World Savings Day 2022: ವಿಶ್ವ ಉಳಿತಾಯ ದಿನ; ಮಹತ್ವ, ಇತಿಹಾಸ, ಧ್ಯೇಯದ ಬಗ್ಗೆ ಇಲ್ಲಿದೆ ವಿವರ

| Updated By: Ganapathi Sharma

Updated on: Oct 31, 2022 | 10:24 AM

ಉಳಿತಾಯದ ಮಹತ್ವ ಸಾರಲು ಆರಂಭಿಸಿರುವ ವಿಶ್ವ ಉಳಿತಾಯ ದಿನ ಯಾವಾಗ ಆರಂಭವಾಯಿತು? ಈ ವರ್ಷದ ಧ್ಯೇಯವೇನು? ಇಂದಿಗೂ ಜಗತ್ತಿನಾದ್ಯಂತ ಬ್ಯಾಂಕ್ ಖಾತೆ ಹೊಂದಿರದವರು ಎಷ್ಟು ಜನ ಇದ್ದಾರೆ? ಇಲ್ಲಿದೆ ವಿವರ.

World Savings Day 2022: ವಿಶ್ವ ಉಳಿತಾಯ ದಿನ; ಮಹತ್ವ, ಇತಿಹಾಸ, ಧ್ಯೇಯದ ಬಗ್ಗೆ ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us on

ಪ್ರತಿ ವರ್ಷ ಅಕ್ಟೋಬರ್ 30ರಂದು ವಿಶ್ವ ಉಳಿತಾಯ ದಿನ (World Savings Day) ಆಚರಿಸಲಾಗುತ್ತಿದೆ. ಉಳಿತಾಯದ ಮಹತ್ವವನ್ನು ಸಾರುವ ಸಲುವಾಗಿ ಈ ದಿನ ಆಚರಿಸಲಾಗುತ್ತಿದೆ. ವಿಶ್ವ ಮಿತವ್ಯಯ ದಿನ (World Thrift Day) ಎಂಬುದಾಗಿಯೂ ಈ ದಿನವನ್ನು ಪರಿಗಣಿಸಲಾಗುತ್ತಿದೆ. ಜನರು ತಮ್ಮ ಆದಾಯದ ಒಂದು ಭಾಗವನ್ನು ಬ್ಯಾಂಕ್​ಗಳಲ್ಲಿ ಉಳಿತಾಯ ಮಾಡುವಂತೆ ಮತ್ತು ಅದರಿಂದ ಅವರಿಗೆ ಮುಂದಿನ ದಿನಗಳಲ್ಲಿ ದೊರೆಯಬಹುದಾದ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ದಿನ ಬಹಳ ಮುಖ್ಯದ್ದಾಗಿದೆ. ಯುರೋಪ್​ನಲ್ಲಿ ಮೊದಲು ಈ ದಿನಾಚರಣೆ ಆರಂಭವಾಗಿದ್ದರೂ ಪ್ರಸ್ತುತ ಅಭಿವೃದ್ಧಿಶೀಲ ದೇಶಗಳಲ್ಲಿ ಸಹ ಆಚರಿಸಲಾಗುತ್ತದೆ.

ಉಳಿತಾಯ ದಿನ ಇತಿಹಾಸ

ವಿಶ್ವ ಉಳಿತಾಯ ದಿನ 1924ರಲ್ಲಿ ಮೊದಲ ಬಾರಿಗೆ ಆರಂಭವಾಯಿತು. ವಿಶ್ವ ಉಳಿತಾಯ ಸಮುದಾಯದ (World Society of Savings) ಮೊದಲ ಅಂತಾರಾಷ್ಟ್ರೀಯ ಸೇವಿಂಗ್ಸ್ ಬ್ಯಾಂಕ್ ಕಾಂಗ್ರೆಸ್​ನಲ್ಲಿ ಜನರನ್ನು ಬ್ಯಾಂಕ್​ಗಳಲ್ಲಿ ಉಳಿತಾಯ ಮಾಡುವಂತೆ ಪ್ರೇರೇಪಿಸಲಾಯಿತು. ಇನ್ನು ಕೆಲವು ದೇಶಗಳಲ್ಲಿ ಉಳಿತಾಯಕ್ಕೆ ಸಂಬಂಧಿಸಿದಂತೆ ಅದಕ್ಕೂ ಮೊದಲೇ ಕೆಲವು ರಾಷ್ಟ್ರೀಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇಟಲಿಯ ಪ್ರಾಧ್ಯಾಪಕ ಫಿಲಿಪ್ಪೊ ರೇವಿಜಾ ಎಂಬವರು ಉಳಿತಾಯದ ಮಹತ್ವವನ್ನು ಸಾರ್ವತ್ರಿಕವಾಗಿ ಸಾರುವ ಕಾರ್ಯ ಕೈಗೊಂಡಿದ್ದರು.

ಇದನ್ನೂ ಓದಿ: Mutual Funds: ಎಫ್​ಡಿಗಿಂತ ಮ್ಯೂಚುವಲ್ ಫಂಡ್ ಉತ್ತಮ ಎನ್ನುವ ಭಾರತೀಯರು: ಕಾರಣ ಇಲ್ಲಿದೆ ನೋಡಿ

ಉಳಿತಾಯದ ಮಹತ್ವ

ಪ್ರಪಂಚದಾದ್ಯಂತ ಸುಮಾರು 1.4 ಶತಕೋಟಿ ಜನರು ಇನ್ನೂ ಬ್ಯಾಂಕಿಂಗ್‌ ಸೌಲಭ್ಯ ಹೊಂದಿಲ್ಲ ಮತ್ತು ತಮ್ಮ ಹಣವನ್ನು ನಗದು ಆಗಿ ಇಟ್ಟುಕೊಳ್ಳಬೇಕಾದ ಅಥವಾ ಇತರ ವಿಧಾನಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಇದೆ. ಈ ಪೈಕಿ ಅರ್ಧದಷ್ಟು ಮಂದಿ ಬಾಂಗ್ಲಾದೇಶ, ಭಾರತ, ಈಜಿಪ್ಟ್, ನೈಜೀರಿಯಾ ಮತ್ತಿತರ ದೇಶಗಳಲ್ಲಿದ್ದಾರೆ ಎನ್ನಲಾಗಿದೆ. ಬ್ಯಾಂಕ್ ಖಾತೆಗಳಿಲ್ಲದ ಕಾರಣ ಈ ವ್ಯಕ್ತಿಗಳಿಗೆ ಅನೇಕ ಹಣಕಾಸು ಸೇವೆಗಳನ್ನು ಪಡೆಯುವುದು ಸಾಧ್ಯವಾಗುತ್ತಿಲ್ಲ. ಉಳಿತಾಯ ಖಾತೆ ಮೇಲಿನ ಬಡ್ಡಿಯಂಥ ಸವಲತ್ತುಗಳು ಅವರಿಗೆ ದೊರೆಯುತ್ತಿಲ್ಲ.

ಈ ವರ್ಷದ ಧ್ಯೇಯವೇನು?

ಪ್ರತಿ ವರ್ಷವೂ ಒಂದು ನಿರ್ದಿಷ್ಟ ಧ್ಯೇಯದೊಂದಿಗೆ ವಿಶ್ವ ಉಳಿತಾಯ ದಿನವನ್ನು ಆಚರಿಸಲಾಗುತ್ತಿದೆ. ಈ ದಿನ ಚಿಲ್ಲರೆ ಬ್ಯಾಂಕಿಂಗ್ ಸಂಸ್ಥೆ ಸಂಘಟನೆಗಳು ನಿರ್ದಿಷ್ಟ ಧ್ಯೇಯದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. 64 ದೇಶಗಳು ಜತೆಯಾಗಿ ಕಾರ್ಯಕ್ರಮ ಆಚರಿಸುತ್ತವೆ. ‘ಉಳಿತಾಯವು ಎಲ್ಲಾ ಬದಲಾವಣೆಗಳನ್ನೂ ಮಾಡಬಹುದು’ ಎಂಬುದು ಈ ವರ್ಷದ ಧ್ಯೇಯವಾಗಿದೆ. ಇದು ತುರ್ತು ಪರಿಸ್ಥಿತಿಗಳಲ್ಲಿ ಉಳಿತಾಯದ ಮೊತ್ತವು ಹೇಗೆ ನೆರವಿಗೆ ಬರಬಹುದು ಎಂಬುದರ ಕುರಿತು ಅರಿವು ಮೂಡಿಸಲಿದೆ. ಕೋವಿಡ್-19 ಸಾಂಕ್ರಾಮಿಕ ಹಾಗೂ ಕೆಲವು ದೇಶಗಳ ನಡುವಣ ಸಶಸ್ತ್ರ ಸಂಘರ್ಷದಿಂದಾಗಿ ಜಗತ್ತಿನ ವಿವಿಧೆಡೆಗಳಲ್ಲಿ ಜನ ಸಂಕಷ್ಟಕ್ಕೀಡಾದ ಬಳಿಕ ಈ ಧ್ಯೇಯದಡಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

(ಮಾಹಿತಿ – ವಿವಿಧ ಮೂಲಗಳಿಂದ)

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ