Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಜೆಟ್ 2025: ಪ್ರಮುಖ ಉದ್ಯಮ ಪ್ರತಿನಿಧಿಗಳ ಜೊತೆ ನಿರ್ಮಲಾ ಸೀತಾರಾಮನ್ ಅಂತಿಮ ಸುತ್ತಿನ ಸಮಾಲೋಚನೆ

Union Budget 2024: ಫೆಬ್ರುವರಿ 1ರಂದಿರುವ ಬಜೆಟ್​ಗೆ ತಯಾರಿಯಾಗಿ ಸಾಕಷ್ಟು ಸಭೆ, ಸಮಾಲೋಚನೆಗಳು ನಡೆಯುತ್ತಿವೆ. ಇಂದು ಸೋಮವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿವಿಧ ಕ್ಷೇತ್ರಗಳ ಪರಿಣಿತರೊಂದಿಗೆ ಸಭೆ ನಡೆಸುತ್ತಿದ್ದಾರೆ. ಉದ್ಯಮ ವಲಯ, ಆರೋಗ್ಯ ಉಪಚಾರ ಕ್ಷೇತ್ರ ಮತ್ತು ಶಿಕ್ಷಣ ಕ್ಷೇತ್ರದ ಪ್ರತಿನಿಧಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಬಜೆಟ್ 2025: ಪ್ರಮುಖ ಉದ್ಯಮ ಪ್ರತಿನಿಧಿಗಳ ಜೊತೆ ನಿರ್ಮಲಾ ಸೀತಾರಾಮನ್ ಅಂತಿಮ ಸುತ್ತಿನ ಸಮಾಲೋಚನೆ
ನಿರ್ಮಲಾ ಸೀತಾರಾಮನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 30, 2024 | 12:07 PM

ನವದೆಹಲಿ, ಡಿಸೆಂಬರ್ 30: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಸಿದ್ಧತೆ ಭರದಿಂದ ಸಾಗುತ್ತಿದ್ದು ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಉದ್ಯಮ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಪ್ರಮುಖ ಭಾಗಿದಾರರು ಮತ್ತು ಪ್ರತಿನಿಧಿಗಳ ಜೊತೆ ಅವರು ಬಜೆಟ್ ಪೂರ್ವಬಾವಿ ಚರ್ಚೆಗಳನ್ನು ನಡೆಸಲಿದ್ದಾರೆ. ವರದಿಗಳ ಪ್ರಕಾರ ಇವತ್ತು ಈ ಮಹತ್ವದ ಸಭೆ ನಡೆಯಲಿದೆ. ಔದ್ಯಮಿಕ ಬೆಳವಣಿಗೆಯನ್ನು ಉತ್ತೇಜಿಸುವ, ಗುಣಮಟ್ಟದ ಆರೋಗ್ಯ ಉಪಚಾರದ ಸೌಲಭ್ಯ ಹೆಚ್ಚಿಸುವ ಹಾಗೂ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ನೀತಿಗಳನ್ನು ರೂಪಿಸಲು ಈ ಸಭೆಯಲ್ಲಿ ಸಲಹೆ ಮತ್ತು ಸಮಾಲೋಚನೆಗಳು ನಡೆಯುವ ನಿರೀಕ್ಷೆ ಇದೆ.

ವಿವಿಧ ಉದ್ಯಮ ವಲಯದ ಪ್ರತಿನಿಧಿಗಳು, ಶಿಕ್ಷಣ ಹಾಗೂ ಆರೋಗ್ಯ ಉಪಚಾರ ಕ್ಷೇತ್ರದ ಪರಿಣಿತರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ದೇಶದಲ್ಲಿ ಉತ್ಪಾದನಾ ಕ್ಷೇತ್ರಕ್ಕೆ ಪುಷ್ಟಿ ತರಲು ಸರ್ಕಾರ ಅವಿರತ ಪ್ರಯತ್ನ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಈ ಸಭೆಯಲ್ಲಿ ಉದ್ಯಮ ಪ್ರತಿನಿಧಿಗಳ ಸಲಹೆಗಳು ಸರ್ಕಾರಕ್ಕೆ ವಿಶೇಷ ನೀತಿಗಳನ್ನು ರೂಪಿಸಲು ಸಹಾಯಕವಾಗಬಹುದು.

ಇದನ್ನೂ ಓದಿ: 2024ರಲ್ಲಿ ಡಾಲರ್ ಎದುರು ಭಾರತೀಯ ರುಪಾಯಿ ನೀರಸ ಪ್ರದರ್ಶನ ತೋರಿತಾ? ಇಲ್ಲಿದೆ ವಾಸ್ತವ ಸಂಗತಿ

ಹಾಗೆಯೇ, ಭಾರತದ ಶಿಕ್ಷಣ ಕ್ಷೇತ್ರವನ್ನು ಜಾಗತಿಕ ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಸುಧಾರಣೆಗಳನ್ನು ತರಲು ಸರ್ಕಾರ ಹೊರಟಿದೆ. ಬಜೆಟ್​ನಲ್ಲಿ ಕೆಲ ಮಹತ್ವದ ಘೋಷಣೆಗಳಾಗುವ ನಿರೀಕ್ಷೆ ಇದೆ. ಬಜೆಟ್ ಪೂರ್ವಬಾವಿ ಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಲಹೆಗಳು ಸಿಗಬಹುದು.

ಮೋದಿ 3.0 ಸರ್ಕಾರದ ಮೊದಲ ಬಜೆಟ್ ಜುಲೈನಲ್ಲಿ ನಡೆದಿತ್ತು. ಈಗ ಎರಡನೇ ಬಜೆಟ್ ಫೆಬ್ರುವರಿ 1ರಂದು ನಡೆಯಲಿದೆ. ಬಜೆಟ್​ಗೆ ಕೆಲ ತಿಂಗಳು ಮುಂಚಿನಿಂದಲೇ ಹಣಕಾಸು ಇಲಾಖೆ ಸಕಲ ತಯಾರಿಗಳನ್ನು ನಡೆಸುತ್ತದೆ. ಎಲ್ಲಾ ಕ್ಷೇತ್ರಗಳ ಮತ್ತು ಉದ್ಯಮ ವಲಯದ ಭಾಗಿದಾರರ ಜೊತೆ ಸಲಹೆ ಸಮಾಲೋಚನೆಗಳನ್ನು ನಡೆಸಲಾಗುತ್ತದೆ. ವಿವಿಧ ಇಲಾಖೆಗಳು, ಸಚಿವಾಲಯದವರ ಜೊತೆಯೂ ಸಮಾಲೋಚನೆ ನಡೆಯುತ್ತದೆ.

ಇದನ್ನೂ ಓದಿ: ಭಾರತದಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಸ್ಟಾರ್ಟಪ್​ಗಳು; ಅರ್ಧದಷ್ಟು ಕಂಪನಿಗಳಲ್ಲಿ ಮಹಿಳಾ ನಿರ್ದೇಶಕರು

ಚುನಾವಣೆ ಈಗಷ್ಟೇ ಮುಗಿದಿರುವುದರಿಂದ ಸರ್ಕಾರ ಜನಪ್ರಿಯ ಯೋಜನೆಗಳಿಗೆ ಪ್ರಾಮುಖ್ಯ ನೀಡುವ ಸಾಧ್ಯತೆಗಿಂತ ಸುಧಾರಣೆಗಳತ್ತ ಗಮನ ಕೊಡುವ ಸಾಧ್ಯತೆ ಹೆಚ್ಚಿರುತ್ತದೆ. ಅಂತೆಯೇ, ಇದು ಸರ್ಕಾರದ ಒಳ ಇಂಗಿತವನ್ನು ತೋರಿಸುವ ಬಜೆಟ್ ಆದ್ದರಿಂದ ಸಾಕಷ್ಟು ಕುತೂಹಲವೂ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ