Tariff war: ಅಮೆರಿಕ ವರ್ಸಸ್ ಕೆನಡಾ, ಮೆಕ್ಸಿಕೋ ಚೀನಾ ತೆರಿಗೆ ಯುದ್ಧ; ಭಾರತಕ್ಕಿದೆ ಲಾಭ
US tariff war against Mexico, Canada and China: ಅಮೆರಿಕದ ಸರುಕುಗಳ ಮೇಲೆ ಕೆನಡಾ ಶೇ. 25ರಷ್ಟು ಆಮದು ಸುಂಕ ಹೇರಿಕೆ ಮಾಡಿದೆ. ಮೆಕ್ಸಿಕೋ ಸರ್ಕಾರ ಕೂಡ ಅಮೆರಿಕದ ಸರುಕುಗಳಿಗೆ ತೆರಿಗೆ ಹಾಕಲಿದೆ. ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೆನಡಾ, ಮೆಕ್ಸಿಕೋ ಮತ್ತು ಚೀನಾದ ಸರಕುಗಳ ಮೇಲೆ ಆಮದು ಸುಂಕ ಹೇರಿಗೆ ಮಾಡಿದ್ದರು. ಅಮೆರಿಕದ ಈ ಕ್ರಮದಿಂದ ಭಾರತಕ್ಕೆ ಪ್ರಯೋಜನವಾಗಲಿದ್ದು, ಅಮೆರಿಕಕ್ಕೆ ಭಾರತ ಹೆಚ್ಚು ರಫ್ತು ಮಾಡಲು ಅವಕಾಶ ಸಿಕ್ಕಂತಾಗುತ್ತದೆ.

ನವದೆಹಲಿ, ಫೆಬ್ರುವರಿ 2: ಡೊನಾಲ್ಡ್ ಟ್ರಂಪ್ ಅವರು ಮೆಕ್ಸಿಕೋ, ಕೆನಡಾ ಮತ್ತು ಚೀನಾದ ಸರಕುಗಳ ಮೇಲೆ ಆಮದು ಸುಂಕ ವಿಧಿಸಿದ ಬೆನ್ನಲ್ಲೇ ಇದೀಗ ಈ ದೇಶಗಳು ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳತೊಡಗಿವೆ. ಅಮೆರಿಕದ ಸರಕುಗಳ ಮೇಲೆ ಕೆನಡಾ ಶೇ. 25ರಷ್ಟು ಆಮದು ತೆರಿಗೆ ಹಾಕಿದೆ. ಕೆನಡಾ ಕೂಡ ಇದೇ ಹಾದಿ ತುಳಿಯಲು ನಿರ್ಧರಿಸಿದ್ದು, ಶೀಘ್ರವೇ ಆಮದು ಸುಂಕ ಹೇರಿಕೆ ಕ್ರಮ ಘೋಷಿಸುವ ಸಂಭಾವ್ಯತೆ ಇದೆ.
ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬಂದ ಬೆನ್ನಲ್ಲೇ ತಾನು ಅಮೆರಿಕನ್ ನಾಗರಿಕರಿಗೆ ತೆರಿಗೆ ಹಾಕಲ್ಲ, ಬೇರೆ ದೇಶಗಳಿಗೆ ತೆರಿಗೆ ಹಾಕುತ್ತೇನೆ ಎಂದು ಘಂಟಾಘೋಷವಾಗಿ ಹೇಳಿದ್ದರು. ಅದರಂತೆ, ಮೆಕ್ಸಿಕೋ, ಕೆನಡಾ ಮತ್ತು ಚೀನಾ ದೇಶಗಳ ಸರಕುಗಳ ಮೇಲೆ ಆಮದು ಸುಂಕ ವಿಧಿಸಿರುವುದಾಗಿ ಕಳೆದ ವಾರ ಘೋಷಿಸಿದ್ದರು. ಮೆಕ್ಸಿಕೋದ ಸರಕುಗಳ ಮೇಲೆ ಶೇ. 25ರಷ್ಟು ಆಮದು ತೆರಿಗೆ ವಿಧಿಸಲಾಗಿದೆ. ಕೆನಡಾದ ಇಂಧನ ಆಮದುಗಳ ಮೇಲೆ ಶೇ. 10, ಹಾಗೂ ಇಂಧನೇತರ ಸರಕುಗಳ ಮೇಲೆ ಶೇ. 25ರಷ್ಟು ತೆರಿಗೆ ವಿಧಿಸುತ್ತಿದೆ ಅಮೆರಿಕ. ಇನ್ನು, ಚೀನಾದ ಮೇಲೆ ಶೇ. 10ರಷ್ಟು ಹೆಚ್ಚುವರಿ ತೆರಿಗೆಯನ್ನು ಹೇರಲಾಗಿದೆ. ಈ ದೇಶಗಳಿಂದ ಅಕ್ರಮವಾಗಿ ಡ್ರಗ್ಗಳು ಅಮೆರಿಕಕ್ಕೆ ಹರಿದುಬರುತ್ತಿರುವುದರಿಂದ ತಾನು ಈ ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ಟ್ರಂಪ್ ಹೇಳಿದ್ದಾರೆ.
ಇದನ್ನೂ ಓದಿ: ವೆಬ್ಸೈಟ್ ಗಳಿಂದ ‘ಲಿಂಗ ಸಿದ್ಧಾಂತ’ವನ್ನು ತೆಗೆದುಹಾಕಲು ಏಜೆನ್ಸಿಗಳಿಗೆ ಆದೇಶ ನೀಡಿದ ಟ್ರಂಪ್
ಈಗ ಕೆನಡಾ ದೇಶವೂ ಅಮೆರಿಕದ ವಸ್ತುಗಳ ಮೇಲೆ ಶೇ. 25ರಷ್ಟು ತೆರಿಗೆ ವಿಧಿಸಿದೆ. 155 ಬಿಲಿಯನ್ ಡಾಲರ್ ಮೊತ್ತದ ಸರಕುಗಳು ಅಮೆರಿಕದಿಂದ ಕೆನಡಾಗೆ ರಫ್ತಾಗುತ್ತವೆ. ಇವುಗಳ ಮೇಲೆ ಶೇ. 25ರಷ್ಟು ತೆರಿಗೆ ವಿಧಿಸಿದರೆ ಅಮೆರಿಕದ ಆದಾಯಕ್ಕೆ ಹೊಡೆತ ಬೀಳಬಹುದು. ಆದರೆ, ಈ ಮೂರು ದೇಶಗಳು ಪ್ರತಿಕ್ರಮ ತೆಗೆದುಕೊಳ್ಳಬಹುದು ಎಂದು ಅಂದಾಜು ಮಾಡಿದ್ದ ಟ್ರಂಪ್ ಅವರು, ಈ ತೆರಿಗೆ ಯುದ್ಧವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಸುಳಿವನ್ನೂ ನೀಡಿದ್ದಾರೆ.
ಅಮೆರಿಕದ ತೆರಿಗೆ ಯುದ್ಧದಿಂದ ಭಾರತಕ್ಕಿದೆ ಉಪಯೋಗ…
ಕೆನಡಾ, ಚೀನಾ ಮತ್ತು ಮೆಕ್ಸಿಕೋದ ಮೇಲೆ ಅಮೆರಿಕ ಆಮದು ತೆರಿಗೆ ಹೇರಿಕೆ ಮಾಡಿರುವ ಕ್ರಮವು ಭಾರತಕ್ಕೆ ಪರೋಕ್ಷವಾಗಿ ಸಹಾಯವಾಗುವ ನಿರೀಕ್ಷೆ ಇದೆ. ಭಾರತದ ರಫ್ತಿಗೆ ಅಮೆರಿಕ ದೊಡ್ಡ ಮಾರುಕಟ್ಟೆಯಾಗಿದೆ. ಅಮೆರಿಕಕ್ಕೆ ಭಾರತ ಹಲವು ಸರಕುಗಳನ್ನು ರಫ್ತು ಮಾಡುತ್ತದೆ. ಇದರಲ್ಲಿ ಅಗ್ರ 25 ಸರಕುಗಳನ್ನು ತೆಗೆದುಕೊಂಡರೆ, ಇವುಗಳ ರಫ್ತು ಪಾಲು ಶೇ. 75ರಷ್ಟಾಗುತ್ತದೆ.
ಇದನ್ನೂ ಓದಿ: ಬಜೆಟ್ನಿಂದ ಅನುಭೋಗ ಆರ್ಥಿಕತೆಗೆ ಹೇಗೆ ಪುಷ್ಟಿ ಸಿಗುತ್ತೆ? ಇಲ್ಲಿದೆ ಸರಳ ವಿವರಣೆ
ಅಮೆರಿಕ ಈ ಸರಕುಗಳನ್ನು ಭಾರತದಿಂದ ಮಾತ್ರವಲ್ಲ, ಬೇರೆ ದೇಶಗಳಿಂದಲೂ ಆಮದು ಮಾಡುತ್ತದೆ. ಈ ಭಾರತೀಯ ಸರಕುಗಳು ಅಮೆರಿಕದ ಆಮದುಗಳಲ್ಲಿ ಹೊಂದಿರುವ ಪಾಲು ಶೇ. 2.9 ಮಾತ್ರ. ಆದರೆ, ಈ ಸರಕುಗಳ ರಫ್ತಿನಲ್ಲಿ ಕೆನಡಾ ಮತ್ತು ಮೆಕ್ಸಿಕೋ ಶೇ. 28.7 ಪಾಲು ಹೊಂದಿವೆ.
ಈಗ ಕೆನಡಾ ಮತ್ತು ಮೆಕ್ಸಿಕೋ ಮೇಲೆ ಅಮೆರಿಕ ಆಮದು ಸುಂಕ ವಿಧಿಸಿರುವುದರಿಂದ ಭಾರತಕ್ಕೆ ಇವೇ ಸರಕುಗಳ ರಫ್ತು ಹೆಚ್ಚಿಸಲು ಸುವರ್ಣಾವಕಾಶ ಸಿಕ್ಕಂತಾಗಿದೆ. ಆಭರಣ, ಕಬ್ಬಿಣ, ಉಕ್ಕು, ಇತ್ಯಾದಿ ವಸ್ತುಗಳ ರಫ್ತು ಹೆಚ್ಚಿಸಲು ಭಾರತಕ್ಕೆ ಸಾಧ್ಯವಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ