AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಣ್ಮಕ್ಕಳ ನೆಚ್ಚಿನ ಟಪ್ಪರ್​ವೇರ್ ಬ್ರ್ಯಾಂಡ್ ಇತಿಹಾಸಪುಟ ಸೇರುತ್ತಾ? ದಿವಾಳಿ ತಡೆಗೆ ನೆರವು ಕೋರಿದ ಅಮೆರಿಕನ್ ಸಂಸ್ಥೆ

Tupperware files for bankruptcy protection: ಪ್ಲಾಸ್ಟಿಕ್ ಕಂಟೇನರ್​ಗಳನ್ನು ತಯಾರಿಸುವ ಟಪ್ಪರ್​ವೇರ್ ಬ್ರ್ಯಾಂಡ್ಸ್ ಕಾರ್ಪ್ ಸಂಸ್ಥೆ ದಿವಾಳಿ ತಡೆಗೆ ನೆರವು ಕೋರಿ ಅಮೆರಿಕದ ಕೋರ್ಟ್ ಮೊರೆ ಹೋಗಿದೆ. 700 ಮಿಲಿಯನ್ ಡಾಲರ್ ಸಾಲ ತೀರಿಸಲು ಆಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದೆ. ದಶಕಗಳ ಕಾಲ ಪ್ಲಾಸ್ಟಿಕ್ ಕಂಟೇನರ್ ಮಾರುಕಟ್ಟೆಯಲ್ಲಿ ಕಿಂಗ್ ಎನಿಸಿದ್ದ ಸಂಸ್ಥೆ ಈಗ ಬಿಸಿನೆಸ್ ನಡೆಸಲು ಅಶಕ್ತವಾಗಿದೆ.

ಹೆಣ್ಮಕ್ಕಳ ನೆಚ್ಚಿನ ಟಪ್ಪರ್​ವೇರ್ ಬ್ರ್ಯಾಂಡ್ ಇತಿಹಾಸಪುಟ ಸೇರುತ್ತಾ? ದಿವಾಳಿ ತಡೆಗೆ ನೆರವು ಕೋರಿದ ಅಮೆರಿಕನ್ ಸಂಸ್ಥೆ
ಟಪ್ಪರ್​ವೇರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 18, 2024 | 11:23 AM

Share

ಡೆಲಾವೇರ್, ಸೆಪ್ಟೆಂಬರ್ 18: ಅಮೆರಿಕದ ವಿಶ್ವಖ್ಯಾತ ಟಪ್ಪರ್​ವೇರ್ ಬ್ರ್ಯಾಂಡ್ಸ್ ಕಾರ್ಪ್ ಸಂಸ್ಥೆ (Tupperware Brands Corp) ದಿವಾಳಿ ಆಗುವ ಹಂತಕ್ಕೆ ಹೋಗಿದ್ದು, ಸಹಾಯಕ್ಕಾಗಿ ಕೋರ್ಟ್ ಮೊರೆ ಹೋಗಿದೆ. ಏರ್​ಟೈಟ್ ಪ್ಲಾಸ್ಟಿಕ್ ಕಂಟೇನರ್​ಗಳನ್ನು ತಯಾರಿಸುವ ಟಪ್ಪರ್ ವೇರ್ ಸಂಸ್ಥೆ ಡೆಲಾವೇರ್ ಕೋರ್ಟ್​ವೊಂದರಲ್ಲಿ ದಿವಾಳಿ ತಡೆಗೆ (Bankruptcy protection) ಅರ್ಜಿ ಸಲ್ಲಿಸಿದೆ. ದಶಕಗಳ ಕಾಲ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿದ್ದ ಈ ಸಂಸ್ಥೆ ಈಗ ಬೇರೆ ಬೇರೆ ಕಂಪನಿಗಳ ಸ್ಪರ್ಧೆ ಎದುರಿಸಿ ನಿಲ್ಲಲು ಪರದಾಡುತ್ತಿದೆ. ಸಾಲ ವಿಪರೀತವಾಗಿದ್ದು ಅದನ್ನು ತೀರಿಸುವ ಮಾರ್ಗೋಪಾಯ ಇಲ್ಲದೇ ಈಗ ಕೋರ್ಟ್ ಬಳಿ ಸಹಾಯಕ್ಕಾಗಿ ಯಾಚಿಸುತ್ತಿದೆ. ಬ್ಯಾಂಕ್ರಪ್ಸಿ ಪ್ರೊಟೆಕ್ಷನ್ ಕಾನೂನಿನ ಚಾಪ್ಟರ್ 11ರ ಅಡಿಯಲ್ಲಿ ಅದು ಅರ್ಜಿ ಹಾಕಿರುವುದು ತಿಳಿದುಬಂದಿದೆ.

ಟಪ್ಪರ್​ವೇರ್ ಬ್ರ್ಯಾಂಡ್ಸ್ ಕಾರ್ಪೊರೇಶನ್ ಸಂಸ್ಥೆ ಬ್ಯಾಂಕ್ರಪ್ಟ್ಸಿ ಪ್ರೊಟೆಕ್ಷನ್​ಗೆ ಸಲ್ಲಿಸಿರುವ ಅರ್ಜಿ ಪ್ರಕಾರ, ಆ ಸಂಸ್ಥೆಯ ಆಸ್ತಿ 500 ಮಿಲಿಯನ್ ಡಾಲರ್​ನಿಂದ ಒಂದು ಬಿಲಿಯನ್ ಡಾಲರ್​ನಷ್ಟಿದೆ. 4,200 ಕೋಟಿ ರೂನಿಂದ 8,500 ಕೋಟಿ ರೂವರೆಗೂ ಅದರ ಆಸ್ತಿಮೌಲ್ಯ ಇದೆ. ಇನ್ನು, ಅದರ ಸಾಲದ ಮೊತ್ತ ಒಂದು ಬಿಲಿಯನ್ ಡಾಲರ್​ನಿಂದ 10 ಬಿಲಿಯನ್ ಡಾಲರ್​ವರೆಗು ಇದೆ ಎನ್ನಲಾಗಿದೆ.

ಇದನ್ನೂ ಓದಿ: ಪೌಂಡ್ ಸ್ಟರ್ಲಿಂಗ್​ಗೆ 14 ಶತಮಾನಗಳ ಇತಿಹಾಸ; ವಿಶ್ವದ ಅತ್ಯಂತ ಹಳೆಯ ಕರೆನ್ಸಿಯ ಕುತೂಹಲಕಾರಿ ಕಥೆ

ದಿವಾಳಿ ತಡೆಗೆ ಸಹಾಯ ಕೋರಿ ಅರ್ಜಿ ಸಲ್ಲಿಸುವ ಮುನ್ನ ಟಪ್ಪರ್​ವೇರ್ ಸಂಸ್ಥೆ ತಾನು ಸಾಲ ಪಡೆದುಕೊಂಡಿರುವ ಸಂಸ್ಥೆಗಳ ಜೊತೆ ಸಂಧಾನ, ಮಾತುಕತೆ ನಡೆಸಿತ್ತು. ತಿಂಗಳುಗಟ್ಟಲೆ ಮಾತುಕತೆ ನಡೆದು, ಸಾಲಗಾರರು ಹೆಚ್ಚುವರಿ ಸಮಯ ನೀಡಲು ಒಪ್ಪಿದರಾದರೂ ಟಪ್ಪರ್​ವೇರ್ ಸಂಸ್ಥೆಯ ಬಿಸಿನೆಸ್ ಮಾತ್ರ ಶೋಚನೀಯ ಸ್ಥಿತಿಯಿಂದ ಹೊರಬರಲೇ ಇಲ್ಲ. ಹೀಗಾಗಿ, ಬ್ಯಾಂಕ್ರಪ್ಸಿ ಪ್ರೊಟೆಕ್ಷನ್​ಗೆ ಅದು ಅರ್ಜಿ ಸಲ್ಲಿಸುವುದು ಅನಿವಾರ್ಯವಾಗಿತ್ತು.

ಅರ್ಲ್ ಟಪ್ಪರ್ ಎಂಬುವವರು 1946ರಲ್ಲಿ ಟಪ್ಪರ್​ವೇರ್ ಸಂಸ್ಥೆಯನ್ನು ಸ್ಥಾಪಿಸಿದ್ದರು. ಇದರ ಏರ್​ಟೈಟ್ ಪ್ಲಾಸ್ಟಿಕ್ ಬಾಟಲ್ ಇತ್ಯಾದಿ ಕಂಟೇನರ್​ಗಳು ಬಹಳ ಬೇಗ ಜನಪ್ರಿಯತೆ ಪಡೆದವು. ಮಲ್ಟಿಲೆವೆಲ್ ಮಾರ್ಕೆಟಿಂಗ್ ರೀತಿಯಲ್ಲಿ ಇವುಗಳ ಪ್ರಚಾರ ನಡೆದು, ಅಮೆರಿಕದ ಮನೆ ಮನೆಗಳನ್ನು ಟಪ್ಪರ್​ವೇರ್ ತಲುಪಿತ್ತು. ಈಗ್ಗೆ ದಶಕಗಳಿಂದ ಭಾರತದಲ್ಲೂ ಟಪ್ಪರ್​ವೇರ್ ಉತ್ಪನ್ನಗಳು ಜನಪ್ರಿಯವಾಗಿದ್ದವು.

ಆದರೆ, ಬೇರೆ ಬೇರೆ ರೀತಿಯ ಏರ್​ಟೈಟ್ ಕಂಟೇನರ್​ಗಳು ಮಾರುಕಟ್ಟೆಗೆ ಬಹಳ ಅಗ್ಗದ ಬೆಲೆಗೆ ಅಡಿ ಇಟ್ಟಿದ್ದರಿಂದ ಟಪ್ಪರ್​ವೇರ್​ ಉತ್ಪನ್ನಗಳ ಮಾರಾಟ ಕಡಿಮೆ ಆಗುತ್ತಾ ಬಂದಿತು. 2020ರಲ್ಲಿ ಸಂಸ್ಥೆ ತನ್ನ ಬಿಸಿನೆಸ್ ಬಹಳ ಕಡಿಮೆ ಆಗಿರುವ ಮಾಹಿತಿಯನ್ನು ಹಂಚಿಕೊಂಡಿತ್ತು. ಆಗಲೇ ಅದು ದಿವಾಳಿ ಹಂತಕ್ಕೆ ಹೋಗುವ ಸೂಚನೆ ಇತ್ತು. ಇದೀಗ ಟಪ್ಪರ್​ವೇರ್ ಸಂಸ್ಥೆ ಬಳಿ ಅಮೆರಿಕದಲ್ಲಿ ಒಂದೇ ಒಂದು ಫ್ಯಾಕ್ಟರಿ ಉಳಿದುಕೊಂಡಿದೆ. ಅಲ್ಲಿ ಅಲ್ಪಸ್ವಲ್ಪ ಉತ್ಪಾದನೆ ನಡೆಯುತ್ತಿದೆ. ಆ ಫ್ಯಾಕ್ಟರಿ ಮುಚ್ಚಿ 150 ಮಂದಿ ನೌಕರರನ್ನು ಲೇ ಆಫ್ ಮಾಡುವ ಸಂದರ್ಭ ಬಂದಿದೆ ಎಂದು ಮ್ಯಾನೇಜ್ಮೆಂಟ್ ಹೇಳುತ್ತಿದೆ.

ಇದನ್ನೂ ಓದಿ: ಬೋನಸ್ ಷೇರು ಬಿಡುಗಡೆಯಾಗಿ ಎರಡೇ ದಿನಕ್ಕೆ ಅಕೌಂಟ್ ಸೇರಲಿದೆ; ಸೆಬಿ ನಡೆಯಿಂದ ಯಾರಿಗೆ ಲಾಭ?

ನೆಲ ಕಚ್ಚಿದ ಟಪ್ಪರ್​ವೇರ್ ಷೇರುಬೆಲೆ

ಟಪ್ಪರ್​ವೇರ್ ಸಂಸ್ಥೆಯ ಷೇರುಬೆಲೆ 2013ರ ಒಂದು ಹಂತದಲ್ಲಿ 95 ಡಾಲರ್​ವರೆಗೂ ಹೋಗಿತ್ತು. ಈಗ ಅದರ ಬೆಲೆ ಅರ್ಧ ಡಾಲರ್ ಮಾತ್ರವೇ. 2020ರಲ್ಲಿ ಅದು ತನ್ನ ಬಿಸಿನೆಸ್ ಡೌನ್ ಆಗಿದೆ ಎಂದು ಹೇಳಿದಾಗ 37 ಡಾಲರ್ ಆಸುಪಾಸಿನಲ್ಲಿ ಬೆಲೆ ಹೊಂದಿತ್ತು. ಅದಾದ ಬಳಿಕ ನಿರಂತರವಾಗಿ ಅದರ ಷೇರುಬೆಲೆ ಕುಸಿಯುತ್ತಾ ಬಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ