
ಟೋಕಿಯೋ, ಮೇ 17: ಜಪಾನ್‌ನಲ್ಲಿ ಕಳೆದ 30 ವರ್ಷಗಳಿಂದ ವಾಸಿಸುತ್ತಾ, ಸೈತಾಮಾ ನಗರದಲ್ಲಿ (Saitama Prefecture) ಕಳೆದ 18 ವರ್ಷಗಳಿಂದ ಯಶಸ್ವಿಯಾಗಿ ಭಾರತೀಯ ರೆಸ್ಟೋರೆಂಟ್ವೊಂದನ್ನು ನಡೆಸುತ್ತಿದ್ದ ಮನೀಶ್ ಕುಮಾರ್ ಎಂಬ ಭಾರತೀಯ ಉದ್ಯಮಿಗೆ ಜಪಾನ್ ಸರ್ಕಾರವು ದೇಶ ತೊರೆಯುವಂತೆ ಆದೇಶಿಸಿದೆ. ಜಪಾನ್‌ನ ವಲಸೆ ಸೇವಾ ಸಂಸ್ಥೆಯು (ISA) ಅವರ ಬಿಸಿನೆಸ್ ಮ್ಯಾನೇಜರ್ ವೀಸಾ (Business Manager Visa) ನವೀಕರಣವನ್ನು ತಿರಸ್ಕರಿಸಿರುವುದು ಇದಕ್ಕೆ ಕಾರಣವಾಗಿದೆ. ಟೋಕಿಯೋದಲ್ಲಿ ನಡೆದ ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಮನೀಶ್ ಕುಮಾರ್, ತಮ್ಮ ಅಳಲನ್ನು ತೋಡಿಕೊಳ್ಳುತ್ತಾ ಕಣ್ಣೀರು ಹಾಕಿದ್ದಾರೆ.
“ಎರಡು ವಾರಗಳ ಹಿಂದೆ ಜಪಾನ್ ವಲಸೆ ಸಂಸ್ಥೆಯು (ISA) ನನಗೆ ಭಾರತಕ್ಕೆ ಮರಳಿ ಹೋಗುವಂತೆ ತಿಳಿಸಿತು. ನನ್ನ ಮಕ್ಕಳು ಹುಟ್ಟಿದ್ದು, ಬೆಳೆದಿದ್ದು ಎಲ್ಲವೂ ಜಪಾನ್‌ನಲ್ಲಿಯೇ. ಅವರಿಗೆ ಕೇವಲ ಜಪಾನಿ ಭಾಷೆ ಮಾತ್ರ ಗೊತ್ತು, ಅವರ ಸ್ನೇಹಿತರೆಲ್ಲರೂ ಜಪಾನಿಯರೇ ಆಗಿದ್ದಾರೆ. ನಾವಿಲ್ಲಿ ಕಷ್ಟಪಟ್ಟು ದುಡಿದು ಒಂದು ಮನೆಯನ್ನೂ ಖರೀದಿಸಿದ್ದೇವೆ. ಈಗ ಇದ್ದಕ್ಕಿದ್ದಂತೆ ಯಾವುದೇ ತಪ್ಪು ಮಾಡದ ನಮಗೆ ‘ಭಾರತಕ್ಕೆ ವಾಪಸ್ ಹೋಗಿ’ ಎಂದು ಹೇಳುತ್ತಿರುವುದು ಎಷ್ಟು ಮಾನವೀಯ? ನಾನು ಈಗ ಏನು ಮಾಡಬೇಕು?” ಎಂದು ಅವರು ಪ್ರಶ್ನಿಸಿದ್ದಾರೆ.
ಜಪಾನ್ ಸರ್ಕಾರವು ತನ್ನ ‘ಬಿಸಿನೆಸ್ ಮ್ಯಾನೇಜರ್ ವೀಸಾ’ ನೀತಿಯನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ಕಳೆದ ವರ್ಷ (ಅಕ್ಟೋಬರ್ 2025) ನಿಯಮಗಳನ್ನು ಬಹಳ ಕಠಿಣಗೊಳಿಸಿದೆ. ನಕಲಿ ವ್ಯಾಪಾರಗಳನ್ನು ತೋರಿಸಿ ವಿದೇಶಿಗರು ದೀರ್ಘಾವಧಿ ವಾಸದ ಹಕ್ಕು (Residency) ಪಡೆಯುವುದನ್ನು ತಡೆಯುವುದು ಸರ್ಕಾರದ ಉದ್ದೇಶವಾಗಿತ್ತು.
ಇದನ್ನೂ ಓದಿ: ಟಾಟಾ-ASML ಡೀಲ್; ಚಿಪ್ ಕ್ಷೇತ್ರದಲ್ಲಿ ಸಂಚಲನ; ಯಾಕಿದು ಮಹಾ ಡೀಲ್? ಎಲ್ಲರಿಗೂ ಅಚ್ಚರಿ ಎನಿಸುವಂಥದ್ದು ಏನಿದೆ?
ಆದರೆ, ಈ ಹಠಾತ್ ಬದಲಾವಣೆಯು ಕಾನೂನುಬದ್ಧವಾಗಿ ಸಣ್ಣ ಉದ್ಯಮ ನಡೆಸುತ್ತಿದ್ದ ಮನೀಶ್ ಕುಮಾರ್ ಅವರಂತಹ ಪ್ರಾಮಾಣಿಕ ಉದ್ಯಮಿಗಳ ಬದುಕನ್ನು ಬೀದಿಗೆ ತಂದಿದೆ.
ಈ ಹಿಂದೆ ವೀಸಾ ಪಡೆಯಲು ಕನಿಷ್ಠ 5 ಮಿಲಿಯನ್ ಯೆನ್ (ಸುಮಾರು 30 ಲಕ್ಷ ರೂ) ಹೂಡಿಕೆ ಸಾಕಾಗಿತ್ತು. ಆದರೆ ಹೊಸ ನಿಯಮದ ಪ್ರಕಾರ ಅದನ್ನು 30 ಮಿಲಿಯನ್ ಯೆನ್‌ಗೆ (ಸುಮಾರು 1.8 ಕೋಟಿ ರೂ) ಏರಿಸಲಾಗಿದೆ. ಸಣ್ಣ ಉದ್ಯಮಿಗಳಿಗೆ ಈ ಮೊತ್ತವನ್ನು ಹೊಂದಿಸುವುದು ಅಸಾಧ್ಯವಾಗಿದೆ.
ಮತ್ತೊಂದು ಪ್ರಮುಖ ನಿಯಮವು ಸ್ಥಳೀಯ ನೌಕರರ ನೇಮಕದ್ದಾಗಿದೆ. ಪ್ರತಿಯೊಬ್ಬ ಉದ್ಯಮಿಯೂ ಕಡ್ಡಾಯವಾಗಿ ಕನಿಷ್ಠ ಒಬ್ಬ ಸ್ಥಳೀಯ (ಜಪಾನಿ) ಪೂರ್ಣಾವಧಿ ನೌಕರನನ್ನು ಕೆಲಸಕ್ಕೆ ಇಟ್ಟುಕೊಳ್ಳಬೇಕು ಎಂದು ಹೇಳುತ್ತದೆ ಹೊಸ ನಿಯಮ.
ಮಗದೊಂದು ಕಠಿಣ ನಿಯಮಗಳಲ್ಲಿ ಜಪಾನೀ ಭಾಷೆಯಲ್ಲಿ ಪರಿಣಿತಿ ಸಾಧಿಸುವುದು ಸೇರಿದೆ. ಉದ್ಯಮಿ ಅಥವಾ ಅವರ ಸಿಬ್ಬಂದಿ ಜಪಾನಿ ಭಾಷೆಯ ಉನ್ನತ ಮಟ್ಟದ ಪ್ರಾವೀಣ್ಯತೆಯನ್ನು (JLPT N2 ಮಟ್ಟ) ಸಾಬೀತುಪಡಿಸಬೇಕು.
ಇದನ್ನೂ ಓದಿ: ಭಾರತಕ್ಕೆ 2ನೇ ಅತಿದೊಡ್ಡ ರಫ್ತು ಮಾರುಕಟ್ಟೆ ಈಗ ಯುಎಇ ಅಲ್ಲ, ಸಿಂಗಾಪುರ
ಜಪಾನ್ ಸರ್ಕಾರದ ಈ ಕಠಿಣ ನೀತಿಯಿಂದಾಗಿ ಉದ್ಯಮ ವೀಸಾಕ್ಕೆ ಸಲ್ಲಿಕೆಯಾಗುತ್ತಿದ್ದ ಅರ್ಜಿಗಳ ಸಂಖ್ಯೆ ಶೇಕಡಾ 96 ರಷ್ಟು ಕುಸಿದಿದೆ. ಈ ಹಿಂದೆ ತಿಂಗಳಿಗೆ ಸರಾಸರಿ 1,700 ಅರ್ಜಿಗಳು ಬರುತ್ತಿದ್ದರೆ, ಈಗ ಅದು ಕೇವಲ 70ಕ್ಕೆ ಇಳಿದಿದೆ. ಮನೀಶ್ ಕುಮಾರ್ ಅವರಂತೆಯೇ ಹಾಂಕಾಂಗ್ ಮೂಲದ ಮತ್ತೊಬ್ಬ ರೆಸ್ಟೋರೆಂಟ್ ಮಾಲೀಕರೂ ಸಹ ಬಂಡವಾಳದ ಕೊರತೆಯಿಂದಾಗಿ ತಮ್ಮ ಉದ್ಯಮವನ್ನು ಮುಚ್ಚಿ ತಾಯ್ನಾಡಿಗೆ ಮರಳುತ್ತಿದ್ದಾರೆ.
ಪ್ರಸ್ತುತ, ಜಪಾನ್‌ನ ಈ ಕಠಿಣ ವಲಸೆ ನೀತಿಯ ವಿರುದ್ಧ ಮತ್ತು ಮನೀಶ್ ಕುಮಾರ್ ಅವರಂತಹ ದೀರ್ಘಾವಧಿ ನಿವಾಸಿಗಳ ಪರವಾಗಿ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಜಪಾನ್‌ನಲ್ಲಿ ಸಾವಿರಾರು ಜನರು ಸಹಿ ಸಂಗ್ರಹಿಸಿ ಆನ್‌ಲೈನ್ ಅಭಿಯಾನವನ್ನು ನಡೆಸುತ್ತಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ