
ಬೆಂಗಳೂರು, ಜೂನ್ 30: ಇನ್ಮುಂದೆ ವಾಟ್ಸಾಪ್ನಲ್ಲಿ (WhatsApp) ಯಾರಿಗಾದರೂ ಸಂದೇಶ ಕಳುಹಿಸಬೇಕಾದರೆ ನಿಮ್ಮ ವೈಯಕ್ತಿಕ ಫೋನ್ ನಂಬರ್ ಬಹಿರಂಗಪಡಿಸಬೇಕಾದ ಅಗತ್ಯವಿರುವುದಿಲ್ಲ. ವಾಟ್ಸಾಪ್ ಸಂಸ್ಥೆಯು ಬಳಕೆದಾರರ ಗೌಪ್ಯತೆಯನ್ನು (Privacy) ಹೆಚ್ಚಿಸಲು ‘ಯೂಸರ್ನೇಮ್’ (Usernames) ಎನ್ನುವ ಹೊಸ ಫೀಚರ್ ಪರಿಚಯಿಸುತ್ತಿದೆ. ನೀವು ಫೋನ್ ನಂಬರ್ ಬದಲು ಯೂಸರ್ನೇಮ್ ಗುರುತಿನಲ್ಲಿ ಮೆಸೇಜ್ ಶೇರ್ ಮಾಡಿಕೊಳ್ಳಲು ಅವಕಾಶ ಇದೆ. ಕುನಾಲ್ ಶಾ (Kunal Shah) ಅವರು ವಾಟ್ಸಾಪ್ ಮುಖ್ಯಸ್ಥರಾಗಿ ಸೇರಿದ ಬಳಿಕ ಈ ಪ್ಲಾಟ್ಫಾರ್ಮ್ನಲ್ಲಿ ಮೊದಲ ಪ್ರಮುಖ ಅಪ್ಡೇಟ್ ಇದು.
ವಾಟ್ಸಾಪ್ನ ನೂತನ ಸಿಇಒ ಕುನಾಲ್ ಶಾ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. “ಸಮಯ ಪ್ರಮುಖವಾದದ್ದು. ಜಗತ್ತಿಗೆ ಈ ಫೀಚರ್ ಬಿಡುಗಡೆಯಾಗುವ ಮುನ್ನವೇ ನಾನು ವಾಟ್ಸಾಪ್ ಸೇರಿ ನನ್ನ ಯೂಸರ್ನೇಮ್ ಪಡೆದುಕೊಂಡಿದ್ದೇನೆ. ನಿಮ್ಮ ಹೆಸರನ್ನು ಕಾಯ್ದಿರಿಸಲು ಇದುವೇ ಸರಿಯಾದ ಸಮಯ” ಎಂದು ಅವರು ಬಳಕೆದಾರರಿಗೆ ಕರೆ ನೀಡಿದ್ದಾರೆ.
ವಾಟ್ಸಾಪ್ ಸಿಇಒ ಕುನಾಲ್ ಶಾ ಅವರ ಟ್ವೀಟ್
ಪ್ರಸ್ತುತ ವಾಟ್ಸಾಪ್ನಲ್ಲಿ ಹೊಸಬರ ಜೊತೆ ಚಾಟ್ ಮಾಡಬೇಕಾದರೆ ಫೋನ್ ನಂಬರ್ ಹಂಚಿಕೊಳ್ಳುವುದು ಅನಿವಾರ್ಯವಾಗಿದೆ. ಆದರೆ, ಅಪರಿಚಿತರು, ನೆರೆಹೊರೆಯವರು ಅಥವಾ ಕಚೇರಿಯ ಕೆಲಸದ ನಿಮಿತ್ತ ಸಿಗುವವರಿಗೆ ಫೋನ್ ನಂಬರ್ ಕೊಡುವುದು ಹಲವರಿಗೆ ಇಷ್ಟವಿರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ನಿಮ್ಮ ಫೋನ್ ನಂಬರ್ ಬದಲಿಗೆ ಕೇವಲ ಒಂದು ಯೂಸರ್ನೇಮ್ (ಉದಾಹರಣೆಗೆ: @Kumar) ನೀಡುವ ಮೂಲಕ ಚಾಟ್ ಮಾಡಬಹುದು. ಇದರಿಂದ ನಿಮ್ಮ ಮೊಬೈಲ್ ನಂಬರ್ ಸುರಕ್ಷಿತವಾಗಿರಲಿದೆ.
ಇದನ್ನೂ ಓದಿ: ಐಟಿಆರ್ ಸಲ್ಲಿಕೆಯಿಂದ ಟಿಡಿಎಸ್ ಪಾವತಿವರೆಗೆ, ಜುಲೈನಲ್ಲಿ ಡೆಡ್ಲೈನ್ಗಳಿವೆ, ಗಮನಿಸಿ
ಇದು ಇನ್ಸ್ಟಾಗ್ರಾಮ್ ಅಥವಾ ಎಕ್ಸ್ (ಟ್ವಿಟರ್) ನಂತೆ ಸಾರ್ವಜನಿಕವಾಗಿ ಯಾರಿಗೆ ಬೇಕಾದರೂ ಹುಡುಕಲು ಸಿಗುವ ಖಾತೆಯಾಗಿರುವುದಿಲ್ಲ. ನಿಮ್ಮ ಯೂಸರ್ನೇಮ್ ಅನ್ನು ನೀವು ಯಾರಿಗೆ ನೀಡುತ್ತೀರೋ, ಅವರು ಮಾತ್ರ ನಿಮ್ಮನ್ನು ಸಂಪರ್ಕಿಸಬಹುದಾಗಿದೆ.
ಹೆಚ್ಚುವರಿ ಭದ್ರತೆಗಾಗಿ ವಾಟ್ಸಾಪ್ ‘ಯೂಸರ್ನೇಮ್ ಕೀ’ (Username Key) ಎಂಬ ಆಯ್ಕೆಯನ್ನು ನೀಡುತ್ತಿದೆ. ಹೊಸದಾಗಿ ಯಾರಾದರೂ ನಿಮ್ಮ ಯೂಸರ್ನೇಮ್ ಬಳಸಿ ಸಂದೇಶ ಕಳುಹಿಸಬೇಕಾದರೆ, ನೀವು ನಿಗದಿಪಡಿಸಿದ ಈ ‘ಕೀ’ (ಪಾಸ್ವರ್ಡ್ನಂತಹ ಕೋಡ್) ಅನ್ನು ಅವರು ನಮೂದಿಸಬೇಕಾಗುತ್ತದೆ.
ಜೂನ್ 29 ರಿಂದ ಜಾಗತಿಕವಾಗಿ ಈ ಯೂಸರ್ನೇಮ್ ಕಾಯ್ದಿರಿಸುವ ಪ್ರಕ್ರಿಯೆ ಆರಂಭವಾಗಿದ್ದು, ಹಂತಹಂತವಾಗಿ ಎಲ್ಲ ಬಳಕೆದಾರರಿಗೆ ಸಿಗಲಿದೆ. ನಿಮ್ಮ ಆ್ಯಪ್ನಲ್ಲಿ ಈ ಆಯ್ಕೆ ಬಂದಾಗ ಕೆಳಗಿನ ಹಂತಗಳನ್ನು ಅನುಸರಿಸಿ:
ಇದನ್ನೂ ಓದಿ: AI Agents: 2027ರ ವೇಳೆಗೆ ಟೆಕ್ ತಂಡಗಳನ್ನು ಬದಲಾಯಿಸಲಿವೆ ‘AI ಏಜೆಂಟ್ಗಳು’; ಏನಿದು ಹೊಸ ಟೆಕ್ನಾಲಜಿ?
ಹಾಗೆಯೇ, ನಿಮ್ಮ ಫೇಸ್ಬುಕ್ ಅಥವಾ ಇನ್ಸ್ಟಾಗ್ರಾಮ್ ಪ್ಲಾಟ್ಫಾರ್ಮ್ನಲ್ಲಿರುವ ಐಡಿ ಹೆಸರನ್ನೂ ವಾಟ್ಸಾಪ್ ಯೂಸರ್ನೇಮ್ ಆಗಿ ನಿಗದಿ ಮಾಡಿಕೊಳ್ಳಬಹುದು. ಯಾವ ಯೂಸರ್ನೇಮ್ ಇಟ್ಟುಕೊಳ್ಳುವುದು ಎನ್ನುವ ಗೊಂದಲ ಮೂಡಿದಲ್ಲಿ, ವಾಟ್ಸಾಪ್ನಲ್ಲೇ ಯೂಸರ್ನೇಮ್ ಜನರೇಟರ್ ಎನ್ನುವ ಹೆಲ್ಪ್ ಸರ್ವಿಸ್ ಇರುತ್ತದೆ. ಅದನ್ನು ಬಳಸಬಹುದು.
ಗಮನಿಸಬೇಕಾದ ಸಂಗತಿ ಎಂದರೆ, ಸೆಲೆಬ್ರಿಟಿಗಳು ಹಾಗೂ ಪ್ರಸಿದ್ಧ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಖಾತೆಗಳು ಸೃಷ್ಟಿಯಾಗುವುದನ್ನು ತಡೆಯಲು ಅವರ ಯೂಸರ್ನೇಮ್ಗಳನ್ನು ವಾಟ್ಸಾಪ್ ಮೊದಲೇ ಕಾಯ್ದಿರಿಸಿದೆ. ಹೀಗಾಗಿ, ಹೆಸರು ದುರ್ಬಳಕೆ ಮಾಡಿಕೊಳ್ಳಲು ಕಷ್ಟಸಾಧ್ಯವಾಗಲಿದೆ.
ನಿಮ್ಮ ಹಳೆಯ ಚಾಟ್ಗಳು, ಬ್ಲಾಕ್ ಲಿಸ್ಟ್ ಹಾಗೂ ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ಭದ್ರತೆಗಳು ಎಂದಿನಂತೆಯೇ ಮುಂದುವರಿಯಲಿವೆ. ಈ ವರ್ಷದ ಅಂತ್ಯದ ವೇಳೆಗೆ ಈ ಫೀಚರ್ ಜಗತ್ತಿನಾದ್ಯಂತ ಸಂಪೂರ್ಣವಾಗಿ ಲಭ್ಯವಾಗಲಿದೆ.
ವಾಟ್ಸಾಪ್ ಯೂಸರ್ನೇಮ್ ಫೀಚರ್ ಪ್ರೊಮೋಟ್ ಮಾಡುವ ಅಧಿಕೃತ ವಿಡಿಯೋ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:14 pm, Tue, 30 June 26