ಭಾರತೀಯ ರೈಲ್ವೆ ಗರಿಮೆ; ಯೂರೋಪ್, ಆಸ್ಟ್ರೇಲಿಯಾ, ಸೌದಿಗೆ ಭಾರತದಿಂದ ರೈಲ್ವೆ ಉಪಕರಣಗಳ ರಫ್ತು: ಅಶ್ವಿನಿ ವೈಷ್ಣವ್
Indian rail equipment export: ಯೂರೋಪ್, ಆಫ್ರಿಕಾ, ಏಷ್ಯಾದ ವಿವಿಧ ದೇಶಗಳಿಗೆ ಭಾರತದಿಂದ ಸಾಕಷ್ಟು ರೈಲು ಉಪಕರಣಗಳ ರಫ್ತಾಗುತ್ತಿದೆ. 2014ಕ್ಕೆ ಮುನ್ನವೂ ರೈಲು ಕೋಚ್, ಬೋಗೀಗಳನ್ನು ಬೇರೆ ಬೇರೆ ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ಈಗ ಹತ್ತು ವರ್ಷದಲ್ಲಿ ಭಾರತದಿಂದ ರಫ್ತಾಗುತ್ತಿರುವ ಪ್ರಮಾಣ ಹಲವು ಪಟ್ಟು ಹೆಚ್ಚಾಗಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜ್ಯಸಭೆಗೆ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ.

ನವದೆಹಲಿ, ಮಾರ್ಚ್ 18: ಸರ್ಕಾರದ ಪಾಲಿಗೆ ಸದಾ ಹೊರೆಯಾಗಿದ್ದ ಭಾರತೀಯ ರೈಲ್ವೆ (Indian railways) ಈಗ ಸಾಕಷ್ಟು ಪರಿವರ್ತನೆ ಹೊಂದುತ್ತಿದೆ. ನಷ್ಟದ ಹೊರೆಯಿಂದ ಲಾಭದ ಹಳಿಗೆ ಬಂದಿದೆ. ಕಳೆದ 10 ವರ್ಷಗಳಿಂದ ಈ ಇಲಾಖೆ ಸಾಕಷ್ಟು ಪರಿವರ್ತನೆ ಹೊಂದುತ್ತಿದೆ. ಇದೀಗ ಭಾರತದಿಂದ ಸಾಕಷ್ಟು ದೇಶಗಳಿಗೆ ರೈಲ್ವೆ ಉಪಕರಣಗಳು ರಫ್ತಾಗುತ್ತಿವೆ. ಯೂರೋಪ್, ಆಸ್ಟ್ರೇಲಿಯಾ ದೇಶಗಳಿಗೆ ಸರಬರಾಜು ಮಾಡಲಾಗುತ್ತಿದೆ. ಆಫ್ರಿಕನ್ ದೇಶಗಳು ಹಾಗೂ ಭಾರತದ ನೆರೆಯ ದೇಶಗಳಿಗೂ ಇವುಗಳ ರಫ್ತಾಗುತ್ತಿವೆ. ರೈಲು ಬೋಗಿಗಳು, ಮೆಟ್ರೋ ಬೋಗಿಗಳು, ಇತರ ರೈಲು ಉಪಕರಣಗಳು ಭಾರತದಿಂದ ವಿವಿಧ ದೇಶಗಳಿಗೆ ರಫ್ತಾಗುತ್ತಿವೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಂಸತ್ನಲ್ಲಿ ಈ ಮಾಹಿತಿ ನೀಡಿದ್ದಾರೆ.
‘ಮೆಟ್ರೋ ಕೋಚ್ಗಳನ್ನು ಆಸ್ಟ್ರೇಲಿಯಾಗೆ ರಫ್ತು ಮಾಡಲಾಗುತ್ತಿದೆ. ಬೋಗಿಗಳ ಕೆಳಗಿರುವ ಯಾಂತ್ರಿಕ ಅಂಡರ್ಫ್ರೇಮ್ ಅನ್ನು ಯುಕೆ, ಸೌದಿ ಅರೇಬಿಯಾ, ಫ್ರಾನ್ಸ್ ಮತ್ತು ಆಸ್ಟ್ರೇಲಿಯಾಗೆ ಕಳುಹಿಸಲಾಗುತ್ತಿದೆ. ಪವರ್ ಎಲೆಕ್ಟ್ರಾನಿಕ್ಸ್ನ ಪ್ರಮುಖ ಭಾಗವಾದ ಪ್ರೊಪಲ್ಷನ್ ಸಿಸ್ಟಂ ಅನ್ನು ಫ್ರಾನ್ಸ್, ಮೆಕ್ಸಿಕೋ, ರೊಮೇನಿಯಾ, ಸ್ಪೇನ್, ಜರ್ಮನಿ ಮತ್ತು ಇಟಲಿ ದೇಶಗಳಿಗೆ ಸರಬರಾಜು ಮಾಡಲಾಗುತ್ತಿದೆ. ಇದು ಭಾರತೀಯ ರೈಲ್ವೆಗೆ ಹೆಮ್ಮೆ ತರುವ ಸಂಗತಿ’ ಎಂದು ಅಶ್ವಿನಿ ವೈಷ್ಣವ್ ನಿನ್ನೆ ರಾಜ್ಯಸಭೆಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತದ ಟ್ರೇಡ್ ಡೆಫಿಸಿಟ್ನಲ್ಲಿ ಗಣನೀಯ ಇಳಿಕೆ; ನಾಲ್ಕು ವರ್ಷದ ಕನಿಷ್ಠ ಮಟ್ಟ
ಪ್ಯಾಸೆಂಜರ್ ರೈಲು ಬೋಗಿಗಳನ್ನು ಮೊಜಾಂಬಿಕ್, ಬಾಂಗ್ಲಾದೇಶ ಮತ್ತು ಶ್ರೀಲಂಕಾಗೆ ಕಳುಹಿಸಲಾಗುತ್ತಿದೆ. ಲೋಕೋಮೋಟಿವ್ಗಳನ್ನು ಈ ಮೇಲಿನ ದೇಶಗಳ ಜೊತೆಗೆ ಸೆನೆಗಲ್, ಮಯನ್ಮಾರ್ ದೇಶಗಳಿಗೂ ಕಳುಹಿಸಲಾಗುತ್ತಿದೆ. ತಮಿಳುನಾಡಿನಲ್ಲಿ ತಯಾರಾಗುತ್ತಿರುವ ಫೋರ್ಜ್ಡ್ ವ್ಹೀಲ್ಗಳನ್ನು ಸದ್ಯದಲ್ಲೇ ರಫ್ತು ಮಾಡಲು ಸಿದ್ಧಪಡಿಸಲಾಗುತ್ತಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಲಾಲೂ ಕಾಲಕ್ಕೆ ಹೋಲಿಸಿದರೆ ರೈಲು ದುರಂತ ಸಾಕಷ್ಟು ಇಳಿಕೆ
ನಿನ್ನೆ ರೈಲ್ವೆ ಬಜೆಟ್ ಸಂಬಂಧ ನಡೆದ ಚರ್ಚೆಯ ವೇಳೆ ಭಾರತೀಯ ರೈಲ್ವೆ ಬಗ್ಗೆ ವಿಪಕ್ಷಗಳ ಮುಖಂಡರು ಹರಿಹಾಯ್ದರು. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿರುಗೇಟು ನೀಡಿದ್ದಾರೆ. ಮಮತಾ ಬ್ಯಾನರ್ಜಿ ಮತ್ತು ಲಾಲೂ ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದಾಗ ಪ್ರತೀ ದಿನವೂ ಸರಾಸರಿಯಾಗಿ ಒಂದೆರಡು ಅಪಘಾತ ಮತ್ತು ಹಳಿ ತಪ್ಪುವ ದುರಂತಗಳು ಸಂಭವಿಸುತ್ತಿದ್ದುವು ಎಂದು ಸಚಿವರು ಲೇವಡಿ ಮಾಡಿದ್ದಾರೆ.
2005-06ರಲ್ಲಿ ಲಾಲೂ ಪ್ರಸಾದ್ ಯಾದವ್ ಸಚಿವರಾಗಿದ್ದಾಗ 698 ರೈಲು ದುರಂತ ಘಟನೆಗಳು ಸಂಭವಿಸಿದ್ದುವು. ಮಮತಾ ಬ್ಯಾನರ್ಜಿ ಸಚಿವೆಯಾಗಿದ್ದಾಗ 395 ಘಟನೆಗಳು, ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಮಂತ್ರಿಯಾಗಿದ್ದಾಗ 38 ಘಟನೆಗಳು ಜರುಗಿದ್ದವು ಎಂದು ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸರ್ಕಾರಕ್ಕೆ ತೆರಿಗೆ ಸುಗ್ಗಿ; ನೇರ ತೆರಿಗೆ ಸಂಗ್ರಹ ಶೇ. 16.2 ಏರಿಕೆ; ಎಸ್ಟಿಟಿಯಲ್ಲೂ ಹೈಜಂಪ್
‘ಹಿಂದೆ ದಿನಕ್ಕೆ ಒಂದು ದುರಂತ ಘಟನೆ ಸಂಭವಿಸುತ್ತಿತ್ತು. ಈಗ ವರ್ಷಕ್ಕೆ ಕೇವಲ 30 ಅಪಘಾತಗಳು ಸಂಭವಿಸುತ್ತಿವೆ. ಹಳಿ ತಪ್ಪಿದ ಘಟನೆಗಳನ್ನು ಪರಿಗಣಿಸಿದರೆ ವರ್ಷಕ್ಕೆ 73 ಪ್ರಕರಣಗಳು ಸಂಭವಿಸಿವೆ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:57 pm, Tue, 18 March 25