Adani: ಅದಾನಿ ಪ್ರಕರಣದ ತನಿಖೆ: ಸೆಬಿಗೆ 6 ತಿಂಗಳು ಕಾಲಾವಕಾಶ ಕೊಡಲು ಸುಪ್ರೀಂ ನಕಾರ; 3 ತಿಂಗಳೊಳಗೆ ಮುಗಿಸಲು ಸೂಚನೆ
Supreme Court: ಅದಾನಿ ಗ್ರೂಪ್ ಮತ್ತು ಹಿಂಡನ್ಬರ್ಗ್ ಪ್ರಕರಣದ ತನಿಖೆ ನಡೆಸುತ್ತಿರುವ ಸೆಬಿಗೆ 6 ತಿಂಗಳು ಹೆಚ್ಚುವರಿ ಕಾಲಾವಕಾಶ ನೀಡಲು ಸುಪ್ರೀಮ್ ಕೋರ್ಟ್ ನಿರಾಕರಿಸಿದೆ. ಮೇ 15, ಸೋಮವಾರ ನ್ಯಾಯಾಲಯ ಅಂತಿಮ ತೀರ್ಮಾನ ಮಾಡಲಿದೆ.
ನವದೆಹಲಿ: ಅದಾನಿ ಗ್ರೂಪ್ ಕಂಪನಿ ವಿರುದ್ಧ ಹಿಂಡನ್ಬರ್ಗ್ ರಿಸರ್ಚ್ ಸ್ಫೋಟಕ ವರದಿ (Hindenburg Research Report) ಬಿಡುಗಡೆ ಮಾಡಿದ ಪ್ರಕರಣದ ತನಿಖೆ ನಡೆಸುತ್ತಿರುವ ಸೆಬಿಗೆ 6 ತಿಂಗಳು ಹೆಚ್ಚುವರಿ ಕಾಲಾವಕಾಶ ಕೊಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಸೆಬಿ (SEBI- Securities and Exchange Board of India) ಸಲ್ಲಿಸಿದ ಮನವಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ನ್ಯಾಯಪೀಠ, ಆರು ತಿಂಗಳು ಸಾಧ್ಯವಿಲ್ಲ, ಮೂರು ತಿಂಗಳು ಮಾತ್ರ ಸಮಯ ವಿಸ್ತರಣೆ ಸಾಧ್ಯವಾಗಬಹುದು ಎಂದು ಹೇಳಿದೆ. ಮುಂದಿನ ಸೋಮವಾರ, ಅಂದರೆ ಮೇ 15ರಂದು ಮತ್ತೆ ವಿಚಾರಣೆ ನಡೆಯಲಿದ್ದು ಆಗ ಅದಾನಿ ಗ್ರೂಪ್ ಪ್ರಕರಣದ ತನಿಖೆ ಪೂರ್ಣಗೊಳಿಸಲು ಸೆಬಿಗೆ ಎಷ್ಟು ಸಮಯಾವಕಾಶ ಕೊಡಲಾಗುತ್ತದೆ ಎಂಬುದು ಸ್ಪಷ್ಟವಾಗಲಿದೆ. ಮುಖ್ಯ ನ್ಯಾಯಮೂರ್ತಿ ಡಾ. ಡಿ.ವೈ. ಚಂದ್ರಚೂಡ್ ನೇತೃತ್ವದ ಹಾಗು ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ ಮತ್ತು ಜೆಬಿ ಪರ್ದಿವಾಲ ಅವರಿರುವ ತ್ರಿಸದಸ್ಯ ನ್ಯಾಯಪೀಠ ಈ ವಿಚಾರಣೆ ನಡೆಸುತ್ತಿದೆ.
ಶಾರ್ಟ್ಸೆಲ್ಲರ್ ಕಂಪನಿ ಹಿಂಡನ್ಬರ್ಗ್ ರಿಸರ್ಚ್ ಜನವರಿ 24ರಂದು ಅದಾನಿ ಗ್ರೂಪ್ ಕಂಪನಿ ವಿರುದ್ಧ ಹಲವು ಅಕ್ರಮ ಚಟುವಟಿಕೆಗಳ ಆರೋಪ ಹೊರಿಸಿ ಸ್ಫೋಟಕ ವರದಿ ಬಿಡುಗಡೆ ಮಾಡಿತ್ತು. ಅದಾನಿ ಗ್ರೂಪ್ ಕಂಪನಿಗಳ ಷೇರುಮೌಲ್ಯ ಹೆಚ್ಚಿಸುವ ಸಲುವಾಗಿ ಅಕ್ರಮ ಮಾರ್ಗ ಅನುಸರಿಸಲಾಗಿದೆ. ಜನರಿಗೆ ಸುಳ್ಳು ಮಾಹಿತಿ ಕೊಡಲಾಗಿದೆ ಎಂಬಿತ್ಯಾದಿ ಗುರುತರ ಆರೋಪಗಳನ್ನು ಮಾಡಿತ್ತು. ಅದಾದ ಬೆನ್ನಲ್ಲೇ ಅದಾನಿ ಗ್ರೂಪ್ ಕಂಪನಿಗಳ ಷೇರುಗಳು ಪ್ರಪಾತಕ್ಕೆ ಬಿದ್ದಿದ್ದವು. ಗೌತಮ್ ಅದಾನಿ ಲಕ್ಷಲಕ್ಷ ಕೋಟಿ ರೂ ಮೌಲ್ಯದ ಷೇರುಸಂಪತ್ತು ಕರಗಿದವು.
ಇದನ್ನೂ ಓದಿ: Twitter: ಕೊನೆಗೂ ಇಲಾನ್ ಮಸ್ಕ್ ಕೈಗೆ ಸಿಕ್ರು ಹೊಸ ಸಿಇಒ; ಟ್ವಿಟ್ಟರ್ ಮಾಲೀಕನಿಗೆ ಮುಂದೇನು ಕೆಲಸ?
ಸುಪ್ರೀಂಕೋರ್ಟ್ ಮಾರ್ಚ್ 2ರಂದು ಅದಾನಿ ಗ್ರೂಪ್ ಮತ್ತು ಹಿಂಡನ್ಬರ್ಗ್ ವರದಿ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಷೇರು ಮಾರುಕಟ್ಟೆ ಪ್ರಾಧಿಕಾರ ಸೆಬಿಗೆ ಸೂಚಿಸಿತು. ಒಂದು ತಿಂಗಳೊಳಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ತಿಳಿಸಿತು. ಆದರೆ, ಇಂಥ ಪ್ರಕರಣಗಳಲ್ಲಿ ಸರಿಯಾಗಿ ತನಿಖೆ ನಡೆಸಿ ವರದಿ ಸಲ್ಲಿಸಲು ಸರಾಸರಿಯಾಗಿ 15 ತಿಂಗಳು ಬೇಕಾಗುತ್ತದೆ. ತನಗೆ 6 ತಿಂಗಳಾದರೂ ಗಡುವು ವಿಸ್ತರಿಸಿ ಎಂದು ಸುಪ್ರೀಂಕೋರ್ಟ್ ಬಳಿ ಸೆಬಿ ಅರಿಕೆ ಮಾಡಿಕೊಂಡಿದೆ. ಅದಕ್ಕಾಗಿ ಅಮೆರಿಕದಲ್ಲಿ ಆಗಿರುವ ಇಂಥ ಪ್ರಕರಣಗಳ ತನಿಖೆಯ ನಿದರ್ಶನಗಳನ್ನು ಸೆಬಿ ಮುಂದಿಟ್ಟಿತ್ತು.
ಶುಕ್ರವಾರ ನಡೆದ ವಿಚಾರಣೆಯಲ್ಲಿ, ಸೆಬಿಗೆ ತನಿಖೆ ನಡೆಸಲು 6 ತಿಂಗಳು ಕಾಲಾವಕಾಶ ಹೆಚ್ಚಿಸಲು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ನಿರಾಸಕ್ತಿ ತೋರಿದೆ. ಸೋಮವಾರ ಅಂತಿಮ ನಿರ್ಧಾರ ತೆಗೆದುಕೊಳ್ಳಬಹುದು. ಕೆಲ ವರದಿಗಳ ಪ್ರಕಾರ ಸೆಬಿಗೆ 3 ತಿಂಗಳು ಹೆಚ್ಚಿಗೆ ಸಮಯ ಸಿಗಬಹುದು. ಇನ್ನೂ ಕೆಲ ವರದಿಗಳ ಪ್ರಕಾರ ಎರಡು ತಿಂಗಳು ಮಾತ್ರ ಸಮಯ ವಿಸ್ತರಣೆ ಆಗಬಹುದು.