ಭಾರತದ ಪ್ರಮುಖ ಐಟಿ ಕಂಪೆನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ಗೆ (TCS) ಅಮೆರಿಕದ ಜಿಲ್ಲಾ ಕೋರ್ಟ್ 140 ಮಿಲಿಯನ್ (1.40 ಕೋಟಿ) ಅಮೆರಿಕನ್ ಡಾಲರ್ ದಂಡ ವಿಧಿಸಿದೆ. ವಿಸ್ಕನ್ಸಿನ್ನ ವೆಸ್ಟರ್ನ್ ಡಿಸ್ಟ್ರಿಕ್ಟ್ ಇದನ್ನು ಖಾತ್ರಿ ಪಡಿಸಿದೆ. ಎಪಿಕ್ ಸಿಸ್ಟಮ್ಸ್ ಜತೆಗಿನ ವ್ಯಾಜ್ಯದಲ್ಲಿ ಇಷ್ಟು ದೊಡ್ಡ ಮೊತ್ತದ ದಂಡವನ್ನು ಟಿಸಿಎಸ್ ಪಾವತಿ ಮಾಡಬೇಕಾಗಿದೆ. ಈ ತೀರ್ಪಿನ ವಿರುದ್ಧ ಶಿಕಾಗೋದ 7ನೇ ಸರ್ಕ್ಯೂಟ್ ಕೋರ್ಟ್ನಲ್ಲಿ ಮೇಲ್ಮನವಿಯನ್ನು ಸಲ್ಲಿಸಲು ಟಿಸಿಎಸ್ ಆಲೋಚಿಸಿದೆ. “ನಾವು ನಿಮಗೆ ಈ ಮೂಲಕ ತಿಳಿಸುವುದೇನೆಂದರೆ, ಎಪಿಕ್ ಸಿಸ್ಟಮ್ಸ್ ಕಾರ್ಪೊರೇನ್ ವಿಷಯದಲ್ಲಿ ವೆಸ್ಟರ್ನ್ ಡಿಸ್ಟ್ರಿಕ್ಟ್ ಆಫ್ ವಿಸ್ಕನ್ಸಿನ್ ಆದೇಶ ಹೊರಡಿಸಿದ್ದು, ಶಿಕ್ಷಾರ್ಹ ಹಾನಿಗೆ 140 ಮಿಲಿಯನ್ ಅಮೆರಿಕನ್ ಡಾಲರ್ ಪರಿಹಾರ ಮೊತ್ತಕ್ಕೆ ಇಳಿಕೆ ಮಾಡಿದೆ. ಇದರ ಪ್ರಕಾರವಾಗಿ ತಿದ್ದುಪಡಿಯಾದ ತೀರ್ಪನ್ನು ಫೈಲ್ ಮಾಡುವಂತೆ ನ್ಯಾಯಾಲಯ ಗುಮಾಸ್ತೆಗೆ ಸೂಚಿಸಲಾಗಿದೆ,” ಎಂದು ನಿಯಂತ್ರಕ ಫೈಲಿಂಗ್ನಲ್ಲಿ ಟಿಸಿಎಸ್ ತಿಳಿಸಿದೆ.
2021ರ ಆಗಸ್ಟ್ನಲ್ಲಿ ಎಪಿಕ್ ಸಿಸ್ಟಮ್ಸ್ಗೆ 280 ಮಿಲಿಯನ್ ಯುಎಸ್ಡಿ ದಂಡ ಪಾವತಿಸಬೇಕು ಎಂದಿದ್ದ ಆದೇಶವನ್ನು 140 ಮಿಲಿಯನ್ ಯುಎಸ್ಡಿಗೆ ಇಳಿಸಲಾಗಿತ್ತು. 2014ರ ಅಕ್ಟೋಬರ್ನಲ್ಲಿ ಎಪಿಕ್ಗೆ 940 ಮಿಲಿಯನ್ ಡಾಲರ್ ಪಾವತಿಸುವಂತೆ ಟಿಸಿಎಸ್ಗೆ ಸೂಚಿಸಲಾಗಿತ್ತು. ಆ ನಂತರ ಮೊತ್ತವನ್ನು 280 ಮಿಲಿಯನ್ ಡಾಲರ್ಗೆ ಇಳಿಸಲಾಯಿತು.
ಏನಿದು ಪ್ರಕರಣ?
ವ್ಯಾಪಾರ ರಹಸ್ಯಕ್ಕೆ ಸಂಬಂಧಿಸಿದಂತೆ ಅಮೆರಿಕದ ನ್ಯಾಯಾಲಯದಲ್ಲಿ ಟಾಟಾದ ಎರಡು ಕಂಪೆನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮತ್ತು ಟಾಟಾ ಅಮೆರಿಕ ಇಂಟರ್ನ್ಯಾಷನಲ್ ಕಾರ್ಪೊರೇಷನ್ ವಿರುದ್ಧ ಎಪಿಕ್ ಸಿಸ್ಟಮ್ಸ್ ದೂರು ಸಲ್ಲಿಸಿತ್ತು. ಕಂಪೆನಿಯ ವ್ಯಾಪಾರ ರಹಸ್ಯ, ಗೋಪ್ಯ ಮಾಹಿತಿಗಳು ದಾಖಲಾತಿಗಳು ಮತ್ತು ದತ್ತಾಂಶಗಳನ್ನು ಕಳುವು ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.
ಅಮೆರಿಕ ಮೂಲದ ಹೆಲ್ತ್ಕೇರ್ ಸಾಫ್ಟ್ವೇರ್ ಕಂಪೆನಿಯಾದ ಎಪಿಕ್ ಸಿಸ್ಟಮ್ಸ್ ಕೈಸರ್ ಪರ್ಮನೆಂಟೆ ಎಂಬ ಸೇವಾ ಪೂರೈಕೆದಾರರ ಜತೆಗೆ ತನ್ನ ಹೆಲ್ತ್ಕೇರ್ ನಿರ್ವಹಣೆ ವ್ಯವಸಸ್ಥೆಯನ್ನು ಅನುಷ್ಠಾನಗೊಳಿಸಿತ್ತು. ಸಿಸ್ಟಮ್ ಅನುಷ್ಠಾನಕ್ಕೆ ಟಿಸಿಎಸ್ ಅನ್ನು ನೇಮಿಸಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಎಪಿಕ್ ಕಂಪೆನಿಯ ದಾಖಲಾತಿಗಳನ್ನು ನೋಡುವುದರಿಂದ ಟಿಸಿಎಸ್ ಸಿಬ್ಬಂದಿಯನ್ನು ನಿರ್ಬಂಧಿಸಲಾಗಿತ್ತು. ಆದರೆ ಎಪಿಕ್ ಸಿಸ್ಟಮ್ಸ್ ಹೇಳುವಂತೆ, ಕೈಸರ್ ಪರ್ಮನೆಂಟೆ ಉದ್ಯೋಗಿಗಳ ಕ್ರೆಡೆನ್ಷಿಯಲ್ಸ್ಗಳನ್ನು ಬಳಸಿಕೊಂಡು, 6000ದಷ್ಟು ದಾಖಲಾತಿಗಳನ್ನು ಟಿಸಿಎಸ್ ಸಿಬ್ಬಂದಿ ಕಳುವು ಮಾಡಿದ್ದಾರೆ.
ಆದರೆ, ಟಿಸಿಎಸ್ ಈ ತನಕ ಹೇಳಿರುವಂತೆ, ಎಪಿಕ್ ಮಾಹಿತಿಯನ್ನು ದುರ್ಬಳಕೆ ಮಾಡಿಕೊಂಡಿರುವ ಯಾವುದೇ ಸಾಕ್ಷ್ಯ ಇಲ್ಲ. ಮತ್ತು ಇದನ್ನೇ ನ್ಯಾಯಾಲಯದಲ್ಲೂ ಹೇಳುತ್ತಾ ಬಂದಿದೆ.
ಇದನ್ನೂ ಓದಿ: TCS FY22 Q4 Results: ಟಿಸಿಎಸ್ ನಾಲ್ಕನೇ ತ್ರೈಮಾಸಿಕ ಲಾಭ 9926 ಕೋಟಿ ರೂಪಾಯಿ; 22 ರೂ. ಡಿವಿಡೆಂಡ್
Published On - 10:53 am, Tue, 5 July 22