ಇಬ್ಬರಲ್ಲಿ ಬಹುಮತಕ್ಕೆ ಇಬ್ಬರದ್ದೂ ಮತ ಬೇಕಲ್ಲವಾ? ಚಂದ್ರಶೇಖರನ್ ಮರುನೇಮಕ ನಿರ್ಧಾರ ಪ್ರಶ್ನಿಸಿದ ಟಾಟಾ ಟ್ರಸ್ಟ್ಸ್

ಟಾಟಾ ಸನ್ಸ್​ನ ಎಕ್ಸಿಕ್ಯೂಟಿವ್ ಛೇರ್ಮನ್ ಸ್ಥಾನದಲ್ಲಿ ಎನ್ ಚಂದ್ರಶೇಖರನ್ ಅವರನ್ನು ಮುಂದುವರಿಸಲು ಸಂಸ್ಥೆಯ ಆಡಳಿತ ಮಂಡಳಿ ನಿರ್ಧಾರವನ್ನು ಟಾಟಾ ಟ್ರಸ್ಟ್ಸ್ ವಿರೋಧಿಸಿದೆ. ಚಂದ್ರಶೇಖರನ್ ನೇಮಕ ನಿರ್ಧಾರವನ್ನು 4:1 ಬಹುಮತದಲ್ಲಿ ಮಾಡಲಾಗಿತ್ತು. ಮತ ಚಲಾಯಿಸಿದವರಲ್ಲಿ ಟಾಟಾ ಟ್ರಸ್ಟ್ಸ್​ನ ಇಬ್ಬರು ನಾಮಿನಿ ನಿರ್ದೆಶಕರಿದ್ದಾರೆ. ಈ ಇಬ್ಬರಲ್ಲಿ ನೋಯೆಲ್ ಟಾಟಾ ವಿರೋಧ ಮತವಿದ್ದರೆ, ವೇಣು ಶ್ರೀನಿವಾಸನ್ ಅವರು ಪರವಾಗಿ ಮತ ಹಾಕಿದ್ದರು.

ಇಬ್ಬರಲ್ಲಿ ಬಹುಮತಕ್ಕೆ ಇಬ್ಬರದ್ದೂ ಮತ ಬೇಕಲ್ಲವಾ? ಚಂದ್ರಶೇಖರನ್ ಮರುನೇಮಕ ನಿರ್ಧಾರ ಪ್ರಶ್ನಿಸಿದ ಟಾಟಾ ಟ್ರಸ್ಟ್ಸ್
ಚಂದ್ರಶೇಖರನ್
Image Credit source: PTI

Updated on: Sep 21, 2026 | 11:42 AM

ನವದೆಹಲಿ, ಸೆಪ್ಟೆಂಬರ್ 21: ಟಾಟಾ ಸನ್ಸ್ (Tata Sons) ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಎನ್. ಚಂದ್ರಶೇಖರನ್ (N Chandrasekaran) ಅವರನ್ನು ಮತ್ತೊಂದು ಅವಧಿಗೆ ಮರುನೇಮಕ ಮಾಡುವ ನಿರ್ಧಾರವನ್ನು ಟಾಟಾ ಟ್ರಸ್ಟ್ಸ್ ವಿರೋಧಿಸುವುದನ್ನು ಮುಂದುವರಿಸಿದೆ. ಸೆಪ್ಟೆಂಬರ್ 17ರಂದು ಟಾಟಾ ಸನ್ಸ್ ಆಡಳಿತ ಮಂಡಳಿಯಲ್ಲಿ ಕೈಗೊಂಡ ನಿರ್ಣಯವು “ಕಾನೂನಾತ್ಮಕವಾಗಿ ಅಸಿಂಧು” (Void Ab Initio) ಎಂದು ಟಾಟಾ ಟ್ರಸ್ಟ್ಸ್ (Tata Trusts) ಅಧಿಕೃತವಾಗಿ ಸ್ಪಷ್ಟಪಡಿಸಿದೆ. ಟಾಟಾ ಸನ್ಸ್‌ನಲ್ಲಿ ಶೇ. 66ರಷ್ಟು ಷೇರುಗಳನ್ನು ಹೊಂದಿರುವ ಟಾಟಾ ಟ್ರಸ್ಟ್ಸ್, ಮಂಡಳಿಯ 4:1 ಮತಗಳ ಆಧಾರದ ಮೇಲೆ ತೆಗೆದುಕೊಂಡ ಈ ನಿರ್ಧಾರವು ಕಂಪನಿಯ ನಿಯಮಾವಳಿಗಳಿಗೆ (Articles of Association – AoA) ವಿರುದ್ಧವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇಬ್ಬರಲ್ಲಿ ಬಹುಮತ ಎಂದರೆ ಒಬ್ಬರದ್ದಲ್ಲ, ಇಬ್ಬರದ್ದೂ ಮತ ಬೇಕು

ಟಾಟಾ ಸನ್ಸ್​ನ ಆರ್ಟಿಕಲ್ಸ್ ಆಫ್ ಅಸೋಸಿಯೇಷನ್ (AoA) ನಿಯಮಾವಳಿಗಳ ಪ್ರಕಾರ, ಅಧ್ಯಕ್ಷರ ನೇಮಕ ಅಥವಾ ಮರುನೇಮಕದ ಪ್ರಸ್ತಾವನೆಗೆ ಟಾಟಾ ಟ್ರಸ್ಟ್ಸ್‌ನಿಂದ ನೇಮಕಗೊಂಡ ಇಬ್ಬರೂ ನಿರ್ದೇಶಕರ (Nominee Directors) ಪೂರ್ಣ ಸಮ್ಮತಿ (Affirmative Vote) ಅಗತ್ಯವಿರುತ್ತದೆ ಎಂದು ಟ್ರಸ್ಟ್ಸ್ ವಾದಿಸಿದೆ.

ಇದನ್ನೂ ಓದಿ: ರೈಲ್ವೆ ಸ್ಟೇಷನ್‌ಗಳ ಹೆಸರಿನ ಹಿಂದಿದೆ ಕುತೂಹಲಕಾರಿ ರಹಸ್ಯ: ಜಂಕ್ಷನ್, ಸೆಂಟ್ರಲ್, ಟರ್ಮಿನಸ್ ಹಾಗೂ ಹಾಲ್ಟ್ ಎಂದರೇನು?

4:1 ಮತಗಳ ಲೆಕ್ಕಾಚಾರ ಅನ್ವಯಿಸುವುದಿಲ್ಲ

ಟಾಟಾ ಸನ್ಸ್ ಮಂಡಳಿಯಲ್ಲಿ ಟಾಟಾ ಟ್ರಸ್ಟ್ಸ್ ಪರವಾಗಿ ನೋಯೆಲ್ ಟಾಟಾ (Noel Tata) ಮತ್ತು ವೇಣು ಶ್ರೀನಿವಾಸನ್ ನಿರ್ದೇಶಕರಾಗಿದ್ದಾರೆ. ಮತದಾನದ ವೇಳೆ ವೇಣು ಶ್ರೀನಿವಾಸನ್ ಚಂದ್ರಶೇಖರನ್ ಬೆಂಬಲಕ್ಕೆ ನಿಂತರೆ, ನೋಯೆಲ್ ಟಾಟಾ ಅವರು ವಿರುದ್ಧವಾಗಿ ಮತ ಚಲಾಯಿಸಿದರು. ಇಬ್ಬರಲ್ಲಿ ಒಬ್ಬರು ವಿರೋಧಿಸಿದ್ದರಿಂದ ಟ್ರಸ್ಟ್‌ನ ಕಡ್ಡಾಯ ಷರತ್ತು ಪೂರೈಸಲಾಗಿಲ್ಲ. ಹೀಗಾಗಿ ಮಂಡಳಿಯ ಒಟ್ಟು 4:1 ಮತಗಳ ಬಹುಮತಕ್ಕೆ ಮಾನ್ಯತೆ ಇರುವುದಿಲ್ಲ ಎಂದು ಟ್ರಸ್ಟ್ ಹೇಳಿದೆ.

ಡೆಡ್‌ಲಾಕ್ (Deadlock) ಮತ್ತು ‘ಕ್ಯಾಸ್ಟಿಂಗ್ ವೋಟ್’ ತಪ್ಪು ಬಳಕೆ

ನಿರ್ದೇಶಕರ ನಡುವೆ ಭಿನ್ನಾಭಿಪ್ರಾಯ ಮೂಡಿದಾಗ ಅಧ್ಯಕ್ಷರ ‘ಕ್ಯಾಸ್ಟಿಂಗ್ ವೋಟ್’ (ನಿರ್ಣಾಯಕ ಮತ) ಬಳಸಿ ನಿರ್ಣಯ ಅನುಮೋದಿಸಲಾಗಿದೆ ಎಂಬ ವಾದವನ್ನು ಟ್ರಸ್ಟ್ಸ್ ತಿರಸ್ಕರಿಸಿದೆ. ಕೇವಲ ಒಟ್ಟು ಮತಗಳು ಸಮನಾದಾಗ (Tie) ಮಾತ್ರ ಕ್ಯಾಸ್ಟಿಂಗ್ ವೋಟ್ ಬಳಸಬಹುದು, ಆದರೆ ಟ್ರಸ್ಟ್ ನಿರ್ದೇಶಕರ ಕಡ್ಡಾಯ ಸಮ್ಮತಿಯ ನಿಯಮವನ್ನು ಮೀರಲು ಇದನ್ನು ಬಳಸಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ‘ಮೋದಿ ಸರ್ಕಾರ ಅದ್ಭುತ ಕೆಲಸ ಮಾಡಿದೆ’: ಭಾರತದಲ್ಲಿ ಬದಲಾದ ವಾತಾವರಣದ ಕುರಿತು ಬ್ಲ್ಯಾಕ್‌ಸ್ಟೋನ್ ಅಧ್ಯಕ್ಷ ಜಾನ್ ಗ್ರೇ ಪ್ರಶಂಸೆ

ಮುಂದಿನ ಹಂತವೇನು?

ಆಗಸ್ಟ್‌ನಲ್ಲಿ ಚಂದ್ರಶೇಖರನ್ ಅವರು ತಮ್ಮ ಪ್ರಸ್ತುತ ಅವಧಿ ಮುಗಿದ ನಂತರ (ಫೆಬ್ರವರಿ 2027) ಮುಂದುವರಿಯುವುದಿಲ್ಲ ಎಂದು ತಿಳಿಸಿದ್ದರು. ಆದರೆ ಸೆಪ್ಟೆಂಬರ್ 17ರ ಮಂಡಳಿ ಸಭೆಯಲ್ಲಿ ಅವರ ಮರುನೇಮಕಕ್ಕೆ ಅನುಮೋದನೆ ನೀಡಿದ್ದು ಈಗ ಕಾನೂನು ಸಂಘರ್ಷಕ್ಕೆ ಕಾರಣವಾಗಿದೆ. ಡಿಸೆಂಬರ್ 31ರೊಳಗೆ ನಡೆಯಲಿರುವ ಟಾಟಾ ಸನ್ಸ್‌ನ ಮುಂದಿನ ವಾರ್ಷಿಕ ಮಹಾಸಭೆಯಲ್ಲಿ (AGM) ನಿರ್ದೇಶಕರ ಮರುನೇಮಕಕ್ಕೆ ಷೇರುದಾರರ ಅನುಮೋದನೆ ಅಗತ್ಯವಿರುವುದರಿಂದ, ಟಾಟಾ ಟ್ರಸ್ಟ್ಸ್‌ನ ಈ ನಿಲುವು ಅತ್ಯಂತ ಮಹತ್ವ ಪಡೆದುಕೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us