ಕಂಪ್ಯೂಟರ್, ಲ್ಯಾಪ್ಟಾಪ್, ಸರ್ವರ್ಗಳ ಆಮದು ಮೇಲೆ ಭಾರತ ಸರ್ಕಾರ ವಿಧಿಸಿರುವ ನಿರ್ಬಂಧಗಳು (Import restrictions) ಅಮೆರಿಕನ್ ಕಂಪನಿಗಳನ್ನು ಒತ್ತಡಕ್ಕೆ ಸಿಲುಕಿಸಿವೆ. ಆ್ಯಪಲ್, ಇಂಟೆಲ್ ಮೊದಲಾದ ಟೆಕ್ ಕಂಪನಿಗಳು ಹಾಗೂ ಅಮೆರಿಕದ ಔದ್ಯಮಿಕ ಸಂಘಟನೆಗಳು ಅಮೆರಿಕ ಸರ್ಕಾರದ ಮೂಲಕ ಭಾರತದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಿವೆ. ‘ಲ್ಯಾಪ್ಟಾಪ್ ಇತ್ಯಾದಿಗಳ ಆಮದು ನಿರ್ಬಂಧ ಮಾಡುವ ಭಾರತದ ಕ್ರಮದಿಂದ ವ್ಯಾಪಾರ ವಹಿವಾಟಿಗೆ ದೊಡ್ಡ ಹಾನಿ ಮಾಡಬಹುದು. ಜಾಗತಿಕ ಸರಬರಾಜು ಸರಪಳಿ ವ್ಯವಸ್ಥೆಯಲ್ಲಿ ಭಾರತವನ್ನು ನಿಕಟವಾಗಿ ಒಳಗೊಳ್ಳುವ ಪ್ರಯತ್ನಗಳಿಗೆ ಹಿನ್ನಡೆಯಾಗುತ್ತದೆ. ಎರಡೂ ದೇಶಗಳ ಉದ್ಯಮಗಳು ಹಾಗೂ ಗ್ರಾಹಕರಿಗೆ ತೊಂದರೆ ಆಗುತ್ತದೆ’ ಎಂದು ಅಮೆರಿಕದ ಟೆಕ್ ಕಂಪನಿಗಳು ಮತ್ತು ಸಂಘಟನೆಗಳು ಅಮೆರಿಕದ ವಾಣಿಜ್ಯ ಇಲಾಖೆಗೆ ಬರೆದ ಪತ್ರದಲ್ಲಿ ದೂರಿವೆ.
ಲ್ಯಾಪ್ಟಾಪ್, ಪಿಸಿ ಆಮದು ನಿರ್ಬಂಧ ನಿರ್ಧಾರವನ್ನು ಮರುಪರಿಶೀಲಿಸುವಂತೆ ಭಾರತದ ಮೇಲೆ ಒತ್ತಡ ಹೇರಬೇಕೆಂದು ಅಮೆರಿಕದ ಎಂಟು ವ್ಯಾಪಾರ ಸಂಘಟನೆಗಳು ತಮ್ಮ ಪತ್ರದಲ್ಲಿ ಅಲ್ಲಿನ ಸರ್ಕಾರವನ್ನು ಒತ್ತಾಯಿಸಿವೆ. ಅಮೆರಿಕದ ಸೆಮಿಕಂಡಕ್ಟರ್ ಇಂಡಸ್ಟ್ರಿ ಅಸೋಷಿಯೇಶನ್, ರಾಷ್ಟ್ರೀಯ ತಯಾರಕರ ಸಂಘ, ಐಟಿಐಸಿ ಇತ್ಯಾದಿ ಔದ್ಯಮಿಕ ಗುಂಪುಗಳು ಈ ಪೈಕಿ ಇವೆ. ಭಾರತದ ಈ ನೀತಿಯಿಂದ ಅಮೆರಿಕನ್ ಮೇಡ್ ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಭಾರತಕ್ಕೆ ಸಾಗಿಸಲು ಅಡ್ಡಿಯಾಗಬಹುದು ಎಂದು ಈ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ.
ಇದನ್ನೂ ಓದಿ: ಬೆಲೆ ಏರಿಕೆ ನಿಯಂತ್ರಿಸಲು ಸರ್ಕಾರದಿಂದ ಈರುಳ್ಳಿ ಮೇಲೆ ಶೇ. 40ರಷ್ಟು ರಫ್ತು ಸುಂಕ, ಈ ವರ್ಷದ ಕೊನೆಯವರೆಗೂ
ಇತ್ತೀಚೆಗೆ ಕೇಂದ್ರದ ವಿದೇಶ ವ್ಯಾಪಾರ ಮಹಾನಿರ್ದೇಶನಾಲಯ (ಡಿಜಿಎಫ್ಟಿ- ಡೈರೆಕ್ಟೋರೇಟ್ ಜನರಲ್ ಆಫ್ ಫಾರೀನ್ ಟ್ರೇಡ್) ಹೊರಡಿಸಿದ ಅಧಿಸೂಚನೆ ಪ್ರಕಾರ, ಪರ್ಸನಲ್ ಕಂಪ್ಯೂಟರ್, ಲ್ಯಾಪ್ಟಾಪ್, ಸರ್ವರ್ ಮೊದಲಾದವುಗಳನ್ನು ಸೂಕ್ತ ಪರವಾನಿಗೆ ಹೊಂದಿದವರು ಮಾತ್ರ ಆಮದು ಮಾಡಿಕೊಳ್ಳಬಹುದು. ಅಂದರೆ, ನಿರ್ಬಂಧಿತ ಆಮದುಗಳಿಗೆ ಲೈಸೆನ್ಸ್ ಇರುವ ಸಂಸ್ಥೆಗಳಿಂದ ಮಾತ್ರ ಇವುಗಳ ಆಮದಿಗೆ ಅವಕಾಶ ಇರುತ್ತದೆ. 2023ರ ನವೆಂಬರ್ 1ಕ್ಕೆ ಈ ಹೊಸ ನಿರ್ಬಂಧ ಜಾರಿಗೆ ಬರುತ್ತದೆ. ಭಾರತದಲ್ಲಿ ಈ ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕೆಗೆ ಉತ್ತೇಜಿಸುವ ಸಲುವಾಗಿ ಸರ್ಕಾರ ಈ ಕ್ರಮ ಕೈಗೊಂಡಿರುವುದು ತಿಳಿದುಬಂದಿದೆ.
ಇದನ್ನೂ ಓದಿ: ಚೀನಾದ ಆರ್ಥಿಕತೆ ಮಾದರಿ ಮತ್ತೆ ಕೆಲಸ ಮಾಡಲು ಸಾಧ್ಯ ಇಲ್ಲ: ಹಿರಿಯ ಹೂಡಿಕೆದಾರನ ಅನಿಸಿಕೆ
ಅ್ಯಪಲ್, ಹೆಚ್ಪಿ, ಡೆಲ್ ಮೊದಲಾದ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಕಂಪನಿಗಳು ಭಾರತ ಸರ್ಕಾರದ ಈ ಹೊಸ ನೀತಿಯನ್ನು ವಿಳಂಬವಾಗಿ ಜಾರಿಗೆ ತರಲು ಒತ್ತಾಯಿಸಿರುವುದು ತಿಳಿದುಬಂದಿದೆ. ಈ ನಿಯಮ ಜಾರಿ ಮಾಡಲು ನವೆಂಬರ್ 1ರ ಬದಲು ಒಂದು ವರ್ಷ ಮುಂದೂಡಿ ಎಂದು ಈ ಕಂಪನಿಗಳು ಕಳೆದ ವಾರ ಒತ್ತಾಯಿಸಿದ್ದವು. ಯಾಕೆಂದರೆ, ಭಾರತ ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಾರ ಭಾರತದಲ್ಲಿ ಮ್ಯಾನುಫ್ಯಾಕ್ಚರಿಂಗ್ ಅಥವಾ ಅಸೆಂಬ್ಲಿಂಗ್ ಯೂನಿಟ್ಗಳನ್ನು ಸ್ಥಾಪಿಸಲು ಕಾಲಾವಕಾಶ ಬೇಕಾಗುತ್ತದೆ ಎಂಬುದು ಈ ಕಂಪನಿಗಳ ವಾದ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ