ಒಬ್ಬ ವ್ಯಕ್ತಿ ಯಾವಾಗಲೋ ಖರೀದಿಸಿಟ್ಟು ಮರೆತೇಹೋಗಿದ್ದ ಷೇರುಗಳು ಆತನ ಬಳಿಕ ಆತನ ಮಕ್ಕಳ ಕಣ್ಣಿಗೆ ಬೀಳುತ್ತವೆ. ಆಗ ಷೇರುಗಳ ಮೌಲ್ಯ ಹಲವು ಸಾವಿರ ಪಟ್ಟು ಬೆಳೆದಿರುತ್ತದೆ. ಈ ರೀತಿಯ ಕೆಲ ಘಟನೆಗಳ ಬಗ್ಗೆ ಮಾಧ್ಯಮಗಳಲ್ಲಿ ನೀವು ಓದಿರಬಹುದು. ಇನ್ನೂ ಕೆಲವರು, ನೀವು ಒಂದು ಷೇರಿನ ಮೇಲೆ ದೀರ್ಘಾವಧಿ ಹೂಡಿಕೆ (long term holding) ಮಾಡಿದರೆ ಭಾರೀ ಲಾಭ ಮಾಡಬಹುದು ಎಂದು ಸಲಹೆ ನೀಡುವುದುಂಟು. ಆದರೆ, ವಾಸ್ತವದಲ್ಲಿ ಕೆಲ ಷೇರುಗಳ ವಿಚಾರದಲ್ಲಿ ಅದು ಸರಿ ಎನಿಸಬಹುದು. ಆದರೆ, ಹೆಚ್ಚಿನ ಸಂದರ್ಭದಲ್ಲಿ ಅದು ತಪ್ಪು ಎಣಿಕೆ ಆಗುತ್ತದೆ, ತಪ್ಪು ನಿರ್ಧಾರ ಆಗುತ್ತದೆ. ಮಾರಿಗೋಲ್ಡ್ ವೆಲ್ತ್ ಸಂಸ್ಥೆಯ ಸಿಇಒ ಅರವಿಂದ್ ದತ್ತ ನಿನ್ನೆ ಒಂದು ಇಂಟರೆಸ್ಟಿಂಗ್ ಆದ ವಿಚಾರವನ್ನು ತಮ್ಮ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಷೇರು ಖರೀದಿಸಿ ಅದನ್ನು ಸದಾ ಇರಿಸಿಕೊಳ್ಳುವ ತಂತ್ರ ಫಲ ಕೊಡೋದಿಲ್ಲ ಎಂದು ಅವರು ಹೇಳುತ್ತಾರೆ.
ಹಿಂದೆ ತಮ್ಮ ಸೆಕ್ಟರ್ಗಳಲ್ಲಿ ಮುಂಚೂಣಿಯಲ್ಲಿದ್ದ ಕಂಪನಿಗಳು ಇವತ್ತು ಅಸ್ತಿತ್ವದಲ್ಲೇ ಇಲ್ಲದಿರುವುದನ್ನು ಎತ್ತಿ ತೋರಿಸಿರುವ ಅವರು, ಸಮಯ ಬಂದಾಗ ಷೇರು ಮಾರುವುದು ತಿಳಿದಿರಬೇಕು ಎನ್ನುತ್ತಾರೆ.
‘ನನಗೆ ಒಂದು ಪಾಠ ಅರಿವಾಗಿದೆ. ಖರೀದಿಸಿ ಸದಾ ಇಟ್ಟುಕೊಳ್ಳುವುದು ಫಲ ಕೊಡೋದಿಲ್ಲ. ಅದರ ಸಮಯ ಮುಗಿದಾಗ ಮಾರಿ ಲಾಭ ಮಾಡಿಕೊಳ್ಳಿ ಎಂದು ಎಕ್ಸ್ ಪೋಸ್ಟ್ನಲ್ಲಿ ಬರೆದಿರುವ ಅವರು 1990 ಮತ್ತು 2000 ದಶಕಗಳಲ್ಲಿ ಮುಂಚೂಣಿಯಲ್ಲಿದ್ದು ಈಗ ಅಸ್ತಿತ್ವದಲ್ಲಿಲ್ಲದ ಕಂಪನಿಗಳ ಪಟ್ಟಿಯನ್ನು ನೀಡಿದ್ದಾರೆ.
ನಹಾರ್ ಸ್ಪಿನ್ನಿಂಗ್, ಓಸ್ವಾಲ್ ಆಗ್ರೋ, ಬಿಂದಾಲ್ ಆಗ್ರೋ, ಸೆಂಚೂರಿಯನ್ ಬ್ಯಾಂಕ್, ವಿಪ್ರೋ, ಗ್ಲೋಬಲ್ ಟೆಲಿ ಸಿಸ್ಟಮ್ಸ್, ಸತ್ಯಂ ಕಂಪ್ಯೂಟರ್ಸ್ ಕಂಪನಿಗಳ ಹೆಸರನ್ನು ಅರವಿಂದ್ ದತ್ತಾ ಸ್ಮರಿಸಿದ್ದಾರೆ. ತಾನು ಆ ಕಂಪನಿಗಳ ಷೇರು ಉಚ್ಛ್ರಾಯ ಮಟ್ಟದಲ್ಲಿರುವಾಗ ಮಾರಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
I have learnt one lesson.
Buy and Hold for forever never works.
When the story gets over sell and book profit.
Some of the below cos were leaders in their sectors but do not exist today. https://t.co/h1arezpv0T— Arvind Datta (@datta_arvind) March 17, 2025
ಹಲವು ಎಕ್ಸ್ ಬಳಕೆದಾರರು ಈ ಪೋಸ್ಟ್ಗೆ ಸ್ಪಂದಿಸಿದ್ದಾರೆ. ವಿಪ್ರೋ ಮತ್ತು ಸತ್ಯಂ ಷೇರುಗಳು ಆ ಕಾಲದಲ್ಲಿ ರಾಕೆಟ್ ಎನಿಸಿದ್ದವು ಎಂದು ಒಬ್ಬ ಯೂಸರ್ ಪ್ರತಿಕ್ರಿಯಿಸಿದ್ದಾರೆ.
ಇದೇ ಪೋಸ್ಟ್ಗೆ ಬಂದ ಪ್ರತಿಕ್ರಿಯೆಯಲ್ಲಿ ಒಬ್ಬ ವ್ಯಕ್ತಿ ತಾನು ನಿಫ್ಟಿ50 ಇಂಡೆಕ್ಸ್ನಲ್ಲಿರುವ ಷೇರುಗಳಲ್ಲಿ ಎಸ್ಐಪಿ ಮೂಲಕ ಹೂಡಿಕೆ ಮಾಡುವುದೋ ಅಥವಾ ಇಂಡೆಕ್ಸ್ ಫಂಡ್ನಲ್ಲಿ ಹೂಡಿಕೆ ಮಾಡುವುದೋ ಎಂದು ಕೇಳಿದ್ದಾರೆ. ಅದಕ್ಕೆ ಅರವಿಂದ್ ದತ್ತಾ ಅವರು ನೇರವಾಗಿ ಷೇರುಗಳಲ್ಲಿ ಹೂಡಿಕೆ ಮಾಡುವುದಕ್ಕಿಂತ ಇಂಡೆಕ್ಸ್ ಫಂಡ್ನಲ್ಲಿ ಹೂಡಿಕೆ ಮಾಡುವುದು ಕಡಿಮೆ ರಿಸ್ಕಿ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: 1929ರಲ್ಲಿ ಷೇರುಪೇಟೆ ಮಹಾಕುಸಿತದ ಪರಿಣಾಮ ಭೀಕರ; ಈ ಬಾರಿ ಅದನ್ನೂ ಮೀರಿಸಿದ ಕುಸಿತವಾ?
ಷೇರು ಮಾರುಕಟ್ಟೆಯಲ್ಲಿ ಹಲವಾರು ಇಂಡೆಕ್ಸ್ಗಳಿವೆ. ಎನ್ಎಸ್ಇಯಲ್ಲಿ ನಿಫ್ಟಿ50 ಎಂಬುದು ಪ್ರಮುಖ ಸೂಚ್ಯಂಕ. ಬಿಎಸ್ಇನಲ್ಲಿ ಸೆನ್ಸೆಕ್ಸ್ ಪ್ರಮುಖ ಸೂಚ್ಯಂಕ. ಇವು ಅತಿಹೆಚ್ಚು ಮಾರುಕಟ್ಟೆ ಮೌಲ್ಯ ಇರುವ ಕಂಪನಿಗಳ ಗುಂಪಾಗಿರುತ್ತವೆ. ಇವುಗಳ ಜೊತೆಗೆ ಇನ್ನೂ ಹಲವಾರು ಸೂಚ್ಯಂಕಗಳು ಸೆಕ್ಟರ್ವಾರು ಇರುತ್ತವೆ.
ಇಂಡೆಕ್ಸ್ ಫಂಡ್ಗಳು ಈ ರೀತಿಯ ಸೂಚ್ಯಂಕಗಳಲ್ಲಿರುವ ಷೇರುಗಳ ಮೇಲೆ ಹೂಡಿಕೆ ಮಾಡುತ್ತವೆ. ಹೀಗಾಗಿ, ರಿಸ್ಕ್ ಅಂಶ ಕಡಿಮೆ ಇರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ