Sensex: ಮೊದಲ ಬಾರಿಗೆ 59000 ಪಾಯಿಂಟ್ಸ್ ದಾಟಿದ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್; ಮುಂದಿನ ಹಾದಿ ಏನೆಂಬ ಆತಂಕ​

| Updated By: Srinivas Mata

Updated on: Sep 16, 2021 | 3:27 PM

ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ 59 ಸಾವಿರ ಪಾಯಿಂಟ್ಸ್ ಗಡಿ ದಾಟಿದೆ. ಅದಕ್ಕೆ ಕಾರಣ ಆದ ಅಂಶಗಳೇನು ಎಂಬುದರ ವಿವರ ಇಲ್ಲಿದೆ.

Sensex: ಮೊದಲ ಬಾರಿಗೆ 59000 ಪಾಯಿಂಟ್ಸ್ ದಾಟಿದ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್; ಮುಂದಿನ ಹಾದಿ ಏನೆಂಬ ಆತಂಕ​
ಸಾಂದರ್ಭಿಕ ಚಿತ್ರ
Follow us on

ಭಾರತದ ಷೇರು ಮಾರುಕಟ್ಟೆಯ “ಗೂಳಿ ಓಟ” (Bulls Run) ಗುರುವಾರ (ಸೆಪ್ಟೆಂಬರ್ 16, 2021) ಮುಂದುವರಿದಿದೆ. ನಿಫ್ಟಿ ಹಾಗೂ ಸೆನ್ಸೆಕ್ಸ್ ಏರಿಕೆ ಹಾದಿಯಲ್ಲಿ ಮುಂದುವರಿದಿದೆ. ಇದೇ ಮೊದಲ ಬಾರಿಗೆ 30 ಷೇರುಗಳ ಗುಚ್ಛ ಬಿಎಸ್​ಇ ಸೆನ್ಸೆಕ್ಸ್ ಇಂಟ್ರಾಡೇ ವ್ಯವಹಾರದಲ್ಲಿ 59 ಸಾವಿರ ಪಾಯಿಂಟ್ಸ್​ ಗಡಿ ದಾಟಿದೆ. ಮಧ್ಯಾಹ್ನ 2.23ರ ಸುಮಾರಿಗೆ ಬಿಎಸ್​ಇ ಸೆನ್ಸೆಕ್ಸ್ 357.26 ಪಾಯಿಂಟ್ಸ್​ ಮೇಲೇರಿ 59,080.46 ಪಾಯಿಂಟ್ಸ್​ನಲ್ಲಿ ವಹಿವಾಟು ನಡೆಸಿತ್ತು. ಇನ್ನು ನಿಫ್ಟಿ 90.65 ಪಾಯಿಂಟ್ಸ್​ ಮೇಲೇರಿ 17,610.10 ಪಾಯಿಂಟ್ಸ್​ನಲ್ಲಿ ವ್ಯವಹಾರ ನಡೆಸುತ್ತಿತ್ತು. ಸೆನ್ಸೆಕ್ಸ್ ಬುಧವಾರ 58,723.20 ಪಾಯಿಂಟ್ಸ್​ನಲ್ಲಿ ಮುಕ್ತಾಯ ಆಗಿತ್ತು. ಗುರುವಾರದಂದು ಬೆಳಗ್ಗೆ 58,881.04 ಪಾಯಿಂಟ್ಸ್​ನೊಂದಿಗೆ ಆರಂಭವಾಗಿತ್ತು. 30 ಷೇರುಗಳ ಗುಚ್ಛದಲ್ಲಿ 15 ಷೇರುಗಳು ಏರಿಕೆಯನ್ನು ಕಂಡಿದ್ದವು, ಉಳಿದ 15 ಇಳಿಕೆಯಲ್ಲಿತ್ತು.

ಇಂಡಸ್​ಇಂಡ್​ ಬ್ಯಾಂಕ್, ಐಟಿಸಿ, ಎಸ್​ಬಿಐ, ರಿಲಯನ್ಸ್, ಐಸಿಐಸಿಐ ಬ್ಯಾಂಕ್ ಷೇರುಗಳು ಈ ಮಾರುಕಟ್ಟೆ ಏರಿಕೆಯಲ್ಲಿ ಅತಿ ಹೆಚ್ಚಿನ ಗಳಿಕೆ ಕಂಡಿವೆ. ಇನ್ನೊಂದು ಕಡೆಗೆ ಬಿಪಿಸಿಎಲ್, ಗ್ರಾಸಿಮ್, ಟಾಟಾ ಸ್ಟೀಲ್, ಟಿಸಿಎಸ್​, ಶ್ರೀ ಸಿಮೆಂಟ್ಸ್​ ಇಳಿಕೆ ಪ್ರಮುಖವಾಗಿ ಇಳಿಕೆ ಕಂಡಿವೆ. ರಿಲಯನ್ಸ್​ ಇಂಡಸ್ಟ್ರೀಸ್, ಐಟಿಸಿ ಹಾಗೂ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾವು ಸೂಚ್ಯಂಕಕ್ಕೆ ಅತಿ ಹೆಚ್ಚಿನ ಕೊಡುಗೆ ನೀಡಿದೆ. ಇನ್ನು ಸೂಚ್ಯಂಕದ ತೂಕವನ್ನು ಹಿಂದೆ ಎಳೆದಿರುವ ಕಂಪೆನಿಗಳಾಗಿ ಇನ್ಫೋಸಿಸ್, ಟಿಸಿಎಸ್​ ಮತ್ತು ಬಜಾಜ್ ಫೈನಾನ್ಸ್ ಕಂಡುಬರುತ್ತವೆ.

ಷೇರು ಮಾರುಕಟ್ಟೆ ಹೀಗೆ ದಾಖಲೆ ಮಟ್ಟಕ್ಕೆ ಏರುತ್ತಾ ಸಾಗಲು ಕಾರಣ ಏನು?
ಕೊವಿಡ್​ 19 ಕಾರಣಕ್ಕೆ ಕುಸಿದು ಹೋಗಿದ್ದ ಗ್ರಾಹಕರ ಬೇಡಿಕೆಯಲ್ಲಿ ಮತ್ತೆ ಚೇತರಿಕೆ ಕಂಡಿದೆ. ದೇಶದ ನಾನಾ ಭಾಗಗಳಲ್ಲಿನ ಕೊವಿಡ್​ ನಿರ್ಬಂಧವನ್ನು ಹಂತಹಂತವಾಗಿ ಸಡಿಲ ಮಾಡಲಾಗುತ್ತಿದೆ. ಇನ್ನು ಸಾಲದ ಮೇಲಿನ ಬಡ್ಡಿ ದರವು ಸಾರ್ವಕಾಲಿಕ ಕನಿಷ್ಠ ಮಟ್ಟದಲ್ಲಿದೆ. ಉತ್ಪಾದನಾ ವಲಯಕ್ಕೆ ಚೈತನ್ಯ ಸಿಕ್ಕಿದ್ದು, ಆ ಮೂಲಕ ಭಾರತೀಯ ಷೇರು ಮಾರುಕಟ್ಟೆ ಏರಿಕೆಗೆ ಇನ್ನಷ್ಟು ಬಲ ಬಂದಿದೆ. ಆದರೆ ಈ ಪರಿಯ ವೇಗದಲ್ಲಿ ಏರಿಕೆ ಕಾಣುತ್ತಿರುವುದರಿಂದ ಆರ್ಥಿಕತೆಗೆ ಅಪಾಯದಂತೆ ಕಂಡುಬಂದಿದೆ.

ಬ್ಲೂಮ್​ಬರ್ಗ್​ ಸಂಶೋಧನೆಯ ಪ್ರಕಾರ, 2020ರ ಮಾರ್ಚ್​ನಲ್ಲಿ ಎನ್​ಎಸ್​ಇ ತಲುಪಿದ್ದ ತಳಮಟ್ಟದಿಂದ ಶೇ 130ರಷ್ಟು ಏರಿಕೆಯನ್ನು ಕಂಡಿದೆ. ಇದಕ್ಕೆ ಕೇಂದ್ರ ಬ್ಯಾಂಕ್​ನ ನಗದು ಪೂರೈಕೆಯ ಬೆಂಬಲವೂ ಸಿಕ್ಕಿದೆ. ಷೇರು ಮಾರುಕಟ್ಟೆಯ ಈ ಏರಿಕೆಯು ಅಕ್ಟೋಬರ್​ನಿಂದ ಡಿಸೆಂಬರ್​ ತ್ರೈಮಾಸಿಕದಿಂದ ಈಚೆಗೆ ಪ್ರತಿ ತ್ರೈಮಾಸಿಕದಲ್ಲೂ ಜಿಡಿಪಿ ಬೆಳವಣಿಗೆಗೆ ಹತ್ತಿರ ಹತ್ತಿರ ಶೇ 1ರಷ್ಟು ಕೊಡುಗೆ ನೀಡುತ್ತಿದೆ. “ಭಾರತದ ಈಕ್ವಿಟಿ ಮಾರ್ಕೆಟ್ ರಚನಾತ್ಮಕವಾಗಿ ಸಕಾರಾತ್ಮಕವಾಗಿದೆ. ಗ್ರಾಹಕ ಬೇಡಿಕೆಯಲ್ಲಿ ಚೇತರಿಕೆ, ನಿಯಂತ್ರಕ ಸಂಶ್ಥೆಗಳಲ್ಲಿನ ಬದಲಾವಣೆ, ಹಣಕಾಸು ಮತ್ತು ಆರ್ಥಿ ನೀತಿಯ ಹಾದಿ ಇವೆಲ್ಲವೂ ಈ ಬೆಳವಣಿಗೆಗೆ ಕಾರಣವಾಗಿವೆ,” ಎನ್ನುತ್ತಾರೆ ವಿಶ್ಲೇಷಕರು.

ಆದರೆ, ಈ ಪರಿ ವೇಗದಲ್ಲಿ ಗಳಿಕೆ ಕಾಣುತ್ತಿರುವುದರಿಂದ ಮಾರುಕಟ್ಟೆ ಹಿನ್ನೆಲೆಗೆ ಆರ್ಥಿಕತೆಯ ದೌರ್ಬಲ್ಯ ಕಾರಣ ಆಗಲಿದೆ. ನಿಫ್ಟಿಯು ಈಗ ಅಂದಾಜು 12 ತಿಂಗಳ ಗಳಿಕೆಯ 22.2 ಪಟ್ಟು ವಹಿವಾಟು ನಡೆಸುತ್ತಿದೆ, 5 ವರ್ಷಗಳ ಸರಾಸರಿಯ 18.5ರ ಮೇಲಿದೆ. ಬೆಳವಣಿಗೆ ಮಾರುಕಟ್ಟೆಗಳ ಸೂಚ್ಯಂಕವು 12.7ರ ಗುಣಕದಲ್ಲಿ ವಹಿವಾಟಾಗುತ್ತಿದೆ. ಎತ್ತರಕ್ಕೆ ಷೇರುಗಳು ಏರಿದಂತೆ ಅವುಗಳು ಕುಸಿತ ಕಂಡಾಗ ಆರ್ಥಿಕತೆಗೆ ಅಪಾಯ ಎನ್ನುತ್ತಾರೆ ವಿಷಯ ತಜ್ಞರು.

ಇದನ್ನೂ ಓದಿ: Indian Stock Market: ಇದೇ ಮೊದಲ ಬಾರಿಗೆ ಫ್ರಾನ್ಸ್​ನ ಮೀರಿಸಿದ ಭಾರತದ ಷೇರು ಮಾರುಕಟ್ಟೆ; ಏನಿದು ಸಾಧನೆ ಗೊತ್ತೆ?

(This Is The First Time Sensex Crossed 59000 Points Mark Here Are The Factors Influence Rally)