ತಿರುಪತಿ ತಿಮ್ಮಪ್ಪನಿಗೆ 200 ಕೋಟಿ ರೂ ಚಿನ್ನಾಭರಣ ಅರ್ಪಿಸಿದ ವ್ಯಕ್ತಿಗೆ ಅಷ್ಟು ಹಣ ಬಂದಿದ್ದು ಎಲ್ಲಿಂದ? ಇಲ್ಲಿದೆ ವರ್ಧಮಾನ್ ಜೈನ್ ಅವರ ಕಥೆ

ನವೆಂಬರ್ 26, ಗುರುವಾರ ಚೆನ್ನೈ ಮೂಲದ ಉದ್ಯಮಿ ವರ್ಧಮಾನ್ ಜೈನ್ ಅವರು ತಿರುಪತಿ ತಿಮ್ಮಪ್ಪನಿಗೆ 121 ಕಿಲೋ ತೂಕದ ಚಿನ್ನಾಭರಣಗಳನ್ನು ಅರ್ಪಿಸಿದ್ದಾರೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ಹಲವು ಗಣ್ಯರು ಈ ಸಂದರ್ಭಕ್ಕೆ ಸಾಕ್ಷಿಗಳಾಗಿದ್ದಾರೆ. ಜೈನ್ ನೀಡಿರುವ ಚಿನ್ನವು 24 ಕ್ಯಾರಟ್​ನದ್ದಾಗಿದ್ದು, ಅದರ ಒಟ್ಟು ಮೌಲ್ಯ 207 ಕೋಟಿ ರೂ ಇರಬಹುದು ಎನ್ನಲಾಗಿದೆ.

ತಿರುಪತಿ ತಿಮ್ಮಪ್ಪನಿಗೆ 200 ಕೋಟಿ ರೂ ಚಿನ್ನಾಭರಣ ಅರ್ಪಿಸಿದ ವ್ಯಕ್ತಿಗೆ ಅಷ್ಟು ಹಣ ಬಂದಿದ್ದು ಎಲ್ಲಿಂದ? ಇಲ್ಲಿದೆ ವರ್ಧಮಾನ್ ಜೈನ್ ಅವರ ಕಥೆ
ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ವರ್ಧಮಾನ್ ಜೈನ್ ಮತ್ತು ಕುಟುಂಬ
Image Credit source: PTI and Wiki Commons

Updated on: Nov 27, 2026 | 12:45 PM

ಚೆನ್ನೈ, ನವೆಂಬರ್ 27: ತಿರುಪತಿ ತಿಮ್ಮಪ್ಪನಿಗೆ ಭಕ್ತರು ತಮ್ಮ ಶಕ್ತ್ಯಾನುಸಾರ ಕಾಣಿಕೆಗಳನ್ನು ಅರ್ಪಿಸುತ್ತಾರೆ. 16-17 ವರ್ಷದ ಹಿಂದೆ ಜನಾರ್ದನ ರೆಡ್ಡಿ ಅವರು ಶ್ರೀ ವೆಂಕಟೇಶ್ವರನಿಗೆ 32 ಕಿಲೋ ಚಿನ್ನ ಅರ್ಪಿಸಿ ದೊಡ್ಡ ಸುದ್ದಿಯಾಗಿದ್ದರು. ಈಗ ನಿನ್ನೆ (ನವೆಂಬರ್ 26) ಚೆನ್ನೈನ ಉದ್ಯಮಿಯೊಬ್ಬರು ಬರೋಬ್ಬರಿ 121 ಕಿಲೋ ತೂಕದ ಚಿನ್ನ ಮತ್ತು ಚಿನ್ನಾಭರಣಗಳನ್ನು ವೆಂಕಟೇಶ್ವರನ ಸನ್ನಿಧಾನಕ್ಕೆ ಅರ್ಪಿಸಿ ಗಮನ ಸೆಳೆದಿದ್ದಾರೆ. ಇವರ ಹೆಸರು ವರ್ಧಮಾನ್ ಜೈನ್.

ತಿರುಪತಿ ತಿಮ್ಮಪ್ಪನಿಗೆ ಪ್ರತೀ ತಿಂಗಳೂ ಭಕ್ತರು ನೀಡುವ ಚಿನ್ನದ ಒಟ್ಟು ತೂಕ ಸರಾಸರಿ 100 ಕಿಲೋ ಆಗುತ್ತದೆ. ಆದರೆ, ಒಬ್ಬರೇ ವ್ಯಕ್ತಿ ಅಷ್ಟು ಚಿನ್ನವನ್ನು ಅರ್ಪಿಸುವುದು ಸಾಮಾನ್ಯ ಸಂಗತಿಯಲ್ಲ. ಚೆನ್ನೈ ಮೂಲದ ಉದ್ಯಮಿಯಾಗಿರುವ ವರ್ಧಮಾನ್ ಜೈನ್ ಮತ್ತವರ ಪತ್ನಿ ರಾಧಿಕಾ ಜೈನ್ ಹಾಗು ಕುಟುಂಬ ಸದಸ್ಯರು ಶ್ರೀ ವೆಂಕಟೇಶ್ವರನಿಗೆ 46 ವಿವಿಧ ಚಿನ್ನಾಭರಣಗಳನ್ನು ಮಾಡಿಸಿ ಅರ್ಪಿಸಿದ್ದಾರೆ. ಎಲ್ಲವೂ ಕೂಡ 24 ಕ್ಯಾರಟ್ ಶುದ್ಧ ಚಿನ್ನ. ಇವುಗಳ ಒಟ್ಟು ಮೌಲ್ಯ 207 ಕೋಟಿ ರೂ ಇರಬಹುದು ಎಂದು ಅಂದಾಜಿಸಲಾಗಿದೆ. ಈ ವಿಶೇಷ ಸಂದರ್ಭದಲ್ಲಿ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಟಿಟಿಡಿ ಅಧ್ಯಕ್ಷರು, ಟಿಟಿಡಿ ಮುಖ್ಯ ಅರ್ಚಕರು ಮೊದಲಾದ ಪ್ರಮುಖರೆಲ್ಲರೂ ಉಪಸ್ಥಿತರಿದ್ದರು.

Loading...

ವರ್ಧಮಾನ್ ಜೈನ್ ಅವರಿಗೆ 121 ಕಿಲೋ ಚಿನ್ನ ಅರ್ಪಿಸಬೇಕೆಂದು ಅನಿಸಿದ್ದು ಯಾಕೆ?

ತಿರುಪತಿ ತಿಮ್ಮಪ್ಪನನ್ನು ಪ್ರತೀ ದಿನ 120 ಕಿಲೋ ತೂಕದ ಆಭರಣದಿಂದ ಅಲಂಕರಿಸಲಾಗುತ್ತದಂತೆ. ಇದನ್ನು ತಿಳಿದ ವರ್ಧಮಾನ್ ಜೈನ್ ಅವರಿಗೆ 121 ಕಿಲೋ ಚಿನ್ನ ನೀಡಬೇಕೆಂಬ ಹಂಬಲ ಉಂಟಾಯಿತಂತೆ.

ಇದನ್ನೂ ಓದಿ: ಜೆಟ್ ಏರ್ವೇಸ್ ಉದ್ಯೋಗಿಗಳಿಗೆ ಬಾಕಿ ಇರುವ ಗ್ರಾಚ್ಯುಟಿ, ಪಿಎಫ್ ಹಣ ನೀಡಿ: ಎನ್​ಸಿಎಲ್​ಎಟಿ ಆದೇಶ; 7 ವರ್ಷಗಳ ಹೋರಾಟಕ್ಕೆ ಜಯ

ವರ್ಧಮಾನ್ ಜೈನ್ ಅವರಿಗೆ ಅಷ್ಟು ಹಣ ಎಲ್ಲಿಂದ ಬಂತು?

ವರ್ಧಮಾನ್ ಜೈನ್ ಅವರು ಹಲವು ಉದ್ದಿಮೆಗಳನ್ನು ಹೊಂದಿದ್ದಾರೆ. ಹೆಲ್ತ್​ಕೇರ್ ಟೆಕ್ನಾಲಜಿ, ಬಿಪಿಒ, ಆಟೊಮೇಶನ್ ಕ್ಷೇತ್ರದಲ್ಲಿ ಬ್ಯುಸಿನೆಸ್ ಹೊಂದಿದ್ದಾರೆ. ಅವರ ಪ್ರಮುಖ ಉದ್ಯಮ ಇರುವುದು ಹೆಲ್ತ್​ಕೇರ್ ಟೆಕ್ನಾಲಜಿಯದ್ದು. ಅಕ್ಸೆಸ್ ಹೆಲ್ತ್​ಕೇರ್ ಕಂಪನಿಯ ಸಂಸ್ಥಾಪಕರಾಗಿದ್ದಾರೆ. ಕಳೆದ ವರ್ಷ ಅವರು ಈ ಕಂಪನಿಯಲ್ಲಿರುವ ತಮ್ಮ ಶೇ. 70ರಷ್ಟು ಪಾಲನ್ನು ಅಮೆರಿಕದ ಕಂಪನಿಯೊಂದಕ್ಕೆ ಮಾರಿದ್ದಾರೆ. 2 ಬಿಲಿಯನ್ ಡಾಲರ್ ಅಥವಾ 19,000 ಕೋಟಿ ರೂಪಾಯಿಗೆ ಆ ಡೀಲ್ ನಡೆದಿತ್ತು. ಹೀಗಾಗಿ, ಅವರಿಂದ ಇಷ್ಟು ದೊಡ್ಡ ಮೊತ್ತದ ಕಾಣಿಕೆಯನ್ನು ತಿಮ್ಮಪ್ಪನಿಗೆ ಅರ್ಪಿಸಲು ಸಾಧ್ಯವಾಗಿದೆ.

ದಾನ ಮಾಡಲು ಶ್ರೀಮಂತಿಕೆ ಇದ್ದರೆ ಸಾಲದು, ಮನಸ್ಸಿರಬೇಕು

ತಿರುಪತಿ ತಿಮ್ಮಪ್ಪನಿಗೆ 121 ಕಿಲೋ ಚಿನ್ನ ಅರ್ಪಿಸಿದ ವರ್ಧಮಾನ್ ಜೈನ್ ಅವರನ್ನು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ತುಂಬು ಹೃದಯದಿಂದ ಪ್ರಶಂಸಿಸಿದ್ದಾರೆ. ದೇಶದಲ್ಲಿ ಹಲವು ಕೋಟ್ಯಾಧಿಪತಿಗಳು, ಶತಕೋಟ್ಯಾಧಿಪತಿಗಳಿದ್ದರೂ ಯಾರೂ ಇಷ್ಟು ದಾನ ಮಾಡಿದ್ದಿಲ್ಲ ಎಂದಿದ್ದಾರೆ.

‘ಜನರಿಗೆ ಸಂಪತ್ತು ಸಿಕ್ಕರೆ ಇನ್ನಷ್ಟು ಸಂಪತ್ತು ಗಳಿಸುವುದಕ್ಕೆ ಗಮನ ಹೋಗುತ್ತದೆ. ವರ್ಧಮಾನ್ ಅವರಂತಹ ಕೆಲವೇ ಜನರು ಮಾತ್ರ ದೇವರು, ಆದ್ಯಾತ್ಮ, ಸಮಾಜಸೇವೆಗೆ ಸಂಪತ್ತನ್ನು ವಿನಿಯೋಗಿಸುವುದು’ ಎಂದು ನಾಯ್ಡು ಹೇಳಿದ್ದಾರೆ.

ಇದನ್ನೂ ಓದಿ: ದೇವಿಪುರಂ: ಮಹಿಳೆಯರೇ ಅರ್ಚಕರಾಗಿರುವ ಆಂಧ್ರದ ಈ ವಿಸ್ಮಯಕಾರಿ ದೇಗುಲದ ಬಗ್ಗೆ ನಿಮಗೆಷ್ಟು ಗೊತ್ತು?

ವರ್ಧಮಾನ್ ಜೈನ್ ಅವರ ಸಾಮಾಜಿಕ ಕೆಲಸಗಳು ಅನೇಕ…

ವರ್ಧಮಾನ್ ಜೈನ್ ಅವರು ಜೈನ ಕುಟುಂಬದವರಾದರೂ ತಿರುಪತಿ ತಿಮ್ಮಪ್ಪನ ಮೇಲೆ ಅಪಾರ ಭಕ್ತಿ ಹೊಂದಿದ್ದಾರೆ. ಈ ಹಿಂದೆಯೂ ಹಲವು ಬಾರಿ ಈ ದೇವಸ್ಥಾನದ ಅಭಿವೃದ್ಧಿಗೆ ಕೋಟಿಗಟ್ಟಲೆ ಹಣ ನೀಡಿದ್ದಾರೆ. ವೆಂಕಟೇಶ್ವರ ಭಕ್ತಿ ಚಾನಲ್, ಗೋಶಾಲೆಗಳ ನಿರ್ಮಾಣಕ್ಕೆ ಹಣ ಕೊಟ್ಟಿದ್ದಾರೆ. ಎಲೆಕ್ಟ್ರಿಕ್ ವಾಹನಗಳನ್ನು ದಾನ ಮಾಡಿದ್ದಾರೆ. ಹಲವು ಆಸ್ಪತ್ರೆ, ಶಾಲೆ, ಕೌಶಲ್ಯಾಭಿವೃದ್ಧಿ ಕೇಂದ್ರ ಇತ್ಯಾದಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ವರದಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us