ನವದೆಹಲಿ, ಮಾರ್ಚ್ 19: ಲಿಂಗ ಸಮಾನತೆ ಹೆಚ್ಚಿಸಲು ಮತ್ತು ಮಹಿಳೆಯರಿಗೆ ಹಣಕಾಸು ಸ್ವಾತಂತ್ರ್ಯ ಹೆಚ್ಚಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಕುಟುಂಬ ಪಿಂಚಣಿ ವ್ಯವಸ್ಥೆಯಲ್ಲಿ (family pension policies) ಸಾಕಷ್ಟು ಸುಧಾರಣೆಗಳನ್ನು ತಂದಿದೆ. ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಈ ಮಹಿಳೆಯರ ಉನ್ನತಿಗಾಗಿ ಸರ್ಕಾರಿ ತಂದಿರುವ ಕೆಲ ಪ್ರಮುಖ ಸುಧಾರಣಾ ಕ್ರಮಗಳ ಮಾಹಿತಿ ನೀಡಿದ್ದಾರೆ. ವಿಚ್ಛೇದಿತ ಹೆಣ್ಮಕ್ಕಳು, ವಿಧವೆಯರು, ಸಾಂಸಾರಿಕ ಬಿಕ್ಕಟ್ಟಿನಲ್ಲಿರುವ ಹೆಣ್ಮಕ್ಕಳು ಮೊದಲಾದವರಿಗೆ ಅನುಕೂಲವಾಗುವ ರೀತಿಯಲ್ಲಿ ಸುಧಾರಣೆಗಳನ್ನು ತಂದಿರುವುದು ತಿಳಿದುಬರುತ್ತದೆ.
ಮದುವೆಯಾಗಿ ಗಂಡನಿಂದ ವಿಚ್ಛೇದನ (divorcee) ಪಡೆದ ಹೆಣ್ಮಕ್ಕಳು ಅಥವಾ ಗಂಡನಿಂದ ದೂರ ಇರುವ ಹೆಣ್ಮಕ್ಕಳು (separated daughters) ತಮ್ಮ ಮೃತ ಪೋಷಕರ ಫ್ಯಾಮಿಲಿ ಪೆನ್ಷನ್ ಪಡೆಯಬೇಕೆಂದರೆ ಸಾಕಷ್ಟು ಕಾನೂನು ಅಡೆತಡೆಗಳು ಇದ್ದುವು. ಈಗ ಈ ಕಾನೂನಿನಲ್ಲಿ ಸುಧಾರಣೆ ತರಲಾಗಿದೆ. ಪಿಂಚಣಿ ಪಡೆಯುತ್ತಿರುವವರು ಬದುಕಿರುವಾಗ ಅವರ ಹೆಣ್ಮಕ್ಕಳು ಗಂಡನಿಗೆ ಡಿವೋರ್ಸ್ ಅರ್ಜಿ ಸಲ್ಲಿಸಿದ್ದರೂ ಸಾಕು, ಫ್ಯಾಮಿಲಿ ಪೆನ್ಷನ್ ಪಡೆಯಲು ಅರ್ಹರಿರುತ್ತಾರೆ. ಮಹಿಳೆಯ ಸಂಕಷ್ಟ ಪರಿಸ್ಥಿತಿಯಲ್ಲಿ ಈ ಪಿಂಚಣಿ ಹಣ ಸಾಕಷ್ಟು ನೆರವಾಗಬಹುದು.
ಸಂತಾನಹೀನ ವಿಧವೆಯರು ಮರುವಿವಾಹವಾದರೂ ಅವರ ಮೃತಪತಿಯ ಪಿಂಚಣಿ ಪಡೆಯುವುದನ್ನು ಮುಂದುವರಿಸಬಹುದು. ಆದರೆ, ಆಕೆ ಸ್ವತಂತ್ರವಾಗಿ ಗಳಿಸುವ ಆದಾಯವು ಕನಿಷ್ಠ ಪಿಂಚಣಿ ಮಟ್ಟಕ್ಕಿಂತ ಕಡಿಮೆ ಇದ್ದಿರಬೇಕು.
ಇದನ್ನೂ ಓದಿ: ಭಾರತೀಯ ರೈಲ್ವೆ ಗರಿಮೆ; ಯೂರೋಪ್, ಆಸ್ಟ್ರೇಲಿಯಾ, ಸೌದಿಗೆ ಭಾರತದಿಂದ ರೈಲ್ವೆ ಉಪಕರಣಗಳ ರಫ್ತು: ಅಶ್ವಿನಿ ವೈಷ್ಣವ್
ಸಾಮಾನ್ಯವಾಗಿ ಪಿಂಚಣಿದಾರರು ಮಹಿಳೆ ಆಗಿದ್ದರೆ ಅವರ ಪಿಂಚಣಿಗೆ ಗಂಡನೇ ನಾಮಿನಿ ಆಗಿರುತ್ತಾರೆ. ಆದರೆ, ಪಿಂಚಣಿದಾರರು ತಮ್ಮ ಗಂಡನಿಗೆ ವಿಚ್ಛೇದನ ನೀಡಿದ್ದರೆ, ಅಥವಾ ನೀಡಲು ಮುಂದಾಗಿದ್ದರೆ, ತಮ್ಮ ಪಿಂಚಣಿಗೆ ಗಂಡನ ಬದಲು ಮಕ್ಕಳನ್ನು ನಾಮಿನೇಟ್ ಮಾಡಲಾಗುವಂತೆ ಕಾನೂನು ಮಾರ್ಪಾಡು ಮಾಡಲಾಗಿದೆ. ಸಾಂಸಾರಿಕ ಸಮಸ್ಯೆ ಎದುರಿಸುತ್ತಿರುವ ಮಹಿಳಾ ಪಿಂಚಣಿದಾರರಿಗೆ ಇದರಿಂದ ಹೆಚ್ಚು ಸ್ವಾತಂತ್ರ್ಯ ಸಿಕ್ಕುತ್ತದೆ.
ಉದ್ಯೋಗದಲ್ಲಿರುವ ಹೆಚ್ಚಿನ ಮಹಿಳೆಯರು ಮನೆ ಮತ್ತು ಕಚೇರಿ ಎರಡೂ ಕಡೆ ಕೆಲಸ ಮಾಡುವ ಪರಿಸ್ಥಿತಿಯಲ್ಲಿರುವುದುಂಟು. ಅದರಲ್ಲೂ ಮಕ್ಕಳನ್ನು ಹೊಂದಿರುವ ಮಹಿಳಾ ಉದ್ಯೋಗಿಗಳಿಗೆ ಇದು ಇನ್ನೂ ಸಂಕೀರ್ಣ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಚೈಲ್ಡ್ ಕೇರ್ ಲೀವ್ ನೀತಿಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಒಂಟಿಯಾಗಿರುವ ತಾಯಂದಿರು, ಅಂದರೆ ಗಂಡನಿಂದ ದೂರ ಇದ್ದು ಮಕ್ಕಳನ್ನು ನೋಡಿಕೊಳ್ಳುತ್ತಿರುವ ತಾಯಂದಿರು ಎರಡು ವರ್ಷಗಳಷ್ಟು ರಜೆಗಳನ್ನು ಪಡೆಯಲು ಅವಕಾಶ ಇದೆ. ಈ ರಜೆಯ ಅವಧಿಯಲ್ಲಿ ಅವರು ತಮ್ಮ ಮಕ್ಕಳೊಂದಿಗೆ ವಿದೇಶ ಪ್ರವಾಸಕ್ಕೂ ಹೋಗಬಹುದು.
ಇದನ್ನೂ ಓದಿ: New TDS rules: ಠೇವಣಿ, ಡಿವಿಡೆಂಡ್, ಬಾಡಿಗೆ ಇತ್ಯಾದಿ ಆದಾಯಗಳಿಗೆ ಹೊಸ ಟಿಡಿಎಸ್ ದರ; ಏಪ್ರಿಲ್ 1ರಿಂದ ಜಾರಿ
ಮಹಿಳಾ ಉದ್ಯೋಗಿಗಳು ಮಗುವನ್ನು ಹೆತ್ತರೆ ಮ್ಯಾಟರ್ನಿಟಿ ಸೌಲಭ್ಯಗಳನ್ನು ನೀಡಲಾಗುತ್ತದೆ. ಒಂದು ವೇಳೆ ಆಕೆ ಹೆರುವ ಮಗು ಸತ್ತಿದ್ದರೆ ಆಗಲೂ ಕೂಡ ಆಕೆಗೆ ಪೇಯ್ಡ್ ಲೀವ್ ಇತ್ಯಾದಿ ಸಹಜವಾದ ಮ್ಯಾಟರ್ನಿಟಿ ಸೌಲಭ್ಯಗಳು ಸಿಗುವಂತೆ ಕಾನೂನು ಬದಲಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ