ನವದೆಹಲಿ, ಮಾರ್ಚ್ 11: ಅಮೆರಿಕ ಷೇರು ಮಾರುಕಟ್ಟೆ (US stock market) ಕುಸಿತ ಕಾಣತೊಡಗಿದೆ. ಪ್ರಮುಖ ಎಕ್ಸ್ಚೇಂಜ್ಗಳಾದ ನಾಸ್ಡಾಕ್, ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ ಕುಸಿತ ಕಂಡಿವೆ. ನಾಸ್ಡಾಕ್ ಕಾಂಪೊಸಿಟ್ (Nasdaq composite), ಸ್ಟಾಂಡರ್ಡ್ ಅಂಡ್ ಪೂರ್ಸ್ 500 (Standard and Poor’s), ಡೌ ಜೋನ್ಸ್ ಇಂಡಸ್ಟ್ರಿಯಲ್ ಆ್ಯವರೇಜ್, ಎಸ್ ಅಂಡ್ ಪಿ 500 (S&P500) ಸೂಚ್ಯಂಕಗಳು ನಷ್ಟ ಕಂಡಿವೆ. ಅಮೆರಿಕದ ಅಗ್ರ 500 ಕಂಪನಿಗಳ ಷೇರುಗಳನ್ನು ಟ್ರ್ಯಾಕ್ ಮಾಡುವ ಎಸ್ ಅಂಡ್ ಪಿ 500 ಸೂಚ್ಯಂಕದಲ್ಲಿ ಹೂಡಿಕೆದಾರರು ಒಂದೇ ದಿನದಲ್ಲಿ 4 ಟ್ರಿಲಿಯನ್ ಡಾಲರ್ ನಷ್ಟ ಅನುಭವಿಸಿದ್ದಾರೆ. ಅಂದರೆ, ಬರೋಬ್ಬರಿ 300 ಲಕ್ಷ ಕೋಟಿ ರೂಪಾಯಿಗಿಂತಲೂ ಅಧಿಕ ಹಣ. ಭಾರತದ ಹಾಲಿ ಜಿಡಿಪಿಗಿಂತಲೂ ಹೆಚ್ಚು ಸಂಪತ್ತು ಒಂದೇ ದಿನದಲ್ಲಿ ಮುರುಟಿಹೋಗಿದೆ.
ಅಮೆರಿಕದ ತಂತ್ರಜ್ಞಾನ ಕಂಪನಿಗಳ ಷೇರುಗಳು ನಿನ್ನೆಯ ಟ್ರೇಡಿಂಗ್ ದಿನ ಬಹಳ ಅತಿಹೆಚ್ಚು ಹಿನ್ನಡೆ ಕಂಡವು. 2022ರ ಬಳಿಕ ಇಂಟ್ರಾಡೇ ಟ್ರೇಡಿಂಗ್ನಲ್ಲಿ ಅತಿಹೆಚ್ಚು ನಷ್ಟ ಕಂಡಿವೆ ಈ ಟೆಕ್ನಾಲಜಿ ಸ್ಟಾಕ್ಗಳು. ಷೇರುಗಳು ಮಾತ್ರವಲ್ಲ, ಬೇರೆ ಬೇರೆ ಆಸ್ತಿಗಳೂ ಕೂಡ ಹಿನ್ನಡೆ ಕಂಡಿವೆ. ಕಾರ್ಪೊರೇಟ್ ಬಾಂಡ್, ಅಮೆರಿಕದ ಡಾಲರ್, ಕ್ರಿಪ್ಟೋಕರೆನ್ಸಿ ಇತ್ಯಾದಿ ವರ್ಗದ ಆಸ್ತಿಗಳೂ ಕೂಡ ನಷ್ಟ ಕಂಡಿವೆ. ನೈಜ ಸಂಪತ್ತುಗಳೆನಿಸಿದ ಚಿನ್ನ, ಬೆಳ್ಳಿ ಇತ್ಯಾದಿಗಳು ಮಾತ್ರವೇ ಮೌಲ್ಯ ಹೆಚ್ಚಿಸಿಕೊಂಡಿದ್ದು.
ಎಲ್ಲರ ನಿರೀಕ್ಷೆಯಂತೆ ಅಮೆರಿಕದ ಷೇರು ಮಾರುಕಟ್ಟೆಯ ಕುಸಿತಕ್ಕೆ ಡೊನಾಲ್ಡ್ ಟ್ರಂಪ್ ಅವರ ನೀತಿಗಳೇ ಪ್ರಮುಖ ಕಾರಣವಾಗಿವೆ. ತಮ್ಮ ಟ್ಯಾರಿಫ್ ಹೇರಿಕೆಯ ನೀತಿಯನ್ನು ಆಚರಣೆಗೆ ತರಲು ಬದ್ಧರಾಗಿರುವುದಾಗಿ ಟ್ರಂಪ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದು ಹೂಡಿಕೆದಾರರಿಗೆ ಇದ್ದ ಒಂದು ಭರವಸೆಯ ಕಿರಣ ನಶಿಸಿಹೋದಂತಾಗಿದೆ.
ಇದನ್ನೂ ಓದಿ: ಜ್ಯಾಕ್ಪಾಟ್ ತರುವ ಮಲ್ಟಿಬ್ಯಾಗರ್ ಷೇರು ಪತ್ತೆ ಮಾಡುವುದು ಹೇಗೆ? ಕ್ರಿಸ್ ಮೇಯರ್ ಫಾರ್ಮುಲಾ ಇದು
ಅಮೆರಿಕದ ಟ್ಯಾರಿಫ್ ನೀತಿ ಆತ್ಮಹತ್ಯೆಗೆ ಸಮ ಎಂಬುದು ಹಲವು ತಜ್ಞರ ಅನಿಸಿಕೆ. ಟ್ಯಾರಿಫ್ ಹೇರಿಕೆಯಿಂದ ಅಮೆರಿಕದಲ್ಲಿ ಹಣದುಬ್ಬರ ಹೆಚ್ಚುತ್ತದೆ. ಆರ್ಥಿಕತೆಗೆ ಹಿನ್ನಡೆಯಾಗುತ್ತದೆ ಎನ್ನುವ ಭೀತಿ ಇದೆ. ಇದಕ್ಕೆ ಪೂರಕವಾಗಿ ಅಮೆರಿಕದ ವಿವಿಧ ಸೂಚಕಗಳು ಆರ್ಥಿಕ ಹಿನ್ನಡೆಯನ್ನು ಬಿಂಬಿಸುತ್ತಿವೆ.
ಹಣದುಬ್ಬರ ಏರಿಕೆ ಆಗಲಿರುವುದರಿಂದ ಬಡ್ಡಿದರ ಇಳಿಕೆಯಾಗುವ ಸಂಭವ ಇಲ್ಲ. ಈಗಾಗಲೇ ಫೆಡರಲ್ ರಿಸರ್ವ್ನ ಮುಖ್ಯಸ್ಥ ಜೆರೋಮ್ ಪೋವೆಲ್ ಅವರು ಮುಂಬರುವ ತಿಂಗಳುಗಳಲ್ಲಿ ಇದೇ ಬಡ್ಡಿದರ ಮುಂದುವರಿಸುವುದಾಗಿ ಹೇಳಿದ್ದಾರೆ. ಇವೆಲ್ಲವೂ ಕೂಡ ಷೇರು ಮಾರುಕಟ್ಟೆಯ ಕುಸಿತಕ್ಕೆ ಎಡೆ ಮಾಡಿಕೊಡುತ್ತಿರಬಹುದು.
ಅಮೆರಿಕದ ಷೇರು ಮಾರುಕಟ್ಟೆ ಕುಸಿತ ಕಾಣುತ್ತಿರುವಂತೆಯೇ, ಭಾರತದ ಈಕ್ವಿಟಿಗಳಲ್ಲಿ ಹೂಡಿಕೆ ಮಾಡಿದವರಿಗೆ ನಡುಕ ಉಂಟಾಗಿದೆ. ಭಾರತದ ಷೇರು ಮಾರುಕಟ್ಟೆ ಕೂಡ ಹಿನ್ನಡೆ ಕಾಣಬಹುದು ಎಂದು ಹಲವರು ನಿರೀಕ್ಷಿಸಿದ್ದಾರೆ. ಅದರಂತೆ, ಇವತ್ತು ಮಂಗಳವಾರ ನಿಫ್ಟಿ ಮತ್ತು ಸೆನ್ಸೆಕ್ಸ್ ಎರಡೂ ಕೂಡ ನಷ್ಟ ಕಂಡಿವೆ. ಕಳೆದ ಮೂರ್ನಾಲ್ಕು ಸೆಷನ್ಗಳಲ್ಲಿ ಹೆಚ್ಚಳವಾಗಿದ್ದ ಷೇರುಬಜಾರು ಈಗ ಮತ್ತೆ ಹಿನ್ನಡೆಯ ಹಾದಿಗೆ ಬಂದಿದೆ.
ಇದನ್ನೂ ಓದಿ: ಭಾರತದ ಷೇರುಪೇಟೆ W ಆಕಾರದಲ್ಲಿ ಚೇತರಿಕೆ ಕಾಣಲಿದೆಯಂತೆ; ಏನಿದು ಡಬ್ಲ್ಯು ಶೇಪ್ ರಿಕವರಿ?
ಅಮೆರಿಕಕ್ಕೆ ರಫ್ತು ಮಾಡುವ ಬಿಸಿನೆಸ್ನಲ್ಲಿರುವ ಕಂಪನಿಗಳ ಷೇರುಗಳನ್ನು ಖರೀದಿಸಬೇಡಿ ಎಂದು ತಜ್ಞರು ಸಲಹೆ ನೀಡುತ್ತಿದ್ದಾರೆ. ಅಂದರೆ, ಇನ್ಫೋಸಿಸ್ ಇತ್ಯಾದಿ ಐಟಿ ಸ್ಟಾಕ್ಗಳಿಂದ ಸದ್ಯಕ್ಕೆ ದೂರ ಇರಿ ಎನ್ನುವುದು ಇವರ ಕಿವಿಮಾತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:02 am, Tue, 11 March 25