ಅಮೆರಿಕದ ಯುದ್ಧವೆಲ್ಲವೂ ತೈಲಕ್ಕಾಗಿಯೇ; ಇವಿ, ಸೋಲಾರ್ ದಾಂಗುಡಿ ಇಟ್ಟರೂ ಆಯಿಲ್ಗೆ ಯಾಕಿಷ್ಟು ಬೇಡಿಕೆ? ಈ ಕಪ್ಪು ಚಿನ್ನ ಅಂತಿಂಥದ್ದಲ್ಲ
Why Green Energy & EVs Won't End Oil's Demand: ಜಗತ್ತು ಹಸಿರು ಇಂಧನ ಮತ್ತು ಎಲೆಕ್ಟ್ರಿಕ್ ವಾಹನಗಳತ್ತ ಸಾಗುತ್ತಿದ್ದರೂ ಕಚ್ಚಾ ತೈಲದ ಬೇಡಿಕೆ ಮುಂಬರುವ ದಶಕಗಳಲ್ಲಿ ಕಡಿಮೆಯಾಗುವುದಿಲ್ಲ. ಏಕೆಂದರೆ, ತೈಲ ಕೇವಲ ಇಂಧನವಲ್ಲ. ಪ್ಲಾಸ್ಟಿಕ್, ಔಷಧಿಗಳು, ಸೌಂದರ್ಯವರ್ಧಕಗಳು ಸೇರಿದಂತೆ ಸಾವಿರಾರು ದೈನಂದಿನ ವಸ್ತುಗಳ ತಯಾರಿಕೆಗೆ ಪೆಟ್ರೋಕೆಮಿಕಲ್ಸ್‌ಗಳು ಅವಶ್ಯಕ. EV ಯುಗದಲ್ಲೂ ಕೈಗಾರಿಕೆಗಳು ಮತ್ತು ನಮ್ಮ ನಿತ್ಯ ಜೀವನಕ್ಕೆ ತೈಲ ಅನಿವಾರ್ಯ.

ಜಗತ್ತಿನಲ್ಲಿ ಯುದ್ಧ ಆಗೋದು ಒಂದು ಹೆಣ್ಣಿಗಾಗಿ, ಮತ್ತೊಂದು ಮಣ್ಣಿಗಾಗಿ. ಇಲ್ಲಿ ಮಣ್ಣು ಎಂದರೆ ಸಂಪನ್ಮೂಲ. ಕಳೆದ ಕೆಲ ಶತಮಾನಗಳಿಂದ ಜಗತ್ತಿನ ಹೆಚ್ಚಿನ ಯುದ್ಧಗಳು ಸಂಪನ್ಮೂಲಗಳಿಗಾಗಿ ನಡೆದಿವೆ. ಎಂಜಿನ್ಗಳ ಕಾಲ ಬಂದ ಬಳಿಕ ಕಚ್ಚಾ ತೈಲ ಬಹಳ ಪ್ರಮುಖ ಸಂಪನ್ಮೂಲವೆನಿಸಿದೆ. ತೈಲಕ್ಕಾಗಿ (Oil) ಸಾಲು ಸಾಲು ಯುದ್ಧಗಳೇ ಸಂಭವಿಸಿವೆ. ಎರಡನೇ ವಿಶ್ವ ಮಹಾಯುದ್ಧದಲ್ಲಿ ಜಪಾನ್ ಆಕ್ರಮಣಕಾರಿ ವರ್ತನೆ, 40ರ ದಶಕದಲ್ಲಿ ಬೊಲಿವಿಯಾ, ಪರಗ್ವೆ ನಡುವಿನ ಯುದ್ಧ, 90ರ ದಶಕದ ಇರಾಕ್ ಕುವೇತ್ ಯುದ್ಧ; ನಂತರ ಇರಾಕ್ ಮೇಲೆ ಅಮೆರಿಕದ ಆಕ್ರಮಣ, ನೈಜೀರಿಯಾ ಹಿಂಸಾಚಾರ, ಇರಾನ್ ಇರಾಕ್ ಯುದ್ಧ, ಇರಾನ್ ಅಮೆರಿಕ ಯುದ್ಧ, ರಷ್ಯಾ ಉಕ್ರೇನ್ ಯುದ್ಧ ಇವೆಲ್ಲವೂ ತೈಲದ ಮೇಲೆ ನಿಯಂತ್ರಣ ಸಾಧಿಸಲು ಆಗಿರುವಂಥವು.
ಇದೇ ವೇಳೆ, ಜಗತ್ತು ಸದ್ಯ ಹಸಿರು ಇಂಧನ (Green Energy), ಸೌರಶಕ್ತಿ ಮತ್ತು ಎಲೆಕ್ಟ್ರಿಕ್ ವಾಹನಗಳ (EV) ಕಡೆಗೆ ವೇಗವಾಗಿ ಹೆಜ್ಜೆ ಇಡುತ್ತಿದೆ. ಜಾಗತಿಕ ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಇಂಧನಕ್ಕಾಗಿ ಪೆಟ್ರೋಲ್-ಡೀಸೆಲ್ ಬಳಕೆ ಕಡಿಮೆ ಮಾಡುವ ಪಣವನ್ನು ಹಲವು ದೇಶಗಳು ತೊಟ್ಟಿವೆ. ಅನೇಕ ಜಾಗತಿಕ ಸಂಘರ್ಷಗಳು ಮತ್ತು ರಾಜಕೀಯ ತಂತ್ರಗಳು ತೈಲದ (Oil) ಮೇಲಿನ ಹಿಡಿತಕ್ಕಾಗಿಯೇ ನಡೆದಿದ್ದವು ಎಂಬುದು ಜಗತ್ತಿಗೆ ತಿಳಿದಿರುವ ಸತ್ಯ. ಆದರೆ, ವಾಹನಗಳು ಬ್ಯಾಟರಿ ಚಾಲಿತವಾದರೆ, ತೈಲದ ಬೇಡಿಕೆ ಸಂಪೂರ್ಣವಾಗಿ ಶೂನ್ಯವಾಗುತ್ತದೆಯೇ? ಎಂಬುದು ದೊಡ್ಡ ಪ್ರಶ್ನೆ. ಜಾಗತಿಕ ಇಂಧನ ತಜ್ಞರ ವರದಿಯ ಪ್ರಕಾರ, ಉತ್ತರ ಖಂಡಿತ ಇಲ್ಲ.
ಕಚ್ಚಾ ತೈಲ ಎನ್ನುವುದು ಕೇವಲ ವಾಹನ ಓಡಿಸುವ ಇಂಧನವಲ್ಲ; ಅದು ಆಧುನಿಕ ಜಗತ್ತಿನ ಭೌತಿಕ ಅಗತ್ಯಗಳನ್ನು ಪೂರೈಸುವ ಕಣ್ಣಿಗೆ ಕಾಣದ ಶಕ್ತಿ. ಜಗತ್ತು ಸೌರಶಕ್ತಿ (Solar) ಮತ್ತು ಎಲೆಕ್ಟ್ರಿಕ್ ವಾಹನಗಳ (EV) ಕಡೆಗೆ ಮುಖ ಮಾಡುತ್ತಿದ್ದರೂ ಕಚ್ಚಾ ತೈಲದ (Crude Oil) ಬೇಡಿಕೆ ಕಡಿಮೆಯಾಗುತ್ತಿಲ್ಲ. ಏಕೆಂದರೆ ನಮ್ಮ ಬೆಳಗಿನ ಟೂತ್‌ಬ್ರಷ್‌ನಿಂದ ಹಿಡಿದು ರಾತ್ರಿಯ ಹೊದಿಕೆಯವರೆಗೆ ಎಲ್ಲದರಲ್ಲೂ ತೈಲದ ಅಂಶ ಅಡಗಿದೆ.
ಪೆಟ್ರೋಕೆಮಿಕಲ್ಸ್: ತೈಲ ಉದ್ಯಮದ ಹೊಸ ಅಸ್ತ್ರ
ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA) ನೀಡಿರುವ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಜಾಗತಿಕವಾಗಿ ಕಚ್ಚಾ ತೈಲದ ಒಟ್ಟು ಬೇಡಿಕೆಯಲ್ಲಿ ಶೇ. 12 ಕ್ಕಿಂತ ಹೆಚ್ಚು ಭಾಗ ಪೆಟ್ರೋಕೆಮಿಕಲ್ಸ್ (Petrochemicals) ಉದ್ಯಮಕ್ಕೆ ಬಳಕೆಯಾಗುತ್ತಿದೆ. ವಾಹನಗಳಿಗೆ ಇಂಧನದ ಬೇಡಿಕೆ ಕಡಿಮೆಯಾದರೂ, ಪ್ಲಾಸ್ಟಿಕ್, ರಬ್ಬರ್ ಮತ್ತು ರಾಸಾಯನಿಕಗಳ ತಯಾರಿಕೆಯಲ್ಲಿ ತೈಲದ ಬೇಡಿಕೆ ಮುಂದಿನ ದಶಕಗಳಲ್ಲಿ ಇನ್ನಷ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಚೀನಾದಲ್ಲಿ ವಿಶ್ವದ ಅತಿದೊಡ್ಡ ಹೈಸ್ಪೀಡ್ ರೈಲ್ವೆ ನಿಲ್ದಾಣ; ಬೆಟ್ಟವನ್ನೇ ಸವರಿ, ರೋಬೋಟ್, ಎಐ ಬಳಸಿ ಆಯಿತು ನಿರ್ಮಾಣ
ಕಚ್ಚಾ ತೈಲವನ್ನು ಇಂಧನ ಹೊರತುಪಡಿಸಿ ಇನ್ಯಾವುದಕ್ಕೆ ಬಳಸುತ್ತಾರೆ?
ಕಚ್ಚಾ ತೈಲವನ್ನು ಶುದ್ಧೀಕರಿಸಿದಾಗ (Refining) ಪೆಟ್ರೋಲ್, ಡೀಸಲ್, ಸೀಮೆ ಎಣ್ಣೆ, ಎಲ್ಪಿಜಿ ಇತ್ಯಾದಿ ಪ್ರಮುಖ ಪೆಟ್ರೋಲಿಯಂ ಉತ್ಪನ್ನಗಳು ಸಿಗುತ್ತವೆ. ಹಾಗೆಯೇ, ಕಚ್ಚಾ ತೈಲದ ರೀಫೈನಿಂಗ್ನಿಂದ ಹಲವು ಉಪ ಉತ್ಪನ್ನಗಳನ್ನು (Petrochemicals) ಸಿಗುತ್ತವೆ. ಇವುಗಳನ್ನು ಸಾವಿರಾರು ದೈನಂದಿನ ವಸ್ತುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.
- ಪ್ಲಾಸ್ಟಿಕ್ ಮತ್ತು ಪಾಲಿಮರ್‌ಗಳು (Plastics): ಇಂದು ಜಗತ್ತಿನಲ್ಲಿ ಬಳಕೆಯಾಗುವ ಶೇ. 99 ರಷ್ಟು ಪ್ಲಾಸ್ಟಿಕ್ ಕಚ್ಚಾ ತೈಲದಿಂದಲೇ ಬರುತ್ತದೆ. ಮೊಬೈಲ್ ಫೋನ್, ಕಂಪ್ಯೂಟರ್ ಕೇಸಿಂಗ್, ಬಾಟಲಿಗಳು, ಪೈಪ್‌ಗಳು ಎಲ್ಲವೂ ಇದರ ಕೊಡುಗೆ.
- ಕೃತಕ ಬಟ್ಟೆಗಳು (Synthetic Fibers): ನಾವು ಧರಿಸುವ ಪಾಲಿಯೆಸ್ಟರ್ (Polyester), ನೈಲಾನ್ (Nylon), ಮತ್ತು ಆಕ್ರಿಲಿಕ್ ಬಟ್ಟೆಗಳು ಪೆಟ್ರೋಲಿಯಂನಿಂದ ತಯಾರಾಗುತ್ತವೆ.
- ರಸ್ತೆ ಡಾಂಬರು (Asphalt/Bitumen): ರಸ್ತೆಗಳನ್ನು ನಿರ್ಮಿಸಲು ಬಳಸುವ ಕಪ್ಪು ಡಾಂಬರು ತೈಲ ಶುದ್ಧೀಕರಣದ ಕೊನೆಯ ಹಂತದಲ್ಲಿ ಸಿಗುವ ಒಂದು ಗಟ್ಟಿ ಉಪ ಉತ್ಪನ್ನವಾಗಿದೆ.
- ಔಷಧಗಳು (Pharmaceuticals): ಆಸ್ಪಿರಿನ್‌ನಂತಹ ನೋವು ನಿವಾರಕಗಳು, ಜೀವಸತ್ವಗಳು (Vitamins), ಮತ್ತು ಅನೇಕ ವೈದ್ಯಕೀಯ ಕ್ಯಾಪ್ಸುಲ್‌ಗಳ ಕವಚಗಳನ್ನು ತಯಾರಿಸಲು ಪೆಟ್ರೋಕೆಮಿಕಲ್ಸ್ ಬಳಸಲಾಗುತ್ತದೆ.
- ಕೃಷಿ ಗೊಬ್ಬರ ಮತ್ತು ಕೀಟನಾಶಕಗಳು (Fertilizers & Pesticides): ಜಗತ್ತಿನಾದ್ಯಂತ ಆಹಾರ ಉತ್ಪಾದನೆಗೆ ಬಳಸುವ ರಾಸಾಯನಿಕ ಗೊಬ್ಬರಗಳು (ಮುಖ್ಯವಾಗಿ ಅಮೋನಿಯಾ ಮೂಲದ ಸಾರಜನಕ ಗೊಬ್ಬರಗಳು) ಮತ್ತು ಕೀಟನಾಶಕಗಳಿಗೆ ತೈಲವೇ ಮೂಲ.
- ಸೌಂದರ್ಯವರ್ಧಕಗಳು (Cosmetics): ವ್ಯಾಸಲಿನ್ (Petroleum Jelly), ಲಿಪ್‌ಸ್ಟಿಕ್, ಪರ್ಫ್ಯೂಮ್, ಶಾಂಪೂ, ಮತ್ತು ಮುಖಕ್ಕೆ ಹಚ್ಚುವ ಕ್ರೀಮ್‌ಗಳಲ್ಲಿ ತೈಲದ ಅಂಶ ಇರುತ್ತದೆ.
- ರಬ್ಬರ್ (Synthetic Rubber): ವಾಹನಗಳ ಟೈರ್‌ಗಳು, ಶೂಗಳ ಸೋಲ್ (Sole), ಮತ್ತು ಸೀಲಿಂಗ್ ಗ್ಯಾಸ್ಕೆಟ್‌ಗಳನ್ನು ಮಾಡಲು ಬಳಸುವ ಕೃತಕ ರಬ್ಬರ್ ತೈಲದಿಂದ ಬರುತ್ತದೆ.
- ಗೃಹಬಳಕೆ ವಸ್ತುಗಳು: ಪೇಂಟ್‌ಗಳು (Paints), ಡಿಟರ್ಜೆಂಟ್ ಸೋಪುಗಳು, ಮೇಣದಬತ್ತಿಗಳು (Paraffin Wax), ಮತ್ತು ನಯಗೊಳಿಸುವ ಎಣ್ಣೆಗಳು (Lubricants).
ಇವಿ ಕಾರಿನ ಮುಂಭಾಗದ ಡ್ಯಾಶ್‌ಬೋರ್ಡ್, ಒಳಗಿನ ಸೀಟ್‌ಗಳ ಮೇಲಿರುವ ಕೃತಕ ಚರ್ಮ (Synthetic Leather), ಕಾರಿನ ಸ್ಟೀರಿಂಗ್, ಸೋಲಾರ್ ಪ್ಯಾನಲ್‌ಗಳನ್ನು ಜೋಡಿಸಲು ಬಳಸುವ ಪ್ಲಾಸ್ಟಿಕ್ ಕೋಟಿಂಗ್ ಇತ್ಯಾದಿ ಅಸಂಖ್ಯೆಯಷ್ಟು ಕೆಲಸಗಳಿಗೆ ಮತ್ತು ವಸ್ತುಗಳ ತಯರಿಕೆಗೆ ಪೆಟ್ರೋಕೆಮಿಕಲ್ಸ್ ಅನ್ನು ಬಳಸಲಾಗುತ್ತದೆ.
ಹೀಗಾಗಿ, ಕಾರುಗಳು ಬ್ಯಾಟರಿಯಿಂದ ಓಡಿದರೂ, ವಿಮಾನಗಳು ಮತ್ತು ಕೈಗಾರಿಕೆಗಳು ಹಾಗೂ ದೈನಂದಿನ ವಸ್ತುಗಳ ಉತ್ಪಾದನೆಗೆ ತೈಲವು ಇನ್ನೂ ದಶಕಗಳ ಕಾಲ ಅನಿವಾರ್ಯವಾಗಿ ಉಳಿಯಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ





