Wholesale price-based inflation: ಮೇನಲ್ಲಿ ಸಾರ್ವಕಾಲಿಕ ಗರಿಷ್ಠ ಶೇ 12.94 ತಲುಪಿದ ಸಗಟು ದರ ಸೂಚ್ಯಂಕ ಹಣದುಬ್ಬರ

ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ (Wholesale price-based inflation) ಮೇ ತಿಂಗಳಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ಶೇ 12.94 ತಲುಪಿದೆ. ಇದರ ಅರ್ಥ ಏನು ಹಾಗೂ ಪರಿಣಾಮ ಏನು ಎಂಬುದನ್ನು ವಿವರಿಸುವ ಲೇಖನ ಇಲ್ಲಿದೆ.

Wholesale price-based inflation: ಮೇನಲ್ಲಿ ಸಾರ್ವಕಾಲಿಕ ಗರಿಷ್ಠ ಶೇ 12.94 ತಲುಪಿದ ಸಗಟು ದರ ಸೂಚ್ಯಂಕ ಹಣದುಬ್ಬರ
ಸಾಂದರ್ಭಿಕ ಚಿತ್ರ
TV9kannada Web Team

| Edited By: Srinivas Mata

Jun 14, 2021 | 6:46 PM

ನವದೆಹಲಿ: ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ (Wholesale price-based inflation) ಮೇ ತಿಂಗಳಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ಶೇ 12.94 ತಲುಪಿದೆ. ಇದಕ್ಕೆ ಕಾರಣ ಆಗಿದ್ದು ಏರಿಕೆ ಆಗುತ್ತಲೇ ಸಾಗಿದ ಕಚ್ಚಾ ತೈಲ ದರಗಳು ಮತ್ತು ಉತ್ಪಾದನಾ ಸಾಮಗ್ರಿಗಳು ಹಾಗೂ ಇದರ ಜತೆಗೆ ಕಳೆದ ವರ್ಷದಲ್ಲಿನ ಕಡಿಮೆ ಮೂಲಾಂಶ (ಬೇಸ್) ಕೂಡ ಈ ವರ್ಷದ, ಅಂದರೆ 2021ರ ಹಣದುಬ್ಬರಕ್ಕೆ ಕಾರಣ ಆಗಿದೆ. ಮೊದಲಿಗೆ ಸಗಟು ದರ ಸೂಚ್ಯಂಕ (WPI) ಆಧಾರಿತ ಹಣದುಬ್ಬರ ಅಂದರೆ ಏನು, ಅದು ಹೇಗೆ ನಮ್ಮ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಅದು ಜಾಸ್ತಿ ಆದಲ್ಲಿ ನಮಗೇನು ಮತ್ತು ಕಡಿಮೆ ಆದರೇನು ಎಂದು ತಿಳಿದುಕೊಳ್ಳೋಣ.

ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಅಂದರೆ ಏನು? ಒಂದು ಉತ್ಪನ್ನ ಅಥವಾ ವಸ್ತು ಅಂತಿಮವಾಗಿ ಗ್ರಾಹಕರನ್ನು ತಲುಪುವುದಕ್ಕೆ ಮುಂಚೆ ವಿವಿಧ ಹಂತಗಳನ್ನು ದಾಟಿ ಬರುತ್ತದೆ. ಮೊದಲಿಗೆ ಉತ್ಪಾದಕರು, ಅಂದರೆ ಆ ವಸ್ತುವಿನ ತಯಾರಕರು. ಆ ನಂತರದಲ್ಲಿ ಹೋಲ್​ಸೇಲರ್ (ಸಗಟು ಮಾರಾಟಗಾರರು). ಅದಾದ ಮೇಲೆ ಚಿಲ್ಲರೆ ಮಾರಾಟಗಾರರು (ರೀಟೇಲರ್). ಕೊನೆಗೆ ಗ್ರಾಹಕರನ್ನು ತಲುಪುತ್ತದೆ. ಇದಕ್ಕೆ ಇನ್ನೂ ಒಂದೆರಡು ಪದರ ಸೇರ್ಪಡೆ ಕೂಡ ಆಗಬಹುದು. ಹೀಗೆ ವಿವಿಧ ಹಂತವನ್ನು ದಾಟುವಾಗ ವಿಧಿಸುವ ಶುಲ್ಕ ಅಥವಾ ದರ ಕೂಡ ಬದಲಾಗುತ್ತಾ ಹೋಗುತ್ತದೆ. ಇದನ್ನು ಸೂಚಿಸುವುದಕ್ಕೆ ಒಂದು ಮಾನದಂಡ ಬೇಕಲ್ಲಾ, ಅದನ್ನು ಸಗಟು ದರ ಸೂಚ್ಯಂಕ ಎನ್ನಲಾಗುತ್ತದೆ.

ಇನ್ನು ಉತ್ಪನ್ನಗಳು, ವಸ್ತು, ಸೇವೆಗಳ ದರ ಎಷ್ಟು ಏರಿಕೆ ಆಗಿದೆ ಎಂಬುದನ್ನು ಸೂಚಿಸುವುದಕ್ಕೆ ಹಣದುಬ್ಬರ ಎನ್ನಲಾಗುತ್ತದೆ. ಅಲ್ಲಿಗೆ ಈ ಎರಡು ವ್ಯಾಖ್ಯಾನವನ್ನು ಒಗ್ಗೂಡಿಸಿದರೆ ನಿಮಗೆ ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಅಂದರೆ ಏನು ಅಂತ ಗೊತ್ತಾಗುತ್ತದೆ. ಸರಿ, ಇದರಿಂದ ನಮ್ಮ ಮೇಲೆ ಏನು ಪರಿಣಾಮ ಅಂದರೆ, ದಿನ ಬಳಕೆಯ ವಸ್ತು, ಸೇವೆ, ಉತ್ಪನ್ನಗಳು ಸಿಕ್ಕಾಪಟ್ಟೆ ಜಾಸ್ತಿ ಆಗಿವೆ ಅಂತ ಅಂದುಕೊಳ್ಳುತ್ತಿರುತ್ತೇವಲ್ಲಾ ಅಥವಾ ಪರವಾಗಿಲ್ಲ ಮುಂಚೆಗಿಂತ ಈಗ ಸ್ವಲ್ಪ ಬೆಲೆ ಇಳಿದಿದೆ ಅಂತ ನಿರಾಳ ಆಗುತ್ತೇವಲ್ಲಾ ಅದಕ್ಕೆ ಕಾರಣ ತಿಳಿಯುವುದು ಈ ಅಂಕಿ- ಅಂಶದ ಮೂಲಕವಾಗಿ.

ನಮ್ಮನ್ನು ತಲುಪಬೇಕಾದ ವಸ್ತು, ಉತ್ಪನ್ನ, ಸೇವೆಗಳ ದರಕ್ಕೆ ವಿವಿಧ ಹಂತಗಳಲ್ಲಿ (ಉತ್ಪಾದಕರು, ಸಗಟು ಮಾರಾಟಗಾರರು, ಚಿಲ್ಲರೆ ಮಾರಾಟಗಾರರು) ಶುಲ್ಕ ವಿಧಿಸುತ್ತಾ ಹೋದಲ್ಲಿ ದುಬಾರಿ ಆಗಿಯೇ ಆಗುತ್ತದೆ. ಅದೇ ಕಡಿಮೆಯಾದಲ್ಲಿ ನಮ್ಮನ್ನು ತಲುಪುವಾಗ ಬೆಲೆ ಕಡಿಮೆ ಇರುತ್ತದೆ. 2020ರ ಮೇ ತಿಂಗಳಿ​ನಲ್ಲಿ WPI ಹಣದುಬ್ಬರ ಶೇ (-) 3.37 ಇತ್ತು. 2021ರ ಏಪ್ರಿಲ್​ನಲ್ಲಿ WPI ಹಣದುಬ್ಬರ ಎರಡಂಕಿಯ ಶೇ 10.49ಕ್ಕೆ ಏರಿಕೆ ಕಂಡಿತ್ತು. ಸತತವಾಗಿ ಐದನೇ ತಿಂಗಳು WPI ಆಧಾರಿತ ಹಣದುಬ್ಬರವು ಏರಿಕೆ ಕಂಡಿದೆ.

ವಾರ್ಷಿಕ ಹಣದುಬ್ಬರ ದರವು, ಮಾಸಿಕ ಸಗಟು ಹಣದುಬ್ಬರ ದರದ ಮೇಲೆ ಆಧಾರವಾಗಿ, 2020ರ ಮೇ ತಿಂಗಳಿಗೆ ಶೇ (-) 3.37ಗೆ ಹೋಲಿಸಿದರೆ 2021ರ ಮೇ ತಿಂಗಳಲ್ಲಿ ಶೇ 12.94 ಇತ್ತು (2020ರ ಮೇ ತಿಂಗಳಿಗಿಂತ). ಕಡಿಮೆ ಬೇಸ್ ಹಾಗೂ ಕಚ್ಚಾ ಪೆಟ್ರೋಲಿಯಂ, ಖನಿಜಯುಕ್ತ ತೈಲಗಳಾದ ಪೆಟ್ರೋಲ್, ಡೀಸೆಲ್, ನಾಫ್ತಾ, ಫರ್ನೇಸ್ ತೈಲ ಮುಂತಾದವು ಹಾಗೂ ಉತ್ಪಾದನಾ ವಸ್ತುಗಳನ್ನು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ ಏರಿಕೆ ಆಗಿರುವುದರ ಪರಿಣಾಮವಾಗಿ 2021ರ ಮೇ ತಿಂಗಳಲ್ಲಿ ಹಣದುಬ್ಬರದಲ್ಲಿ ಹೆಚ್ಚಳವಾಗಿದೆ ಎಂದು ವಾಣಿಜ್ಯ ಹಾಗೂ ಕೈಗಾರಿಕೆ ಸಚಿವಾಲಯವು ಹೇಳಿದೆ.

ತೈಲ ಹಾಗೂ ಇಂಧನದ ಹಣದುಬ್ಬರ ದರ ಮೇ ತಿಂಗಳಲ್ಲಿ ಶೇ 37.61ಕ್ಕೆ ಏರಿಕೆ ಆಗಿದೆ. ಏಪ್ರಿಲ್​ನಲ್ಲಿ ಈ ಪ್ರಮಾಣ ಶೇ 20.94 ಇತ್ತು. ಕಚ್ಚಾ ಪೆಟ್ರೋಲಿಯಂ ಮತ್ತು ಇತರ ಇಂಧನಗಳ ದರವು ಕಳೆದ ವರ್ಷ ಮೇ ತಿಂಗಳಲ್ಲಿ ಲಾಕ್​ಡೌನ್ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿಯೇ ಕುಸಿದಿತ್ತು. ಬೇಡಿಕೆ ಜತೆಜತೆಗೆ ಬೆಲೆ ಸಹ ನೆಲ ಕಚ್ಚಿತ್ತು. ಉತ್ಪಾದನಾ ವಸ್ತುಗಳಲ್ಲಿ ಹಣದುಬ್ಬರವು ಮೇ ತಿಂಗಳಲ್ಲಿ ಶೇ 10.83 ಇತ್ತು. ಕಳೆದ ತಿಂಗಳು ಶೇ 9.01 ಆಗಿತ್ತು. ಆದರೂ ಆಹಾರ ಪದಾರ್ಥಗಳ ಹಣದುಬ್ಬರದಲ್ಲಿ ಮೇ ತಿಂಗಳಲ್ಲಿ ಶೇ 4.31 ಆಗಿದೆ. ಏಪ್ರಿಲ್​ನಲ್ಲಿ ಶೇ (-) 19.74 ಇದ್ದದ್ದು ಮೇ ತಿಂಗಳಲ್ಲಿ ಶೇ 23.24 ಇದೆ.

ನಾವು ಹೇಗೆ ಅರ್ಥ ಮಾಡಿಕೊಳ್ಳಬೇಕು? ಈ ಮೇಲ್ಕಂಡ ಅಂಕಿಗಳಲ್ಲಿ (-) ಎಂದು ಬಳಸಿರುವುದು ಮೈನಸ್ ಅಂತ ಅರ್ಥ. ಅವುಗಳ ಬೆಲೆಯಲ್ಲಿ ಇಳಿಕೆ ಆಗಿದೆ ಎಂಬುದನ್ನು ಸೂಚಿಸುತ್ತದೆ. ಉಳಿದವುಗಳ ದರದಲ್ಲಿ ಹೆಚ್ಚಳವಾಗಿದೆ. ಆ ಏರಿಕೆಯನ್ನು ಶೇಕಡಾವಾರು ಲೆಕ್ಕದಲ್ಲಿ ವಿವರಿಸಲಾಗಿದೆ. ಆದರೆ ಒಟ್ಟಾರೆ ನೋಡಿದಾಗ ಬೆಲೆಗಳ ಏರಿಕೆ ದಾಖಲೆ ಮಟ್ಟವನ್ನು ಮುಟ್ಟಿದೆ.

ದ್ವೈಮಾಸಿಕ ಹಣಕಾಸು ನೀತಿ ರೂಪಿಸುವಾಗ ಆರ್​ಬಿಐನಿಂದ ಚಿಲ್ಲರೆ ಹಣದುಬ್ಬರವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ತಿಂಗಳ ಆರಂಭದಲ್ಲಿ ದಾಖಲೆ ಮಟ್ಟದಲ್ಲಿ ಕನಿಷ್ಠ ಸ್ಥಿತಿಯಲ್ಲಿ ಇರುವ ದರವನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ಬೆಳವಣಿಗೆಗೆ ಪೂರಕವಾಗಿ ಅಕಾಮಡೆಟಿವ್ ಸ್ಟ್ಯಾನ್ಸ್ ಮುಂದುವರಿಸಲು ತೀರ್ಮಾನಿಸಲಾಗಿದೆ. ಆರ್​ಬಿಐನಿಂದ ಅಂದಾಜು ಮಾಡಿರುವಂತೆ 2022ರ ಮಾರ್ಚ್ ಕೊನೆ ಹೊತ್ತಿಗೆ ಚಿಲ್ಲರೆ ಹಣದುಬ್ಬರ ದರ ಶೇ 5.1 ಆಗಬಹುದು. ಕೊರೊನಾ ಲಾಕ್​ಡೌನ್ ಕಾರಣಕ್ಕೆ ಪೂರೈಕೆ ಜಾಲ ವ್ಯತ್ಯಯವಾಗಿ ಚಿಲ್ಲರೆ ಹಣದುಬ್ಬರ ದರ ಏರಿಕೆ ಆಗುವ ಸಾಧ್ಯತೆ ಇದೆ.​

ಇದನ್ನೂ ಓದಿ: RBI MPC: ಆರ್​ಬಿಐ ರೆಪೋ ದರ ಶೇ 4ರಲ್ಲಿ ಯಥಾ ಸ್ಥಿತಿ; ಬ್ಯಾಂಕ್ ಸಾಲದ ಮೇಲಿನ ಬಡ್ಡಿಯಲ್ಲಿ ಬದಲಾವಣೆಯಿಲ್ಲ

(Wholesale Price index based inflation in 2021 May month at all time record high of 12.94%)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada