ಈ ಹಬ್ಬದ ಸೀಸನ್ನಲ್ಲಿ ರೀಟೇಲ್ ಮಾರುಕಟ್ಟೆಯಲ್ಲಿ 3.75 ಲಕ್ಷಕೋಟಿ ರೂ ವಹಿವಾಟು; ಇದು ಹೊಸ ದಾಖಲೆ
Traing in Festival Season: ಅಖಿಲ ಭಾರತ ವ್ಯಾಪಾರಿಗಳ ಮಹಾ ಒಕ್ಕೂಟ ಸಿಎಐಟಿ ನೀಡಿರುವ ಮಾಹಿತಿ ಪ್ರಕಾರ ಈ ಸೀಸನ್ನಲ್ಲಿ ಇಲ್ಲಿಯವರೆಗೆ 3.75 ಲಕ್ಷಕೋಟಿ ರೂನಷ್ಟು ರೀಟೇಲ್ ವ್ಯಾಪಾರ ನಡೆದಿರುವುದು ತಿಳಿದುಬಂದಿದೆ. ಹಬ್ಬದ ಸೀಸನ್ ಇನ್ನೂ ಕೆಲ ದಿನಗಳಿವೆ. ಗೋವರ್ಧನ್ ಪೂಜೆ, ತುಳಸಿ ಪೂಜೆ ಇತ್ಯಾದಿ ಹಬ್ಬಗಳಿವೆ. ಇನ್ನೂ 50,000 ಕೋಟಿ ರೂ ಮೌಲ್ಯದ ವ್ಯಾಪಾರವಾಗಬಹುದು ಎಂದು ಸಿಎಐಟಿ ನಿರೀಕ್ಷಿಸಿದೆ.
ನವದೆಹಲಿ, ನವೆಂಬರ್ 14: ಈ ಹಬ್ಬದ ಸೀಸನ್ನಲ್ಲಿ ನಿರೀಕ್ಷೆಗಿಂತಲೂ ಮಿಗಿಲಾಗಿ ವ್ಯಾಪಾರ ವಹಿವಾಟುಗಳು ನಡೆದಿವೆ. ಅಖಿಲ ಭಾರತ ವ್ಯಾಪಾರಿಗಳ ಮಹಾ ಒಕ್ಕೂಟ ಸಿಎಐಟಿ ನೀಡಿರುವ ಮಾಹಿತಿ ಪ್ರಕಾರ ಈ ಸೀಸನ್ನಲ್ಲಿ (festival season) ಇಲ್ಲಿಯವರೆಗೆ 3.75 ಲಕ್ಷಕೋಟಿ ರೂನಷ್ಟು ರೀಟೇಲ್ ವ್ಯಾಪಾರ ನಡೆದಿರುವುದು ತಿಳಿದುಬಂದಿದೆ. ಹಬ್ಬದ ಸೀಸನ್ ಇನ್ನೂ ಕೆಲ ದಿನಗಳಿವೆ. ಗೋವರ್ಧನ್ ಪೂಜೆ, ತುಳಸಿ ಪೂಜೆ ಇತ್ಯಾದಿ ಹಬ್ಬಗಳಿವೆ. ಇನ್ನೂ 50,000 ಕೋಟಿ ರೂ ಮೌಲ್ಯದ ವ್ಯಾಪಾರವಾಗಬಹುದು ಎಂದು ಸಿಎಐಟಿ ನಿರೀಕ್ಷಿಸಿದೆ. ಇದರೊಂದಿಗೆ ಈ ಫೆಸ್ಟಿವಲ್ ಸೀಸನ್ನಲ್ಲಿ ರೀಟೇಲ್ ಮಾರುಕಟ್ಟೆಯಲ್ಲಿ ನಡೆಯುವ ವ್ಯಾಪಾರ ವಹಿವಾಟು ಹೆಚ್ಚೂಕಡಿಮೆ ನಾಲ್ಕೂವರೆ ಲಕ್ಷ ಕೋಟಿ ರೂ ಸಮೀಪ ಇರಬಹುದು.
ದೀಪಾವಳಿಯಲ್ಲಿ ಚೀನಾ ಕೈಸೋಲು, 1ಲಕ್ಷಕೋಟಿ ರೂ ನಷ್ಟ…
ಈ ದೀಪಾವಳಿ ಹಬ್ಬದಲ್ಲಿ ಭಾರತೀಯ ಉತ್ಪನ್ನಗಳೇ ಬಹುತೇಕ ಮಾರಾಟವಾಗಿರುವುದು. ಇದು ನಿಜಕ್ಕೂ ಗಮನಾರ್ಹ ಸಂಗತಿ. ಚೀನಾದ ವಸ್ತುಗಳಿಗೆ ಬೇಡಿಕೆ ಕಡಿಮೆ ಇತ್ತು. ಚೀನಾಗೆ 1 ಲಕ್ಷಕೋಟಿ ರೂಗಿಂತ ಹೆಚ್ಚು ಮೊತ್ತದಷ್ಟು ವ್ಯಾಪಾರನಷ್ಟವಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಅರ್ಜೆಂಟೀನಾದಲ್ಲಿ ಭೀಕರ ಹಣದುಬ್ಬರ; ಉಟ್ಟ ಉಡುಗೆ ಮಾರಿ ಜೀವನ ನಡೆಸಬೇಕಾದ ಸ್ಥಿತಿ
ಕುತೂಹಲ ಎಂದರೆ ಹಿಂದಿನ ದೀಪಾವಳಿ ಹಬ್ಬಗಳಲ್ಲಿ ನಡೆಯುವ ವ್ಯಾಪಾರ ವಹಿವಾಟಿನಲ್ಲಿ ಶೇ. 70ರಷ್ಟು ಚೀನೀ ಉತ್ಪನ್ನಗಳೇ ಆಗಿರುತ್ತಿದ್ದವು. ಈ ವರ್ಷ ಪ್ರಧಾನಿ ಅವರು ದೀಪಾವಳಿ ಹಬ್ಬಕ್ಕೆ ವೋಕಲ್ ಫಾರ್ ಲೋಕಲ್ ಅಭಿಯಾನಕ್ಕೆ ಒತ್ತುಕೊಟ್ಟಿದ್ದರು. ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಪ್ರಕಾರ ಪ್ರಧಾನಿ ಕರೆಗೆ ಜನರು ಓಗೊಟ್ಟು ಭಾರತೀಯ ಉತ್ಪನ್ನಗಳನ್ನು ಹೆಚ್ಚಾಗಿ ಖರೀದಿಸಿದ್ದಾರೆ. ಹಾಗೆಯೇ ವ್ಯಾಪಾರಿಗಳೂ ಕೂಡ ಭಾರತೀಯ ಉತ್ಪನ್ನಗಳಿಗೇ ಹೆಚ್ಚು ಒತ್ತುಕೊಟ್ಟಿದ್ದಾರೆ.
ಈ ಹಬ್ಬದ ಸೀಸನ್ನಲ್ಲಿ ಆದ 3.73 ಲಕ್ಷ ಕೋಟಿ ರೂ ವ್ಯಾಪಾರದಲ್ಲಿ ಆಹಾರ ಮತ್ತು ದಿನಸಿ ವಸ್ತುಗಳು ಮತ್ತು ಬಟ್ಟೆ ಬರೆಗಳು ಅತಿಹೆಚ್ಚು ಮಾರಾಟವಾಗಿವೆ. ಎಲೆಕ್ಟ್ರಾನಿಕ್ ವಸ್ತುಗಳು, ಕಾಸ್ಮೆಟಿಕ್ಸ್ಗಳು, ಗಿಫ್ಟ್ ಐಟಂಗಳು ಉತ್ತಮ ಸೇಲ್ ಕಂಡಿವೆ. ಪ್ಯಾಕಿಂಗ್ ಬಿಸಿನೆಸ್ ಕೂಡ ಉತ್ತಮ ವ್ಯಾಪಾರ ಕಂಡಿದೆಯಂತೆ.
ಇದನ್ನೂ ಓದಿ: ಪೃಥ್ವಿರಾಜ್ ಸಿಂಗ್ ಓಬೇರಾಯ್ ನಿಧನ; ಓಬೇರಾಯ್ ಹೋಟೆಲ್ಗಳಿಗೆ ಹೊಸ ಎತ್ತರ ಕಲ್ಪಿಸಿದ ಧೀಮಂತ
ದೀಪಾವಳಿ ಸೀಸನ್ನಲ್ಲಿ ಆದ ರೀಟೇಲ್ ಟ್ರೇಡಿಂಗ್
ನವೆಂಬರ್ 13ರವರೆಗಿನ ಒಟ್ಟು ವ್ಯಾಪಾರ: 3.73 ಲಕ್ಷ ಕೋಟಿ ರೂ
- ಆಹಾರ, ದಿನಸಿ ವಸ್ತುಗಳು: ಶೇ. 13
- ಬಟ್ಟೆ: ಶೇ. 12
- ಆಭರಣ: ಶೇ. 9
- ಎಲೆಕ್ಟ್ರಾನಿಕ್ಸ್ ವಸ್ತುಗಳು: ಶೇ. 8
- ಗಿಫ್ಟ್: ಶೇ. 8
- ಕಾಸ್ಮೆಟಿಕ್ಸ್: ಶೇ. 6
- ಸಿಹಿತಿಂಡಿ, ಡ್ರೈಫ್ರೂಟ್ಸ್: ಶೇ. 4
- ಪೀಠೋಕರಣಗಳು: ಶೇ. 4
- ಹೋಮ್ ಡೆಕೋರೇಶನ್: ಶೇ. 3
- ಅಡುಗೆ ಮನೆ ಸಾಮಗ್ರಿ: ಶೇ. 3
- ಬೇಕರಿ ವಸ್ತುಗಳು: ಶೇ. 2
- ವಾಹನ, ಎಲೆಕ್ಟ್ರಿಕಲ್, ಆಟಿಕೆ ಮತ್ತಿತರ ವಸ್ತುಗಳು ಮತ್ತು ಸೇವೆಗಳು: ಶೇ. 20
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ