Bengaluru: ಬೆಂಗಳೂರು ಟು ಅಗಾರ್ತಲ; ಆಗಸ್ಟ್ 1ರಿಂದ ವಿಸ್ತಾರ ಏರ್ಲೈನ್ಸ್ ವಿಮಾನ ಸೇವೆ
Vistara Airlines Flight Agartala to Bengaluru: ತ್ರಿಪುರಾ ರಾಜ್ಯದ ರಾಜಧಾನಿ ಅಗಾರ್ತಲದಿಂದ ಬೆಂಗಳೂರಿಗೆ ಒಂದು ವಿಮಾನ ಹಾರಾಟ ನಡೆಸಲು ವಿಸ್ತಾರ ಏರ್ಲೈನ್ ನಿರ್ಧರಿಸಿದೆ. ಆಗಸ್ಟ್ 1ರಿಂದ ಇದರ ಸೇವೆ ಇರಲಿದೆ.
ಬೆಂಗಳೂರು: ತ್ರಿಪುರಾ ರಾಜ್ಯದ ರಾಜಧಾನಿ ಅಗಾರ್ತಲದಿಂದ ಬೆಂಗಳೂರಿಗೆ ಒಂದು ವಿಮಾನ ಹಾರಾಟ ನಡೆಸಲು ವಿಸ್ತಾರ ಏರ್ಲೈನ್ (Vistara Airlines) ನಿರ್ಧರಿಸಿದೆ. ಆಗಸ್ಟ್ 1ರಿಂದ ಇದರ ಸೇವೆ ಇರಲಿದೆ. ಇದರೊಂದಿಗೆ ಅಗಾರ್ತಲ ಮತ್ತು ಬೆಂಗಳೂರು ಮಾರ್ಗದಲ್ಲಿ ಒಟ್ಟು 4 ವಿಮಾನಗಳ ಹಾರಾಟ ನಡೆಯಲಿದೆ. ಇಂಡಿಗೋ ಏರ್ಲೈನ್ಸ್ ಮತ್ತು ಆಕಾಸ ಏರ್ಲೈನ್ಸ್ ಸಂಸ್ಥೆಗಳು 3 ವಿಮಾನಗಳನ್ನು ಈ ಮಾರ್ಗದಲ್ಲಿ ಚಲಾಯಿಸುತ್ತಿವೆ. ಇಂಡಿಗೋ ಮತ್ತು ಆಕಾಸದ ಸಾಲಿಗೆ ವಿಸ್ತಾರ ಸೇರಿಕೊಂಡಿದೆ. ಯಾವ್ಯಾವ ದಿನಗಳಂದು ವಿಸ್ತಾರ ವಿಮಾನವು ಬೆಂಗಳೂರು ಮತ್ತು ಅಗಾರ್ತಲ ಮಧ್ಯೆ ಸಂಚರಿಸಲಿದೆ ಎಂಬ ಮಾಹಿತಿ ಇನ್ನಷ್ಟೇ ಬರಬೇಕಿದೆ.
‘ಆಗಸ್ಟ್ 1ರಿಂದ ಅಗಾರ್ತಲ ಮತ್ತು ಬೆಂಗಳೂರು ಮಾರ್ಗದಲ್ಲಿ ಒಂದು ಫ್ಲೈಟ್ ಬಿಡಲು ವಿಸ್ತಾರ ಯೋಜಿಸಿದೆ. ಬೆಂಗಳೂರಿನಿಂದ ವಿಮಾನ ಹೊರಟು ನೇರವಾಗಿ ಅಗಾರ್ತಲಗೆ ಬಂದಿಳಿಯಲಿದೆ. ಇಲ್ಲಿಂದ ವಾಪಸ್ ಹೋಗುವಾಗ ಅಸ್ಸಾಂನ ಗುವಾಹತಿ ಮೂಲಕ ಬೆಂಗಳೂರು ತಲುಪಲಿದೆ. ಇದರಿಂದ ಬಹಳ ಮಂದಿಗೆ ಅನುಕೂಲವಾಗಲಿದೆ,’ ಎಂದು ತ್ರಿಪುರಾದ ಮಹಾರಾಜ ಬೀರ್ ಬಿಕ್ರಮ್ ವಿಮಾನ ನಿಲ್ದಾಣ (ಎಂಬಿಬಿ ಏರ್ಪೋರ್ಟ್) ನಿರ್ದೇಶಕ ಕೆ.ಸಿ. ಮೀನಾ ಹೇಳಿದರೆಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬೆಂಗಳೂರಿನಲ್ಲಿ ಈಶಾನ್ಯ ಭಾರತದ ರಾಜ್ಯಗಳಿಂದ ಬಂದವರು ಬಹಳ ಮಂದಿ ನೆಲಸಿದ್ದಾರೆ. ಅಸ್ಸಾಂ, ಮೇಘಾಲಯ, ತ್ರಿಪುರಾ, ಮಣಿಪುರ ಮತ್ತು ಸಿಕ್ಕಿಂ ರಾಜ್ಯಗಳ ಬಹಳಷ್ಟು ಜನರು ಬೆಂಗಳೂರಿನಲ್ಲಿದ್ದಾರೆ. ಹೀಗಾಗಿ, ಬೆಂಗಳೂರು ಮತ್ತು ಅಗಾರ್ತಲ ಮಾರ್ಗದಲ್ಲಿ ವಿಮಾನಗಳಿಗೆ ಬಹಳ ಬೇಡಿಕೆ ಇದೆ. ತ್ರಿಪುರಾ ಸಿಎಂ ಮಾಣಿಕ್ ಸಾಹ ಅವರು ಈ ಮಾರ್ಗದಲ್ಲಿ ಇನ್ನಷ್ಟು ವಿಮಾನ ಹಾರಾಟ ಆರಂಭಿಸುವಂತೆ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಈ ಹಿಂದೆ ಒತ್ತಾಯಿಸಿದ್ದರು.
ಸದ್ಯ, ತ್ರಿಪುರಾದ ಎಂಬಿಬಿ ಏರ್ಪೋರ್ಟ್ನಲ್ಲಿ 4 ಏರ್ಲೈನ್ಸ್ಗೆ ಸೇರಿದ 34-36 ವಿಮಾನಗಳು ದಿನವೂ ಹಾರಾಡುತ್ತವೆ. ದಿನಕ್ಕೆ 4,500 ಪ್ರಯಾಣಿಕರು ಓಡಾಡುತ್ತಾರೆ.
ಇದನ್ನೂ ಓದಿ: Nevin Shetty: ಅಮೆರಿಕದಲ್ಲಿ ನವೀನ್ ಶೆಟ್ಟಿ ಕರ್ಮಕಾಂಡ; ಕಂಪನಿಯ 290 ಕೋಟಿ ರೂ ಕದ್ದು ಎಲ್ಲಾ ಕಳೆದುಕೊಂಡ ಮಾಜಿ ಸಿಎಫ್ಒ
ಬೆಂಗಳೂರಿನಿಂದ ಈಶಾನ್ಯ ಭಾರತದ ಎಲ್ಲಾ ರಾಜ್ಯಗಳ ರಾಜಧಾನಿ ನಗರಿಗಳಿಗೂ ವಿಮಾನ ಹಾರಾಟ ಇದೆ. ಗುವಾಹಟಿಗೆ ಹೆಚ್ಚು ಫ್ಲೈಟ್ಗಳಿವೆ. ಬೆಂಗಳೂರಿನಿಂದ ಅಗಾರ್ತಲಗೆ ಹೋಗುವ ವಿಮಾನಗಳ ದರ 7,500 ರೂನಿಂದ 10,000 ರೂವರೆಗೂ ಇದೆ.