ಬಂಗಾಳಕ್ಕೆ ಟಾಟಾ ಪೆಟ್ಟು; ನ್ಯಾನೋ ಫ್ಯಾಕ್ಟರಿ ಎತ್ತಂಗಡಿಗೆ 766 ಕೋಟಿ ಪರಿಹಾರ; ಕೋರ್ಟ್ ತೀರ್ಪು
Tata Wins Singur Nano Factory Case: ದಶಕಕ್ಕೂ ಹೆಚ್ಚು ಕಾಲ ನಡೆದ ನ್ಯಾಯ ಹೋರಾಟದಲ್ಲಿ ಟಾಟಾಗೆ ಜಯ ಸಿಕ್ಕಿದೆ. ಭೂ ಪರಿಹಾರ ವಿಚಾರವಾಗಿ ಗಲಭೆಗಳಾಗಿ ಟಾಟಾ ಸಂಸ್ಥೆ ಬಲವಂತವಾಗಿ ಸಿಂಗೂರ್ನಿಂದ ಫ್ಯಾಕ್ಟರಿಯನ್ನು ಗುಜರಾತ್ನ ಸಾನಂದ್ಗೆ ಶಿಫ್ಟ್ ಮಾಡಬೇಕಾಗಿತ್ತು. ಆ ಪ್ರಕರಣದಲ್ಲಿ ಟಾಟಾ ಮೋಟಾರ್ಸ್ ಅನುಭವಿಸಿದ ನಷ್ಟಕ್ಕೆ ಪಶ್ಚಿಮ ಬಂಗಾಳದ ಕೈಗಾರಿಕಾ ಅಭಿವೃದ್ಧಿ ನಿಗಮ (ಡಬ್ಲ್ಯುಬಿಐಡಿಸಿ) ಸಂಸ್ಥೆ 766 ಕೋಟಿ ರೂ ಪರಿಹಾರ ಕೊಡಬೇಕೆಂದು ನ್ಯಾಯಮಂಡಳಿಯೊಂದು ತೀರ್ಪು ನೀಡಿದೆ.
ಕೋಲ್ಕತಾ, ಅಕ್ಟೋಬರ್ 31: ಸರಿಯಾಗಿ 15 ವರ್ಷಗಳ ಹಿಂದೆ ಟಾಟಾ ಮೋಟಾರ್ಸ್ನ ನ್ಯಾನೋ ಕಾರು ಉತ್ಪಾದನಾ ಘಟಕವನ್ನು (Tata nano car factory) ಪಶ್ಚಿಮ ಬಂಗಾಳದಿಂದ ಗುಜರಾತ್ ರಾಜ್ಯಕ್ಕೆ ವರ್ಗಾಯಿಸಲಾಗಿತ್ತು. ಭೂ ಪರಿಹಾರ ವಿಚಾರವಾಗಿ ಗಲಭೆಗಳಾಗಿ ಟಾಟಾ ಸಂಸ್ಥೆ (tata motors) ಬಲವಂತವಾಗಿ ಸಿಂಗೂರ್ನಿಂದ ಫ್ಯಾಕ್ಟರಿಯನ್ನು ಗುಜರಾತ್ನ ಸಾನಂದ್ಗೆ ಶಿಫ್ಟ್ ಮಾಡಬೇಕಾಗಿತ್ತು. ಆ ಪ್ರಕರಣದಲ್ಲಿ ಟಾಟಾ ಮೋಟಾರ್ಸ್ ಅನುಭವಿಸಿದ ನಷ್ಟಕ್ಕೆ ಪಶ್ಚಿಮ ಬಂಗಾಳದ ಕೈಗಾರಿಕಾ ಅಭಿವೃದ್ಧಿ ನಿಗಮ (WBIDC) ಸಂಸ್ಥೆ 766 ಕೋಟಿ ರೂ ಪರಿಹಾರ ಕೊಡಬೇಕೆಂದು ನ್ಯಾಯಮಂಡಳಿಯೊಂದು ತೀರ್ಪು ನೀಡಿದೆ. ದಶಕಕ್ಕೂ ಹೆಚ್ಚು ಕಾಲ ನಡೆದ ನ್ಯಾಯ ಹೋರಾಟದಲ್ಲಿ ಟಾಟಾಗೆ ಜಯ ಸಿಕ್ಕಿದೆ. ಅಂದು ಸಿಂಗೂರ್ನಲ್ಲಿ ರೈತರನ್ನು ಸೇರಿಸಿ ಪ್ರತಿಭಟನೆ ನಡೆಸಿದ್ದ ಇಂದಿನ ಸಿಎಂ ಮಮತಾ ಬ್ಯಾನರ್ಜಿಗೆ ಈ ತೀರ್ಪು ಮುಖಭಂಗ ತಂದಿದೆ. ಇದೇ ವೇಳೆ, ಈ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಾಗಿ ಪಶ್ಚಿಮ ಬಂಗಾಳ ಸರ್ಕಾರ ಹೇಳಿದೆ.
ಏನಿದು ಟಾಟಾ ನ್ಯಾನೋ ಪ್ರಕರಣ?
ಟಾಟಾ ಮೋಟಾರ್ಸ್ ಸಂಸ್ಥೆಯ ನ್ಯಾನೋ ಕಾರು ಅದರ ಮಹತ್ವಾಕಾಂಕ್ಷೆಯ ಯೋಜನೆಯಾಗಿತ್ತು. ವಿಶ್ವದ ಅತಿ ಕಡಿಮೆ ಬೆಲೆಯ ಕಾರು ಎಂಬ ದಾಖಲೆ ಬರೆಯಲೊರಟಿದ್ದ ಟಾಟಾ ಈ ಕಾರಿನ ಮೇಲೆ ಭಾರೀ ನಿರೀಕ್ಷೆ ಇಟ್ಟಿತ್ತು. ಅದರ ಉತ್ಪಾದನೆಗೆ ಪಶ್ಚಿಮ ಬಂಗಾಳದ ಸಿಂಗುರ್ ಪ್ರದೇಶದಲ್ಲಿ 1,000 ಎಕರೆ ಜಾಗವನ್ನು ಅಂದಿನ ಕಮ್ಯೂನಿಸ್ಟ್ ಸರ್ಕಾರ ಕೊಟ್ಟಿತು. 2006ರಲ್ಲಿ ಸರ್ಕಾರದೊಂದಿಗೆ ಟಾಟಾ ಒಪ್ಪಂದ ಮಾಡಿಕೊಂಡಿತು. 2007ರಲ್ಲಿ ಟಾಟಾ ನ್ಯಾನೋ ಫ್ಯಾಕ್ಟರಿ ನಿರ್ಮಿಸತೊಡಗಿತು.
ಇದನ್ನೂ ಓದಿ: ‘ತಪ್ಪಾಗಿಯೂ ಅಲರ್ಟ್ ಬಂದಿರಬಹುದು…’- ಆ್ಯಪಲ್ ಸ್ಪಷ್ಟನೆ; ನೋಟಿಫಿಕೇಶನ್ ಬುಡ ಶೋಧಿಸಲು ಸರ್ಕಾರದಿಂದ ತನಿಖೆ
ಆದರೆ, ವಿಪಕ್ಷ ನಾಯಕಿಯಾಗಿದ್ದ ಮಮತಾ ಬ್ಯಾನರ್ಜಿ ಈ ಫ್ಯಾಕ್ಟರಿಗೆ ವಿರೋಧ ವ್ಯಕ್ತಪಡಿಸಿದ್ದರು. ರೈತರಿಗೆ ಸರಿಯಾಗಿ ಪರಿಹಾರ ಕೊಡದೇ ಭೂಸ್ವಾಧೀನ ಆಗಿದೆ ಎಂದು ಆರೋಪಿಸಿದರು. ಸಿಂಗೂರು ಹಾಗು ಸುತ್ತಮುತ್ತಲಿನ ಗ್ರಾಮದ ಜನರನ್ನು ಸೇರಿಸಿ ನಿರಂತರವಾಗಿ ಪ್ರತಿಭಟನೆ ಮಾಡಿಸಿದರು.
ಸತತ ಪ್ರತಿಭಟನೆ, ಹಿಂಸಾಚಾರಗಳು ನಡೆಯುತ್ತಿರುವಂತೆಯೇ ಟಾಟಾ ಸಂಸ್ಥೆ ತನ್ನ ನ್ಯಾನೋ ಕಾರು ಉತ್ಪಾದನೆ ಘಟಕವನ್ನು ಗುಜರಾತ್ನ ಸಾನಂದ್ಗೆ ವರ್ಗಾವಣೆ ಮಾಡಿತು. ಇದು ಆಗಿದ್ದು 2008ರಲ್ಲಿ. ಆಗ ಗುಜರಾತ್ನಲ್ಲಿ ಅಧಿಕಾರದಲ್ಲಿದ್ದುದು ನರೇಂದ್ರ ಮೋದಿ. ಅಷ್ಟರಲ್ಲಾಗಲೀ ಸಿಂಗುರ್ನಲ್ಲಿ ಫ್ಯಾಕ್ಟರಿಗಾಗಿ ಟಾಟಾ ಮೋಟಾರ್ಸ್ ಬರೋಬ್ಬರಿ 1,000 ಕೋಟಿ ರೂಗೂ ಹೆಚ್ಚು ಖರ್ಚು ಮಾಡಿತ್ತು.
ಹೀಗಾಗಿ, ಸರ್ಕಾರದ ವಿರುದ್ಧ ಟಾಟಾ ಮೋಟಾರ್ಸ್ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಟಾಟಾ ಪರವಾಗಿ ತೀರ್ಪು ಬಂದಿದೆ. ಮೂರು ಸದಸ್ಯರ ನ್ಯಾಯಮಂಡಳಿ ಪೀಠ ನೀಡಿರುವ ತೀರ್ಪನ ಪ್ರಕಾರ ಡಬ್ಲ್ಯುಬಿಐಡಿಸಿಯಿಂದ ಟಾಟಾ 765.7 ಕೋಟಿ ರೂ ಪರಿಹಾರ ಪಡೆಯುವ ಹಕ್ಕು ಹೊಂದಿದೆ. 2016ರ ಸೆಪ್ಟೆಂಬರ್ 1ರಿಂದ ವರ್ಷಕ್ಕೆ ಶೇ. 11ರ ಬಡ್ಡಿದರದಂತೆ ಹಣ ವಸೂಲಿ ಮಾಡಬಹುದು. ಟಾಟಾ ಮೋಟಾರ್ಸ್ನ ಈ ಕೋರ್ಟ್ ವೆಚ್ಚವನ್ನೂ ನಿಗಮವೇ ಭರಿಸಬೇಕು ಎಂದು ನ್ಯಾಯಮಂಡಳಿ ತೀರ್ಪು ನೀಡಿದೆ.
ಇದನ್ನೂ ಓದಿ: ನಾರಾಯಣಮೂರ್ತಿ ಹೇಳಿದ್ದು ಹಂಗಲ್ಲ, ಹಿಂಗೆ: 70 ಗಂಟೆ ಕೆಲಸವನ್ನು ಬಿಡಿಸಿ ವಿವರಿಸಿದ ಟೆಕ್ ಮಹೀಂದ್ರ ಸಿಇಒ ಗುರ್ನಾನಿ
ಮಮತಾಗೆ ತಂದ ಸಿಂಗುರ್ ಬಲ
ಕುತೂಹಲವೆಂದರೆ 2007 ಮತ್ತು 2008ರಲ್ಲಿ ನಡೆದ ಸಿಂಗುರ್ ರೈತರ ಪ್ರತಿಭಟನೆಗಳು ಮಮತಾ ಬ್ಯಾನರ್ಜಿ ಅವರಿಗೆ ರಾಜಕೀಯವಾಗಿ ಜ್ಯಾಕ್ಪಾಟ್ ಕೊಟ್ಟಿತು. ದಶಕಗಳ ಕಾಲ ಸತತವಾಗಿ ಅಧಿಕಾರದಲ್ಲಿದ್ದ ಎಡಪಕ್ಷಗಳು 2011ರ ಚುನಾವಣೆಯಲ್ಲಿ ಧೂಳೀಪಟವಾದವು. ಮಮತಾ ಬ್ಯಾನರ್ಜಜಿ ಏಕ್ಧಮ್ ಸ್ಟಾರ್ ಆಗಿಹೋಗಿದ್ದರು. 2006ರ ಚುನಾವಣೆಯಲ್ಲಿ 30 ಸ್ಥಾನ ಗಳಿಸಿದ್ದ ತೃಣಮೂಲ ಕಾಂಗ್ರೆಸ್, 2011ರ ಚುನಾವಣೆಯಲ್ಲಿ ಬರೋಬ್ಬರಿ 184 ಸ್ಥಾನ ಪಡೆಯಿತು. ಮಮತಾ ಬ್ಯಾನರ್ಜಿ ಆಗ ಸಿಎಂ ಆದವರು ಈಗಲೂ ಅಧಿಕಾರದಲ್ಲಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ