Wedding Loan: ಕೊರೊನಾ ಎರಡನೇ ಅಲೆಯ ವೇಳೆ ಮದುವೆ ಉದ್ದೇಶಕ್ಕೆ ಸಾಲ ಪಡೆದವರು ಹೆಚ್ಚು

ಕೊವಿಡ್ -19 ಎರಡನೇ ಅಲೆಯ ವೇಳೆ ಯುವ ಜನರಲ್ಲಿ ಮದುವೆಗಾಗಿ ಸಾಲದ ಬೇಡಿಕೆ ಶೇಕಡಾ 11ರಷ್ಟು ಹೆಚ್ಚಾಗಿ 33ರಷ್ಟನ್ನು ತಲುಪಿದೆ.

Wedding Loan: ಕೊರೊನಾ ಎರಡನೇ ಅಲೆಯ ವೇಳೆ ಮದುವೆ ಉದ್ದೇಶಕ್ಕೆ ಸಾಲ ಪಡೆದವರು ಹೆಚ್ಚು
ಪ್ರಾತಿನಿಧಿಕ
Follow us
TV9 Web
| Updated By: Srinivas Mata

Updated on: Aug 11, 2021 | 6:46 PM

ಕೊವಿಡ್-19 ಬಿಕ್ಕಟ್ಟಿನ ಎರಡನೇ ಅಲೆಯ ಹಿನ್ನೆಲೆಯಲ್ಲಿ 20-35 ವರ್ಷ ವಯೋಮಾನದ ಎಲ್ಲ ವರ್ಗದಲ್ಲಿಯೂ ಮದುವೆಗಾಗಿ ಸಾಲ ಪಡೆಯುವ ಪ್ರಮಾಣ ಶೇ 33ರಷ್ಟಾಗಿದೆ. ಕೊರೊನಾ ಮೊದಲ ಅಲೆಯ ಸಮಯದಲ್ಲಿ ಈ ಪ್ರಮಾಣ ಶೇ 22ರಷ್ಟಿತ್ತು ಎಂದು ಡಿಜಿಟಲ್ ಸಾಲ ನೀಡುವ ಪ್ಲಾಟ್​ಫಾರ್ಮ್ ಇಂಡಿಯಾಲೆಂಡ್ಸ್ (IndiaLends) ಅಧ್ಯಯನದಿಂದ ಗೊತ್ತಾಗಿದೆ. ಡಿಜಿಟಲ್ ಸಾಲ ನೀಡುವ ಪ್ಲಾಟ್‌ಫಾರ್ಮ್ ಪ್ರಕಾರ, ಕೊರೊನಾದಿಂದ ಮದುವೆ ಯೋಜನೆ ಒಂದು ವರ್ಷದ ವಿಳಂಬ ಆಗಿದ್ದರಿಂದಾಗಿ ಮದುವೆ ಸಾಲಗಳಿಗೆ ಅರ್ಜಿಗಳು ಹೆಚ್ಚಾಗುತ್ತಿವೆ. ಅಂತರರಾಷ್ಟ್ರೀಯ ಯುವ ದಿನಾಚರಣೆ ಸಂದರ್ಭದಲ್ಲಿ ಯುವ ಭಾರತೀಯರಲ್ಲಿನ ಸಾಲದ ಟ್ರೆಂಡ್ ಕುರಿತು ಇಂಡಿಯಾಲೆಂಡ್ಸ್ ಅಧ್ಯಯನ ನಡೆಸಿತ್ತು. 2020ರ ಆಗಸ್ಟ್​ನಿಂದ 2021ರ ಮಾರ್ಚ್ ಮತ್ತು 2021ರ ಏಪ್ರಿಲ್​ನಿಂದ 2021ರ ಜುಲೈವರೆಗೆ, ಒಂಬತ್ತು ಪ್ರಮುಖ ನಗರಗಳಾದ ಮುಂಬೈ, ನವದೆಹಲಿ, ಬೆಂಗಳೂರು, ಹೈದರಾಬಾದ್, ಚೆನ್ನೈ, ಕೋಲ್ಕತ್ತಾ, ಜೈಪುರ, ಅಹಮದಾಬಾದ್ ಮತ್ತು ಪುಣೆಗಳಲ್ಲಿ ವೇತನದಾರ ಮತ್ತು ಸ್ವಯಂ ಉದ್ಯೋಗಿ ಯುವ ಭಾರತೀಯರಲ್ಲಿ ಈ ಅಧ್ಯಯನವನ್ನು ನಡೆಸಲಾಯಿತು.

ಮದುವೆ, ವ್ಯಾಪಾರ, ಶಿಕ್ಷಣ, ಪ್ರಯಾಣ, ಮನೆ, ವೈದ್ಯಕೀಯ, ದ್ವಿಚಕ್ರ ವಾಹನ ಮತ್ತು ಸಾಲದ ಕನ್ಸಾಲಿಡೇಷನ್ ಹೀಗೆ ವಿವಿಧ ಮುಖ್ಯ ವಿಭಾಗಗಳಲ್ಲಿ ಒಟ್ಟು 11,000 ಮಂದಿ ಭಾಗಿಯಾದವರನ್ನು ಸಾಲದ ಅವಶ್ಯಕತೆಗಳಿಗಾಗಿ ಮೌಲ್ಯಮಾಪನ ಮಾಡಲಾಗಿದೆ. “ಕೊರೊನಾ ಬಿಕ್ಕಟ್ಟಿನ ಕೊನೆಯ 17 ತಿಂಗಳಲ್ಲಿ ಯುವಜನರ ನಡವಳಿಕೆ ಮತ್ತು ಮನಸ್ಥಿತಿಯಲ್ಲಿನ ನಿರಂತರ ಬದಲಾವಣೆ ಕಂಡು ಅಚ್ಚರಿಗೊಂಡಿದ್ದೇವೆ. ಭಾರತದ ಯುವಕರು ಬದಲಾಗುತ್ತಿರುವ ಸನ್ನಿವೇಶಗಳಿಗೆ ಹೊಂದಿಕೊಳ್ಳುತ್ತಾರೆ ಎಂದು ಸಾಬೀತಾಗಿದೆ. ಅವರು ಈಗ ತಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಉತ್ತಮವಾಗಿ ಸಿದ್ಧರಾಗಿದ್ದಾರೆ ಮತ್ತು ಕ್ರಮೇಣ ಆರ್ಥಿಕ ಶಿಸ್ತನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಅವರ ಹೊಂದಾಣಿಕೆಯ ಅಂಶವು ತಮ್ಮ ಹಿಂದಿನ ಪೀಳಿಗೆಗಿಂತ ಮುಂದಕ್ಕೆ ಒಯ್ಯುತ್ತದೆ,” ಎಂದು ಇಂಡಿಯಾಲೆಂಡ್ಸ್ ಸ್ಥಾಪಕ ಮತ್ತು ಸಿಇಒ ಗೌರವ್ ಚೋಪ್ರಾ ಹೇಳಿದ್ದಾರೆ.

ಮದುವೆ ಮತ್ತು ವ್ಯಾಪಾರ ಉದ್ದೇಶಗಳಿಗಾಗಿ ಶೇಕಡಾ 10ರಷ್ಟು ಸಾಲದ ಅರ್ಜಿಗಳನ್ನು ಮಹಿಳೆಯರಿಂದ ಸ್ವೀಕರಿಸಲಾಗಿದೆ ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ. ಈ ಮಧ್ಯೆ, ಕೊರೊನಾ ಎರಡನೇ ಅಲೆಯ ವೇಳೆ ಮನೆಯ ಖರ್ಚಿಗಾಗಿ ಸಲ್ಲಿಕೆಯಾದ ಸಾಲದ ಅರ್ಜಿಯ ಪ್ರಮಾಣ ಕಡಿಮೆ ಆಗಿದೆ. ಯುವಕರು ಈಗ ಹಣಕಾಸಿನ ಅಗತ್ಯಗಳನ್ನು ಪೂರೈಸಿಕೊಳ್ಳುವುದಕ್ಕೆ ತಾವು ಸಿದ್ಧರಾಗಿದ್ದಾರೆ ಎಂದು ಈ ಅಂಶ ಸೂಚಿಸುತ್ತದೆ. ಮದುವೆಗೆ ಸಾಲದ ಸರಾಸರಿ ಗಾತ್ರ 4.13 ಲಕ್ಷ ರೂಪಾಯಿಯಾದರೆ, ಆ ನಂತರ ವೈದ್ಯಕೀಯ ವೆಚ್ಚ 4 ಲಕ್ಷ ರೂಪಾಯಿ, ಮನೆಯ ವೆಚ್ಚ 3.43 ಲಕ್ಷ ಮತ್ತು ವ್ಯಾಪಾರಕ್ಕೆ 2.62 ಲಕ್ಷ ಇದೆ.

ಕೊರೊನಾ ಬಿಕ್ಕಟ್ಟಿನ ಮೊದಲ ಮತ್ತು ಎರಡನೇ ಅಲೆಯ ಸಮಯದಲ್ಲಿ ಟಯರ್-2 ನಗರಗಳಿಂದ ಇಂಡಿಯಾ ಲೆಂಡ್ಸ್ ಸುಮಾರು ಶೇ 56ರಷ್ಟು ಸಾಲದ ಅರ್ಜಿಗಳನ್ನು ಸ್ವೀಕರಿಸಿದೆ. “ಇತರ ಸಾಲಗಳ ಪೈಕಿ ಶಿಕ್ಷಣ, ಕಾರು ಮತ್ತು ದ್ವಿಚಕ್ರ ವಾಹನ ಸಾಲಗಳು, ಪ್ರಯಾಣ ಸಾಲಗಳು ಇತ್ಯಾದಿಗಳ ಅರ್ಜಿಗಳು ಮೊದಲ ಮತ್ತು ಎರಡನೆಯ ಅಲೆಯಲ್ಲಿ ಬಹುತೇಕ ಒಂದೇ ರೀತಿಯಾಗಿವೆ. ಎರಡನೇ ಅಲೆಯ ವೇಳೆ ಪರಿಸ್ಥಿತಿಯ ತೀವ್ರತೆ ಮತ್ತು ಹೆಚ್ಚಿನ ಜನರ ಆರೋಗ್ಯದ ಮೇಲೆ ಬೀರಿದ ಪ್ರಭಾವದಿಂದಾಗಿ ವೈದ್ಯಕೀಯ ಸಾಲದ ಅರ್ಜಿಗಳು ಸ್ವಲ್ಪ ಏರಿಕೆಯಾಗಿವೆ,” ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: SBI Loan: ಕೊವಿಡ್​- 19 ಚಿಕಿತ್ಸೆಗೆ ಎಸ್​ಬಿಐನಿಂದ ಕೊಲಾಟರಲ್ ಇಲ್ಲದಂತೆ ಶೇ 8.5 ಬಡ್ಡಿ ದರದಲ್ಲಿ 5 ಲಕ್ಷದ ತನಕ ಸಾಲ

ಇದನ್ನೂ ಓದಿ: SBI Online Personal Loan: ಯಾವಾಗಾದರೂ ಎಲ್ಲಿಂದಾದರೂ ಎಸ್​ಬಿಐ ಆನ್​ಲೈನ್ ಲೋನ್​ಗೆ ಅರ್ಜಿ ಸಲ್ಲಿಸುವ ಮಾಹಿತಿ ಇಲ್ಲಿದೆ

(Wedding Loan Among Youths Increased 11 Percent During Covid 19 Second Wave)