
ವಾಷಿಂಗ್ಟನ್, ಸೆಪ್ಟೆಂಬರ್ 18: ಹೂಡಿಕೆ ರಂಗದ ಮಹಾ ಮಾಂತ್ರಿಕನಾಗಿರುವ 96ರ ವಯಸ್ಸಿನ ವಾರನ್ ಬಫೆಟ್ ಕೊನೆಗೂ ಸಕ್ರಿಯ ಉದ್ದಿಮೆಗಾರಿಕೆಯಿಂದ ಹೊರಬರುತ್ತಿದ್ದಾರೆ. ಅವರು ಬರ್ಕ್ಶೈರ್ ಹಾಥವೇ ಸಂಸ್ಥೆಯ ಛೇರ್ಮನ್ ಸ್ಥಾನದಿಂದ ಹೊರ ನಡೆಯುತ್ತಿದ್ದಾರೆ. ಈ ವಿಚಾರವನ್ನು ಸಂಸ್ಥೆಯೆ ಬಹಿರಂಗಪಡಿಸಿದೆ. ವಾರನ್ ಬಫೆಟ್ ಅವರನ್ನು ಗೌರವ ಛೇರ್ಮನ್ ಸ್ಥಾನಕ್ಕೆ ನಿಯೋಜಿಸಲಾಗಿದೆ ಎಂದು ಬರ್ಕ್ಶೈರ್ ಹಾಥವೇ ಸಂಸ್ಥೆ ಹೇಳಿಕೆ ನೀಡಿದೆ. ಬಫೆಟ್ ಅವರು ಕಂಪನಿಯ ನಿರ್ದೇಶಕರ ಮಂಡಳಿಯ ಸದಸ್ಯರಾಗಿ ಮುಂದುವರಿಯಲಿದ್ದಾರೆ. ಕಂಪನಿಯ ಅಧ್ಯಕ್ಷ ಸ್ಥಾನಕ್ಕೆ ವಾರನ್ ಅವರ ಮಗ ಹೋವಾರ್ಡ್ ಗ್ರಹಾಮ್ ಅವರನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ.‘
ಹೊಸ ತಲೆಮಾರಿನ ಮಂದಿಗೆ ನಾಯಕತ್ವ ವಹಿಸಬೇಕೆಂದು ಸಂಸ್ಥೆ ನಿರ್ಧರಿಸಿದ ಬೆನ್ನಲ್ಲೇ ವಾರನ್ ಬಫೆಟ್ ಅವರು ತಮ್ಮ ಅಧ್ಯಕ್ಷ ಸ್ಥಾನದಿಂದ ಹಿಂದಕ್ಕೆ ಸರಿಯಲು ನಿರ್ಧರಿಸಿದ್ದಾರೆ. ಒಂದು ಹಂತದಲ್ಲಿ ಜವಳಿ ತಯಾರಕ ಸಂಸ್ಥೆಯಾಗಿ ದಿವಾಳಿ ಅಂಚಿನಲ್ಲಿದ್ದ ಬರ್ಕ್ಶೈರ್ ಅನ್ನು ಇವತ್ತು ವಿಶ್ವದ ಅತಿದೊಡ್ಡ ಸಂಸ್ಥೆಗಳಲ್ಲಿ ಒಂದೆನಿಸುವ ಮಟ್ಟಕ್ಕೆ ಬೆಳೆಸಿದ ಶ್ರೇಯಸ್ಸು ಮತ್ತು ಶ್ರಮ ವಾರನ್ ಬಫೆಟ್ ಅವರದ್ದು.
ಇದನ್ನೂ ಓದಿ: ಟಾಟಾ ಸನ್ಸ್ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಮರುನೇಮಕಕ್ಕೆ ಮಂಡಳಿ ಅನುಮೋದನೆ; ನೋಯೆಲ್ ಟಾಟಾ ವಿರೋಧ
ವಾರನ್ ಬಫೆಟ್ ಅವರು ಅಪ್ರತಿಮ ಹೂಡಿಕೆದಾರರಾಗಿದ್ದಾರೆ. ಅವರು ಉದ್ಯಮಿಯೂ ಹೌದು, ಹೂಡಿಕೆದಾರರೂ ಹೌದು. ಅವರ ಬಹುತೇಕ ಎಲ್ಲಾ ಹೂಡಿಕೆ ನಿರ್ಧಾರಗಳು ಕಾಲಾನುಕ್ರಮದಲ್ಲಿ ಸಖೇದಾಶ್ಚರ್ಯ ಮೂಡಿಸಿವೆ. ಅವರು ಹೂಡಿಕೆ ಮಾಡಿದ್ದೆಲ್ಲವೂ ಚಿನ್ನ ಎನಿಸಿವೆ. ವಿಶ್ವದ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ವಾರನ್ ಬಫೆಟ್ ನಿಲ್ಲುತ್ತಾರೆ. ಬಹಳ ದೊಡ್ಡ ಶ್ರೀಮಂತರಾದರೂ ಅವರ ವೈಯಕ್ತಿಕ ಜೀವನ ಬಹಳ ಸರಳ ಹಾಗೂ ಶಿಸ್ತಿನಿಂದ ಕೂಡಿದೆ.
ವಾರನ್ ಬಫೆಟ್ ಶ್ರೀಮಂತರಾದರೂ ಐಷಾರಾಮಿ ಜೀವನಕ್ಕೆ ವಾಲಲಿಲ್ಲ. ದೊಡ್ಡ ಬಂಗಲೆ, ದೊಡ್ಡ ಕಾರುಗಳ ಗೀಳಿಗೆ ಸಿಲುಕಿದವರಲ್ಲ. ಅವರ ಮಕ್ಕಳನ್ನೂ ಹಾಗೆಯೇ ಬೆಳೆಸಿದ್ದಾರೆ. ಕುತೂಹಲ ಎಂದರೆ, ವಾರನ್ ಬಫೆಟ್ ಅವರ ಮೂವರು ಮಕ್ಕಳಿಗೆ ತಮ್ಮ ತಂದೆ ದೊಡ್ಡ ಶ್ರೀಮಂತ ಎನ್ನುವ ವಿಚಾರ ಅವರು ದೊಡ್ಡವರಾಗುವವರೆಗೂ ತಿಳಿದೇ ಇರಲಿಲ್ಲವಂತೆ.
ಇದನ್ನೂ ಓದಿ: Car 4 Cylinder: ಕಾರಿನಲ್ಲಿ 4 ಸಿಲಿಂಡರ್ ಎಂಜಿನ್ ಎಂದರೇನು? ಅದು ಹೇಗೆ ಕೆಲಸ ಮಾಡುತ್ತದೆ?
ಮಕ್ಕಳು ಸರ್ಕಾರಿ ಶಾಲೆಗೆ ಹೋಗುತ್ತಿದ್ದರು. ಬಸ್ಸಿನಲ್ಲೇ ಪ್ರಯಾಣಿಸುತ್ತಿದ್ದರು. ಕಂಡು ಕಂಡಿದ್ದನ್ನೆಲ್ಲಾ ಕೇಳುತ್ತಿದ್ದವರಲ್ಲ. ಅದು ಕೇಳಿದ್ದರೂ ಅಪ್ಪ ಕೊಡಿಸುತ್ತಿದ್ದವರಲ್ಲ. ಓದೇ ಎಲ್ಲವೂ ಅಲ್ಲ ಎಂಬುದು ವಾರನ್ ಬಫೆಟ್ಗೆ ಗೊತ್ತಿದ್ದರಿಂದ ಅವರ ಮಕ್ಕಳು ದೊಡ್ಡ ಡಿಗ್ರಿಗಳನ್ನು ಪಡೆದವರಲ್ಲ. ಚಿಕ್ಕಂದಿನಿಂದಲೇ ಕೆಲಸಗಳನ್ನು ಕಲಿತು, ತಮ್ಮಿಷ್ಟದ ದಾರಿ ಕಂಡುಕೊಂಡವರು. ತಮ್ಮ ಮಕ್ಕಳಲ್ಲಿ ಶ್ರೀಮಂತಿಕೆಯನ್ನು ನಿಭಾಯಿಸುವ ಶಕ್ತಿ ಇದೆ ಎನ್ನುವ ವಿಶ್ವಾಸ ಮೂಡಿದ ಮೇಲಷ್ಟೇ ಅವರಿಗೆ ಜವಾಬ್ದಾರಿ ಕೊಡಲು ನಿರ್ಧರಿಸಿದ್ದರು ವಾರನ್ ಬಫೆಟ್.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ