀಟೇಲ್ಸ್
ಷೇರು ಮಾರುಕಟ್ಟೆ
Image Credit source: Getty Images

Updated on: Jul 17, 2026 | 2:30 PM

ಮುಖ್ಯಾಂಶಗಳು

  • ಷೇರು ಮಾರುಕಟ್ಟೆ ಈ ವರ್ಷ ಮೈನಸ್ ಲಾಭ ಕೊಟ್ಟಿದೆ. 2025ರ ದ್ವಿತೀಯಾರ್ಧದಿಂದ ಇದು ಕುಸಿತ ಕಂಡಿದೆ.
  • ಆದರೆ, ದೀರ್ಘಾವಧಿಯಲ್ಲಿ ಮಾರುಕಟ್ಟೆ ಬಹಳ ಹೆಚ್ಚು ಲಾಭ ಕೊಟ್ಟಿದೆ.
  • ಕಳೆದ 30 ವರ್ಷದಲ್ಲಿ ಮಾರುಕಟ್ಟೆ ಏಳೆಂಟು ಬಾರಿ ನೆಗಟಿವ್ ರಿಟರ್ನ್ ಕೊಟ್ಟಿದೆ. ಒಟ್ಟಾರೆ ಶೇ. 12-14 ಬೆಳವಣಿಗೆ ಕಂಡಿದೆ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ (Stock Market Investment) ಮಾಡಿದರೆ ಸಖತ್ ಲಾಭ ಮಾಡಬಹುದು ಎಂದು ಬಹಳ ಜನರು ಹೇಳುತ್ತಿರುತ್ತಾರೆ. ಹೊಸಬರಾದವರು ಈ ಮಾತುಗಳನ್ನು ನಂಬಿ ಷೇರುಗಳಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಾರೆ. ನೀವು ಹೊಸಬರಾಗಿದ್ದು ಮಾರುಕಟ್ಟೆಯನ್ನು ಗಮನಿಸಿದರೆ ಈ ವರ್ಷದಲ್ಲಿ (2026) ಇದು ನಷ್ಟ ತಂದಿದೆ. ಅಯ್ಯೋ, ಇಲ್ಲಿ ಹಣ ಹಾಕಿ ಕೆಟ್ಟನಲ್ಲ ಎಂದು ಓಡಿ ಹೋದರೆ ಅದು ನೀವು ಮಾಡುವ ತಪ್ಪು. ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವುದು ಒಂದು ದಿನ ಅಥವಾ ಒಂದು ವರ್ಷದ ಆಟವಲ್ಲ, ಅದು ದೀರ್ಘಾವಧಿಯ ಪಯಣ. ಮಾರುಕಟ್ಟೆ ಕುಸಿದಾಗ ಹೊಸ ಹೂಡಿಕೆದಾರರು ಗಾಬರಿಯಾಗುವುದು ಸಹಜ. ಆದರೆ, ಇತಿಹಾಸವನ್ನು ಗಮನಿಸಿದರೆ ಪ್ರತಿ ಬಾರಿ ಮಾರುಕಟ್ಟೆ ಬಿದ್ದಾಗಲೂ, ಅದಕ್ಕಿಂತ ದುಪ್ಪಟ್ಟು ವೇಗದಲ್ಲಿ ಪುಟಿದೆದ್ದಿದೆ ಎಂಬ ಸತ್ಯ ತಿಳಿಯುತ್ತದೆ.

ಭಾರತದ ಷೇರು ಮಾರುಕಟ್ಟೆ ದೀರ್ಘಾವಧಿಯಲ್ಲಿ ಹೂಡಿಕೆದಾರರಿಗೆ ಬಹಳ ಒಳ್ಳೆಯ ರಿಟರ್ನ್ಸ್ ಕೊಟ್ಟಿರುವುದು ಹೌದು. ಆದರೆ, ಅದರ ಇತಿಹಾಸದಲ್ಲಿ ನಾಲ್ಕು ಬಾರಿ ಮಹಾಕುಸಿತ ಆಗಿರುವುದು ಕೂಡ ಹೌದು. ಹಾಗೆಯೇ, ಕುಸಿತ ಆದಾಗೆಲ್ಲಾ ಪುಟಿದೆದ್ದಿರುವುದೂ ನಿಜವೇ. ಭಾರತದ ಶೇರು ಮಾರುಕಟ್ಟೆಯ ಪ್ರಮುಖ 4 ಕುಸಿತಗಳು ಮತ್ತು ಪುಟಿದೆದ್ದ ಇತಿಹಾಸದ ಮಾಹಿತಿ ಈ ಕೆಳಕಂಡಂತಿದೆ:

1992 ರ ಹರ್ಷದ್ ಮೆಹ್ತಾ ಹಗರಣ

  • ಏನಾಯಿತು?: ಬ್ಯಾಂಕಿಂಗ್ ವ್ಯವಸ್ಥೆಯಲ್ಲಿದ್ದ ಲೋಪದೋಷಗಳನ್ನು ಬಳಸಿಕೊಂಡು ಹರ್ಷದ್ ಮೆಹ್ತಾ ಎಂಬ ಬ್ರೋಕರ್ ಮಾರುಕಟ್ಟೆಯನ್ನು ಕೃತಕವಾಗಿ ಏರಿಸಿದ್ದರು. ಹಗರಣ (Harshad Mehta Scam) ಬಯಲಿಗೆ ಬಂದಾಗ ಮಾರುಕಟ್ಟೆ ತಲ್ಲಣಿಸಿತು.
  • ಕುಸಿತ: ಸೆನ್ಸೆಕ್ಸ್ (Sensex) ಒಂದೇ ದಿನದಲ್ಲಿ ಸುಮಾರು 12.7% ಕುಸಿದರೆ, ನಂತರದ ಕೆಲವು ತಿಂಗಳುಗಳಲ್ಲಿ ಸುಮಾರು 40% ರಿಂದ 50% ರಷ್ಟು ಭಾರಿ ಕುಸಿತ ಕಂಡಿತು.
  • ಚೇತರಿಕೆ: ಹೂಡಿಕೆದಾರರು ಮಾರುಕಟ್ಟೆಯೇ ಮುಳುಗಿಹೋಯಿತು ಅಂದುಕೊಂಡಿದ್ದರು. ಆದರೆ ಕಟ್ಟುನಿಟ್ಟಾದ ನಿಯಮಗಳು ಜಾರಿಗೆ ಬಂದ ನಂತರ, ಕೆಲವೇ ವರ್ಷಗಳಲ್ಲಿ ಮಾರುಕಟ್ಟೆ ಭರ್ಜರಿ ಚೇತರಿಕೆ ಕಂಡು ಹೊಸ ದಾಖಲೆ ಬರೆಯಿತು.

2000 – 2001 ರ ಡಾಟ್-ಕಾಮ್ ಬಬಲ್ ಮತ್ತು ಕೇತನ್ ಪರೇಖ್ ಹಗರಣ

  • ಏನಾಯಿತು?: ಇಂಟರ್ನೆಟ್ ಮತ್ತು ತಂತ್ರಜ್ಞಾನ (IT) ಕಂಪನಿಗಳ ಷೇರುಗಳ ಬೆಲೆ ಯಾವುದೇ ಆಧಾರವಿಲ್ಲದೆ ಗಗನಕ್ಕೇರಿತ್ತು. ಜಾಗತಿಕವಾಗಿ ಈ ಬಬಲ್ (Dot-Com Bubble) ಒಡೆದಾಗ ಮತ್ತು ಭಾರತದಲ್ಲಿ ಕೇತನ್ ಪರೇಖ್ ಹಗರಣ ಬಹಿರಂಗವಾದಾಗ ಮಾರುಕಟ್ಟೆ ತೀವ್ರವಾಗಿ ಕುಸಿಯಿತು.
  • ಕುಸಿತ: ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ತೀವ್ರವಾಗಿ ಕುಸಿದವು. ಮಾಹಿತಿ ತಂತ್ರಜ್ಞಾನ ವಲಯದ ಅನೇಕ ಷೇರುಗಳು ಶೇ. 80 ಕ್ಕಿಂತ ಹೆಚ್ಚು ಮೌಲ್ಯ ಕಳೆದುಕೊಂಡವು.
  • ಚೇತರಿಕೆ: ಈ ಕುಸಿತವು ಮುಗಿಯುತ್ತಿದ್ದಂತೆ ಭಾರತೀಯ ಆರ್ಥಿಕತೆ ಬಲವಾಯಿತು. 2003 ರಿಂದ 2007 ರ ಅವಧಿಯಲ್ಲಿ ಭಾರತೀಯ ಮಾರುಕಟ್ಟೆ ಇತಿಹಾಸದಲ್ಲೇ ಕಾಣದಂತಹ ಬೃಹತ್ ಬುಲ್ ರನ್ (Bull Run) ಕಂಡು ಸೆನ್ಸೆಕ್ಸ್ 20,000 ಅಂಕಗಳನ್ನು ದಾಟಿತು.

2008 ರ ಜಾಗತಿಕ ಆರ್ಥಿಕ ಮಹಾ ಕುಸಿತ

  • ಏನಾಯಿತು?: ಅಮೆರಿಕದ ಬ್ಯಾಂಕಿಂಗ್ ಬಿಕ್ಕಟ್ಟು (ವಿಶೇಷವಾಗಿ ಲೆಮನ್ ಬ್ರದರ್ಸ್ ಪತನ) ಜಗತ್ತಿನಾದ್ಯಂತ ಆರ್ಥಿಕ ಹಿಂಜರಿತವನ್ನು (Global Financial Crisis) ಸೃಷ್ಟಿಸಿತು. ಜಾಗತಿಕ ಹೂಡಿಕೆದಾರರು ಭಾರತದಿಂದ ಹಣವನ್ನು ಹಿಂಪಡೆದರು.
  • ಕುಸಿತ: ಭಾರತೀಯ ಶೇರು ಮಾರುಕಟ್ಟೆ ತನ್ನ ಗರಿಷ್ಠ ಮಟ್ಟದಿಂದ ಸುಮಾರು 60% ರಷ್ಟು ಕುಸಿತ ಕಂಡಿತು. ಅತಿ ಹೆಚ್ಚು ನಷ್ಟ ಉಂಟುಮಾಡಿದ ಭೀಕರ ಕುಸಿತ ಇದಾಗಿತ್ತು.
  • ಚೇತರಿಕೆ: ಈ ಬಿಕ್ಕಟ್ಟು ಮುಗಿಯಲು ಕನಿಷ್ಠ 2-3 ವರ್ಷಗಳು ಬೇಕಾಯಿತು. ಆದರೆ ಶಿಸ್ತುಬದ್ಧವಾಗಿ ಹೂಡಿಕೆ ಮುಂದುವರಿಸಿದವರು 2010 ರ ಹೊತ್ತಿಗೆ ತಮ್ಮ ಹೂಡಿಕೆಯಲ್ಲಿ ಭಾರಿ ಲಾಭವನ್ನು ಕಂಡರು.

2020 ರ ಕೋವಿಡ್-19 ಸಾಂಕ್ರಾಮಿಕ ಕುಸಿತ

  • ಏನಾಯಿತು?: ಕರೋನಾ ವೈರಸ್ ಹರಡುವಿಕೆ ತಡೆಯಲು ದೇಶಾದ್ಯಂತ ಲಾಕ್‌ಡೌನ್ (COVID-19 Pandemic) ಘೋಷಿಸಿದಾಗ ಉದ್ಯಮಗಳು ಸ್ಥಗಿತಗೊಂಡು ಹೂಡಿಕೆದಾರರಲ್ಲಿ ಭೀತಿ ಆವರಿಸಿತು.
  • ಕುಸಿತ: ಕೇವಲ ಒಂದೇ ತಿಂಗಳಲ್ಲಿ (ಫೆಬ್ರವರಿಯಿಂದ ಮಾರ್ಚ್ 2020) ಸೆನ್ಸೆಕ್ಸ್ ಮತ್ತು ನಿಫ್ಟಿ ಸುಮಾರು 38% ರಷ್ಟು ಅತ್ಯಂತ ವೇಗವಾಗಿ ಕುಸಿದವು.
  • ಚೇತರಿಕೆ: ಇದು ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಚೇತರಿಸಿಕೊಂಡ ಕುಸಿತವಾಗಿದೆ. ಕೇವಲ 6 ರಿಂದ 8 ತಿಂಗಳುಗಳಲ್ಲಿ ಮಾರುಕಟ್ಟೆ ಮೊದಲಿನ ಮಟ್ಟಕ್ಕೆ ಮರಳಿದ್ದಲ್ಲದೆ, ನಂತರದ 2 ವರ್ಷಗಳಲ್ಲಿ ಡಬಲ್ ರಿಟರ್ನ್ಸ್ ನೀಡಿತು.

ಇದನ್ನೂ ಓದಿ: ಕಾರ್ಡ್ ಪೇಮೆಂಟ್​ನಲ್ಲಿಯಂತೆ ಕೆಲ ಯುಪಿಐ ಪೇಮೆಂಟ್​ಗೂ ಎಂಡಿಆರ್ ಶುಲ್ಕ; ಸರ್ಕಾರ ಚಿಂತನೆ

ಹೊಸ ಹೂಡಿಕೆದಾರರಿಗೆ ಕಿವಿಮಾತು: ದೀರ್ಘಾವಧಿಯ ಹೂಡಿಕೆ ಏಕೆ ಮುಖ್ಯ?

  • ಕುಸಿತವು ಶೇರುಗಳನ್ನು ಅಗ್ಗದ ಬೆಲೆಗೆ ಖರೀದಿಸಲು ಸಿಗುವ ಅತ್ಯುತ್ತಮ ಅವಕಾಶವೇ ಹೊರತು, ನಷ್ಟ ಅನುಭವಿಸಿ ಹೊರಹೋಗುವ ಸಮಯವಲ್ಲ.
  • ದೀರ್ಘಾವಧಿಯ ನಕ್ಷೆಯನ್ನು ನೋಡಿದರೆ ಸಣ್ಣಪುಟ್ಟ ಏರಿಳಿತಗಳ ನಡುವೆಯೂ ಸೆನ್ಸೆಕ್ಸ್ 100 ಅಂಕಗಳಿಂದ ಇಂದು ಸರಿಸುಮಾರು 80,000 ಅಂಕಗಳ ಗಡಿ ತಲುಪಿದೆ.
  • ಮಾರುಕಟ್ಟೆ ಕುಸಿದಾಗ ಎಸ್‌ಐಪಿ (SIP) ಮೂಲಕ ಹೂಡಿಕೆ ಮಾಡುವುದರಿಂದ ನಿಮಗೆ ಕಡಿಮೆ ಬೆಲೆಯಲ್ಲಿ (Rupee Cost Averaging) ಹೆಚ್ಚಿನ ಮ್ಯೂಚುವಲ್ ಫಂಡ್ ಯೂನಿಟ್‌ಗಳು ಅಥವಾ ಷೇರುಗಳು ಸಿಗುತ್ತವೆ. ಮಾರುಕಟ್ಟೆ ಮತ್ತೆ ಚೇತರಿಸಿಕೊಂಡಾಗ ಇದು ನಿಮ್ಮ ಲಾಭವನ್ನು ದುಪ್ಪಟ್ಟು ಮಾಡುತ್ತದೆ.
  • ಮಾರುಕಟ್ಟೆಯಲ್ಲಿ ತಾತ್ಕಾಲಿಕ ಕುಸಿತ ಕಂಡುಬಂದಾಗ ಹೂಡಿಕೆಯನ್ನು ಹಿಂಪಡೆಯದೆ, ಕನಿಷ್ಠ 5 ರಿಂದ 10 ವರ್ಷಗಳ ಗುರಿ ಇಟ್ಟುಕೊಂಡು ಹೂಡಿಕೆ ಮುಂದುವರಿಸುವುದು ಉತ್ತಮ ನಿರ್ಧಾರ.

ಕಳೆದ 30 ವರ್ಷದಲ್ಲಿ ನಿಫ್ಟಿ ಇಂಡೆಕ್ಸ್ ಹೇಗೆ ರಿಟರ್ನ್ಸ್ ಕಟ್ಟಿದೆ?

ಭಾರತೀಯ ಷೇರು ಮಾರುಕಟ್ಟೆಯ ಪ್ರಮುಖ ಸೂಚ್ಯಂಕವಾದ ನಿಫ್ಟಿ 50 (Nifty 50) ಕಳೆದ 30 ವರ್ಷಗಳಲ್ಲಿ (1996 ರಿಂದ 2025ರ ವರೆಗೆ) ವಾರ್ಷಿಕವಾಗಿ ನೀಡಿರುವ ರಿಟರ್ನ್ಸ್ (ಆದಾಯ) ವಿವರ ಇಲ್ಲಿದೆ.

  • 1996: -0.8% (ರಾಜಕೀಯ ಅಸ್ಥಿರತೆ ಮತ್ತು ಸಮ್ಮಿಶ್ರ ಸರ್ಕಾರಗಳ ಕಾಲ)
  • 1997: 18.6%
  • 1998: -16.3% (ಭಾರತದ ಪೋಖ್ರಾನ್ ಅಣು ಪರೀಕ್ಷೆ ಮತ್ತು ಜಾಗತಿಕ ನಿರ್ಬಂಧಗಳು)
  • 1999: 67.4%
  • 2000: -14.7% (ಡಾಟ್-ಕಾಮ್ ಬಬಲ್ ಸ್ಪೋಟ)
  • 2001: -16.2% (ಅಮೆರಿಕದ 9/11 ದಾಳಿ ಮತ್ತು ಕೇತನ್ ಪರೇಖ್ ಹಗರಣ)
  • 2002: 3.2% (ಭೀಕರ ಬರಗಾಲದ ವರ್ಷ)
  • 2003: 71.9%
  • 2004: 10.7%
  • 2005: 36.3%
  • 2006: 39.8%
  • 2007: 54.8%
  • 2008: -51.8% (ಜಾಗತಿಕ ಆರ್ಥಿಕ ಮಹಾ ಕುಸಿತ – Lehman Brothers)
  • 2009: 75.8%
  • 2010: 17.9%
  • 2011: -24.6% (ಅತಿಯಾದ ಹಣದುಬ್ಬರ ಮತ್ತು ದೇಶೀಯ ಹಗರಣಗಳ ಆತಂಕ)
  • 2012: 27.7%
  • 2013: 6.8% (ಅಮೆರಿಕದ ಫೆಡರಲ್ ರಿಸರ್ವ್‌ನಿಂದ ಟೇಪರ್ ಟಾಂಟ್ರಮ್ ಭೀತಿ)
  • 2014: 31.4%
  • 2015: -4.1% (ಚೀನಾದ ಆರ್ಥಿಕ ಮಂದಗತಿ ಮತ್ತು ಸರಕುಗಳ ಬೆಲೆ ಕುಸಿತ)
  • 2016: 3.0% (ಜಿಎಸ್‌ಟಿ ವಿಧೇಯಕ ಅನುಮೋದನೆ ಮತ್ತು ನೋಟು ಅಮಾನ್ಯೀಕರಣ)
  • 2017: 28.6%
  • 2018: 3.2% (LTCG ತೆರಿಗೆ ಜಾರಿ ಮತ್ತು ಜಾಗತಿಕ ವಾಣಿಜ್ಯ ಸಮರ)
  • 2019: 12.0%
  • 2020: 14.9%
  • 2021: 24.1%
  • 2022: 4.3% (ರಷ್ಯಾ-ಉಕ್ರೇನ್ ಯುದ್ಧ ಮತ್ತು ಹೆಚ್ಚಿದ ಜಾಗತಿಕ ಹಣದುಬ್ಬರ)
  • 2023: 19.4%
  • 2024: 19.5%
  • 2025: 18.5%

ಇದನ್ನೂ ಓದಿ: 250 ರೂ ಸಣ್ಣ ಎಸ್​ಐಪಿಗಳತ್ತ ಮುಗಿಬಿದ್ದ ಹೊಸ ಹೂಡಿಕೆದಾರರು; ಬಂದಷ್ಟೇ ವೇಗದಲ್ಲಿ ನಿರ್ಗಮನ; ಏನು ಕಾರಣ?

ಈ ಮೇಲಿನ ಪಟ್ಟಿ ಗಮನಿಸಿದರೆ ನಿಫ್ಟಿ ಸೂಚ್ಯಂಕವು ಕಳೆದ 30 ವರ್ಷದಲ್ಲಿ 12 ಬಾರಿ ಶೇ. 10ಕ್ಕಿಂತ ಕಡಿಮೆ ರಿಟರ್ನ್ಸ್ ಕೊಟ್ಟಿದೆ. ಇದರಲ್ಲಿ ಏಳು ಬಾರಿ ನೆಗಟಿವ್ ರಿಟರ್ನ್ಸ್ ಇವೆ. ಆದರೆ, ಇನ್ನುಳಿದ ವರ್ಷಗಳು ಅದ್ಭುತವಾಗಿ ಲಾಭ ತಂದಿವೆ. 1996ರ ಕೊನೆಯಲ್ಲಿ ನಿಫ್ಟಿ 899 ಅಂಕಗಳನ್ನು ಹೊಂದಿತ್ತು. 2025ರ ಕೊನೆಯಲ್ಲಿ ಅದು 26,129 ಅಂಕಗಳನ್ನು ಹೊಂದಿತ್ತು. ಒಟ್ಟಾರೆ ಈ 30 ವರ್ಷದಲ್ಲಿ ಕೆಲ ಕುಸಿತಗಳ ನಡುವೆಯೂ 29 ಪಟ್ಟು ಬೆಳವಣಿಗೆ ಕಂಡಿದೆ. ಅಂದರೆ, ನೀವು ಅಂದು ಒಂದು ಲಕ್ಷ ಹೂಡಿಕೆ ಮಾಡಿದ್ದರೆ ನಿಮ್ಮ ಸಂಪತ್ತು 30 ಲಕ್ಷ ರೂ ಆಗಿರುತ್ತಿತ್ತು. ಇಂಥ ಲಾಭ ಯಾವ ಹೂಡಿಕೆಯಿಂದ ಸಿಗುತ್ತದೆ ಹೇಳಿ? ಮಧ್ಯ ಮಧ್ಯದಲ್ಲಿ ಮಾರುಕಟ್ಟೆ ಬಿದ್ದಾಗ ನೀವು ವಿಚಲಿತಗೊಂಡು ಹೂಡಿಕೆಯಿಂದ ಹಿಂದಕ್ಕೆ ಸರಿದುಬಿಟ್ಟರೆ ಭರ್ಜರಿ ಲಾಭದ ಅವಕಾಶವೇ ಇರುವುದಿಲ್ಲ. ಹೊಸ ಹೂಡಿಕೆದಾರರು ಇದನ್ನು ಗಮನಿಸಲೇಬೇಕು.

ಮುಂದೆಯೂ ಹೀಗೇ ಬೆಳೆಯುತ್ತಾ ಮಾರುಕಟ್ಟೆ?

ಭಾರತ ಉತ್ತಮ ಆರ್ಥಿಕ ತಳಹದಿ ಹೊಂದಿದೆ. ಅದಕ್ಕೆ ಜನಸಂಖ್ಯಾ ಬಲ ಇದೆ. ಅತಿವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಪ್ರಮುಖ ಆರ್ಥಿಕತೆ ಎನಿಸಿದೆ. ಮುಂದಿನ ಎರಡು ಮತ್ತು ಮೂರು ದಶಕಗಳು ಭಾರತದ ಆರ್ಥಿಕತೆ ಅದ್ವಿತೀಯವಾಗಿ ಪ್ರಗತಿ ಕಾಣುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ, ಮಾರುಕಟ್ಟೆಯೂ ಉತ್ತಮವಾಗಿ ಬೆಳೆಯುತ್ತದೆ. ಮುಂದಿನ 20-30 ವರ್ಷಗಳ ಗುರಿಯೊಂದಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಜಾಣತನ ಎನಿಸಬಹುದು.

ಷೇರು ಮಾರುಕಟ್ಟೆ ಹೂಡಿಕೆ ಬಗ್ಗೆ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು

ಪ್ರಶ್ನೆ: ಷೇರು ಮಾರುಕಟ್ಟೆಯಲ್ಲಿ ದೀರ್ಘಾವಧಿಯ ಹೂಡಿಕೆ ಎಂದರೆ ಎಷ್ಟು ವರ್ಷ?

ಉತ್ತರ: ಕನಿಷ್ಠ 5 ರಿಂದ 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಹೂಡಿಕೆಯನ್ನು ದೀರ್ಘಾವಧಿಯ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ.

ಪ್ರಶ್ನೆ: ಮಾರುಕಟ್ಟೆ ಕುಸಿದಾಗ ನಾನು ಹೂಡಿಕೆ ಮಾಡಿದ್ದ ಹಣವನ್ನು ಹಿಂಪಡೆಯಬೇಕೇ?

ಉತ್ತರ: ಇಲ್ಲ, ಮಾರುಕಟ್ಟೆ ಕುಸಿದಾಗ ಗಾಬರಿಯಾಗಿ ನಷ್ಟದಲ್ಲಿ ಹಣ ಹಿಂಪಡೆಯುವ ಬದಲಿಗೆ ಹೂಡಿಕೆಯನ್ನು ಹಾಗೇ ಮುಂದುವರಿಸುವುದು ಬುದ್ಧಿವಂತಿಕೆ.

ಪ್ರಶ್ನೆ: ಹೊಸಬರು ನೇರವಾಗಿ ಷೇರುಗಳನ್ನು ಖರೀದಿಸುವುದು ಉತ್ತಮವೇ ಅಥವಾ ಮ್ಯೂಚುವಲ್ ಫಂಡ್‌ಗಳೇ?

ಉತ್ತರ: ಮಾರುಕಟ್ಟೆಯ ಜ್ಞಾನ ಕಡಿಮೆ ಇರುವ ಹೊಸ ಹೂಡಿಕೆದಾರರಿಗೆ ಮ್ಯೂಚುವಲ್ ಫಂಡ್ ಎಸ್‌ಐಪಿ (SIP) ಅತ್ಯಂತ ಸುರಕ್ಷಿತ ಮತ್ತು ಸುಲಭವಾದ ಹಾದಿಯಾಗಿದೆ.

ಪ್ರಶ್ನೆ: ಹೂಡಿಕೆ ಮಾಡಲು ನನ್ನ ಬಳಿ ದೊಡ್ಡ ಮೊತ್ತದ ಹಣ ಇರಬೇಕೇ?

ಉತ್ತರ: ಇಲ್ಲ, ನೀವು ಮ್ಯೂಚುವಲ್ ಫಂಡ್‌ಗಳ ಮೂಲಕ ಪ್ರತಿ ತಿಂಗಳು ಕೇವಲ ₹100 ಅಥವಾ ₹500 ರಷ್ಟು ಸಣ್ಣ ಮೊತ್ತದಿಂದಲೂ ಹೂಡಿಕೆ ಆರಂಭಿಸಬಹುದು.

ಪ್ರಶ್ನೆ: ಷೇರು ಮಾರುಕಟ್ಟೆಯಲ್ಲಿ ನಷ್ಟವನ್ನು ತಡೆಯಲು ಇರುವ ಮುಖ್ಯ ನಿಯಮ ಯಾವುದು?

ಉತ್ತರ: ನಿಮ್ಮ ಎಲ್ಲಾ ಹಣವನ್ನು ಒಂದೇ ಕಂಪನಿಯಲ್ಲಿ ಹಾಕದೆ, ಬೇರೆ ಬೇರೆ ವಲಯಗಳಲ್ಲಿ ಹಂಚಿ ಹೂಡಿಕೆ ಮಾಡುವುದು (Diversification) ನಷ್ಟ ತಡೆಯಲು ಇರುವ ಮುಖ್ಯ ನಿಯಮ.

Published On - 2:18 pm, Fri, 17 July 26

Follow Us