ನವದೆಹಲಿ: ಟ್ವಿಟರ್ (Twitter) ಖರೀದಿ ಪ್ರಕ್ರಿಯೆಯನ್ನು ಇತ್ತೀಚೆಗೆ ಪೂರ್ಣಗೊಳಿಸಿದ್ದ ಉದ್ಯಮಿ ಎಲಾನ್ ಮಸ್ಕ್ (Elon Musk), ಸಿಇಒ ಪರಾಗ್ ಅಗರ್ವಾಲ್ ಸೇರಿದಂತೆ ಪ್ರಮುಖ ಹುದ್ದೆಗಳಲ್ಲಿರುವವರನ್ನು ವಜಾಗೊಳಿಸಿದ್ದರು. ಟ್ವಿಟರ್ ಅನ್ನು ಸರಪಡಿಸಿ ಮತ್ತೆ ಸರಿದಾರಿಗೆ ತರುತ್ತೇನೆ ಎಂದಿರುವ ಮಸ್ಕ್ ಇದೀಗ ಆ ಕೆಲಸಕ್ಕೆ ಮತ್ತೊಬ್ಬ ಭಾರತೀಯ ಮೂಲದ ವ್ಯಕ್ತಿಯನ್ನೇ ಆಯ್ದುಕೊಳ್ಳುವ ಬಗ್ಗೆ ಬಲವಾದ ಸುಳಿವು ದೊರೆತಿದೆ. ಟ್ವಿಟರ್ನಲ್ಲೇ ಮೊದಲು ಕಾರ್ಯನಿರ್ವಹಿಸಿದ್ದ, ಭಾರತೀಯ ಮೂಲದ ಟೆಕಿ ಶ್ರೀರಾಮ್ ಕೃಷ್ಣನ್ ಅವರು ಎಲಾನ್ ಮಸ್ಕ್ಗೆ ನೆರವಾಗುವ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಯಾರು ಈ ಶ್ರೀರಾಮ್ ಕೃಷ್ಣನ್?
ಶ್ರೀರಾಮ್ ಕೃಷ್ಣನ್ ಅವರು ಎಂಜಿನಿಯರ್ ಹಾಗೂ ತಂತ್ರಜ್ಞರಾಗಿದ್ದು ಟ್ವಿಟರ್, ಮೆಟಾ ಹಾಗೂ ಮೈಕ್ರೋಸಾಫ್ಟ್ ಕಂಪನಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. 2005ರಲ್ಲಿ ಅವರು ತಮ್ಮ 21ನೇ ವಯಸ್ಸಿನಲ್ಲಿ ಅಮೆರಿಕಕ್ಕೆ ತೆರಳಿದ್ದರು. ನಂತರ ಎಂಜಿನಿಯರ್ ಆಗಿ ವೃತ್ತಿಜೀವನ ಆರಂಭಿಸಿದ್ದರು.
ಟ್ವಿಟರ್ನ ಮುಖ್ಯ ಟೈಮ್ಲೈನ್, ಅದಕ್ಕೆ ಹೊಸ ಯುಐ ಅಭಿವೃದ್ಧಿಪಡಿಸುವಲ್ಲಿ ಹಾಗೂ ಬಳಕೆದಾರರ ಸಂಖ್ಯೆ ಹೆಚ್ಚಿಸುವಲ್ಲಿ ಶ್ರೀರಾಮ್ ಕೃಷ್ಣನ್ ಪ್ರಮುಖ ಪಾತ್ರ ವಹಿಸಿದ್ದರು. ಫೇಸ್ಬುಕ್ನಲ್ಲಿ (ಮೆಟಾ) ಮೊಬೈಲ್ ಜಾಹೀರಾತು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದ್ದರು. ಇದು ಇಂದು ಅತಿದೊಡ್ಡ ಜಾಹೀರಾತು ಪ್ರದರ್ಶನ ವೇದಿಕೆಯಾಗಿ ಹೊರಹೊಮ್ಮಿದೆ.
ಇದನ್ನೂ ಓದಿ: Twitter Verification: ಟ್ವಿಟರ್ನಲ್ಲಿ ಮಹತ್ವದ ಬದಲಾವಣೆ: ಬ್ಲೂಟಿಕ್ ಬೇಕಾದಲ್ಲಿ ಹಣ ಪಾವತಿಸಬೇಕು
ಮೈಕ್ರೋಸಾಫ್ಟ್ನಲ್ಲಿ ವೃತ್ತಿ ಆರಂಭಿಸಿದ್ದ ಅವರು ವಿಂಡೋಸ್ಗಾಗಿ ಹೆಚ್ಚು ಕೆಲಸ ಮಾಡಿದ್ದರು. ಸದ್ಯ ಆರಂಭಿಕ ಹಂತದಲ್ಲಿರುವ ಸ್ಟಾರ್ಟಪ್ಗಳಲ್ಲಿ ಹೂಡಿಕೆದಾರರಾಗಿರುವ ಅವರು, ಎ16ಝಡ್ (a16z) ಕಂಪನಿಯ ಭಾಗವಾಗಿದ್ದು, ಕ್ರಿಪ್ಟೊ ಕರೆನ್ಸಿ ವಹಿವಾಟುಗಳ ಬಗ್ಗೆ ಕೂಲಂಕಷವಾಗಿ ಗಮನಿಸುತ್ತಿದ್ದಾರೆ.
‘ಈಗ ವಿಷಯ ಹೊರಬಿದ್ದಿದೆ. ನಾನು ಎಲಾನ್ ಮಸ್ಕ್ ಅವರಿಗೆ ಹಾಗೂ ಟ್ವಿಟರ್ಗೆ ಕೆಲವೊಬ್ಬರು ಮಹಾನ್ ವ್ಯಕ್ತಿಗಳ ಜತೆಗೂಡಿ ನೆರವಾಗಲಿದ್ದೇನೆ. ಇದು ಅತ್ಯಂತ ಪ್ರಮುಖವೆಂದು ನಾನು (a16z) ಭಾವಿಸಿದ್ದು ಜಾಗತಿಕವಾಗಿ ಪರಿಣಾಮ ಬೀರಬಹುದು ಎಂದು ತಿಳಿದಿದ್ದೇನೆ. ಎಲಾನ್ ಮಸ್ಕ್ ಅದನ್ನು ಸಾಧ್ಯವಾಗಿಸಲಿದ್ದಾರೆ’ ಎಂದು ಶ್ರೀರಾಮ್ ಕೃಷ್ಣನ್ ಟ್ವೀಟ್ ಮಾಡಿದ್ದಾರೆ.
Now that the word is out: I’m helping out @elonmusk with Twitter temporarily with some other great people.
I ( and a16z) believe this is a hugely important company and can have great impact on the world and Elon is the person to make it happen. pic.twitter.com/weGwEp8oga
— Sriram Krishnan – sriramk.eth (@sriramk) October 30, 2022
ಶ್ರೀರಾಮ್ ಕೃಷ್ಣನ್ ಹಾಗೂ ಅವರ ಪತ್ನಿ ಜತೆಯಾಗಿ ‘ದಿ ಗೂಟ್ ಟೈಮ್’ ಎಂಬ ಪಾಡ್ಕಾಸ್ಟ್ ಶೋವನ್ನೂ ನಡೆಸಿಕೊಡುತ್ತಿದ್ದು, ಮಾರ್ಕ್ ಜುಕರ್ಬರ್ಗ್, ಕಾಲ್ವಿನ್ ಹ್ಯಾರಿಸ್ ಹಾಗೂ ಎಲಾನ್ ಮಸ್ಕ್ ಅವರನ್ನು ಅತಿಥಿಯಾಗಿ ಆಹ್ವಾನಿಸಿದ್ದರು.
ಶ್ರೀರಾಮ್ ಕೃಷ್ಣನ್ ಹೇಗೆ ಮಸ್ಕ್ಗೆ ನೆರವಾಗಬಲ್ಲರು?
ಈ ಹಿಂದೆ ಶ್ರೀರಾಮ್ ಕೃಷ್ಣನ್ ಟ್ವಿಟರ್ನಲ್ಲಿ ಕಾರ್ಯನಿರ್ವಹಿಸಿದ್ದರಿಂದ ಅದರ ಪ್ರಯೋಜನವನ್ನು ಪಡೆಯುವತ್ತ ಮಸ್ಕ್ ದೃಷ್ಟಿ ನೆಟ್ಟಿದ್ದಾರೆ ಎನ್ನಲಾಗಿದೆ. ಕಂಪನಿಯನ್ನು ಪುನರುತ್ಥಾನಗೊಳಿಸುವಲ್ಲಿ ಹಾಗೂ ಹೇಗೆ ಮಾರುಕಟ್ಟೆಯಲ್ಲಿ ಯಶಸ್ಸು ಸಾಧಿಸಬಹುದು ಎಂಬ ಬಗ್ಗೆ ಅರಿಯಲು ಮಸ್ಕ್ಗೆ ಶ್ರೀರಾಮ್ ಕೃಷ್ಣನ್ ಅವರ ಅನುಭವ ನೆರವಿಗೆ ಬರಬಹುದು. ಟ್ವಿಟರ್ ಸದ್ಯ ಮುಖ್ಯವಾಗಿ ಎದುರಿಸುತ್ತಿರುವುದು ಮಾನಿಟೈಸೇಷನ್ ಸಮಸ್ಯೆ. ಇದರ ಬಗ್ಗೆ ಮಸ್ಕ್ ಅವರು ಈಗಾಗಲೇ ಹಲವು ವಿಚಾರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಟ್ವಿಟರ್ನ ಬ್ಲೂ ಸಬ್ಸ್ಕ್ರಿಪ್ಷನ್ಗೆ ಸುಮಾರು 1,640 ರೂ. ಶುಲ್ಕ ವಿಧಿಸಲು ಮಸ್ಕ್ ಯೋಷಿಸುತ್ತಿದ್ದಾರೆ ಎಂದು ಸೋಮವಾರ ವರದಿಯಾಗಿತ್ತು. ಮಸ್ಕ್ ಅವರು ಟ್ವಿಟರ್ನಲ್ಲಿ ತಮ್ಮ ಉದ್ಯಮ ಯೋಜನೆಗಳನ್ನು ಜಾರಿಗೆ ತರಲು ಶ್ರೀರಾಮ್ ಕೃಷ್ಣನ್ ಅವರನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:33 pm, Tue, 1 November 22