ನವದೆಹಲಿ, ಮೇ 30: ಬ್ಯಾಂಕುಗಳಲ್ಲಿ ಕ್ಲೇಮ್ ಆಗದೇ ಉಳಿದಿರುವ ಹಣದ ಪ್ರಮಾಣ ಒಂದು ವರ್ಷದಲ್ಲಿ ಶೇ. 26ರಷ್ಟು ಹೆಚ್ಚಾಗಿದೆ. ಆರ್ಬಿಐನ ವಾರ್ಷಿಕ ವರದಿ ಪ್ರಕಾರ 2024ರ ಮಾರ್ಚ್ ತಿಂಗಳ ಅಂತ್ಯದಲ್ಲಿ ಡೆಪಾಸಿಟರ್ ಎಜುಕೇಶನ್ ಅಂಡ್ ಅವೇರ್ನೆಸ್ ಫಂಡ್ಗೆ ವರ್ಗಾವಣೆ ಆಗಿರುವ ಮೊತ್ತ 78,213 ಕೋಟಿ ರೂ. ಕಳೆದ ವರ್ಷ, ಅಂದರೆ 2023ರ ಮಾರ್ಚ್ ತಿಂಗಳ ಕೊನೆಯಲ್ಲಿ ಈ ಫಂಡ್ನಲ್ಲಿ 62,225 ಕೋಟಿ ರೂ ಇತ್ತು. ಈ ಬಾರಿ ಅದು ಶೇ. 26ರಷ್ಟು ಹೆಚ್ಚಾಗಿದೆ.
ಬ್ಯಾಂಕುಗಳಲ್ಲಿ ಹತ್ತಕ್ಕೂ ಹೆಚ್ಚು ವರ್ಷ ಕಾಲ ಒಮ್ಮೆಯೂ ನಿರ್ವಹಣೆ ಆಗದಿರುವ ಖಾತೆ ಅಥವಾ ಠೇವಣಿಯನ್ನು ಆರ್ಬಿಐನ ಡಿಎಇ ಫಂಡ್ಗೆ ವರ್ಗಾವಣೆ ಮಾಡಲಾಗುತ್ತದೆ. ಆರ್ಬಿಐನ ನಿಯಂತ್ರಣಕ್ಕೆ ಒಳಪಟ್ಟಿರುವ ಎಲ್ಲಾ ಕಮರ್ಷಿಯಲ್ ಬ್ಯಾಂಕು ಹಾಗೂ ಸಹಕಾರಿ ಬ್ಯಾಂಕುಗಳು ಈ ನೀತಿಯನ್ನು ಅನುಸರಿಸಬೇಕಾಗುತ್ತದೆ.
ಕ್ಲೇಮ್ ಆಗದೇ ಈ ರೀತಿ ಆರ್ಬಿಐನ ಡಿಇಎ ಖಾತೆಗೆ ವರ್ಗಾವಣೆ ಆದ ಠೇವಣಿದಾರರ ಹಣವೇನೂ ಅಲಭ್ಯದ ಸ್ಥಿತಿಗೆ ಹೋಗುವುದಿಲ್ಲ. ಠೇವಣಿದಾರರು ಜೀವಂತವಾಗಿದ್ದರೆ ಅವರನ್ನ ಪತ್ತೆ ಮಾಡಿ ಅವರಿಗೆ ತಲುಪಿಸುವ ಪ್ರಯತ್ನಗಳನ್ನು ಬ್ಯಾಂಕುಗಳು ಮಾಡುತ್ತವೆ. ಠೇವಣಿದಾರ ಮೃತಪಟ್ಟರೆ ಅವರ ಅರ್ಹ ವಾರಸುದಾರರಿಗೆ ಅದನ್ನು ತಲುಪಿಸುವುದು ಬ್ಯಾಂಕುಗಳದ್ದೇ ಜವಾಬ್ದಾರಿ. ಆರ್ಬಿಐ ಈ ನಿಟ್ಟಿನಲ್ಲಿ ಕೆಲ ತಿಂಗಳ ಹಿಂದೆ ಬ್ಯಾಂಕುಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಏಪ್ರಿಲ್ 1ರಿಂದಲೇ ಈ ಮಾರ್ಗಸೂಚಿಗಳು ಜಾರಿಗೆ ಬಂದಿವೆ.
ಇದನ್ನೂ ಓದಿ: ಭಾರತದ ಆರ್ಥಿಕ ವೃದ್ಧಿ ಹಿಂದಿನ ಹಣಕಾಸು ವರ್ಷದಲ್ಲಿ ಶೇ. 7.6, ಈ ವರ್ಷ ಶೇ. 7: ಆರ್ಬಿಐ ಅಂದಾಜು
ಕ್ಲೇಮ್ ಆಗದೇ ಡಿಇಎ ಫಂಡ್ಗೆ ಹಣ ವರ್ಗಾವಣೆ ಆಗಿದ್ದರೆ, ಸಂಬಂಧಪಟ್ಟವರು ಅಂಥವನ್ನು ಹುಡುಕಲು ಆರ್ಬಿಐ ಕೇಂದ್ರೀಕೃತವಾಗಿರುವ ಫೋರ್ಟಲ್ವೊಂದನ್ನು ಅಭಿವೃದ್ಧಿಪಡಿಸಿದೆ. ಉದ್ಗಮ್ ಅಥವಾ ಅನ್ಕ್ಲೇಮ್ಡ್ ಡೆಪಾಸಿಟ್ಸ್ ಗೇಟ್ವೇ ಟು ಅಕ್ಸೆಸ್ ಇನ್ಫಾರ್ಮೇಶನ್ ಎಂಬ ಈ ವೆಬ್ ಪೋರ್ಟಲ್ನಲ್ಲಿ ವಿವಿಧ ಬ್ಯಾಂಕುಗಳಲ್ಲಿನ ಅನ್ಕ್ಲೇಮ್ಡ್ ಡೆಪಾಸಿಟ್ಗಳನ್ನು ಶೋಧಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ