Wipro: ಬೆಂಗಳೂರಿನ ವಿಪ್ರೋ ಎಕ್ಸಿಕ್ಯೂಟಿವ್ ಛೇರ್ಮನ್ ರಿಷದ್ ಪ್ರೇಮ್ಜಿ ವೇತನ ಅರ್ಧದಷ್ಟು ಕಡಿತ; ಸಿಇಒಗಿಂತಲೂ ಪ್ರೇಮ್ಜಿ ಸಂಬಳ ತೀರಾ ಕಡಿಮೆ
Rishad Premji Gets 50% Pay Cut In 23fy: ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್ಜಿ ಅವರ ಮಗ ಹಾಗೂ ವಿಪ್ರೋದ ಎಕ್ಸಿಕ್ಯೂಟಿವ್ ಛೇರ್ಮನ್ ಆಗಿರುವ ರಿಷದ್ ಪ್ರೇಮ್ಜಿ ಅವರ ವಾರ್ಷಿಕ ಕಾಂಪೆನ್ಸೇಶನ್ ಪ್ಯಾಕೇಜ್ ಈ ಬಾರಿ ಬಹಳ ಕಡಿಮೆ ಆಗಿದೆ.
ಬೆಂಗಳೂರು: ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್ಜಿ ಅವರ ಮಗ ಹಾಗೂ ವಿಪ್ರೋದ ಎಕ್ಸಿಕ್ಯೂಟಿವ್ ಛೇರ್ಮನ್ ಆಗಿರುವ ರಿಷದ್ ಪ್ರೇಮ್ಜಿ (Rishad Premji) ಅವರ ವಾರ್ಷಿಕ ಕಾಂಪೆನ್ಸೇಶನ್ ಪ್ಯಾಕೇಜ್ ಈ ಬಾರಿ ಬಹಳ ಕಡಿಮೆ ಆಗಿದೆ. 2021-22ರ ಹಣಕಾಸು ವರ್ಷದಲ್ಲಿ 18.18 ಲಕ್ಷ ಡಾಲರ್ (15 ಕೋಟಿ ರೂ) ಕಾಂಪೆನ್ಸೇಶನ್ ಹೊಂದಿದ್ದ ರಿಷದ್ ಪ್ರೇಮ್ಜಿ ಈಗ 2022-23ರ ವರ್ಷದಲ್ಲಿ 9.51 ಲಕ್ಷ ಡಾಲರ್ ಕಾಂಪೆನ್ಸೇಶನ್ ಮಾತ್ರ ಹೊಂದಿದ್ದಾರೆ. ಅಂದರೆ, ಅವರ ಒಟ್ಟಾರೆ ವೇತನ ಹೆಚ್ಚೂಕಡಿಮೆ ಶೇ. 50ರಷ್ಟು ಕಡಿಮೆ ಆಗಿದೆ.
ರಿಷಬ್ ಪ್ರೇಮ್ಜಿ ಅವರ ಕಾಂಪೆನ್ಸೇಶನ್ ಪ್ಯಾಕೇಜ್ನಲ್ಲಿ ಸಂಬಳದ ಪಾಲು 8.61 ಲಕ್ಷ ಡಾಲರ್ ಇದೆ. 74,343 ಡಾಲರ್ನಷ್ಟು ಭತ್ಯೆ ಹಾಗೂ 15,390 ಡಾಲರ್ನಷ್ಟು ಇತರ ಆದಾಯಗಳು ಈ ಪ್ಯಾಕೇಜ್ನಲ್ಲಿ ಒಳಗೊಂಡಿವೆ. ಆದರೆ, ರಿಷದ್ ಪ್ರೇಮ್ಜಿ ಅವರಿಗೆ ಈ ಬಾರಿ ಕೈತಪ್ಪಿರುವುದು ನಿವ್ವಳ ಲಾಭದ ಕಮಿಷನ್ ಮೊತ್ತ. ಇದಕ್ಕೆ ಕಾರಣ, ವಿಪ್ರೋದ ನಿವ್ವಳ ಲಾಭ ಹೆಚ್ಚಳದಲ್ಲಿ ಇಳಿಕೆಯಾಗಿರುವುದು. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ವಿಪ್ರೋದ ನಿವ್ವಳ ಲಾಭ ಶೇ. 7.7ರಷ್ಟಿ ಕಡಿಮೆ ಆಗಿದೆ. ನಿವ್ವಳ ಲಾಭದಲ್ಲಿ ಹೆಚ್ಚಳವಾಗಿದ್ದರೆ ರಿಷದ್ ಪ್ರೇಮ್ಜಿಗೆ ಶೇ. 0.35ರಷ್ಟು ಕಮಿಷನ್ ಸಿಗಬೇಕಿತ್ತು. ಆದರೆ, ನಿವ್ವಳ ಲಾಭ ಇಳಿಕೆಯಾಗಿರುವುದರಿಂದ ಪ್ರೇಮ್ಜೀ ಕಮಿಷನ್ಗೆ ಕತ್ತರಿಬಿದ್ದಿದೆ.
ಇದನ್ನೂ ಓದಿ: Meta Layoffs: ಫೇಸ್ಬುಕ್ನ ಟೀಮ್ ಇಂಡಿಯಾದಲ್ಲಿ ಹಲವರ ಲೇ ಆಫ್; ನಿರ್ದೇಶಕ ಹಂತದ ಇಬ್ಬರು ಟಾಪ್ ಎಕ್ಸಿಕ್ಯೂಟಿವ್ಸ್ ಕೂಡ ಮನೆಗೆ
ವಿಪ್ರೋ ಸಿಇಒ ಥಿಯೆರಿ ಡೆಲಾಪೋರ್ಟೆ ಸಂಬಳವೂ ಕಡಿತ
ಅತಿಹೆಚ್ಚು ಸಂಬಳ ಪಡೆಯುವ ಭಾರತೀಯ ಸಿಇಒಗಳ ಪೈಕಿ ಒಬ್ಬರೆನಿಸಿರುವ ಥಿಯೆರಿ ಡೆಲಾಪೋರ್ಟೆ ಅವರ ಒಟ್ಟಾರೆ ಕಾಂಪೆನ್ಸೇಶನ್ ತುಸು ಇಳಿಕೆಯಾಗಿದೆ. 1.3 ಮಿಲಿಯನ್ ಡಾಲರ್ನಷ್ಟು ಸಂಬಳ ಸೇರಿದಂತೆ ಒಟ್ಟು 10.5 ಮಿಲಿಯನ್ ಡಾಲರ್ನಷ್ಟು ಕಾಂಪೆನ್ಸೇಶನ್ ಪಡೆಯಬೇಕಿತ್ತು. ಈ ವರ್ಷ ಅದು 10 ಮಿಲಿಯನ್ ಡಾಲರ್ಗೆ ಇಳಿದಿದೆ. ಅಂದರೆ, 82 ಕೋಟಿ ರುಪಾಯಿಯಷ್ಟು ವಾರ್ಷಿಕ ಪ್ಯಾಕೇಜ್ ವಿಪ್ರೋ ಸಿಇಒ ತಿಯೆರಿ ಡೆಲಾಪೋರ್ಟೆ ಅವರಿಗೆ ಸಿಗುತ್ತಿದೆ.
ಇದನ್ನೂ ಓದಿ: Mahindra CIE: ಸಿಐಇ ಆಟೊಮೋಟಿವ್ನಲ್ಲಿನ ಎಲ್ಲ ಪಾಲು ಮಾರಿದ ಮಹೀಂದ್ರ; ಎರಡೂ ಕಂಪನಿಗಳ ಷೇರಿಗೆ ಒಳ್ಳೆಯ ಡಿಮ್ಯಾಂಡ್
ವಿಪ್ರೋ ಸಿಎಫ್ಒ ಜತಿನ್ ದಲಾಲ್ ಅವರಿಗೆ ಸಿಗುತ್ತಿರುವ ಕಾಂಪೆನ್ಸೇಶನ್ ಮೊತ್ತ 1.5 ಮಿಲಿಯನ್ನಿಂದ 1.084 ಮಿಲಿಯನ್ ಡಾಲರ್ಗೆ ಇಳಿದಿದೆ. ಅಂದರೆ, 8.2 ಕೋಟಿ ರೂನಷ್ಟು ಒಟ್ಟಾರೆ ಕಾಂಪೆನ್ಸೇಶನ್ ಪ್ಯಾಕೇಜ್ ಮಾತ್ರ ಅವರು ಪಡೆಯುತ್ತಿದ್ದಾರೆ.
ಇಲ್ಲಿ ಎಕ್ಸಿಕ್ಯೂಟಿವ್ ಛೇರ್ಮನ್ ಮತ್ತು ಸಿಇಒಗಳಿಗೆ ಈ ವರ್ಷ ಸಿಕ್ಕಿರುವ ವಾರ್ಷಿಕ ಕಾಂಪೆನ್ಸೇಶನ್ ಮೊತ್ತವನ್ನು ಹೋಲಿಸಿದರೆ ಅಜಗಜಾಂತರ ಭಾಸವಾಗುತ್ತದೆ. ಎಕ್ಸಿಕ್ಯೂಟಿವ್ ಛೇರ್ಮನ್ ರಿಷದ್ ಪ್ರೇಮ್ಜಿ ಅವರ ಒಟ್ಟಾರೆ ವಾರ್ಷಿಕ ಕಾಂಪೆನ್ಸೇಶನ್ ಪ್ಯಾಕೇಜ್ 7.87 ಕೋಟಿ ರೂ ಇದೆ. ಸಿಇಒ ಥಿಯೆರೆ ಡೆಲಾಪೋರ್ಟೆ ಅವರ ಪ್ಯಾಕೇಜ್ 82 ಕೋಟಿ ರೂ ಇದೆ. ಅಂದರೆ ಎಕ್ಸಿಕ್ಯೂಟಿವ್ ಛೇರ್ಮನ್ಗಿಂತ ಸಿಇಒ 10 ಪಟ್ಟು ಹೆಚ್ಚು ಹಣ ಗಳಿಸುತ್ತಾರೆ.