Savings Account: ಬ್ಯಾಂಕ್​ಗಳಲ್ಲಿ ಎಷ್ಟು ಉಳಿತಾಯ ಖಾತೆಗಳನ್ನು ಇಟ್ಟುಕೊಳ್ಳಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

| Updated By: Srinivas Mata

Updated on: May 27, 2022 | 11:15 AM

ನಿಮ್ಮದು ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆಗಳು ಇವೆಯೇ? ಇದರ ಅನುಕೂಲ- ಅನನುಕೂಲಗಳೇನು ಎಂಬುದರ ವಿವರಣೆ ಇಲ್ಲಿದೆ.

Savings Account: ಬ್ಯಾಂಕ್​ಗಳಲ್ಲಿ ಎಷ್ಟು ಉಳಿತಾಯ ಖಾತೆಗಳನ್ನು ಇಟ್ಟುಕೊಳ್ಳಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಡಿಜಿಟಲ್ ಬ್ಯಾಂಕಿಂಗ್‌ ವ್ಯಾಪಿಸುತ್ತಿರುವ ಈ ಸನ್ನಿವೇಶದಲ್ಲಿ ಜನರು ತಮ್ಮ ಮನೆಯಿಂದಲೇ ಆರಾಮವಾಗಿ ಆನ್‌ಲೈನ್‌ನಲ್ಲಿ ಅಥವಾ ಮೊಬೈಲ್ ಅಪ್ಲಿಕೇಷನ್‌ಗಳ ಮೂಲಕ ಉಳಿತಾಯ ಖಾತೆಗಳನ್ನು (Savings Account) ತೆರೆಯಲು ಅನುವು ಮಾಡಿಕೊಟ್ಟಿದೆ. ಒಬ್ಬ ವ್ಯಕ್ತಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು, ವಿಡಿಯೋ ಕೆವೈಸಿ ಪೂರ್ಣಗೊಳಿಸಬಹುದು ಮತ್ತು ಕೆಲವೇ ನಿಮಿಷಗಳಲ್ಲಿ ಖಾತೆ ತೆರೆಯಬಹುದು. ಈ ಬಳಕೆ ಸುಲಭತೆಯು ಜನರು ಒಂದೇ ಸಲಕ್ಕೆ ವಿವಿಧ ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದೆ. ಹೀಗೆ ಹಲವು ಉಳಿತಾಯ ಖಾತೆಗಳನ್ನು ಹೊಂದಿರುವುದರ ಅನುಕೂಲಗಳು ಮತ್ತು ಅನನುಕೂಲಗಳನ್ನು ಹೊಂದಿದೆ. ಕೆಲವು ಪ್ರಯೋಜನಗಳು ಇಲ್ಲಿವೆ:

ಸವಲತ್ತು ಮತ್ತು ಸೌಲಭ್ಯಗಳು

ಹೆಚ್ಚಿನ ಬ್ಯಾಂಕ್​ಗಳು ಹಲವು ಲಾಕರ್‌ಗಳು, ವಿಮೆ, ಪ್ರೀಮಿಯಂ ಡೆಬಿಟ್ ಕಾರ್ಡ್‌ಗಳು ಮತ್ತು ಇತರ ಸವಲತ್ತುಗಳಂತಹ ವೈಶಿಷ್ಟ್ಯಗಳನ್ನು ನೀಡುತ್ತವೆ. ಹೆಚ್ಚುವರಿಯಾಗಿ, ಇದರ ಜತೆಗೆ ಯುಟಿಲಿಟಿ ಪಾವತಿಗಳು, ಶಾಪಿಂಗ್ ಮತ್ತು ಇಎಂಐಗಳ ಮೇಲೆ ರಿವಾರ್ಡ್ಸ್ ಮತ್ತು ರಿಯಾಯಿತಿಗಳನ್ನು ಪಡೆಯುತ್ತಾರೆ. ಆದ್ದರಿಂದ ಹಲವು ಖಾತೆಗಳನ್ನು ಇಟ್ಟುಕೊಳ್ಳುವುದು ಖರ್ಚು ಮಾಡುವಾಗ ಉಳಿತಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಬಳಕೆಗೆ ಸಲೀಸು

ಪ್ರತಿ ತಿಂಗಳು ಎಟಿಎಂಗಳಿಂದ ಉಚಿತ ಹಿಂಪಡೆಯುವಿಕೆಯ ಸಂಖ್ಯೆಯನ್ನು ಬ್ಯಾಂಕ್‌ಗಳು ಮಿತಿಗೊಳಿಸುವುದರೊಂದಿಗೆ ಅನೇಕ ಖಾತೆಗಳು ಇತರ ಎಟಿಎಂಗಳಿಂದ ವಹಿವಾಟು ನಡೆಸಲು ಮತ್ತು ಸಂಬಂಧಿತ ಶುಲ್ಕಗಳಲ್ಲಿ ಉಳಿಸಲು ಅವಕಾಶ ನೀಡುತ್ತವೆ. ಎಟಿಎಂಗಳನ್ನು ಆಗಾಗ ಬಳಸುವವರಿಗೆ ಇದು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.

ಗುರಿ-ನಿರ್ದಿಷ್ಟ ಖಾತೆಗಳು

ವಿದೇಶ ಪ್ರಯಾಣ, ವಾಹನ ಖರೀದಿ ಮತ್ತು ಉನ್ನತ ಶಿಕ್ಷಣದಂತಹ ಗುರಿಗಳನ್ನು ಪೂರೈಸಲು ಅನೇಕ ವ್ಯಕ್ತಿಗಳು ವಿವಿಧ ಉಳಿತಾಯ ಖಾತೆಗಳಲ್ಲಿ ಹಣವನ್ನು ಠೇವಣಿ ಮಾಡುತ್ತಾರೆ. ಕೆಲವರು ಕುಟುಂಬದ ಸದಸ್ಯರಿಗೆ ಕೇವಲ ದೈನಂದಿನ ವೆಚ್ಚಗಳಿಗಾಗಿ ಜಂಟಿ ಖಾತೆಗಳನ್ನು ತೆರೆಯುತ್ತಾರೆ. ಅನೇಕರು ಪ್ರತ್ಯೇಕ ಖಾತೆಯನ್ನು ಆಕಸ್ಮಿಕ ಅಥವಾ ತುರ್ತು ನಿಧಿಯಾಗಿ ಇರಿಸುತ್ತಾರೆ.

ಬ್ಯಾಂಕಿಂಗ್ ಪಾಲುದಾರ ಸವಲತ್ತುಗಳು

ವಿವಿಧ ಆನ್‌ಲೈನ್ ಮತ್ತು ಇ-ಕಾಮರ್ಸ್ ಪೋರ್ಟಲ್‌ಗಳು ತಮ್ಮ ಗ್ರಾಹಕರಿಗೆ ವಿಶೇಷವಾದ ಡೀಲ್‌ಗಳು ಮತ್ತು ಕೊಡುಗೆಗಳನ್ನು ಒದಗಿಸಲು ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತವೆ. ವಿವಿಧ ಬ್ಯಾಂಕ್‌ಗಳಲ್ಲಿ ಹಲವು ಖಾತೆಗಳೊಂದಿಗೆ ಅಂತಹ ಆಫರ್​ಗಳ ವ್ಯಾಪಕ ಶ್ರೇಣಿಯನ್ನು ಪಡೆಯಬಹುದು.

ಭದ್ರತೆ

ಭಾರತೀಯ ರಿಸರ್ವ್ ಬ್ಯಾಂಕ್‌ನ ಅಂಗಸಂಸ್ಥೆಯಾದ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್‌ನಿಂದ ನಿಗದಿತ ಬ್ಯಾಂಕ್‌ನಲ್ಲಿ ರೂ. 5 ಲಕ್ಷದವರೆಗಿನ ಮೊತ್ತವನ್ನು ವಿಮೆ ಮಾಡಲಾಗುತ್ತದೆ. ಬ್ಯಾಂಕ್ ಖಾತೆದಾರರಿಗೆ ಪಾವತಿಸಲು ವಿಫಲವಾದಾಗ ಅವರು ಹೊಂದಿರುವ ಮೊತ್ತವನ್ನು ನಿಗಮವು ಭರಿಸುತ್ತದೆ.

ಮೊತ್ತವು 5 ಲಕ್ಷಕ್ಕಿಂತ ಹೆಚ್ಚಿದ್ದರೆ ಎಲ್ಲ ಹಣವನ್ನು ಒಂದೇ ಬ್ಯಾಂಕ್‌ನಲ್ಲಿ ಇರಿಸುವುದು ಅಪಾಯಕಾರಿ. ವಿವಿಧ ಬ್ಯಾಂಕ್‌ಗಳಲ್ಲಿ ಹಣವನ್ನು ಠೇವಣಿ ಮಾಡುವುದರಿಂದ ಪ್ರತಿಯೊಂದೂ ಪ್ರತ್ಯೇಕವಾಗಿ ವಿಮೆಯಿಂದ ಭದ್ರತೆ ಪಡೆಯುತ್ತದೆ ಎಂದು ಖಚಿತಪಡಿಸುತ್ತದೆ. ಪ್ರಾಥಮಿಕ ಖಾತೆಯನ್ನು ಹೊಂದಿರುವ ಬ್ಯಾಂಕ್‌ನಿಂದ ಪಾವತಿ ಆಗದಿದ್ದರೆ ಅಂತಹ ಖಾತೆಗಳನ್ನು ಬ್ಯಾಕಪ್ ಆಗಿ ಬಳಸಬಹುದು.

ಒಂದಕ್ಕಿಂತ ಹೆಚ್ಚು ಖಾತೆಗಳಿಗೆ ಕೆಲವು ಮಿತಿಗಳಿವೆ:

ಸರಾಸರಿ ತಿಂಗಳ ಬ್ಯಾಲೆನ್ಸ್ ಅವಶ್ಯಕತೆ

ಖಾತೆದಾರರು ತಮ್ಮ ಪ್ರತಿ ಖಾತೆಯಲ್ಲಿ ಸರಾಸರಿ ಮಾಸಿಕ ಬ್ಯಾಲೆನ್ಸ್ (AMB) ಅನ್ನು ನಿರ್ವಹಿಸಬೇಕಾಗುತ್ತದೆ ಮತ್ತು ಹಾಗೆ ಮಾಡಲು ವಿಫಲವಾದರೆ ದಂಡ ಪಾವತಿಸಬೇಕಾಗುತ್ತದೆ. ಹಲವು ಖಾತೆಗಳನ್ನು ನಿರ್ವಹಿಸುವಾಗ ಸರಾಸರಿ ತಿಂಗಳ ಬ್ಯಾಲೆನ್ಸ್ (AMB) ಅನ್ನು ನಿರ್ವಹಿಸುವುದು ತಪ್ಪಿಹೋಗಬಹುದು.

ಬಡ್ಡಿ ಮೊತ್ತದ ನಷ್ಟ

ಎಲ್ಲ ಬ್ಯಾಂಕ್‌ಗಳು ಉಳಿತಾಯ ಖಾತೆಗಳಿಗೆ ಒಂದೇ ರೀತಿಯ ಬಡ್ಡಿ ದರವನ್ನು ನೀಡುವುದಿಲ್ಲ. ಎಲ್ಲ ಹಣವನ್ನು ಒಂದೇ, ಹೆಚ್ಚು ರಿಟರ್ನ್ ನೀಡುವ ಉಳಿತಾಯ ಖಾತೆಯಲ್ಲಿ ಹೊಂದುವುದಕ್ಕೆ ಹೋಲಿಸಿದರೆ ವಿವಿಧ ಉಳಿತಾಯ ಖಾತೆಗಳಲ್ಲಿ ಹಣವನ್ನು ಠೇವಣಿ ಮಾಡುವುದರಿಂದ ಬಡ್ಡಿಯ ನಷ್ಟಕ್ಕೆ ಕಾರಣ ಆಗಬಹುದು. ಠೇವಣಿ ಮಾಡಿದ ಮೊತ್ತವು ಒಂದು ನಿರ್ದಿಷ್ಟ ಮಿತಿಗಿಂತ ಹೆಚ್ಚಿದ್ದರೆ ಅನೇಕ ಬ್ಯಾಂಕ್​ಗಳು ಹೆಚ್ಚಿನ ಬಡ್ಡಿಯನ್ನು ನೀಡುತ್ತವೆ. ಅನೇಕ ಖಾತೆಗಳಲ್ಲಿ ಹಣವನ್ನು ಠೇವಣಿ ಮಾಡಿದರೆ ಮತ್ತು ಮಿತಿ ತಪ್ಪಿದರೆ ಈ ಬಡ್ಡಿಯನ್ನು ಕಳೆದುಕೊಳ್ಳುತ್ತಾರೆ.

ಶುಲ್ಕಗಳು ಮತ್ತು ವೆಚ್ಚಗಳು

ಹೆಚ್ಚಿನ ಉಳಿತಾಯ ಖಾತೆಗಳು ಕೆಲವು ವಾರ್ಷಿಕ ವೆಚ್ಚಗಳು ಮತ್ತು ಎಟಿಎಂ ಶುಲ್ಕಗಳು, ಲಾಕರ್ ಶುಲ್ಕಗಳು ಮತ್ತು ನಿರ್ವಹಣೆ ಶುಲ್ಕಗಳ ಜತೆಗೆ ಬರುತ್ತವೆ. ಎಲ್ಲ ಖಾತೆಗಳಿಗೆ ಈ ಶುಲ್ಕಗಳು ಮತ್ತು ವೆಚ್ಚಗಳನ್ನು ಪಾವತಿಸುವುದರಿಂದ ಗಳಿಸಿದ ಒಟ್ಟಾರೆ ಬಡ್ಡಿಯ ಮೊತ್ತ ಅದಕ್ಕೆ ಹೋಗುತ್ತದೆ.

ತಡೆಗಳನ್ನು ಗುರುತಿಸುವುದು

ಆರ್ಥಿಕವಾಗಿ ಶಿಸ್ತು ಹೊಂದಿರದವರಿಗೆ ಹೆಚ್ಚು ಚೆಕ್ ಬುಕ್‌ಗಳು, ಡೆಬಿಟ್ ಕಾರ್ಡ್‌ಗಳು, ನೆಟ್ ಬ್ಯಾಂಕಿಂಗ್ ಯೂಸರ್ ಐಡಿಗಳು ಮತ್ತು ಪಾಸ್‌ವರ್ಡ್‌ಗಳು ಹಾಗೂ AMBಗಳನ್ನು ಟ್ರ್ಯಾಕ್ ಮಾಡುವುದು ತೊಡಕಾಗಿರುತ್ತದೆ.

ಹಲವು ಉಳಿತಾಯ ಖಾತೆಗಳನ್ನು ಇಟ್ಟುಕೊಳ್ಳುವ ನಿರ್ಧಾರವು ಎಷ್ಟು ನಿಯಮಿತ ಮತ್ತು ವಹಿವಾಟುಗಳ ಮಾದರಿ, ವಾಲ್ಯೂಮ್ ಮತ್ತು ಅಪಾಯದ ರಕ್ಷಣೆ ಅಗತ್ಯಗಳನ್ನು ಅವಲಂಬಿಸಿರುತ್ತದೆ. ಹಣಕಾಸಿನ ವಹಿವಾಟುಗಳನ್ನು ವಾರಕ್ಕೆ ಒಂದು ಅಥವಾ ಎರಡಕ್ಕೆ ಸೀಮಿತಗೊಳಿಸಿದರೆ ಹಲವು ಖಾತೆಗಳ ಅಗತ್ಯ ಇರುವುದಿಲ್ಲ. ವಾರ್ಷಿಕ ಕಾರ್ಡ್ ಶುಲ್ಕಗಳು ಮತ್ತು AMB ನಿರ್ವಹಣೆಯ ಆಪರ್ಚುನಿಟಿ ವೆಚ್ಚದಂಥದ್ದನ್ನು ತಪ್ಪಿಸಲು ನಿಷ್ಕ್ರಿಯ ಉಳಿತಾಯ ಖಾತೆಗಳನ್ನು ಅಥವಾ ಕಳಪೆ ಫೀಚರ್​ಗಳನ್ನು ಹೊಂದಿರುವ ಕ್ಲೋಸ್​ ಮಾಡುವುದು ವಿವೇಕಯುತ ಆಗಬಹುದು.

ಹೆಚ್ಚುವರಿ ಉಳಿತಾಯ ಖಾತೆಯನ್ನು ಯಾವಾಗ ತೆರೆಯಬೇಕು ಅಂದರೆ, ಅದು ಒಬ್ಬರ ವೈಯಕ್ತಿಕ ಅವಶ್ಯಕತೆಗಳಿಗೆ ಹೊಂದಿಕೆ ಆಗುವುದಾದರೆ ಮತ್ತು ಹೋಲಿಕೆ ಮಾಡಿ ನೋಡಿದಾಗ ಹೆಚ್ಚಿನ ಬಡ್ಡಿದರವನ್ನು ನೀಡಿದರೆ ಮಾತ್ರ.

ಇನ್ನಷ್ಟು ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಇದನ್ನೂ ಓದಿ: Bandhan Bank: ಉಳಿತಾಯ ಖಾತೆ ಮೇಲೆ ಈ ಬ್ಯಾಂಕ್​ನಲ್ಲಿ ಸಿಗಲಿದೆ ಶೇ 6ರ ಬಡ್ಡಿ

Published On - 11:15 am, Fri, 27 May 22