Consumer Dispute: ರೈಲು ತಡವಾಗಿದ್ದರಿಂದ ರೂ. 30 ಸಾವಿರ ನಷ್ಟ ಪರಿಹಾರ ಕಟ್ಟಿಕೊಡುವಂತೆ ರೈಲ್ವೇಸ್ಗೆ ಸುಪ್ರೀಂ ನಿರ್ದೇಶನ
ರೈಲು ವಿಳಂಬವಾಗಿದ್ದರಿಂದ ಪ್ರಯಾಣಿಕರಿಗೆ ಆದ ಅನನುಕೂಲಕ್ಕೆ ಪರಿಹಾರವಾಗಿ 30,000 ಸಾವಿರ ರೂಪಾಯಿ ಪಾವತಿಸುವಂತೆ ಸುಪ್ರೀಂ ಕೋರ್ಟ್ನಿಂದ ಭಾರತೀಯ ರೈಲ್ವೇಸ್ಗೆ ಸೂಚಿಸಲಾಗಿದೆ.
ರೈಲು ವಿಳಂಬವಾಗಿದ್ದಕ್ಕೆ ಮತ್ತು ಆ ಕಾರಣದಿಂದ ವ್ಯಕ್ತಿಯೊಬ್ಬರು ವಿಮಾನ ತಪ್ಪಿಸಿಕೊಂಡಿದ್ದರಿಂದ 30,000 ರೂಪಾಯಿ ಪರಿಹಾರ ಕಟ್ಟುವಂತೆ ಭಾರತೀಯ ರೈಲ್ವೆಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಅನಿರುದ್ಧ ಬೋಸ್ ಅವರನ್ನು ಒಳಗೊಂಡ ಪೀಠವು ಹೇಳಿರುವಂತೆ, ಒಂದು ವೇಳೆ ರೈಲು ಏಕೆ ತಡವಾಯಿತು ಎಂಬುದನ್ನು ವಿವರಿಸುವುದಕ್ಕೆ ರೈಲ್ವೇಸ್ ವಿಫಲವಾದಲ್ಲಿ, ಗ್ರಾಹಕರ ಫೋರಂನಲ್ಲಿ ಸೇವೆ ಕೊರತೆ ದೂರು ದಾಖಲಿಸುವಂಥ ಪ್ರಯಾಣಿಕರಿಗೆ ಪರಿಹಾರ ಕಟ್ಟಿಕೊಡುವುದರ ಜವಾಬ್ದಾರಿ ಹೊರಬೇಕಾಗುತ್ತದೆ ಎಂದಿರುವುದಾಗಿ ವರದಿ ಆಗಿದೆ. ಪ್ರಯಾಣಿಕರ ಸಮಯ ಅಮೂಲ್ಯವಾದದ್ದು ಮತ್ತು ರೈಲು ತಡವಾಗಿದ್ದಕ್ಕೆ ಯಾರಾದರೂ ಉತ್ತರದಾಯಿ ಆಗಬೇಕು, ಎಂದು ಕೋರ್ಟ್ ಹೇಳಿದೆ. ಖಾಸಗಿಯವರ ಜತೆಗೆ ಸ್ಪರ್ಧಿಸಿ ಸರ್ಕಾರಿ ಸಾರಿಗೆ ಉಳಿದುಕೊಳ್ಳಬೇಕು ಅಂದರೆ ವ್ಯವಸ್ಥೆ ಮತ್ತು ಕೆಲಸದ ವೈಖರಿ ಸುಧಾರಿಸಿಕೊಳ್ಳಬೇಕು. ನಾಗರಿಕರು/ಗ್ರಾಹಕರು ಅಧಿಕಾರಿಗಳು/ಆಡಳಿತಗಾರರ ಕರುಣೆಯಲ್ಲೇನೂ ಇರುವುದಿಲ್ಲ. ಯಾರಾದರೂ ಜವಾಬ್ದಾರಿ ವಹಿಸಿಕೊಳ್ಳಬೇಕು ಎನ್ನಲಾಗಿದೆ.
ದೂರುದಾರರಾದ ಸಂಜಯ್ ಶುಕ್ಲಾ ಮತ್ತು ಅವರ ಕುಟುಂಬ ಮಧ್ಯಾಹ್ನ 12ಕ್ಕೆ ಜಮ್ಮುವಿನಿನಿಂದ ಶ್ರೀನಗರಕ್ಕೆ ತೆರಳಬೇಕಾಗಿದ್ದ ವಿಮಾನ ತಪ್ಪಿಸಿಕೊಂಡಿದ್ದರು. ಅಂದಹಾಗೆ ಜೂನ್ 11, 2016ರಂದು ಈ ಘಟನೆ ನಡೆದಿತ್ತು. ಅಂದು ಬೆಳಗ್ಗೆ 8.10ಕ್ಕೆ ರೈಲು ಜಮ್ಮುವನ್ನು ತಲುಪಬೇಕಿತ್ತು. ಆದರೆ ನಾಲ್ಕು ಗಂಟೆ ತಡವಾಗಿ ಮಧ್ಯಾಹ್ನ 12ಕ್ಕೆ ತಲುಪಿತ್ತು. ವಿಮಾನವನ್ನು ತಲುಪುವ ಅವಕಾಶವೇ ಇಲ್ಲದಂತಾಗಿ ಶುಕ್ಲಾ ಅವರ ಕುಟುಂಬವು ಟ್ಯಾಕ್ಸಿ ಮೂಲಕ ಜಮ್ಮುವಿನಿಂದ ಶ್ರೀನಗರಕ್ಕೆ ತೆರಳಬೇಕಾಯಿತು. ಟ್ಯಾಕ್ಸಿಗೆ 15,000 ಮತ್ತು ಶ್ರೀನಗರದಲ್ಲಿ ವಾಸ್ತವ್ಯಕ್ಕೆ ರೂ. 10,000 ಪಾವತಿ ಮಾಡಿದ್ದರು.
ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಟಿ ಅವರು ರೈಲ್ವೆ ಪರವಾಗಿ ವಾದ ಮಂಡಿಸಿದ್ದರು. ಭಾರತೀಯ ರೈಲ್ವೆ ಕಾನ್ಫರೆನ್ಸ್ ಅಸೋಸಿಯೇಷನ್ ಕೋಚಿಂಗ್ ಟಾರಿಫ್ ಸಂಖ್ಯೆ 26 ಭಾಗ 1 (ವಾಲ್ಯೂಮ್-1)ರ ಅಡಿಯಲ್ಲಿ ಬರುವ ನಿಯಮ 114 ಹಾಗೂ ನಿಯಮ 115ರ ಪ್ರಕಾರ, ರೈಲು ವಿಳಂಬವಾಗಿದ್ದಕ್ಕೆ ರೈಲ್ವೇಸ್ನಿಂದ ಯಾವುದೇ ಪರಿಹಾರ ಪಾವತಿಸುವುದು ಬೇಕಾಗಿಲ್ಲ ಎಂದಿದ್ದರು. ಆದರೆ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರೀಯ ಗ್ರಾಹಕ ವೇದಿಕೆಯು ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು. ಶೇ 9ರ ಬಡ್ಡಿಯೊಂದಿಗೆ 30 ಸಾವಿರ ರೂಪಾಯಿ ಪಾವತಿ ಮಾಡುವಂತೆ ಗ್ರಾಹಕ ವೇದಿಕೆಯಿಂದ ಆದೇಶ ನೀಡಲಾಗಿತ್ತು.
ಇದನ್ನೂ ಓದಿ: Maruti Suzuki India Limited: ಮಾರುತಿ ಸುಜುಕಿಗೆ 200 ಕೋಟಿ ರೂಪಾಯಿ ದಂಡ ವಿಧಿಸಿದ ಸಿಸಿಐ
(Supreme Court Directs Indian Railways To Pay Compensation Of Rs 30000 For Customer Faced Inconvenience By Train Delay)