
ನವದೆಹಲಿ, ಸೆಪ್ಟೆಂಬರ್ 17: ಟಾಟಾ ಸನ್ಸ್ ಸಂಸ್ಥೆಯ (Tata Sons) ಕಾರ್ಯಾಧ್ಯಕ್ಷ ಸ್ಥಾನದಲ್ಲಿ (Executive Chairman) ಮುಂದುವರಿಯಲು ಬಯಸುವುದಿಲ್ಲ ಎಂದು ನಿರ್ಗಮಿಸುತ್ತಿದ್ದ ಎನ್ ಚಂದ್ರಶೇಖರನ್ (N Chandrasekaran) ಅವರನ್ನು ಸಂಸ್ಥೆಯು ಟಾಟಾ ಮಾಡದೆ ಮತ್ತೆ ಕೈಬೀಸಿ ಕರೆಯುತ್ತಿದೆ. ಟಾಟಾ ಸನ್ಸ್ ಕಂಪನಿಯ ಆಡಳಿತ ಮಂಡಳಿಯು ಎನ್ ಚಂದ್ರಶೇಖರನ್ ಅವರನ್ನು ಮೂರನೇ ಅವಧಿಗೆ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ಮರುನೇಮಕ ಮಾಡಲು ಅನುಮೋದನೆ ನೀಡಿದೆ. ಪ್ರಸ್ತುತ ಅವಧಿಯು ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ, ಅವರ ಅತ್ಯುತ್ತಮ ನಾಯಕತ್ವ ಹಾಗೂ ಸಂಸ್ಥೆಯ ಪ್ರಗತಿಯನ್ನು ಪರಿಗಣಿಸಿ ಮುಂದಿನ ಐದು ವರ್ಷಗಳ ಅವಧಿಗೆ ಈ ಜವಾಬ್ದಾರಿಯನ್ನು ವಹಿಸಲಾಗಿದೆ.
ಎಕ್ಸಿಕ್ಯೂಟಿವ್ ಛೇರ್ಮನ್ ಹುದ್ದೆಯಲ್ಲಿ ನಟರಾಜನ್ ಚಂದ್ರಶೇಖರನ್ ಅವರು ಎರಡು ಅವಧಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅವಧಿಯು 2027ರ ಫೆಬ್ರುವರಿ 20ರಂದು ಅಂತ್ಯಗೊಳ್ಳುತ್ತದೆ. ಅಷ್ಟರೊಳಗೆ ಬೇರೆ ವ್ಯಕ್ತಿಯನ್ನು ಆ ಹುದ್ದೆಗೆ ಹುಡುಕಿಕೊಳ್ಳಿ. ತಾನು ಮೂರನೇ ಅವಧಿಗೆ ಮುಂದುವರಿಯುವುದಿಲ್ಲ ಎಂದು ಚಂದ್ರಶೇಖರನ್ ಹೇಳಿದ್ದರು. ಇದೀಗ ಟಾಟಾ ಸನ್ಸ್ನ ಆಡಳಿತ ಮಂಡಳಿ ಸಭೆಯಲ್ಲಿ ಎನ್ ಚಂದ್ರಶೇಖರನ್ ಅವರ ಮರುನೇಮಕಕ್ಕೆ ಬಹುಮತದಿಂದ ಅನುಮೋದನೆ ಸಿಕ್ಕಿದೆ. ಟಾಟಾ ಟ್ರಸ್ಟ್ಸ್ನ ಮುಖ್ಯಸ್ಥ ನೋಯೆಲ್ ಟಾಟಾ ಅವರೊಬ್ಬರು ಮಾತ್ರ ಮಂಡಳಿಯಲ್ಲಿ ಚಂದ್ರಶೇಖರನ್ ಮರುನೇಮಕಕ್ಕೆ ವಿರೋಧ ವ್ಯಕ್ತಪಡಿಸಿದ ಸದಸ್ಯರಾಗಿದ್ದಾರೆ.
ಇದನ್ನೂ ಓದಿ: ಚೀನಾದ ಟಾಪ್ 10 ಕಾರುಗಳಲ್ಲಿ ಒಂದೂ ಪೆಟ್ರೋಲ್ ಕಾರಿಲ್ಲ; ಹಾಗಾದ್ರೆ ಯಾವ ಕಾರು?
ಟಾಟಾ ಸನ್ಸ್ನಲ್ಲಿ ಮೂರನೇ ಅವಧಿಗೆ ಮುಂದುವರಿಯಲು ಎನ್ ಚಂದ್ರಶೇಖರನ್ ಬಯಸಿದ್ದರೆಂದು ಹೇಳಲಾಗುತ್ತದೆ. ಆದರೆ, ಆಡಳಿತ ಮಂಡಳಿ ಸಭೆಯಲ್ಲಿ ಸರ್ವಾನುಮತದ ಬೆಂಬಲ ಇರಲಿಲ್ಲ. ನೋಯೆಲ್ ಟಾಟಾ ವಿರೋಧ ಮಾಡಿದ್ದರು. ಈ ಕಾರಣಕ್ಕೆ ಚಂದ್ರಶೇಖರನ್ ಅವರು ತಾನು ಮೂರನೇ ಅವಧಿಗೆ ಮುಂದುವರಿಯುವುದಿಲ್ಲ ಎಂದು ಹೇಳಿದ್ದರು. ಆದರೆ, ಟಾಟಾ ಸನ್ಸ್ ಮಂಡಳಿಯ ಇತರ ಸದಸ್ಯರಿಗೆ ಚಂದ್ರಶೇಖರನ್ ಮುಂದುವರಿಯುವುದು ಬೇಕಾಗಿದೆ. ಇಲ್ಲಿಯೂ ನೋಯೆಲ್ ಟಾಟಾ ವಿರೋಧಿಸುತ್ತಿದ್ದಾರೆ.
ಟಾಟಾ ಸನ್ಸ್ನ ಎಕ್ಸಿಕ್ಯೂಟಿವ್ ಛೇರ್ಮನ್ ನೇಮಕ ನಿರ್ಧಾರವನ್ನು ಇಬ್ಬರೂ ನಾಮಿನಿ ಡೈರೆಕ್ಟರ್ಗಳು ಅನುಮೋದನೆ ಮಾಡಬೇಕು. ಇಲ್ಲದಿದ್ದರೆ ಅದು ಅನೂರ್ಜಿತವಾಗುತ್ತದೆ ಎಂಬುದು ನೋಯೆಲ್ ಟಾಟಾ ಅವರ ವಾದ. ಇಬ್ಬರು ನಾಮಿನಿ ನಿರ್ದೇಶಕರಲ್ಲಿ ಅವರೂ ಒಬ್ಬರಾಗಿದ್ದಾರೆ. ತನ್ನ ಸಮ್ಮತಿ ಇಲ್ಲದೆಯೇ ಟಾಟಾ ಸನ್ಸ್ ಬೋರ್ಡ್ ತೆಗೆದುಕೊಂಡಿರುವ ನಿರ್ಧಾರಕ್ಕೆ ಮಾನ್ಯತೆ ಇಲ್ಲ ಎನ್ನುತ್ತಾರೆ ನೋಯೆಲ್ ಟಾಟಾ.
ಇದನ್ನೂ ಓದಿ: ಈ ಕಾನೂನಿನಿಂದ ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧಕ್ಕೆ ಹಿನ್ನಡೆ, ಜಾಗತಿಕ ಇಂಧನ ಮಾರುಕಟ್ಟೆಗೂ ಧಕ್ಕೆ: ಭಾರತ ಪ್ರತಿಕ್ರಿಯೆ
ನೋಯೆಲ್ ಟಾಟಾ ಅವರು ಟಾಟಾ ಟ್ರಸ್ಟ್ಸ್ನ ಅಧ್ಯಕ್ಷರಾಗಿದ್ದಾರೆ. ಈ ಟಾಟಾ ಟ್ರಸ್ಟ್ಸ್ ಸಂಸ್ಥೆಯು ಟಾಟಾ ಸನ್ಸ್ ಅನ್ನು ನಿಯಂತ್ರಿಸುತ್ತದೆ. ಟಾಟಾ ಗ್ರೂಪ್ನ ಎಲ್ಲಾ ಕಂಪನಿಗಳು ಟಾಟಾ ಸನ್ಸ್ ಅಧೀನದಲ್ಲಿ ಬರುತ್ತವೆ. ಅಂತಿಮವಾಗಿ ಇದರ ಪ್ರಮುಖ ಸೂತ್ರಧಾರ ನೋಯೆಲ್ ಟಾಟಾ ಅವರಾಗಿರುತ್ತಾರೆ.
ಟಾಟಾ ಸನ್ಸ್ ಅನ್ನು ಲಿಸ್ಟೆಡ್ ಕಂಪನಿಯಾಗಿ ಮಾಡುವ ಪ್ರಸ್ತಾಪ ಇದೆ. ಇದಕ್ಕೆ ನೋಯೆಲ್ ಟಾಟಾ ಅವರ ವಿರೋಧ ಇದೆ. ಇವೆಲ್ಲವೂ ಕೂಡ ಟಾಟಾ ಸನ್ಸ್ನ ಮುಖ್ಯಸ್ಥರ ಸ್ಥಾನದ ವಿಚಾರದಲ್ಲಿ ಸಂಕೀರ್ಣತೆ ತಂದಿಟ್ಟಿರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ