Bitcoin: ಬಿಟ್​ಕಾಯಿನ್ ಕಾನೂನುಬದ್ಧವೋ ಅಥವಾ ಬಾಹಿರವೋ ನಿಲುವು ತಿಳಿಸಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

| Updated By: Srinivas Mata

Updated on: Feb 25, 2022 | 2:28 PM

ಭಾರತದಲ್ಲಿ ಬಿಟ್​ಕಾಯಿನ್​ ಕಾನೂನುಬದ್ಧವೋ ಅಥವಾ ಕಾನೂನುಬಾಹಿರವೋ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಸುಪ್ರೀ ಕೋರ್ಟ್​ನಿಂದ ಕೇಂದ್ರ ಸರ್ಕಾರಕ್ಕೆ ಕೇಳಲಾಗಿದೆ.

Bitcoin: ಬಿಟ್​ಕಾಯಿನ್ ಕಾನೂನುಬದ್ಧವೋ ಅಥವಾ ಬಾಹಿರವೋ ನಿಲುವು ತಿಳಿಸಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ
ಸಾಂದರ್ಭಿಕ ಚಿತ್ರ
Follow us on

ಬಿಟ್‌ಕಾಯಿನ್‌ (Bitcoin) ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರವನ್ನು ಕೇಳಿದೆ. ಸದ್ಯಕ್ಕೆ ದೇಶದಲ್ಲಿ ಕ್ರಿಪ್ಟೋಕರೆನ್ಸಿಗಳ ಬಳಕೆ ಮೇಲೆ ಯಾವುದೇ ನಿಯಂತ್ರಣ ಅಥವಾ ನಿಷೇಧವಿಲ್ಲ. ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಸೂರ್ಯ ಕಾಂತ್ ಅವರನ್ನೊಳಗೊಂಡ ಪೀಠವು ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಐಶ್ವರ್ಯಾ ಭಾಟಿ ಅವರಿಗೆ, “ನೀವು ನಿಲುವನ್ನು ಸ್ಪಷ್ಟಪಡಿಸಬೇಕು” ಎಂದು ಹೇಳಿದರು. ಭಾರತ ಸರ್ಕಾರದ ವಿರುದ್ಧ ಅಜಯ್ ಭಾರದ್ವಾಜ್ ಅವರು ಸಲ್ಲಿಸಿದ ಮನವಿಯನ್ನು ಪೀಠವು ವಿಚಾರಣೆ ನಡೆಸುತ್ತಿದೆ. ಈ ಪ್ರಕರಣವು 87,000 ಬಿಟ್‌ಕಾಯಿನ್‌ಗಳನ್ನು ಒಳಗೊಂಡಿದೆ ಮತ್ತು ಇದುವರೆಗೆ ಅನೇಕ ಸಮನ್ಸ್‌ಗಳನ್ನು ನೀಡಲಾಗಿದ್ದರೂ ಆರೋಪಿಯು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಭಾಟಿ ಪೀಠದ ಮುಂದೆ ಅಹವಾಲು ಸಲ್ಲಿಸಿದ್ದಾರೆ.

“ಇದು ಕಾನೂನುಬಾಹಿರವೇ ಅಥವಾ ಇಲ್ಲವೇ…” ಎಂದು ಪೀಠ ಪ್ರಶ್ನಿಸಿದ್ದು, “ನಾವು ಅದನ್ನು ಮಾಡುತ್ತೇವೆ,” ಎಂದು ಭಾಟಿ ಉತ್ತರಿಸಿದ್ದಾರೆ. ಎಫ್‌ಐಆರ್ ಮಾಹಿತಿದಾರರ ಪರ ವಾದ ಮಂಡಿಸಿದ ವಕೀಲ ಶೋಬ್ ಆಲಂ, ಭಾರದ್ವಾಜ್‌ಗೆ ನೀಡಿರುವ ಜಾಮೀನು ರದ್ದುಗೊಳಿಸುವಂತೆ ಕೋರಿದರು. ಕಳೆದ ವರ್ಷ ಜುಲೈನಲ್ಲಿ ಜಾರಿ ನಿರ್ದೇಶನಾಲಯವು ಸ್ಥಿತಿಗತಿ ವರದಿಯನ್ನು ಸಲ್ಲಿಸಿತ್ತು ಎಂದು ಪೀಠವು ಸೂಚಿಸಿತು. ಆರೋಪಿಯು ತನಿಖೆಗೆ ಸಹಕರಿಸಿಲ್ಲ ಎಂದು ಭಾಟಿ ತಿಳಿಸಿದ್ದಾರೆ. ತನಿಖಾಧಿಕಾರಿಯನ್ನು (ಐಒ) ಭೇಟಿಯಾಗಿ ತನಿಖೆಗೆ ಸಹಕರಿಸುವಂತೆ ಪೀಠವು ಆರೋಪಿಗಳಿಗೆ ಸೂಚಿಸಿದೆ.

ಆರೋಪಿಗಳ ಸಹಕಾರವನ್ನು ತೋರಿಸುವ ಸ್ಥಿತಿಗತಿ ವರದಿಯನ್ನು ತನಿಖಾಧಿಕಾರಿ ಸಲ್ಲಿಸಲಿದ್ದಾರೆ ಮತ್ತು ನಾಲ್ಕು ವಾರಗಳ ನಂತರ ಹೆಚ್ಚಿನ ವಿಚಾರಣೆಗೆ ನಿಗದಿಪಡಿಸಲಾಗಿದೆ ಎಂದು ಪೀಠ ಹೇಳಿದೆ. ಆರೋಪಿಗಳ ಬಂಧನಕ್ಕೆ ತಡೆಯಾಜ್ಞೆ ನೀಡಿರುವ ಮಧ್ಯಂತರ ಆದೇಶ ಮುಂದಿನ ವಿಚಾರಣೆಯ ತನಕ ಮುಂದುವರಿಯಲಿದೆ ಎಂದು ಪೀಠ ತಿಳಿಸಿದೆ. ಕ್ರಿಪ್ಟೋ ವಹಿವಾಟುಗಳನ್ನು ಬೆಂಬಲಿಸುವುದರಿಂದ ಬ್ಯಾಂಕ್​ಗಳನ್ನು ನಿಷೇಧಿಸುವ ರಿಸರ್ವ್ ಬ್ಯಾಂಕ್‌ ಆಫ್ ಇಂಡಿಯಾ ಆದೇಶವನ್ನು 2020ರ ಮಾರ್ಚ್​ನಲ್ಲಿ ಸುಪ್ರೀಂ ಕೋರ್ಟ್ ರದ್ದುಗೊಳಿಸಿತು.

-IANS

ಇದನ್ನೂ ಓದಿ: Cryptocurrency Index IC15: ಭಾರತದ ಮೊದಲ ಕ್ರಿಪ್ಟೋಕರೆನ್ಸಿಗಳ ಸೂಚ್ಯಂಕ ಐಸಿ15 ಪ್ರಾರಂಭಿಸಿದ ಕ್ರಿಪ್ಟೋವೈರ್