AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಲ್ದಿರಾಮ್ಸ್ ಖರೀದಿಸಲು ಟಾಟಾ ಯತ್ನ; ದುಬಾರಿ ಬೆಲೆ ಕೇಳಿ ಹಿಂದೇಟು; ಆದರೆ, ಮಾತುಕತೆಯೇ ಆಗಿಲ್ಲ ಎನ್ನುತ್ತಿದೆ ಸ್ನ್ಯಾಕ್ಸ್ ಕಂಪನಿ

Tata vs Haldiram's: ಭಾರತದ ಪ್ರಮುಖ ಸ್ನ್ಯಾಕ್ಸ್ ಕಂಪನಿ ಹಲ್ದಿರಾಮ್ಸ್​ನ ಶೇ. 51ಕ್ಕಿಂತಲೂ ಹೆಚ್ಚು ಪಾಲನ್ನು ಖರೀದಿಸಲು ಟಾಟಾ ಕನ್ಸೂಮರ್ ಘಟಕ ಮುಂದಾಗಿರುವ ಸುದ್ದಿಯನ್ನು ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ, ಹಲ್ದಿರಾಮ್ಸ್ 10 ಬಿಲಿಯನ್ ಡಾಲರ್ ವ್ಯಾಲ್ಯುಯೇಶನ್ ನೀಡಿರುವುದು ಟಾಟಾ ಹಿಂದೇಟುಹಾಕುವಂತೆ ಮಾಡಿದೆ. ಇದೇ ವೇಳೆ, ಟಾಟಾ ಜೊತೆ ಯಾವ ಮಾತುಕತೆಯೂ ಆಗಿಲ್ಲ ಎಂದು ಹಲ್ದಿರಾಮ್ಸ್ ಹೇಳಿದೆ.

ಹಲ್ದಿರಾಮ್ಸ್ ಖರೀದಿಸಲು ಟಾಟಾ ಯತ್ನ; ದುಬಾರಿ ಬೆಲೆ ಕೇಳಿ ಹಿಂದೇಟು; ಆದರೆ, ಮಾತುಕತೆಯೇ ಆಗಿಲ್ಲ ಎನ್ನುತ್ತಿದೆ ಸ್ನ್ಯಾಕ್ಸ್ ಕಂಪನಿ
ಹಲ್ದಿರಾಮ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 07, 2023 | 12:38 PM

Share

ನವದೆಹಲಿ, ಸೆಪ್ಟೆಂಬರ್ 7: ಭಾರತದ ಜನಪ್ರಿಯ ಸ್ನ್ಯಾಕ್ಸ್ ಕಂಪನಿ ಹಲ್ದಿರಾಮ್ಸ್ (Haldiram’s) ಅನ್ನು ಖರೀದಿಸಲು ಟಾಟಾ ಗ್ರೂಪ್​ನ ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್ (Tata consumer products) ಕಂಪನಿ ಮುಂದಾಗಿದೆ. ರಾಯ್ಟರ್ಸ್ ವರದಿ ಪ್ರಕಾರ, ಹಲ್ದಿರಾಮ್ಸ್ ಕಂಪನಿಯ ಕನಿಷ್ಠ ಶೇ. 51ರಷ್ಟು ಪಾಲನ್ನು ಖರೀದಿಸಲು ಟಾಟಾ ಕಂಪನಿ ಉದ್ದೇಶಿಸಿದೆ. ಆದರೆ, ಹಲ್ದಿರಾಮ್ ಕಂಪನಿ ಪ್ರಸ್ತುತಪಡಿಸಿರುವ ದರದ ಬಗ್ಗೆ ಟಾಟಾ ಕನ್ಸೂಮರ್ ಅಸಮಾಧಾನ ಹೊಂದಿದೆ. ಹೀಗಾಗಿ, ಟಾಟಾ ಮತ್ತು ಹಲ್ದಿರಾಮ್ ನಡುವಿನ ಒಪ್ಪಂದ ಬೇಗ ಮುಂದುವರಿಯುತ್ತಿಲ್ಲ. ಒಂದು ವೇಳೆ, ಈ ಡೀಲ್ ನೆರವೇರಿದಲ್ಲಿ ಭಾರತದ ಆಹಾರ ರೀಟೇಲ್ ಉದ್ಯಮದಲ್ಲಿ ರಿಲಾಯನ್ಸ್ ರೀಟೇಲ್ ಮತ್ತು ಪೆಪ್ಸಿ ಕಂಪನಿಗಳ ಜೊತೆ ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್ ನೇರ ಪೈಪೋಟಿ ನಡೆಸಲು ಸಾಧ್ಯವಾಗಬಹುದು.

ಇದೇ ವೇಳೆ, ಟಾಟಾ ಕಂಪನಿಗೆ ಮಾರಾಟವಾಗಲಿರುವ ಸುದ್ದಿಯನ್ನು ಹಲ್ದಿರಾಮ್ ತಳ್ಳಿಹಾಕಿದೆ. ಟಾಟಾ ಕನ್ಸೂಮರ್ ಕಂಪನಿಗೆ ಶೇ. 51ರಷ್ಟು ಪಾಲು ಮಾರಲು ತಾನು ಮುಂದಾಗಿಲ್ಲ. ಟಾಟಾ ಕಂಪನಿ ಜೊತೆ ಮಾತುಕತೆ ನಡೆಸಿಲ್ಲ ಎಂದು ಹಲ್ದಿರಾಮ್ಸ್ ಸಂಸ್ಥೆ ಸ್ಪಷ್ಟಪಡಿಸಿದೆ. ಆದರೆ, ಹಲ್ದಿರಾಮ್ಸ್ ತನ್ನ ಶೇ. 10ರಷ್ಟು ಪಾಲನ್ನು ಬೇನ್ ಕ್ಯಾಪಿಟಲ್ ಸಂಸ್ಥೆಗೆ ಮಾರಲು ಮುಂದಾಗಿರುವ ಸುದ್ದಿಯೂ ಇದೆ. ಇದನ್ನು ಹಲ್ದಿರಾಮ್ಸ್ ಕೂಡ ನಿರಾಕರಿಸಿಲ್ಲ.

ಇದನ್ನೂ ಓದಿ: ಷೇರುಮಾರುಕಟ್ಟೆಗೆ ಪ್ರವೇಶಿಸುವ ಮುನ್ನ ಓಯೋ ಕಂಪನಿ ಸಿಇಒ ಸೇರಿದಂತೆ ಇಬ್ಬರು ಹಿರಿಯ ಅಧಿಕಾರಿಗಳ ನಿರ್ಗಮನ

ಹಲ್ದಿರಾಮ್ ಕೊಟ್ಟಿರುವುದು 10 ಬಿಲಿಯನ್ ಡಾಲರ್ ವ್ಯಾಲ್ಯುಯೇಶನ್

ರಾಯ್ಟರ್ಸ್ ವರದಿ ಪ್ರಕಾರ, ಹಲ್ದಿರಾಮ್ಸ್ ಸಂಸ್ಥೆ ತನ್ನ ಮೌಲ್ಯವನ್ನು 10 ಬಿಲಿಯನ್ ಡಾಲರ್ ಎಂದು ನಿಗದಿ ಮಾಡಿದೆ. ಅಂದರೆ, 83,000 ಕೋಟಿ ರೂ ಮೌಲ್ಯದ ಕಂಪನಿ ಎಂದು ಹಲ್ದಿರಾಮ್ಸ್ ತೋರಿಸಿಕೊಂಡಿದೆ. ಇದು ಬಹಳ ದೊಡ್ಡ ಮೊತ್ತದ ವ್ಯಾಲ್ಯುಯೇಶನ್ ಎಂಬುದು ಟಾಟಾ ಗ್ರೂಪ್ ಭಾವನೆ. ಹಲ್ದಿರಾಮ್ಸ್ ಸಂಸ್ಥೆಯ ಒಂದು ವರ್ಷದ ಆದಾಯ 1.5 ಬಿಲಿಯನ್ ಡಾಲರ್ ಇದೆ. ಹೀಗಾಗಿ, ಕಂಪನಿಯ 10 ಬಿಲಿಯನ್ ಡಾಲರ್ ಮೌಲ್ಯ ಹೆಚ್ಚಾಯಿತು ಎಂದು ಟಾಟಾ ಕಂಪನಿ ಹಿಂದೇಟು ಹಾಕುತ್ತಿದೆ.

ಹಲ್ದಿರಾಮ್ಸ್ ಸಂಸ್ಥೆ ಷೇರುಪೇಟೆಯಲ್ಲಿ ಲಿಸ್ಟ್ ಆಗಿಲ್ಲ. ಇನ್ನೂ ಖಾಸಗಿ ಒಡೆತನದಲ್ಲಿರುವ ಕಂಪನಿಯಾಗಿದೆ. 1937ರಲ್ಲಿ ಸಣ್ಣ ಅಂಗಡಿಯೊಂದರಿಂದ ಆರಂಭವಾದ ಹಲ್ದಿರಾಮ್ಸ್ ಸಂಸ್ಥೆ ಭಾರತದ ಸ್ನ್ಯಾಕ್ಸ್​ ಮಾರುಕಟ್ಟೆಯಲ್ಲಿ ಪ್ರಮುಖ ಆಟಗಾರನಾಗಿ ಬೆಳೆದಿದೆ. ಭಾರತೀಯ ಸ್ನ್ಯಾಕ್ಸ್ ಮಾರುಕಟ್ಟೆಯಲ್ಲಿ ಹಲ್ದಿರಾಮ್ಸ್ ಉತ್ಪನ್ನಗಳು ಶೇ. 13ರಷ್ಟು ಪಾಲು ಹೊಂದಿವೆ. ಸಿಂಗಾಪುರ ಮತ್ತು ಅಮೆರಿಕದ ಮಾರುಕಟ್ಟೆಗಳಲ್ಲೂ ಹಲ್ದಿರಾಮ್ಸ್ ಉತ್ಪನ್ನಗಳು ಮಾರಾಟವಾಗುತ್ತವೆ.

ಇದನ್ನೂ ಓದಿ: ಇತಿಹಾಸದಲ್ಲೇ ಅತ್ಯಂತ ಕಡಿಮೆ ಮೌಲ್ಯಕ್ಕೆ ಇಳಿದ ರುಪಾಯಿ; ಈ ಪರಿ ಕುಸಿತಕ್ಕೆ ಕಾರಣಗಳೇನು?

ಪೆಪ್ಸಿ ಕಂಪನಿಯ ಲೇಸ್ ಚಿಪ್ಸ್ ಕೂಡ ಶೇ. 13ರಷ್ಟು ಪಾಲು ಹೊಂದಿದೆ. ಇನ್ನೊಂದೆಡೆ, ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್ ಬಳಿ ಸ್ನ್ಯಾಕ್ಸ್ ಉತ್ಪನ್ನಗಳಿಲ್ಲ. ಚಹಾ, ಉಪ್ಪು ಇತ್ಯಾದಿ ಉತ್ಪನ್ನಗಳಿವೆ. ಹಲ್ದಿರಾಮ್ಸ್ ಅನ್ನು ಪಡೆಯುವಲ್ಲಿ ಟಾಟಾ ಯಶಸ್ವಿಯಾದರೆ 6.2 ಬಿಲಿಯನ್ ಮೊತ್ತದ ಸ್ನ್ಯಾಕ್ಸ್ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಲು ಸಾಧ್ಯವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:37 pm, Thu, 7 September 23