ವಾಷಿಂಗ್ಟನ್: ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ (Silicon Valley Bank) ದಿವಾಳಿಯಾದ ಸುದ್ದಿ ಜಗತ್ತನ್ನೇ ಬೆಚ್ಚಿಬೀಳಿಸಿತ್ತು. ಈಗ ಅಮೆರಿಕದಲ್ಲಿ ಮತ್ತೊಂದು ಬ್ಯಾಂಕ್ ದಿವಾಳಿಯಾಗಿದೆ. ನ್ಯೂಯಾರ್ಕ್ ರಾಜ್ಯ ಸರ್ಕಾರಿ ಸ್ವಾಮ್ಯದ ಸಿಗ್ನೇಚರ್ ಬ್ಯಾಂಕ್ (Signature Bank) ಬಾಗಿಲು ಮುಚ್ಚಿದೆ. ಇದು ಅಮೆರಿಕದಲ್ಲಿ ಕುಸಿದುಬಿದ್ದಿರುವ ಮೂರನೇ ಬ್ಯಾಂಕ್ ಆಗಿದೆ. ಸಿಲಿಕಾನ್ ವ್ಯಾಲಿ ಬ್ಯಾಂಕ್ ಪತನಗೊಳ್ಳುವ ಸ್ವಲ್ಪ ಮೊದಲು ಸಿಲ್ವರ್ಗೇಟ್ ಕ್ಯಾಪಿಟಲ್ ಕಾರ್ಪ್ (Silvergate Capital Corp) ಎಂಬ ಬ್ಯಾಂಕೊಂದು ತಾನು ಬಾಗಿಲು ಮುಚ್ಚುತ್ತಿರುವುದಾಗಿ ಹೇಳಿತ್ತು. ಸದ್ಯ ವಿಶ್ವ ದೊಡ್ಡಣ್ಣನ ಅಂಗಳದಲ್ಲಿ ಬ್ಯಾಂಕುಗಳು ಅಂಟು ಜಾಡ್ಯದಂತೆ ಒಂದೊಂದಾಗಿ ಪತನಗೊಳ್ಳುತ್ತಿರುವ ಟ್ರೆಂಡ್ ಕಾಣುತ್ತಿದೆ. ಇವತ್ತು ಎಸ್ವಿಬಿ, ಸಿಗ್ನೇಚರ್ ಬಾಗಿಲು ಹಾಕಿವೆ, ಮುಂದೆ ಇನ್ನೂ ಹಲವು ಬ್ಯಾಂಕುಗಳು ಕುಸಿಯುವ ಸಾಧ್ಯತೆ ಇಲ್ಲದಿಲ್ಲ.
ನ್ಯೂಯಾರ್ಕ್ನ ರಾಜ್ಯ ಹಣಕಾಸು ನಿಯಂತ್ರಕರು (New York State Financial Regulators) ಮಾರ್ಚ್ 12, ಭಾನುವಾರ ಸಿಗ್ನೇಚರ್ ಬ್ಯಾಂಕ್ ಬಾಗಿಲು ಬಂದ್ ಮಾಡಿವೆ. ಸಿಲಿಕಾನ್ ವ್ಯಾಲಿ ಬ್ಯಾಂಕ್ನ ಗ್ರಾಹಕರಿಗೆ ನಿರ್ದಿಷ್ಟ ವಿಧಾನದಲ್ಲಿ ಅವರ ಹಣ ವಾಪಸ್ ಮಾಡಲಾಗುತ್ತಿರುವ ರೀತಿಯಲ್ಲೇ ಸಿಗ್ನೇಚರ್ ಬ್ಯಾಂಕ್ನ ಠೇವಣಿದಾರರಿಗೆ ಅವಕಾಶ ಮಾಡಿಕೊಡಲಾಗಿದೆ.
ಬ್ಯಾಂಕ್ನ ಯಾವುದೇ ಠೇವಣಿದಾರರ ಹಣ ತಪ್ಪದೇ ಮರಳುತ್ತದೆ. ಬ್ಯಾಂಕಿಗೆ ಆಗಿರುವ ನಷ್ಟದ ಭಾರವನ್ನು ಠೇವಣಿದಾರರ ಹೆಗಲಿಗೆ ಹಾಕುವುದಿಲ್ಲ ಎಂದು ನ್ಯೂಯಾರ್ಕ್ನ ಹಣಕಾಸು ಇಲಾಖೆ, ಫೆಡರಲ್ ರಿಸರ್ವ್ ಬ್ಯಾಂಕ್, ಫೆಡರಲ್ ಇನ್ಷೂರೆನ್ಸ್ ಡೆಪಾಸಿಟ್ ಕಾರ್ಪ್ (ಎಫ್ಐಡಿಸಿ) ಇವು ಜಂಟಿ ಹೇಳಿಕೆ ನೀಡಿವೆ. ಇಲ್ಲಿ ಸಿಗ್ನೇಚರ್ ಬ್ಯಾಂಕ್ನ ಠೇವಣಿದಾರರ ಹಣ ಸುರಕ್ಷಿತವಾಗಿ ಮರಳುವಂತೆ ನೋಡಿಕೊಳ್ಳಲು ಎಫ್ಐಡಿಸಿ ಸಂಸ್ಥೆಯನ್ನು ರಿಸೀವರ್ ಆಗಿ ಆಯ್ಕೆ ಮಾಡಲಾಗಿದೆ.
ಸಿಗ್ನೇಚರ್ ಬ್ಯಾಂಕ್ ಡಿಸೆಂಬರ್ 31ರ ಅಂದಾಜಿನಲ್ಲಿ ಒಟ್ಟು 110.36 ಬಿಲಿಯನ್ ಡಾಲರ್ (ಸುಮಾರು 9 ಲಕ್ಷ ಕೋಟಿ ರುಪಾಯಿ) ಮೌಲ್ಯದ ಆಸ್ತಿ ಹೊಂದಿತ್ತು. ಅದರಲ್ಲಿ 88.59 ಬಿಲಿಯನ್ ಡಾಲರ್ (7.3 ಲಕ್ಷ ಕೋಟಿ ರುಪಾಯಿ) ಮೊತ್ತದಷ್ಟು ಹಣ ಠೇವಣಿಗಳ ರೂಪದಲ್ಲೇ ಇತ್ತು. ಇಷ್ಟು ಆರೋಗ್ಯಕರ ಸ್ಥಿತಿಯಲ್ಲಿದ್ದ ಸಿಗ್ನೇಚರ್ ಬ್ಯಾಂಕ್ ಈಗ ಮುಚ್ಚುವ ಪರಿಸ್ಥಿತಿ ಬಂದಿದ್ದು ಸೋಜಿಗ. ಆದರೆ, ಇಷ್ಟು ದೊಡ್ಡ ಮೊತ್ತದ ಠೇವಣಿ ಹಣವನ್ನು ಗ್ರಾಹಕರಿಗೆ ಮರಳಿಸುವ ದೊಡ್ಡ ಜವಾಬ್ದಾರಿ ಇದೆ. ಅದಕ್ಕಾಗಿ ಎಫ್ಡಿಐಸಿ ಸಂಸ್ಥೆಯು ಬ್ರಿಡ್ಜ್ ಬ್ಯಾಂಕ್ ಹುಟ್ಟುಹಾಕಿದೆ. ಸಿಗ್ನೇಚರ್ ಬ್ಯಾಂಕ್ನ ಎಲ್ಲಾ ಗ್ರಾಹಕರು ಬ್ರಿಡ್ಜ್ ಬ್ಯಾಂಕ್ಗೆ ವರ್ಗಾವಣೆ ಆಗಲಿದ್ದಾರೆ. ಫಿಫ್ತ್ ಥರ್ಡ್ ಬ್ಯಾನ್ಕಾರ್ಪ್ ಬ್ಯಾಂಕ್ನ ಮಾಜಿ ಮುಖ್ಯಸ್ಥ ಗ್ರೆಗ್ ಕಾರ್ಮಿಖೇಲ್ ಅವರನ್ನು ಬ್ರಿಡ್ಜ್ ಬ್ಯಾಂಕ್ನ ಸಿಇಒ ಆಗಿ ನೇಮಕ ಮಾಡಲಾಗಿದೆ.
ಕ್ರಿಪ್ಟೋ ಠೇವಣಿಯ ನಂಟು
ಸಿಗ್ನೇಚರ್ ಬ್ಯಾಂಕ್ನ ಹೆಸರು ಕಳೆದ ವರ್ಷವೂ ಸದ್ದು ಮಾಡಿತ್ತು. ಕ್ರಿಪ್ಟೋ ಎಕ್ಸ್ಚೇಂಜ್ ಕಂಪನಿ ಎಫ್ಟಿಎಕ್ಸ್ ಹಗರಣ ಬೆಳಕಿಗೆ ಬಂದಾಗ ಸಿಗ್ನೇಚರ್ ಬ್ಯಾಂಕ್ ಹೆಸರೂ ಥಳುಕು ಹಾಕಿಕೊಂಡಿತ್ತು. ಎಫ್ಟಿಎಕ್ಸ್ನ ಹಣ ಸಿಗ್ನೇಚರ್ ಬ್ಯಾಂಕ್ನಲ್ಲಿದೆ ಎಂಬ ಸುದ್ದಿ ಆ ಬ್ಯಾಂಕ್ನ ಗ್ರಾಹಕರನ್ನು ಬೆಚ್ಚಿಬೀಳಿಸಿತ್ತು. ಆದರೆ, ಎಫ್ಟಿಎಕ್ಸ್ನ ಠೇವಣಿಗಳು ಶೇ. 1ರಷ್ಟೂ ಇಲ್ಲ ಎಂದು ಬ್ಯಾಂಕ್ ಹೇಳಿದರೂ ಒಟ್ಟಾರೆ ಕ್ರಿಪ್ಟೋ ಸಂಬಂಧಿತ ಆಸ್ತಿಗಳ ಠೇವಣಿಗಳು ಶೇ. 20ಕ್ಕಿಂತಲೂ ಹೆಚ್ಚು ಇರುವುದು ನಿಜವೇ ಆಗಿತ್ತು. ಈ ಕ್ರಿಪ್ಟೋ ಕಂಪನಿಗಳ ಠೇವಣಿಗಳ ಪ್ರಮಾಣವನ್ನು ತಗ್ಗಿಸುವುದಾಗಿ ಬ್ಯಾಂಕ್ ಹೇಳಿತ್ತು.
ಸಿಲಿಕಾನ್ ವ್ಯಾಲಿ ಬ್ಯಾಂಕ್ ಬಾಗಿಲು ಮುಚ್ಚಿದ ಪ್ರಕರಣವೂ ಸೋಜಿಗವೇ ಎನಿಸಿದೆ. ಕ್ಯಾಲಿಫೋರ್ನಿಯಾ ಮೂಲದ ಈ ಬ್ಯಾಂಕ್ ಕೇವಲ ಎರಡೇ ದಿನದಲ್ಲಿ ಬಾಗಿಲು ಬಂದ್ ಹಾಕಿದ್ದು ವಿಶ್ವವನ್ನೇ ಬೆಚ್ಚಿಬೀಳಿಸಿತ್ತು. ಹಿಂದಿನ ತ್ರೈಮಾಸಿಕದ ವರದಿಯಲ್ಲಿ ಬ್ಯಾಂಕ್ ನಷ್ಟ ಎಂದು ತೋರಿಸಿದ್ದರೂ ಯಾವುದೇ ಆತಂಕ ಪಡುವ ಸ್ಥಿತಿ ಇಲ್ಲ ಎಂಬುದನ್ನು ತನ್ನಲ್ಲಿರುವ ಠೇವಣಿ ಇತ್ಯಾದಿ ವಿವರಗಳನ್ನು ನೀಡಿ ಭರವಸೆ ನೀಡಿತ್ತು.
ಇದನ್ನೂ ಓದಿ: PhonePe: ಫೋನ್ಪೇ ವಾರ್ಷಿಕ ಟಿಪಿವಿ 84 ಕೋಟಿ; ಆರ್ಬಿಐನಿಂದ ಸಿಕ್ಕಿತು ಪಿಎ ಲೈಸೆನ್ಸ್
ಆದರೆ, ಯಾವುದೋ ಸಂಸ್ಥೆಯೊಂದು ತಾನು ಎಸ್ವಿಬಿಯಿಂದ ಠೇವಣಿ ಹಿಂಪಡೆಯುತ್ತಿರುವುದಾಗಿ ಹೇಳಿಕೆ ನೀಡಿದ್ದೇ ಬಂತು, ಬ್ಯಾಂಕ್ನ ಗ್ರಾಹಕರು ತಮ್ಮ ಹಣವನ್ನು ಹಿಂಪಡೆಯಲು ಮುಗಿಬಿದ್ದರು. ಎಲ್ಲಾ ಗ್ರಾಹಕರು ದಿಢೀರನೇ ಠೇವಣಿ ಬೇಕೆಂದು ನುಗ್ಗಿದರೆ ಯಾವುದೇ ಬ್ಯಾಂಕಾದರೂ ಕೊಡಲು ಸಾಧ್ಯವಾಗುವುದಿಲ್ಲ. ಅದು ಬ್ಯಾಂಕ್ ಬಿಕ್ಕಟ್ಟಿಗೆ ಎಡೆ ಮಾಡಿಕೊಡುತ್ತದೆ.
2008ರ ಹಣಕಾಸು ಬಿಕ್ಕಟ್ಟಿನ ವೇಳೆ ವಾಷಿಂಗ್ಟನ್ ಮ್ಯೂಚುವಲ್ ಎಂಬ ಬ್ಯಾಂಕ್ ಬಾಗಿಲು ಮುಚಿತ್ತು. ಇದು ಅಮೆರಿಕದ ಬ್ಯಾಂಕ್ ಇತಿಹಾಸದಲ್ಲೇ ಅತಿ ದೊಡ್ಡ ಬ್ಯಾಂಕ್ ವೈಫಲ್ಯ ಎಂದು ಪರಿಗಣಿಸಲಾಗಿದೆ. ಅದಾದ ಬಳಿಕ ಸಿಲಿಕಾನ್ ವ್ಯಾಲಿ ಬ್ಯಾಂಕ್ ವಿಫಲಗೊಂಡಿರುವ ಎರಡನೇ ಅತಿದೊಡ್ಡ ಬ್ಯಾಂಕ್. ಈ ಎಸ್ವಿಬಿ ಬೆಂಗಳೂರಿನಲ್ಲೂ ಕಚೇರಿಯನ್ನು ಹೊಂದಿದ್ದು ಹಲವು ಭಾರತೀಯ ಸ್ಟಾರ್ಟಪ್ಗಳಿಗೆ ಹಣಕಾಸು ಆಸರೆಯೂ ಆಗಿದೆ.