
ನವದೆಹಲಿ, ಮೇ 6: ವಿಶ್ವದ ಸಂಸ್ಥೆಯ ಡೆವಲಪ್ಮೆಂಟ್ ಪ್ರೋಗ್ರಾಮ್ ವಿಭಾಗ (UNDP- United Nations Development Programme) ಈಗ ಬಿಡುಗಡೆ ಮಾಡಿರುವ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ (HDI- Human Development Index) ಭಾರತ ನಾಲ್ಕು ಸ್ಥಾನ ಮೇಲೇರಿದೆ. 2023ರ ವರ್ಷದಲ್ಲಿ ಭಾರತದ ಹ್ಯೂಮನ್ ಡೆವಲಪ್ಮೆಂಟ್ ಇಂಡೆಕ್ಸ್ 0.685 ಇದೆ. ಒಟ್ಟು 193 ದೇಶಗಳ ಪೈಕಿ ಭಾರತ 130ನೇ ಸ್ಥಾನದಲ್ಲಿದೆ. 2022ರಲ್ಲಿ ಭಾರತ 134ನೇ ಸ್ಥಾನದಲ್ಲಿತ್ತು. ಆದಾಯ, ಆರೋಗ್ಯ ಮತ್ತು ಶಿಕ್ಷಣದಲ್ಲಿ ಭಾರತ ಉತ್ತಮ ಪ್ರಗತಿ ಸಾಧಿಸಿದ ಪರಿಣಾಮವಾಗಿ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತ ಮೇಲೇರಲು ಕಾರಣವಾಗಿದೆ.
1990ರಲ್ಲಿ ಭಾರತದ ಮಾನವ ಅಭಿವೃದ್ಧಿ ಸೂಚ್ಯಂಕದ ಮೌಲ್ಯ 0.446 ಇತ್ತು. ಈಗ ಅದು 0.685ಕ್ಕೆ ಏರಿದೆ. ಮೂರು ದಶಕದಲ್ಲಿ ಅದು ಶೇ. 53.6ರಷ್ಟು ಹೆಚ್ಚಾಗಿದೆ. ಕಳೆದ ಒಂದು ದಶಕದಲ್ಲಿ ಕೋಟ್ಯಂತರ ಜನರು ಬಡತನ ರೇಖೆಯಿಂದ ಹೊರಗೆ ಬಂದಿದ್ದಾರೆ. ಬಹುಸ್ತರದ ಬಡತನವನ್ನು ಬಹಳ ವೇಗದಲ್ಲಿ ಕಡಿಮೆಗೊಳಿಸಿದ ಕೆಲವೇ ದೇಶಗಳಲ್ಲಿ ಭಾರತವೂ ಒಂದು. ಆಯುಷ್ಮಾನ್ ಭಾರತ್, ಪಿಎಂ ಕಿಸಾನ್, ಜಲ್ ಜೀವನ್ ಮಿಷನ್ ಇತ್ಯಾದಿ ಸರ್ಕಾರಿ ಯೋಜನೆಗಳು ಬಡತನ ನಿವಾರಣೆ ಮಾಡಲು ಸಹಾಯಕವಾಗಿವೆ ಎಂಬುದು ಎಂಬುದು ಯುಎನ್ಡಿಪಿ ಅನಿಸಿಕೆ.
ಇದನ್ನೂ ಓದಿ: ಭಾರತದ ಜೊತೆ ಹೀಗೆ ಕಿತ್ತಾಡ್ತಿದ್ರೆ ನಾಶವಾಗಿಬಿಡ್ತೀರಿ: ಪಾಕಿಸ್ತಾನಕ್ಕೆ ಮೂಡೀಸ್ ಎಚ್ಚರಿಕೆ
ಪಾಕಿಸ್ತಾನದ ಮಾನವ ಅಭಿವೃದ್ಧಿ ಸೂಚ್ಯಂಕ 2023ರಲ್ಲಿ 0.544ರಷ್ಟಿದೆ. ಜಾಗತಿಕವಾಗಿ ಅದು 168ನೇ ಸ್ಥಾನಕ್ಕೆ ಇಳಿದಿದೆ. ಕೆಳ ಮಾನವ ಅಭಿವೃದ್ಧಿ ಸ್ತರದಲ್ಲಿರುವ ದೇಶಗಳ ಸಾಲಿನಲ್ಲಿ ಪಾಕಿಸ್ತಾನ ಇದೆ.
ಇದೇ ವೇಳೆ, ಭಾರತದ ಹೆಚ್ಡಿಐ ಮೌಲ್ಯವು ಮಧ್ಯಮ ಮಾನವ ಅಭಿವೃದ್ಧಿ ಸ್ತರದಲ್ಲಿದೆ. ಪಾಕಿಸ್ತಾನಕ್ಕಿಂತ ಭಾರತ ಶೇ. 19ರಷ್ಟು ಹೆಚ್ಚು ಅಂಕ ಹೊಂದಿದೆ. ತಲಾದಾಯದಲ್ಲಿ ಪಾಕಿಸ್ತಾನಕ್ಕಿಂತ ಭಾರತ ಶೇ 57 ಹೆಚ್ಚು ಇದೆ.
ಭಾರತದ ಇತರ ನೆರೆಯ ದೇಶಗಳ ವಿಚಾರಕ್ಕೆ ಬಂದರೆ, ಶ್ರೀಲಂಕಾ ಉನ್ನತ ಸ್ತರದ ಗುಂಪಿಗೆ ಸೇರುತ್ತದೆ. 2023ರ ಹ್ಯೂಮನ್ ಡೆವಲಪ್ಮೆಂಟ್ ಇಂಡೆಕ್ಸ್ನಲ್ಲಿ ಶ್ರೀಲಂಕಾ 0.776 ಸ್ಕೋರ್ನೊಂದಿಗೆ 89ನೇ ಸ್ಥಾನದಲ್ಲಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 16 ಸ್ಥಾನ ಕಡಿಮೆಗೊಂಡಿದೆ. ಆದರೂ ಅದು ಉನ್ನತ ಮಾನವ ಅಭಿವೃದ್ಧಿ ಸ್ತರದಲ್ಲಿದೆ. ಹೆಚ್ಡಿಐ ಸ್ಕೋರ್ 0.700ಕ್ಕಿಂತ ಹೆಚ್ಚಿದ್ದರೆ ಅದು ಉನ್ನತ ಸ್ತರ.
ಬಾಂಗ್ಲಾದೇಶವು ರ್ಯಾಂಕಿಂಗ್ನಲ್ಲಿ ಭಾರತದ ಜೊತೆ 130ನೇ ಸ್ಥಾನ ಹಂಚಿಕೊಂಡಿದೆ. ಹಿಂದಿನ ವರ್ಷದಲ್ಲಿ (2022) ಅದು 129ನೇ ಸ್ಥಾನದಲ್ಲಿತ್ತು. ಇನ್ನು, ನೇಪಾಳ 145ನೇ ಸ್ಥಾನದಲ್ಲಿದೆ.
ಐಸ್ಲ್ಯಾಂಡ್, ನಾರ್ವೆ, ಸ್ವಿಟ್ಜರ್ಲ್ಯಾಂಡ್, ಡೆನ್ಮಾರ್ಕ್ ಮತ್ತು ಜರ್ಮನಿ ದೇಶಗಳು ಯುಎನ್ಡಿಪಿ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಮೊದಲ ಐದು ಸ್ಥಾನ ಪಡೆದಿವೆ. ಐಸ್ಲ್ಯಾಂಡ್ ದೇಶದ ಹ್ಯೂಮನ್ ಡೆವಲಪ್ಮೆಂಟ್ ಇಂಡೆಕ್ಸ್ 0.972 ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ