
ವಾಷಿಂಗ್ಟನ್, ಆಗಸ್ಟ್ 28: ಕೃತಕ ಬುದ್ಧಿಮತ್ತೆ ಸಂಸ್ಥೆಯಾದ ಆಂಥ್ರೋಪಿಕ್ಗೆ (Anthropic) ಅಮೆರಿಕದ ಫೆಡರಲ್ ನ್ಯಾಯಾಲಯದಲ್ಲಿ ಪ್ರಮುಖ ಕಾನೂನು ಜಯ ಸಿಕ್ಕಿದೆ. ಎಐ ಸುರಕ್ಷತಾ ಮಿತಿ ದಾಟುವಂತಿಲ್ಲ ಎಂಬ ಗಟ್ಟಿ ನಿಲುವು ಹೊಂದಿದ್ದಕ್ಕೆ ಪ್ರತಿಯಾಗಿ ಆಂಥ್ರೋಪಿಕ್ ಸಂಸ್ಥೆಯನ್ನು ಕಟ್ಟುಪಟ್ಟಿಗೆ ಸೇರಿಸಿದ್ದ ಅಮೆರಿಕ ಸರ್ಕಾರಕ್ಕೆ ಕೋರ್ಟ್ ತೀರ್ಪು ಹಿನ್ನಡೆ ತಂದಿದೆ. ಅಮೆರಿಕದ ರಕ್ಷಣಾ ಸಚಿವಾಲಯವು (ಪೆಂಟಗನ್) ಆಂಥ್ರೋಪಿಕ್ ಕಂಪನಿಯನ್ನು ‘ರಾಷ್ಟ್ರೀಯ ಭದ್ರತಾ ಪೂರೈಕೆ ಸರಪಳಿ ಅಪಾಯ’ (National Security Supply-Chain Risk) ಎಂದು ವರ್ಗೀಕರಿಸಿ ಕಪ್ಪುಪಟ್ಟಿಗೆ ಸೇರಿಸಿದ್ದ ಆದೇಶವನ್ನು ಅಮೆರಿಕದ ಜಿಲ್ಲಾ ನ್ಯಾಯಾಧೀಶರಾದ ರೀಟಾ ಲಿನ್ ರದ್ದುಗೊಳಿಸಿದ್ದಾರೆ.
ವಿವಾದದ ಹಿನ್ನೆಲೆ: ಆಂಥ್ರೋಪಿಕ್ ಸಂಸ್ಥೆಯು ತನ್ನ ‘ಕ್ಲಾಡ್’ (Claude) AI ಚಾಟ್‌ಬಾಟ್ ಅನ್ನು ಆಂತರಿಕ ಪರಿವೀಕ್ಷಣೆ (Domestic Surveillance) ಅಥವಾ ಸ್ವಾಯತ್ತ ಆಯುಧ ವ್ಯವಸ್ಥೆಗಳಿಗೆ (Autonomous Weapons Systems) ಬಳಸಲು ಯುಎಸ್ ಮಿಲಿಟರಿಗೆ ಅನುಮತಿ ನೀಡಲು ನಿರಾಕರಿಸಿತ್ತು. ಹೀಗಾಗಿ, ಸರ್ಕಾರವು ಈ ಸಂಸ್ಥೆಯನ್ನು ಕಟ್ಟುಪಟ್ಟಿಗೆ ಸೇರಿಸಿದ್ದಿರಬಹುದು ಎನ್ನಲಾಗಿದೆ.
ಕೋರ್ಟ್ ನೀಡಿದ ತೀರ್ಪು: ಸರ್ಕಾರದ ಕ್ರಮವು ಕಾನೂನುಬಾಹಿರ ಹಾಗೂ ಸೇಡು ತೀರಿಸಿಕೊಳ್ಳುವ ತತ್ತ್ವದ ಮೇಲೆ ಆಧಾರಿತವಾಗಿದೆ ಎಂದು ನ್ಯಾಯಾಲಯ ಹೇಳಿದೆ. ರಾಷ್ಟ್ರೀಯ ಭದ್ರತೆಯ ನೆಪವೊಡ್ಡಿ ಸರ್ಕಾರದ ವಿಮರ್ಶಕರ ವಿರುದ್ಧ ಕಾನೂನುಬಾಹಿರವಾಗಿ ಕ್ರಮ ಕೈಗೊಳ್ಳಲು ಬರುವುದಿಲ್ಲ ಮತ್ತು ಇದು ವಾಕ್ ಸ್ವಾತಂತ್ರ್ಯದ (First Amendment) ಉಲ್ಲಂಘನೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
ಪೆಂಟಗನ್ ತೆಗೆದುಕೊಂಡಿದ್ದ ಕಪ್ಪುಪಟ್ಟಿ ನಿರ್ಧಾರದಿಂದಾಗಿ ಕಂಪನಿಗೆ ಕೋಟಿಗಟ್ಟಲೆ ಡಾಲರ್ ಮೌಲ್ಯದ ಮಿಲಿಟರಿ ಒಪ್ಪಂದಗಳು ಕೈತಪ್ಪುವ ಭೀತಿಯಿತ್ತು. ನ್ಯಾಯಾಲಯದ ಈ ತೀರ್ಪು ಆಂಥ್ರೋಪಿಕ್ ಸಂಸ್ಥೆಗೆ ಮತ್ತು ಜವಾಬ್ದಾರಿಯುತ AI ನೀತಿಗಳನ್ನು ಅನುಸರಿಸುವ ತಂತ್ರಜ್ಞಾನ ಕಂಪನಿಗಳಿಗೆ ದೊಡ್ಡ ಜಯ ತಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ