ವಾರದಲ್ಲಿ ನಾಲ್ಕು ದಿನದ ಕೆಲಸದ ಬಗ್ಗೆ ಬಹಳ ಸಮಯದಿಂದ ಚರ್ಚೆಯಲ್ಲಿದೆ. ಕೊರೊನಾ ಬಿಕ್ಕಟ್ಟು ಬಂದ ಮೇಲೆ ಉದ್ಯೋಗದ ವೇಳಾಪಟ್ಟಿ ಬದಲಿಸಿರುವುದು ಮಾತ್ರವಲ್ಲ, ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಕೂಡ ಚರ್ಚೆಯಲ್ಲಿ ಇವೆ. ಆಧುನಿಕ ಉದ್ಯೋಗ ಶೈಲಿ ಹೇಗೆ ಬದಲಾಗಬೇಕು ಎಂಬುದರ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ಹಲವು ಅಧ್ಯಯನಗಳು ಬೊಟ್ಟು ಮಾಡಿ ತೋರಿಸುತ್ತಿರುವುದೇನೆಂದರೆ, ಉದ್ಯೋಗದ ಅವಧಿ ಹೆಚ್ಚಾಗುತ್ತಿದ್ದಂತೆ ಉದ್ಯೋಗಿಗಳ ಉತ್ಪಾದಕತೆ ಹೇಗೆ ಕಡಿಮೆ ಆಗಿದೆ ಹಾಗೂ ಅತ್ಯಂತ ಕಡಿಮೆ ಅವಧಿಯ ಕೆಲಸವು ಹೇಗೆ ಉತ್ಪಾದಕತೆ ಹೆಚ್ಚು ಮಾಡುತ್ತದೆ ಎಂಬುದರತ್ತ ಗಮನ ಸೆಳೆಯುತ್ತಿದೆ. ಭಾರತೀಯ ಸೈಬರ್ ಸೆಕ್ಯೂರಿಟಿ ಕಂಪೆನಿ TAC Security ಈಗಾಗಲೇ ವಾರದಲ್ಲಿ ನಾಲ್ಕು ದಿನದ ಕೆಲಸಕ್ಕೆ ಬದಲಾಗಿದೆ. ಇದರಿಂದ ಸಿಬ್ಬಂದಿಯ ಉತ್ಪಾದಕತೆ ಜಾಸ್ತಿ ಆಗಿದೆ ಎಂದು ಹೇಳಿಕೊಂಡಿದೆ. ಪ್ರಾಯೋಗಿಕವಾಗಿ ಜಾರಿಗೆ ತಂದಿರುವ ಈ ಯೋಜನೆ ಬಗ್ಗೆ ತಿಳಿಸಿ, ಕಳೆದ ಏಳು ತಿಂಗಳಿಂದ ಶುಕ್ರವಾರಗಳಂದು ಮುಂಬೈ ಕಚೇರಿಯಲ್ಲಿ ಕೆಲಸ ಮಾಡುತ್ತಿಲ್ಲ. ಇದರಿಂದ ಉತ್ಪಾದಕತೆ ಹೆಚ್ಚಾಗಿದೆ ಎಂದು ಹೇಳಲಾಗಿದೆ.
“ಭವಿಷ್ಯದ ಕೆಲಸದ ವೈಖರಿ”ಯನ್ನು ಅಳವಡಿಸಿಕೊಳ್ಳುವ ಬಗ್ಗೆ ಈಗಲೇ ನಿರ್ಧಾರ ತೆಗೆದುಕೊಂಡಿರುವ ಬಗ್ಗೆ ಹೇಳಿದ್ದು, ಉದ್ಯೋಗಿಗಳಲ್ಲಿ ಆರೋಗ್ಯಕರವಾದ ಉದ್ಯೋಗ- ಬದುಕು ಸಮತೋಲನಕ್ಕಾಗಿ ಉತ್ತೇಜನ ನೀಡುವುದಕ್ಕೆ ಗಮನ ಹರಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ. ಬಹಳ ಉದ್ಯೋಗಿಗಳು ವಿವಿಧ ಕೋರ್ಸ್ಗಳು ಮತ್ತು ಚಟುವಟಿಕೆಗಳಿಗೆ ಈ ಘೋಷಣೆ ಆದ ಮೇಲೆ ಸೇರಿಕೊಂಡಿದ್ದಾರೆ. ಇದೀಗ ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ ಇರುವುದರಿಂದ ಸಿಬ್ಬಂದಿ ಹೆಚ್ಚು ಖುಷಿಯಾಗಿದ್ದಾರೆ ಮತ್ತು ಉತ್ಪಾದಕತೆಯೂ ಜಾಸ್ತಿ ಆಗಿದೆ ಎಂದು ಕಂಪೆನಿ ಕಡೆಯಿಂದ ತಿಳಿಸಲಾಗಿದೆ. ಈ ನೀತಿಯನ್ನು ಮುಂಬೈ ಕಚೇರಿಯಲ್ಲಿ ಶಾಶ್ವತವಾಗಿ ಉಳಿಸಿಕೊಳ್ಳಲು ಉದ್ದೇಶಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸೋಮವಾರದಂದು ಐ.ಟಿ. ಕಂಪೆನಿಯಿಂದ ತಿಳಿಸಿರುವ ಪ್ರಕಾರ, ಆಂತರಿಕ ಸಮೀಕ್ಷೆಯಲ್ಲಿ ಗೊತ್ತಾಗಿರುವಂತೆ ದೀರ್ಘವಾದ ವಾರಾಂತ್ಯ ಸಿಗಲಿ ಎಂಬ ಕಾರಣಕ್ಕೆ ಶೇ 80ರಷ್ಟು ತಂಡಗಳು ವಾರದ ನಾಲ್ಕು ದಿನದಲ್ಲಿ ದೀರ್ಘ ಸಮಯ ಕಾರ್ಯ ನಿರ್ವಹಿಸುವುದಕ್ಕೆ ಸಿದ್ಧ ಎಂದು ಹೇಳಿರುವುದಾಗಿ ತಿಳಿಸಲಾಗಿದೆ. ದೀರ್ಘ ವಾರಾಂತ್ಯದಿಂದ ತಮ್ಮ ವಯಕ್ತಿಕ ಕೆಲಸಗಳು ಹಾಗೂ ಬೆಳವಣಿಗೆಗಳ ಕಡೆಗೆ ಗಮನ ಹರಿಸಬಹುದು ಎಂದು ಉದ್ಯೋಗಿಗಳು ಹೇಳಿಕೊಂಡಿದ್ದಾರೆ. “ಇದು ಅನುಷ್ಠಾನ ಗುಣಮಟ್ಟ ಉನ್ನತವಾಗಿ ಇರಿಸಿಕೊಳ್ಳುವುದಕ್ಕೆ ಸಂಬಂಧಿಸಿದ್ದು, ತಂಡದ ಆರೋಗ್ಯ ಹಾಗೂ ಹಿತಾಸಕ್ತಿ ಕಾಪಾಡಿಕೊಳ್ಳುವುದು ಆದ್ಯತೆ. ನಾವು ಯುವ ಜನರ ತಂಡ ಮತ್ತು ಯುವ ಕಂಪೆನಿ. ತಂಡದ ಸದಸ್ಯರ ಉದ್ಯೋಗ- ಜೀವನ ಸಮತೋಲನಕ್ಕೆ ಸಾಧ್ಯವಿರುವ ಎಲ್ಲ ಪ್ರಯೋಗಗಳನ್ನು ಮಾಡಬಹುದು,” ಎಂದು ಟಿಎಸ್ ಸೆಕ್ಯೂರಿಟೀಸ್ ಸ್ಥಾಪಕ ಹಾಗೂ ಸಿಇಒ ತ್ರಿಷ್ನೀತ್ ಅರೋರಾ ಹೇಳಿದ್ದಾರೆ. “ನಮ್ಮ ಕಂಪೆನಿಯಲ್ಲಿ ನಾಯಕತ್ವ ಸ್ಥಾನದಲ್ಲಿ ಇರುವವರು ತಮ್ಮ ಉಳಿದ ತಂಡದ ಸದಸ್ಯರಿಗೆ ಉದಾಹರಣೆಯಾಗಿ ನಿಲ್ಲಬೇಕು,” ಎಂದು ಅವರು ತಿಳಿಸಿದ್ದಾರೆ.
“ನಾವೆಲ್ಲರೂ ಅಭ್ಯಾಸಗಳಿಗೆ ಹೊಂದಿಕೊಂಡು ಹೋಗುವವರು ಮತ್ತು ಕೆಲಸದ ವಿಷಯಗಳಿಗೆ ಬಂದರೆ ವಾರದಲ್ಲಿ 5 ದಿನಕ್ಕೆ ಅಭ್ಯಾಸ ಆಗಿದೆ. ಸವಾಲನ್ನು ನಾವು ಗುರುತಿಸಿದ್ದೇನೆ. ಕೆಲಸಕ್ಕೆ ಸಂಬಂಧಿಸಿದಂತೆ ಈ ಹೊಸ ಮತ್ತು ಆವಿಷ್ಕಾರಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ,” ಎಂದು ಟಿಎಸಿ ಸೆಕ್ಯೂರಿಟಿ ಮಾನವ ಸಂಪನ್ಮೂಲ ವಿಭಾಗದ ಮ್ಯಾನೇಜರ್ ಹೇಳಿದ್ದು, ಈ ಹೊಸ ಪದ್ಧತಿ ಚೆನ್ನಾಗಿ ಕೆಲಸ ಮಾಡುತ್ತದೆ ಎಂಬ ವಿಶ್ವಾಸವೂ ಇದೆ ಎಂದು ನಂಬಿಕೆ ವ್ಯಕ್ತಪಡಿಸಿದ್ದಾರೆ. ಟಿಎಸಿ ಸೆಕ್ಯೂರಿಟಿ ಎಂಬುದರ ಮುಖ್ಯ ಕಚೇರಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿದೆ. ಫಾರ್ಚೂನ್ 500 ಕಂಪೆನಿಗಳಿಗೆ ಕೃತಕ ಬುದ್ಧಿಮತ್ತೆ ಆಧಾರಿತ ದುರ್ಬಲ ಮ್ಯಾನೇಜ್ಮೆಂಟ್ ಪ್ಲಾಟ್ಫಾರ್ಮ್ ನಿರ್ವಹಿಸುತ್ತದೆ.
ಇದನ್ನೂ ಓದಿ: 4 Day Work Week: ಜಪಾನ್ ಸರ್ಕಾರ ಸೂಚಿಸಿತು ವಾರದಲ್ಲಿ ನಾಲ್ಕೇ ದಿನದ ಕೆಲಸ; ಇನ್ನಾದರೂ ನಿಲ್ಲುತ್ತಾ ಕರೋಶಿ?
(This IT Company Implemented 4 Days Work In A Week Future Of Work Trend Is Here )