Production Linked Incentive: ಟೆಕ್ಸ್‌ಟೈಲ್ ಕ್ಷೇತ್ರಕ್ಕೆ 10,683 ಕೋಟಿ ರೂಪಾಯಿ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್
ಟೆಕ್ಸ್‌ಟೈಲ್ ವಲಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಸಂಪುಟವು ರೂ. 10683 ಕೋಟಿಯ ಉತ್ಪಾದನೆ ಆಧಾರಿತ ಪ್ರೋತ್ಸಾಹಕ (Production Linked Incentive)ಕ್ಕೆ ಅನುಮೋದನೆ ನೀಡಿದೆ.
ಮನುಷ್ಯ ನಿರ್ಮಿತ ಫೈಬರ್ಗಳು ಮತ್ತು ತಾಂತ್ರಿಕ ಜವಳಿ ಕ್ಷೇತ್ರಗಳಿಗೆ ಉತ್ಪಾದನೆ-ಸಂಬಂಧಿತ ಪ್ರೋತ್ಸಾಹಕ (ಪಿಎಲ್‌ಐ- ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್) ಯೋಜನೆಯನ್ನು ಕೇಂದ್ರ ಸಂಪುಟ ಬುಧವಾರ (ಸೆಪ್ಟೆಂಬರ್ 8, 2021) ಅನುಮೋದಿಸಿದೆ. ಮುಂದಿನ ಐದು ವರ್ಷಗಳಲ್ಲಿ ನಡೆಸಲು ಈ ಯೋಜನೆಯು 7.5 ಲಕ್ಷ ಹೊಸ ಉದ್ಯೋಗಗಳನ್ನು ತರುವ, ಮತ್ತು ಭಾರತೀಯ ಉತ್ಪಾದಕರು ಹತ್ತಿ ಜವಳಿಗಳಿಂದ ಜಾಗತಿಕ ಟೆಕ್ಸ್‌ಟೈಲ್ ಉತ್ಪಾದನೆಯ ಮೂರನೇ ಎರಡರಷ್ಟು ಭಾಗವನ್ನು ಈ ಹೊಸ ಉತ್ಪನ್ನಗಳಿಗೆ ಬದಲಾಯಿಸಲು ಸಹಾಯ ಮಾಡುವ ನಿರೀಕ್ಷೆಯಿದೆ ಎಂದು ಜವಳಿ ಸಚಿವ ಪಿಯೂಷ್ ಗೋಯೆಲ್ ಸೆಪ್ಟೆಂಬರ್ 8ರಂದು ಹೇಳಿದ್ದಾರೆ. ಈ ಉತ್ಪನ್ನಗಳ ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ಜಾಗತಿಕವಾಗಿ ಉಡುಪುಗಳು ಹಾಗೂ ಜವಳಿಗಳ ಅತಿದೊಡ್ಡ ಮೂಲಗಳಲ್ಲಿ ಒಂದಾದ ಭಾರತದ ಸ್ಥಾನವನ್ನು ಮರಳಿ ಪಡೆಯುವುದು ಈ ಯೋಜನೆಯ ಗುರಿಯಾಗಿದೆ. ಭಾರತವು ಜಾಗತಿಕವಾಗಿ ಅತಿದೊಡ್ಡ ಉತ್ಪಾದಕ ಪೈಕಿ ಒಂದಾಗಿದ್ದರೂ ಕಳೆದ ದಶಕದಲ್ಲಿ ಬಾಂಗ್ಲಾದೇಶ ಮತ್ತು ಥಾಯ್ಲೆಂಡ್‌ನಂತಹ ಸಣ್ಣ ರಾಷ್ಟ್ರಗಳು ಮುಂದೆ ಹೋಗಿವೆ. ಇದರಿಂದ ಜಾಗತಿಕ ಉತ್ಪಾದನೆ ಮತ್ತು ರಫ್ತಿನಲ್ಲಿ ಭಾರತದ ಪಾಲು ನಿರಂತರವಾಗಿ ಕುಸಿಯುತ್ತಿದೆ.
ಈಗ ಅರ್ಹ ಉತ್ಪಾದಕರನ್ನು ಪ್ರೋತ್ಸಾಹಿಸಲು ಹೊಸ PLI ಪ್ರಸ್ತಾಪಿಸಲಾಗಿದೆ. ಹೆಚ್ಚುತ್ತಿರುವ ಉತ್ಪಾದನೆಯ ಮೇಲೆ ಶೇ 3ರಿಂದ ಶೇ 11ರಷ್ಟು ಪ್ರೋತ್ಸಾಹಧನವನ್ನು ಪಾವತಿಸುತ್ತದೆ. ಒಂದು, 100 ಕೋಟಿ ರೂಪಾಯಿ, ಮತ್ತೊಂದು ರೂ. 300 ಕೋಟಿ ಹೀಗೆ ಇದು ಎರಡು ವರ್ಗಗಳ ಹೂಡಿಕೆಯನ್ನು ಹೊಂದಿದೆ. “ಪ್ರೋತ್ಸಾಹಕಗಳನ್ನು ಹಂಚಿಕೆ ಮಾಡುವಾಗ ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಮತ್ತು ಶ್ರೇಣಿ- III ಮತ್ತು ಶ್ರೇಣಿ- IVರಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸುವ ಕಂಪೆನಿಗಳಿಗೆ ಆದ್ಯತೆ ನೀಡಲಾಗುವುದು. ಸೃಷ್ಟಿಯಾದ ಉದ್ಯೋಗಗಳ ಸಂಖ್ಯೆಯನ್ನು ಸಹ ಪರಿಗಣಿಸಲಾಗುತ್ತದೆ,” ಎಂದು ಗೋಯೆಲ್ ಹೇಳಿದ್ದಾರೆ.
ಅನುಕೂಲದ ನಿರೀಕ್ಷೆಯಲ್ಲಿ ಪ್ರಮುಖ ರಾಜ್ಯಗಳು ಗುಜರಾತ್, ಉತ್ತರಪ್ರದೇಶ, ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಒಡಿಶಾ ಅಗ್ರ ಪಂಕ್ತಿಯಲ್ಲಿ ಇರುವ ರಾಜ್ಯಗಳಾಗಿದ್ದು, ಇದರ ಲಾಭವನ್ನು ನಿರೀಕ್ಷಿಸುತ್ತಿವೆ ಎನ್ನಲಾಗಿದೆ. ಆದರೆ ಇತರ ರಾಜ್ಯಗಳು ಸಹ ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯೋಜನೆಗಳನ್ನು ತಂದು, ಇದಕ್ಕೆ ಸೇರ್ಪಡೆ ಮಾಡಬೇಕು ಎಂದು ಹೇಳಲಾಗಿದೆ. ಈ ಯೋಜನೆಯ ಮೂಲಕವಾಗಿ ಸಾಂಪ್ರದಾಯಿಕ ಜವಳಿಗಳಿಂದ ಜಾಗತಿಕವಾಗಿ ಹೆಚ್ಚು ಬೇಡಿಕೆಯಿರುವ ಉತ್ಪನ್ನಗಳಿಗೆ ಬದಲಾಗಲು ಸರ್ಕಾರ ಬಯಸುತ್ತದೆ. ಹೆಚ್ಚಿನ ಉಡುಪುಗಳ ತಯಾರಿಕೆಯು MMF ಮೇಲೆ ಅವಲಂಬಿತವಾಗಿವೆ. ಗ್ರಾಹಕರ ಅಭಿರುಚಿ ಮತ್ತು ಕಾರ್ಪೊರೇಟ್ ಬೇಡಿಕೆಗಳಿಗೆ ಪೂರಕವಾದ ಉತ್ಪನ್ನಗಳು ಮತ್ತು ಉತ್ಪಾದನಾ ವಿಧಾನಗಳಿಗೆ ಬದಲಾಗುವ ಮೂಲಕ ಭಾರತವು ಸ್ಪರ್ಧಾತ್ಮಕ ಆರ್ಥಿಕತೆಯನ್ನು ಶೀಘ್ರವಾಗಿ ಹೊಂದಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಭಾರತದ ಸಾಂಪ್ರದಾಯಿಕ ಜವಳಿ ರಫ್ತು ಪ್ರಮಾಣದಲ್ಲಿ MMF (Man Made Fibre) ಪಾಲು ಕಡಿಮೆ ಉಳಿದಿದೆ. ಎಲ್ಲ ಟೆಕ್ಸ್‌ಟೈಲ್ ಉತ್ಪನ್ನಗಳಲ್ಲಿ ಕೇವಲ ಐದನೇ ಒಂದು ಭಾಗ MMF ಆಗಿದ್ದು, ಉಳಿದವು ಹತ್ತಿಯಾಗಿವೆ. ಕುತೂಹಲಕಾರಿ ಸಂಗತಿ ಏನೆಂದರೆ, ಜಾಗತಿಕವಾಗಿ ಟ್ರೆಂಡ್ ಇದಕ್ಕೆ ವಿರುದ್ಧವಾಗಿದೆ.
MITRA ಯೋಜನೆ ಘೋಷಣೆ ಈ ಹಿಂದೆ, ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಹಾಗೂ ಪ್ಲಗ್ ಮತ್ತು ಪ್ಲೇ ಸೌಲಭ್ಯಗಳೊಂದಿಗೆ ಒಂದೇ ಸ್ಥಳದಲ್ಲಿ ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಸೃಷ್ಟಿಸಲು ಈ ವಲಯದಲ್ಲಿ ದೊಡ್ಡ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯನ್ನು ಆಕರ್ಷಿಸಲು ಸರ್ಕಾರವು ಮೆಗಾ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ ರೀಜಿಯನ್ ಅಂಡ್ ಪಾರ್ಕ್ಸ್ ಯೋಜನೆಯನ್ನು (MITRA) ಘೋಷಿಸಿತ್ತು. ಇದರಿಂದಾಗಿ ಜವಳಿ ಉದ್ಯಮವು ಗಾತ್ರ ಮತ್ತು ಪ್ರಮಾಣವನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ. ಆ ಮೂಲಕ ಜಾಗತಿಕವಾಗಿ ಸ್ಪರ್ಧಾತ್ಮಕವಾಗುತ್ತದೆ ಮತ್ತು ರಫ್ತಿನಲ್ಲಿ ಜಾಗತಿಕ ಚಾಂಪಿಯನ್‌ಗಳನ್ನು ಸೃಷ್ಟಿಸುತ್ತದೆ. ಈ ಯೋಜನೆಯಡಿಯಲ್ಲಿ 7 ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ಗಳನ್ನು 3 ವರ್ಷಗಳಲ್ಲಿ ಸ್ಥಾಪಿಸಲಾಗುವುದು.
ಇದನ್ನೂ ಓದಿ: ಮೊಬೈಲ್ ಉತ್ಪಾದನೆಯಲ್ಲಿ ಚೀನಾವನ್ನು ನಾವು ಹಿಂದಿಕ್ಕಲಿದ್ದೇವೆ: ರವಿಶಂಕರ್ ಪ್ರಸಾದ್
(Central Cabinet Approved Rs 10683 Crore Production Linked Incentive Related To Textile Industry)