LPG Price: ಎಲ್ಪಿಜಿ ದರ ನಿರ್ಧರಿಸುವುದು ಯಾರು? ಬೆಲೆ ಏರಿಕೆ, ಇಳಿಕೆಗೆ ಕಾರಣವೇನು? ಇಲ್ಲಿದೆ ಮಾಹಿತಿ
ದೇಶದಲ್ಲಿ ಆಗಾಗ ಇಂಧನ ದರಗಳು ಯಾಕೆ ಬದಲಾಗುತ್ತವೆ? ಪೆಟ್ರೋಲ್, ಡೀಸೆಲ್ ಹಾಗೂ ಎಲ್ಪಿಜಿ ಬೆಲೆಯ ಬಗ್ಗೆ ನಿರ್ಧಾರ ಕೈಗೊಳ್ಳುವವರು ಯಾರು? ಬೆಲೆಯ ಲೆಕ್ಕಾಚಾರ ಹಾಕುವ ವಿಧಾನವೇನು? ಇಲ್ಲಿದೆ ಮಾಹಿತಿ.
ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ (LPG Cylinder) ಬೆಲೆಯಲ್ಲಿ ಮತ್ತೆ ಇಳಿಕೆಯಾಗಿದೆ. 19 ಕೆಜಿ ಸಿಲಿಂಡರ್ ದರದಲ್ಲಿ 115.50 ರೂಪಾಯಿ ಇಳಿಕೆ ಮಾಡಲಾಗಿದೆ. ಇದರೊಂದಿಗೆ ಸತತ ಆರನೇ ತಿಂಗಳು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಕೆಯಾದಂತಾಗಿದೆ. ಕಳೆದ ಐದೂವರೆ ತಿಂಗಳಿನಿಂದ ಯಥಾಸ್ಥಿತಿಯಲ್ಲಿದ್ದ ಪೆಟ್ರೋಲ್ (Petrol Rate) ಹಾಗೂ ಡೀಸೆಲ್ ಬೆಲೆಯೂ ಇಳಿಕೆಯಾಗಿದೆ. ದೇಶದಲ್ಲಿ ಆಗಾಗ ಇಂಧನ ದರಗಳು ಯಾಕೆ ಬದಲಾಗುತ್ತವೆ? ಪೆಟ್ರೋಲ್, ಡೀಸೆಲ್ ಹಾಗೂ ಎಲ್ಪಿಜಿ ಬೆಲೆಯ ಬಗ್ಗೆ ನಿರ್ಧಾರ ಕೈಗೊಳ್ಳುವವರು ಯಾರು? ಬೆಲೆಯ ಲೆಕ್ಕಾಚಾರ ಹಾಕುವ ವಿಧಾನವೇನು? ಇಲ್ಲಿದೆ ಮಾಹಿತಿ.
ಎಲ್ಪಿಜಿ ಬೆಲೆ ನಿರ್ಧರಿಸುವವರು ಯಾರು?
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಒಕ್ಕೂಟವು ಎಲ್ಪಿಜಿ, ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ನಿರ್ಧರಿಸುವುದು ಅಥವಾ ಕಾಲಕ್ಕನುಗುಣವಾಗಿ ಪರಿಷ್ಕರಿಸುವ ಕೆಲಸ ಮಾಡುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ದರಕ್ಕೆ ಅನುಗುಣವಾಗಿ ಈ ಕಂಪನಿಗಳು ಎಲ್ಪಿಜಿ, ಪೆಟ್ರೋಲ್, ಡೀಸೆಲ್ ಬೆಲೆಯನ್ನು ಪರಿಷ್ಕರಿಸುತ್ತವೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಪ್ರತಿ ದಿನ ಪರಿಷ್ಕರಿಸಲಾಗುತ್ತದೆ. ಆದರೆ, ಎಲ್ಪಿಜಿ ಬೆಲೆಯನ್ನು ತಿಂಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. ಬೆಲೆ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸರ್ಕಾರ ನೇರವಾಗಿ ಭಾಗಿಯಾಗುವುದಿಲ್ಲವಾದರೂ ತೈಲ ಕಂಪನಿಗಳ ಮೇಲೆ ಪ್ರಬಾವ ಬೀರುತ್ತದೆ ಎಂಬ ಆರೋಪಗಳು ಹಿಂದಿನಿಂದಲೂ ಇವೆ. ಮೇ 22ರಂದು ಕೇಂದ್ರ ಸರ್ಕಾರವು ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿತ್ತು. ಇದಾದ ಬಳಿಕ ಸುಮಾರು ಐದೂವರೆ ತಿಂಗಳಿನಿಂದ ಉಭಯ ಇಂಧನ ದರ ಯಥಾಸ್ಥಿತಿಯಲ್ಲಿತ್ತು ಎಂಬುದು ಗಮನಾರ್ಹ. ಇನ್ನು ಕೆಲವೊಮ್ಮೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ದರ ವ್ಯತ್ಯಾಸವಾಗದೇ ಇದ್ದಾಗ ದೇಶೀಯ ಮಾರುಕಟ್ಟೆಯಲ್ಲಿ ಇಂಧನ ದರ ಯಥಾಸ್ಥಿತಿಯಲ್ಲಿ ಮುಂದುವರಿಯುವುದೂ ಇದೆ.
ಎಲ್ಪಿಜಿ ದರ ಲೆಕ್ಕ ಹಾಕುವುದು ಹೀಗೆ…
ಎಲ್ಪಿಜಿ ದರ ಲೆಕ್ಕಾಚಾರದಲ್ಲಿ ಪ್ರಮುಖ ಪಾತ್ರವಹಿಸುವುದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನೈಸರ್ಗಿಕ ಅನಿಲದ ದರ. ಭಾರತದಲ್ಲಿ ಐಪಿಪಿ (import parity price ಅಥವಾ ಆಮದು ಸಮಾನ ಬೆಲೆ) ಮಾನದಂಡವನ್ನು ಬಳಸಿಕೊಂಡು ಎಲ್ಪಿಜಿ ದರ ಲೆಕ್ಕ ಹಾಕಲಾಗುತ್ತದೆ. ಯಾಕೆಂದರೆ, ದೇಶದ ಬಹುಪಾಲು ನೈಸರ್ಗಿಕ ಅನಿಲವನ್ನು ಆಮದು ಮಾಡಿಕೊಳ್ಳಲಾಗುತ್ತದೆ.
ಇದನ್ನೂ ಓದಿ: LPG Cylinder Price: ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ; ನಿಮ್ಮ ನಗರದಲ್ಲಿ ಬೆಲೆ ಎಷ್ಟು?
ವಿಶ್ವದ ಅತಿದೊಡ್ಡ ನೈಸರ್ಗಿಕ ಅನಿಲ ಉತ್ಪಾದಕ ‘ಸೌದಿ ಅರಾಮ್ಕೊ’ದ ಎಲ್ಪಿಜಿ ದರಕ್ಕೆ ಹೊಂದಿಕೊಂಡು ಐಪಿಪಿ ಲೆಕ್ಕಹಾಕಲಾಗುತ್ತದೆ. ಲೆಕ್ಕಾಚಾರದ ವೇಳೆ, ಎಫ್ಒಬಿ ದರ (ಸರಕಿನ ಮಾಲೀಕತ್ವ ವರ್ಗಾವಣೆ ಮತ್ತು ಸಾಗಾಟದ ವೇಳೆ ಸರಕಿಗೆ ಹಾನಿಯಾದರೆ ಅದರ ವೆಚ್ಚ ಭರಿಸಿಕೊಳ್ಳಲು ವಹಿಸಿಕೊಳ್ಳಬೇಕಾದ ಜವಾಬ್ದಾರಿಗೆ ಸಂಬಂಧಿಸಿದ್ದು), ಸಾಗಾಟ ವೆಚ್ಚ, ಅಬಕಾರಿ ಸುಂಕಗಳು, ಬಂದರು ವೆಚ್ಚ, ವಿಮಾ ಖರ್ಚುಗಳನ್ನು ಸೇರಿಸಿಕೊಳ್ಳಲಾಗುತ್ತದೆ. ಕಚ್ಚಾ ವಸ್ತುಗಳು, ಕಚ್ಚಾ ತೈಲದ ಬೆಲೆಗೆ ಅನುಗುಣವಾಗಿನ ಅಂತಾರಾಷ್ಟ್ರೀಯ ಎಲ್ಪಿಜಿ ದರದಲ್ಲಿ ಏರಿಳಿತವಾಗುತ್ತದೆ. ಇದಕ್ಕನುಗುಣವಾಗಿ ದೇಶೀಯ ಮಾರುಕಟ್ಟೆಯಲ್ಲಿಯೂ ದರ ವ್ಯತ್ಯಾಸವಾಗುತ್ತದೆ. ಮೊದಲಿಗೆ ಅಮೆರಿಕನ್ ಡಾಲರ್ನಲ್ಲಿ ಎಲ್ಪಿಜಿ ಬೆಲೆ ಲೆಕ್ಕಹಾಕಲಾಗುತ್ತದೆ. ಬಳಿಕ ಭಾರತೀಯ ರೂಪಾಯಿಗೆ ಲೆಕ್ಕಹಾಕಿ ದರ ನಿಗದಿಪಡಿಸಲಾಗುತ್ತದೆ.
ನೀವು ಪಾವತಿಸಬೇಕಾದ ದರ
ಅಂತಾರಾಷ್ಟ್ರೀಯ ದರ, ಸಾಗಾಟ ವೆಚ್ಚವೂ ಸೇರಿದಂತೆ ದೇಶದಲ್ಲಿ ಸೇರ್ಪಡೆಯಾಗುವ ದರ, ತೈಲ ಕಂಪನಿಗಳು ಉಳಿಸಿಕೊಳ್ಳುವ ಶುಲ್ಕ, ಬಾಟಲಿಂಗ್ ವೆಚ್ಚ, ಮಾರುಕಟ್ಟೆ ವೆಚ್ಚಗಳು, ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಇವುಗಳನ್ನೆಲ್ಲ ಲೆಕ್ಕ ಹಾಕಿದ ಬಳಿಕ ವಿವಿಧ ರಾಜ್ಯಗಳಲ್ಲಿ ಆಯಾ ರಾಜ್ಯಗಳ ತೆರಿಗೆಗೆ ಅನುಗುಣವಾಗಿ ಸಬ್ಸಿಡಿ ರಹಿತ ಎಲ್ಪಿಜಿ ಚಿಲ್ಲರೆ ಮಾರಾಟದ ದರ ನಿರ್ಧರಿಸಲಾಗುತ್ತದೆ.
ದರ ಹೆಚ್ಚಳ, ಇಳಿಕೆಗೆ ಪ್ರಮುಖ ಕಾರಣ
ಎಲ್ಪಿಜಿ ದರ ಹೆಚ್ಚಳ ಮತ್ತು ಇಳಿಕೆಯು ಆಮದಿನ ಬೆಲೆಯನ್ನು ಅವಲಂಬಿಸಿದೆ. ಹೀಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ಹೆಚ್ಚಳ ಮತ್ತು ಇಳಿಕೆಯು ದೇಶೀಐ ಎಲ್ಪಿಜಿ ದರದ ಮೇಲೆ ನೇರ ಪರಿಣಾಮ ಬೀರುತ್ತದೆ.
(ಮಾಹಿತಿ – ವಿವಿಧ ಮೂಲಗಳಿಂದ)
ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ