Union Budget 2022: ಅರ್ಥಶಾಸ್ತ್ರಜ್ಞರ ಜತೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಪೂರ್ವ ಸಭೆ
ಕೇಂದ್ರ ಬಜೆಟ್ 2022ರ ಹಿನ್ನೆಲೆಯಲ್ಲಿ ಅರ್ಥಶಾಸ್ತ್ರಜ್ಞರಿಂದ ಅಭಿಪ್ರಾಯ ಸಂಗ್ರಹಿಸುವ ಸಲುವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಮಾಲೋಚನೆ ನಡೆಸಿದ್ದಾರೆ.
ಕೇಂದ್ರ ಸರ್ಕಾರದ ಮುಂಬರುವ ಸಾಮಾನ್ಯ ಬಜೆಟ್ 2022-23ರ ಮಂಡನೆಗೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ (ಡಿಸೆಂಬರ್ 22, 2021) ಪ್ರಮುಖ ಅರ್ಥಶಾಸ್ತ್ರಜ್ಞರೊಂದಿಗೆ ಬಜೆಟ್ ಪೂರ್ವ ಸಮಾಲೋಚನೆ ನಡೆಸಲಿದ್ದಾರೆ.
“ಕೇಂದ್ರ ಹಣಕಾಸು ಸಚಿವೆ @nsitharaman ಅವರು ಮುಂಬರುವ ಸಾಮಾನ್ಯ ಬಜೆಟ್ 2022-23ಕ್ಕೆ ಸಂಬಂಧಿಸಿದಂತೆ ನವದೆಹಲಿಯಲ್ಲಿ 22ನೇ ಡಿಸೆಂಬರ್ 2021ರಂದು, ಬುಧವಾರ ಮಧ್ಯಾಹ್ನ ಪ್ರಮುಖ ಅರ್ಥಶಾಸ್ತ್ರಜ್ಞರೊಂದಿಗೆ ಬಜೆಟ್ ಪೂರ್ವ ಸಮಾಲೋಚನೆಗಳ ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆಗಳು ವರ್ಚುವಲ್ ಆಗಿ ನಡೆಯುತ್ತವೆ,” ಎಂದು ಹಣಕಾಸು ಸಚಿವಾಲಯ ಟ್ವೀಟ್‌ನಲ್ಲಿ ತಿಳಿಸಿದೆ.
ಪ್ರತಿ ವರ್ಷ ಫೆಬ್ರವರಿ 1ರಂದು ಸಂಸತ್ತಿನಲ್ಲಿ ಸಾಮಾನ್ಯ ಬಜೆಟ್ ಅನ್ನು ಹಣಕಾಸು ಸಚಿವರು ಮಂಡಿಸುತ್ತಾರೆ. ಈ ಬಾರಿ ಕೇಂದ್ರ ಬಜೆಟ್ ಬಗ್ಗೆ ಬಹಳ ಕುತೂಹಲ ಇದೆ. ಕೊರೊನಾ ರೂಪಾಂತರ ಒಮಿಕ್ರಾನ್ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಆರ್ಥಿಕತೆಗೆ ಒತ್ತಡ ಬೀಳದಂತೆ ಕೆಲವು ಕ್ರಮಗಳನ್ನು ಘೋಷಿಸಬಹುದು ಎಂದು ಜನ ಸಾಮಾನ್ಯರು ನಿರೀಕ್ಷೆ ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ಕೇಂದ್ರ ಬಜೆಟ್ ಮಂಡನೆಗೂ ಮುನ್ನ ವಿವಿಧ ಕ್ಷೇತ್ರದವರು, ಆರ್ಥಿಕ ತಜ್ಞರ ಜತೆಗೆ ಸಮಾಲೋಚನೆ ನಡೆಸುವುದು ಪರಿಪಾಠ. ಅದೇ ರೀತಿ ಈಗಿನ ಸಮಾಲೋಚನೆಯನ್ನು ಆಯೋಜಿಸಲಾಗಿದೆ.