America Stock Market: ಅಮೆರಿಕದ ನಾಸ್ಡಾಕ್ 100 ಸೂಚ್ಯಂಕದ ಮಾರುಕಟ್ಟೆ ಮೌಲ್ಯ 3 ದಿನದಲ್ಲಿ 115.85 ಲಕ್ಷ ಕೋಟಿ ರೂಪಾಯಿ ಉಡೀಸ್

America Stock Market: ಅಮೆರಿಕದ ನಾಸ್ಡಾಕ್ 100 ಸೂಚ್ಯಂಕದ ಮಾರುಕಟ್ಟೆ ಮೌಲ್ಯ 3 ದಿನದಲ್ಲಿ 115.85 ಲಕ್ಷ ಕೋಟಿ ರೂಪಾಯಿ ಉಡೀಸ್
ಸಾಂದರ್ಭಿಕ ಚಿತ್ರ

ಅಮೆರಿಕದ ಷೇರು ಮಾರುಕಟ್ಟೆ ಸೂಚ್ಯಂಕವಾದ ನಾಸ್ಡಾಕ್ 100 ಕೇವಲ 3 ದಿನದ ವಹಿವಾಟಿನಲ್ಲಿ 115.85 ಲಕ್ಷ ಕೋಟಿ ರೂಪಾಯಿ ಕೊಚ್ಚಿಹೋಗಿದೆ.

TV9kannada Web Team

| Edited By: Srinivas Mata

May 10, 2022 | 11:30 AM

ಅಮೆರಿಕದ (America) ನಾಸ್ಡಾಕ್ 100 ಸೂಚ್ಯಂಕದ ಮಾರುಕಟ್ಟೆ ಮೌಲ್ಯ 3 ದಿನದಲ್ಲಿ 1.5 ಲಕ್ಷ ಕೋಟಿ ಯುಎಸ್​ಡಿ ಕೊಚ್ಚಿಹೋಗಿದೆ. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳಬೇಕೆಂದರೆ, 115.85 ಲಕ್ಷ ಕೋಟಿ ಆಗುತ್ತದೆ. ತಂತ್ರಜ್ಞಾನ ಕಂಪೆನಿ ಷೇರುಗಳಲ್ಲಿ ಭಾರೀ ಮಾರಾಟ ಒತ್ತಡ ಕಂಡುಬಂದಿದೆ. ತಂತ್ರಜ್ಞಾನ ಷೇರುಗಳನ್ನು ಒಳಗೊಂಡ ಬೆಂಚ್​ಮಾರ್ಕ್ ಸೋಮವಾರದಂದು ಶೇ 4ರಷ್ಟು ಕುಸಿದಿದೆ. ಯಾವಾಗ ಅಮೆರಿಕದ ಕೇಂದ್ರ ಬ್ಯಾಂಕ್ ಬಡ್ಡಿ ದರವನ್ನು ಅರ್ಧ ಪರ್ಸೆಂಟ್ ಏರಿಕೆ ಮಾಡಿತೋ ಅಲ್ಲಿಂದ ಈಚೆಗೆ ಶೇ 10ರಷ್ಟು ಕುಸಿತ ಕಂಡಿದೆ. ಫೆಡ್​ ಅಧ್ಯಕ್ಷರಾದ ಜೆರೊಮ್ ಪೊವೆಲ್ ಅವರು ನೀಡಿದ ಸುಳಿವಿನಂತೆ ಈ ಏರಿಕೆ ಇನ್ನಷ್ಟು ಮುಂದುವರಿಯಲಿದೆ. 2020ರ ಸೆಪ್ಟೆಂಬರ್ ತಿಂಗಳ ನಂತರ ಮೂರು ದಿನಗಳಲ್ಲಿ ಕಂಡ ಅತಿ ದೊಡ್ಡ ಕುಸಿತ ಇದಾಗಿದೆ ಎಂಬುದನ್ನು ಬ್ಲೂಮ್​ಬರ್ಗ್ ಡೇಟಾ ಸೂಚಿಸಿದೆ.

ಹಾಗಂತ ತಂತ್ರಜ್ಞಾನ ಷೇರುಗಳು ಮಾತ್ರ ಈ ಇಳಿಕೆಯಲ್ಲಿ ಇಲ್ಲ. ಎಸ್​ಅಂಡ್​ಪಿ 500 ಶೇ 3.2ರಷ್ಟು ಇಳಿದು, 3991ಕ್ಕೆ ಮುಕ್ತಾಯಗೊಂಡಿದೆ. ಕೊರೊನಾ ಸಾಂಕ್ರಾಮಿಕದ ಕಾರಣಕ್ಕೆ ಕುಸಿತ ಕಂಡ ಮಾರುಕಟ್ಟೆಯಲ್ಲಿ ಮಾರ್ಚ್ 20,2020ರ ವೇಳೆ ಸತತ ಮೂರು ದಿನ ನಷ್ಟ ಕಂಡಿತ್ತು. ಆ ನಂತರದಲ್ಲಿ ಈಗಿನ ಮೂರು ದಿನ ಬಹಳ ದೊಡ್ಡ ಕುಸಿತ ಇದಾಗಿದೆ. ಈ ವರ್ಷ ನಾಸ್ಡಾಕ್ 100 ಶೇ 25ರಷ್ಟು ಕುಸಿತವಾಗಿದೆ. ಯುಎಸ್​ ಟ್ರೆಷರಿ ಯೀಲ್ಡ್​ (ಇಳುವರಿ) ಏರಿಕೆ, ಹೆಚ್ಚುತ್ತಿರುವ ಹಣದುಬ್ಬರದಿಂದ ಅಮೆರಿಕದ ಆರ್ಥಿಕತೆ ಆರ್ಥಿಕ ಕುಸಿತಕ್ಕೆ ಸಾಕ್ಷಿ ಆಗಬಹುದು ಎಂಬ ಸೂಚನೆ ನೀಡುತ್ತಿದೆ. ಕೊವಿಡ್​-19 ನಂತರ ಇದು ಅತಿದೊಡ್ಡ ಕುಸಿತ ಆಗಿದ್ದು, ಒಂದು ತಿಂಗಳ ಫಾಸಲೆಯೊಳಗೆ ಸೂಚ್ಯಂಕವು ಶೇ 28ರಷ್ಟು ಇಳಿಕೆ ಆಗಿದೆ.

ಮೈಕ್ರೋಸಾಫ್ಟ್ ಕಂಪೆನಿಯ ಮಾರುಕಟ್ಟೆ ಮೌಲ್ಯ 2021ರ ಜೂನ್​ನಿಂದ ಈಚೆಗೆ ಮೊದಲ ಬಾರಿಗೆ ಸೋಮವಾರದಂದು 2 ಲಕ್ಷ ಕೋಟಿ ಡಾಲರ್​ಗಿಂತ ಕೆಳಗೆ ಇಳಿದಿದೆ. ಇನ್ನು ಆಪಲ್ ಕಂಪೆನಿ ಶೇ 3.7ರಷ್ಟು ಇಳಿದು, ಮಾರುಕಟ್ಟೆ ಮೌಲ್ಯ 2.47 ಲಕ್ಷ ಕೋಟಿ ಡಾಲರ್​ಗೆ ಕುಸಿದಿದೆ. ಈ ವರ್ಷ ಶೇ 14ರಷ್ಟು ಕೆಳಗೆ ಇಳಿದಿದೆ. ಕ್ರೌಡ್​ಸ್ಟ್ರೈಕ್ ಹೋಲ್ಡಿಂಗ್ಸ್ ಇಂಕ್, ಓಕ್ತಾ ಇಂಕ್, Zscaler ಇಂಕ್ ನಾಸ್ಡಾಕ್ 100 ಸೂಚ್ಯಂಕದಲ್ಲಿ ಅತಿ ದೊಡ್ಡ ನಷ್ಟ ಕಂಡ ಷೇರುಗಳು. ತಲಾ ಶೇ 26ಕ್ಕಿಂತ ಹೆಚ್ಚು ಇಳಿಕೆ ಆಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Jeff Bezos: ಗಂಟೆಗಳಲ್ಲಿ ಕಾಣದಂತೆ ಮಾಯವಾಯಿತು ಜೆಫ್​ ಬೆಜೋಸ್​ರ 1,56,872 ಕೋಟಿ ಸಂಪತ್ತು

Follow us on

Related Stories

Most Read Stories

Click on your DTH Provider to Add TV9 Kannada