
ನವದೆಹಲಿ, ಸೆಪ್ಟೆಂಬರ್ 2: ಅಮೆರಿಕದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (bilateral trade deal) ಏರ್ಪಡಿಸಲು ಭಾರತ ಮಾತುಕತೆ ನಡೆಸುತ್ತಿದೆ. ಕೇಂದ್ರ ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಮೆರಿಕದ ಮಾತ್ರವಲ್ಲ, ಯೂರೋಪಿಯನ್ ಒಕ್ಕೂಟ, ಚಿಲಿ, ಪೆರು, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಓಮನ್ ಮೊದಲಾದ ದೇಶಗಳೊಂದಿಗೂ ಭಾರತವು ಹೊಸ ವ್ಯಾಪಾರ ಒಪ್ಪಂದಕ್ಕೆ ಪ್ರಯತ್ನಿಸುತ್ತಿರುವುದಾಗಿ ಪೀಯೂಶ್ ಗೋಯಲ್ (Piyush Goyal) ತಿಳಿಸಿದ್ದಾರೆ.
ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕಾಗಿ ಭಾರತ ಮತ್ತು ಅಮೆರಿಕ ಮಧ್ಯೆ ಸಾಕಷ್ಟು ತಿಂಗಳುಗಳಿಂದ ಮಾತುಕತೆ, ಸಂಧಾನಗಳು ನಡೆಯುತ್ತಿವೆ. ಈಗಾಗಲೇ ಎರಡು ಸುತ್ತಿನ ಮಾತುಕತೆ ನಡೆದುಹೋಗಿವೆ. ಆಗಸ್ಟ್ 7ರೊಳಗೆ ಒಪ್ಪಂದವನ್ನು ಅಂತಿಮಗೊಳಿಸಲು ಆಗಿರಲಿಲ್ಲ. ಒಪ್ಪಂದದ ಮಾತುಕತೆಗೆ ಅಮೆರಿಕಕ್ಕೆ ಹೋಗಿದ್ದ ಭಾರತೀಯರ ತಂಡ ಬರಿಗೈಲಿ ಮರಳಿತ್ತು. ಸೆಪ್ಟೆಂಬರ್ನಲ್ಲಿ ಮಾತುಕತೆ ಮುಂದುವರಿಯುತ್ತದೆ ಎಂದು ಹೇಳಲಾಗಿತ್ತು. ಈಗ ಅದು ಪುನಾರಂಭಗೊಂಡಿರಬಹುದು.
ಇದನ್ನೂ ಓದಿ: ಭಾರತದೊಂದಿಗಿನ ವ್ಯಾಪಾರ ಏಕಪಕ್ಷೀಯ ವಿಪತ್ತು; ಡೊನಾಲ್ಡ್ ಟ್ರಂಪ್
ಭಾರತ ಈಗಾಗಲೇ ಯುಕೆ, ಯುಎಇ, ಇಎಫ್ಟಿಎ ಬ್ಲಾಕ್ನೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಅಂತಿಮಗೊಳಿಸಿದೆ. ಅಮೆರಿಕವೂ ಸೇರಿದಂತೆ ಇನ್ನೂ ಹಲವು ದೇಶಗಳೊಂದಿಗೆ ಒಪ್ಪಂದ ಕುದುರಿಸಿ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಭಾರತ ಯೋಜಿಸಿದೆ.
ಭಾರತ ವ್ಯಾಪಾರ ಒಪ್ಪಂದ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಅಮೆರಿಕವು ಆಗಸ್ಟ್ ತಿಂಗಳಲ್ಲಿ ಭಾರತದ ಸರಕುಗಳ ಮೇಲೆ ಶೇ. 25ರಷ್ಟು ಟ್ಯಾರಿಫ್ ಹಾಕಿತ್ತು. ನಂತರ, ರಷ್ಯಾ ಜೊತೆ ವ್ಯವಹರಿಸುತ್ತಿರುವ ಕಾರಣವೊಡ್ಡಿ ಹೆಚ್ಚುವರಿ ಶೇ. 25ರಷ್ಟು ಟ್ಯಾರಿಫ್ ಹಾಕಿದೆ.
ಇದನ್ನೂ ಓದಿ: ಹೊಸ ಗೇಮಿಂಗ್ ಕಾಯ್ದೆ: ಉದ್ಯಮ ಪ್ರತಿನಿಧಿಗಳೊಂದಿಗೆ ಸರ್ಕಾರದ ಸಭೆ; ಇಸ್ಪೋರ್ಟ್, ಸೋಷಿಯಲ್ ಗೇಮ್ಗಳ ಉತ್ತೇಜನಕ್ಕೆ ಮುಂದು
ಅಮೆರಿಕ ತನ್ನ ಕೆಲ ಉತ್ಪನ್ನಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಮುಕ್ತ ಪ್ರವೇಶ ಬಯಸುತ್ತಿದೆ. ಜೋಳ, ಸೋಯಾಬೀನ್, ಸೇಬು, ಆಲ್ಮಂಡ್, ಇಥನಾಲ್ ಮೊದಲಾದ ಉತ್ಪನ್ನಗಳಿಗೆ ಭಾರತ ವಿಧಿಸುತ್ತಿರುವ ಟ್ಯಾರಿಫ್ ಅನ್ನು ನಿಲ್ಲಿಸಬೇಕು, ಅಥವಾ ಕಡಿಮೆ ಮಾಡಬೇಕು. ಅಮೆರಿಕದ ಹಾಲಿನ ಉತ್ಪನ್ನಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಮುಕ್ತ ಅವಕಾಶ ಕೊಡಬೇಕು ಎಂಬುದು ಅಮೆರಿಕದ ಪ್ರಮುಖ ಬೇಡಿಕೆ. ಆದರೆ, ಹೀಗೆ ಮಾಡಿದರೆ ಭಾರತದ ಕೃಷಿ ಮತ್ತು ಹೈನೋದ್ಯಮಕ್ಕೆ ಧಕ್ಕೆಯಾಗುತ್ತದೆ, ಕೋಟ್ಯಂತರ ರೈತರ ಬದುಕು ಮೂರಾಬಟ್ಟೆಯಾಗುತ್ತದೆ ಎಂಬುದು ಭಾರತ ಸರ್ಕಾರಕ್ಕಿರುವ ಕಳವಳ. ಹೀಗಾಗಿ, ಅಮೆರಿಕದೊಂದಿಗೆ ಭಾರತಕ್ಕೆ ಟ್ರೇಡ್ ಡೀಲ್ ಅಂತಿಮಗೊಳಿಸಲು ಆಗುತ್ತಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ